ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕದ ಕಂಪನಿಗಳು ಮತ್ತು ರಫ್ತುದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ. ಹಾಗಾಗಿ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಭಾರತದ ಮುಂದೆ ಸುಂಕ ಕಡಿತ ಮತ್ತು ಸುಂಕದ ನಿಯಮಾವಳಿಗಳ ಸುಧಾರಣೆ ಕುರಿತಂತೆ ಪ್ರಸ್ತಾವ ಮಂಡಿಸುವ ನಿರೀಕ್ಷೆಯಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್‌ಐ) ಹೇಳಿದೆ.
ಭಾರತವು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲಿರುವ ಅಕ್ಕಿ ಮತ್ತು ಗೋಧಿ ಪ್ರಮಾಣ ತಗ್ಗಿಸುವಂತೆ ಬೇಡಿಕೆ ಮಂಡಿಸಬಹುದು. ಕುಲಾಂತರಿ ತಳಿಗಳ ಮೇಲೆ ಹೇರಿರುವ ಆಮದು ನಿರ್ಬಂಧ ಸಡಿಲಿಸುವಂತೆ ಒತ್ತಾಯಿಸಬಹುದು. ಜೊತೆಗೆ, ಅಮೆರಿಕದ ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕಡಿತಗೊಳಿಸುವಂತೆ ಪ್ರಸ್ತಾವ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಭಾರತಕ್ಕೆ ಆಮದಾಗುವ ಹೈನು ಉತ್ಪನ್ನಗಳು ಕುಲಾಂತರಿ ತಳಿಯ ಆಹಾರವಲ್ಲ ಎಂಬ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಅಮೆರಿಕದ ಉತ್ಪನ್ನಗಳಿಗೆ ಈ ನಿಯಮದಿಂದ ವಿನಾಯಿತಿ ನೀಡುವಂತೆ ಕೋರಿಕೆ ಮಂಡಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
‘ಅಮೆಜಾನ್ ಮತ್ತು ವಾಲ್‌ಮಾರ್ಟ್ ಕಂಪನಿಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ವಿಧಿಸಿರುವ ಕೆಲವು ಷರತ್ತು ಮತ್ತು ನಿಯಮಗಳನ್ನು ಸಡಿಲಗೊಳಿಸುವಂತೆ ಕೋರುವ ಸಾಧ್ಯತೆಯಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್ ಶ್ರೀವಾಸ್ತವ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.