ನವದೆಹಲಿ: ಅನಿಲ್ ಅಗರ್ವಾಲ್ ಮಾಲೀಕತ್ವದ ವೇದಾಂತ ಕಂಪನಿಯ ವಹಿವಾಟುಗಳು ‘ಹಣಕಾಸಿನ ದೃಷ್ಟಿಯಿಂದ ಸುಸ್ಥಿರವಾಗಿಲ್ಲ’ ಎಂದು ಅಮೆರಿಕದ ಶಾರ್ಟ್‌ಸೆಲ್ಲರ್ ‘ವೈಸ್‌ರಾಯ್ ರಿಸರ್ಚ್’ ಬಿಡುಗಡೆ ಮಾಡಿರುವ ವರದಿ ಹೇಳಿದೆ. ಇದರಿಂದಾಗಿ ಕಂಪನಿಗೆ ಸಾಲ ನೀಡಿದವರಿಗೆ ಅಪಾಯ ಕಾದಿದೆ ಎಂದು ವರದಿಯು ಹೇಳಿದೆ.
ವರದಿಯಲ್ಲಿನ ವಿವರಗಳನ್ನು ಅಲ್ಲಗಳೆದಿರುವ ಕಂಪನಿಯು ‘ಇದು ಆಯ್ದ ಕೆಲವು ತಪ್ಪು ಮಾಹಿತಿಗಳನ್ನು ಹರಡುವ ಕೆಲಸ, ಆಧಾರರಹಿತ ಆರೋಪ’ ಎಂದು ಹೇಳಿದೆ. ಕಂಪನಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಹೇಳಿದೆ.
ವೇದಾಂತ ಲಿಮಿಟೆಡ್‌ನ ಮಾತೃಸಂಸ್ಥೆಯಾದ ವೇದಾಂತ ರಿಸೋರ್ಸಸ್‌ನ ಸಾಲಪತ್ರಗಳ ಶಾರ್ಟ್ ಸೆಲ್ಲಿಂಗ್‌ನಲ್ಲಿ (ಸಾಲಪತ್ರಗಳ ಮೌಲ್ಯದಲ್ಲಿನ ಇಳಿಕೆಯಿಂದ ಲಾಭ ಮಾಡಿಕೊಳ್ಳುವುದು) ತಾನು ಭಾಗಿಯಾಗಿರುವುದಾಗಿ ವೈಸ್‌ರಾಯ್ ರಿಸರ್ಚ್ ತಿಳಿಸಿದೆ.
ವರದಿ ಬಹಿರಂಗ ಆದ ನಂತರದಲ್ಲಿ ವೇದಾಂತ ಕಂಪನಿಯ ಷೇರುಮೌಲ್ಯವು ಶೇ 6ರವರೆಗೆ ಇಳಿಕೆಯಾಗಿತ್ತು. ನಂತರದಲ್ಲಿ ಮೌಲ್ಯವು ತುಸು ಚೇತರಿಕೆ ಕಂಡಿತು. ವೇದಾಂತ ರಿಸೋರ್ಸಸ್ ಲಿ. ಕಂಪನಿಯು ಭಾರಿ ಪ್ರಮಾಣದ ಸಾಲದಲ್ಲಿ ಇದೆ, ಇಡೀ ಸಮೂಹವು ಹಣಕಾಸಿನ ದೃಷ್ಟಿಯಿಂದ ಸುಸ್ಥಿರವಾಗಿಲ್ಲ ಎಂದು ವರದಿಯು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.