ಮುಂಬೈ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸುವ ನಿರ್ಧಾರವು ಬುಧವಾರದಿಂದ ಜಾರಿಗೆ ಬರಲಿದೆ. ಹೀಗಾಗಿ, ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ನಡೆದ ವಹಿವಾಟಿನಲ್ಲಿ ಕುಸಿತ ಕಂಡಿವೆ.
ವಿದೇಶಿ ಬಂಡವಾಳವು ನಿರಂತರ ಹೊರಹರಿವಾಗುತ್ತಿದೆ. ಅಲ್ಲದೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ರಿಸರ್ವ್ ಗವರ್ನರ್ ಲೀಸಾ ಕುಕ್ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಇದು ಹೂಡಿಕೆದಾರರ ಭಾವನೆ ಮೇಲೆ ಪರಿಣಾಮ ಬೀರಿದ್ದರಿಂದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡವು ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.
ಷೇರು ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನ ₹5.41 ಲಕ್ಷ ಕೋಟಿ ಕರಗಿದೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 849 ಅಂಶ (ಶೇ 1.04) ಇಳಿಕೆಯಾಗಿ, 80,786ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ 949 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 278 ಅಂಶ (ಶೇ 1.11) ಕಡಿಮೆಯಾಗಿ, 24,689ಕ್ಕೆ ಕೊನೆಗೊಂಡಿದೆ.
‘ಅಮೆರಿಕದ ಹೆಚ್ಚುವರಿ ಸುಂಕವು ಆಗಸ್ಟ್ 27ರಿಂದ ಜಾರಿಗೆ ಬರಲಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆ ನಡೆ ಅನುಸರಿಸಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಇಳಿಕೆ ಕಂಡಿವೆ’ ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಸನ್ ಫಾರ್ಮಾಸ್ಯುಟಿಕಲ್, ಟಾಟಾ ಸ್ಟೀಲ್, ಟ್ರೆಂಟ್, ಬಜಾಜ್ ಫೈನಾನ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್ ಫಿನ್‌ಸರ್ವ್, ರಿಲಯನ್ಸ್ ಇಂಡಸ್ಟ್ರೀಸ್, ಎಕ್ಸಿಸ್ ಬ್ಯಾಂಕ್, ಟೆಕ್ ಮಹೀಂದ್ರ, ಅದಾನಿ ಪೋರ್ಟ್ಸ್, ಟೈಟನ್, ಬಿಇಎಲ್, ಲಾರ್ಸೆನ್ ಆ್ಯಂಡ್ ಟೊಬ್ರೊ ಷೇರಿನ ಮೌಲ್ಯ ಇಳಿಕೆಯಾಗಿದೆ. ಹಿಂದೂಸ್ತಾನ್ ಯೂನಿಲಿವರ್, ಮಾರುತಿ ಸುಜುಕಿ, ಐಟಿಸಿ, ಟಿಸಿಎಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಏಷ್ಯಾದ ಮಾರುಕಟ್ಟೆಯಲ್ಲಿ ಹಾಂಗ್‌ಕಾಂಗ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಶಾಂಘೈ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 1.48ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ದರವು 67.78 ಡಾಲರ್ ಆಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರದ ವಹಿವಾಟಿನಲ್ಲಿ ₹2,466 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.