ನವದೆಹಲಿ: ಔಷಧ ಮತ್ತು ಎಲೆಕ್ಟ್ರಾನಿಕ್ಸ್ ರಫ್ತಿನ ಮೇಲೆ ಅಮೆರಿಕ ಈವರೆಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು, ‘ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಸರಕುಗಳ ಮೇಲೆ ಆಗಸ್ಟ್ 7 ರಿಂದ ಜಾರಿಗೆ ಬರುವಂತೆ ಶೇ 25 ರಷ್ಟು ಪ್ರತಿಸುಂಕ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ.
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳ ಒಟ್ಟು ಮೌಲ್ಯದ ಸುಮಾರು ಶೇ 55 ಈ ಪ್ರತಿ ಸುಂಕಕ್ಕೆ ಒಳಪಟ್ಟಿರುತ್ತದೆ ಎಂದು ಅಂದಾಜಿಸಲಾಗಿದೆ. ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಭಾರತದಿಂದ ರಫ್ತು ಮಾಡುವ ಕೆಲವು ಸರಕುಗಳ ಮೇಲೆ ಶೇ 25 ರ ಹೆಚ್ಚುವರಿ ಮೌಲ್ಯದ ಸುಂಕವನ್ನು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಔಷಧಗಳು ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಅಮೆರಿಕ ಇನ್ನೂ ಯಾವುದೇ ಹೆಚ್ಚುವರಿ ಸುಂಕ ವಿಧಿಸಿಲ್ಲ ಎಂದು ಪ್ರಸಾದ ತಿಳಿಸಿದ್ದಾರೆ.
ಅಮೆರಿಕ ವಿಧಿಸಿರುವ ಪ್ರತಿಸುಂಕಗಳ ಪರಿಣಾಮದ ಮೌಲ್ಯಮಾಪನದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸರ್ಕಾರವು ರಫ್ತುದಾರರು ಮತ್ತು ಕೈಗಾರಿಕೆಗಳು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
ರೈತರು, ಕಾರ್ಮಿಕರು, ಉದ್ಯಮಿಗಳು, ರಫ್ತುದಾರರು, ಎಂಎಸ್‌ಎಂಇಗಳು ಮತ್ತು ಉದ್ಯಮದ ಎಲ್ಲಾ ವಿಭಾಗಗಳ ಕಲ್ಯಾಣವನ್ನು ರಕ್ಷಿಸಲು ಮತ್ತು ಉತ್ತೇಜಿಸಲು ಸರ್ಕಾರವ ಕಟಿಬದ್ಧವಾಗಿದೆ ಎಂದು ಪ್ರಸಾದ ಹೇಳಿದ್ದಾರೆ.
ವ್ಯಾಪಾರ ಮತ್ತು ಹೂಡಿಕೆಯನ್ನು ವಿಸ್ತರಿಸುವ ಗುರಿಯೊಂದಿಗೆ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (ಬಿಟಿಎ) ಚರ್ಚೆಯಲ್ಲಿ ತೊಡಗಿಸಿಕೊಂಡಿದೆ. ಮಾರ್ಚ್ 2025 ರಿಂದ ಮಾತುಕತೆಗಳು ನಡೆಯುತ್ತಿವೆ. ಇಲ್ಲಿಯವರೆಗೆ, ಐದು ಸುತ್ತಿನ ಮಾತುಕತೆಗಳು ನಡೆದಿವೆ. ಕೊನೆಯದಾಗಿ ಜುಲೈ 14-18 ರವರೆಗೆ ವಾಷಿಂಗ್ಟನ್‌ನಲ್ಲಿ ನಡೆದಿತ್ತು. ಆರನೇ ಸುತ್ತಿನ ಮಾತುಕತೆಗಾಗಿ, ಅಮೆರಿಕದ ತಂಡವು ತಂಡವು ಆಗಸ್ಟ್ 24 ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.