ಎಂ.ಕೆ.ಸ್ಟಾಲಿನ್
ಚೆನ್ನೈ: ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿರುವುದು ತಮಿಳುನಾಡಿನ ಜವಳಿ ವಲಯದ ಅಂದಾಜು 30 ಲಕ್ಷ ಉದ್ಯೋಗಿಗಳ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
2024–25ರ ಆರ್ಥಿಕ ವರ್ಷದಲ್ಲಿ ದೇಶದ ಜವಳಿ ಉತ್ಪನ್ನಗಳ ರಫ್ತಿನಲ್ಲಿ ತಮಿಳುನಾಡು ಶೇ 28ರಷ್ಟು ಪಾಲನ್ನು ಹೊಂದಿದ್ದು, ದೇಶದ ಇತರೆ ರಾಜ್ಯಗಳಿಗಿಂತ ಹೆಚ್ಚಿನ ಕೊಡುಗೆ ನೀಡಿದೆ. ಈ ವಲಯವು 75 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದು, ಸುಂಕ ಹೆಚ್ಚಳದಿಂದಾಗಿ ಅಂದಾಜು 30 ಲಕ್ಷ ಉದ್ಯೋಗಿಗಳ ಉದ್ಯೋಗವು ಅಪಾಯದಲ್ಲಿದೆ ಎಂದು ಶನಿವಾರ ಹೇಳಿದ್ದಾರೆ.
ಜವಳಿ ವಲಯಕ್ಕೆ ಶೀಘ್ರ ನೆರವಿನ ಅಗತ್ಯವಿದೆ. ಜವಳಿ ಉತ್ಪನ್ನಗಳನ್ನು ಜಿಎಸ್‌ಟಿಯ ಶೇ 5ರ ಹಂತದಲ್ಲಿ ತರಬೇಕು, ಎಲ್ಲಾ ಬಗೆಯ ಹತ್ತಿ ಆಮದಿಗೆ ಸುಂಕ ವಿನಾಯಿತಿ ನೀಡಬೇಕು ಎಂದು ಕೇಂದ್ರವನ್ನು ಕೋರಿದ್ದಾರೆ.
ಪ್ರಧಾನಿಗೆ ಪತ್ರ: ದೇಶದ ಸರಕುಗಳ ಮೇಲೆ ಅಮೆರಿಕದ ಸುಂಕದ ಹೆಚ್ಚಳವು ಕೈಗಾರಿಕೆಗಳು ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಕೇಂದ್ರ ಸರ್ಕಾರವು ವಿಶೇಷ ಹಣಕಾಸಿನ ನೆರವನ್ನು ನೀಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.