ADVERTISEMENT

ಯುಎಸ್‌ಒ ನಿಧಿ ಬಳಸಿ ಸ್ಮಾರ್ಟ್‌ಫೋನ್‌ಗೆ ಸಬ್ಸಿಡಿ: ಮುಖೇಶ್ ಅಂಬಾನಿ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 20:05 IST
Last Updated 8 ಡಿಸೆಂಬರ್ 2021, 20:05 IST
   

ನವದೆಹಲಿ (ಪಿಟಿಐ): ಸ್ಮಾರ್ಟ್‌ಫೋನ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡಲು ಯುಎಸ್‌ಒ ನಿಧಿಯನ್ನು ಬಳಕೆ ಮಾಡಬೇಕು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ. ದೇಶದಲ್ಲಿ 5ಜಿ ತಂತ್ರಜ್ಞಾನಕ್ಕೆ ಚಾಲನೆ ನೀಡುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ದೂರಸಂಪರ್ಕ ಸೇವಾ ವಲಯದ ಕಂಪನಿಗಳು ಪಾವತಿಸುವ ಪರವಾನಗಿ ಶುಲ್ಕದಲ್ಲಿ ಶೇಕಡ 5ರಷ್ಟು ಮೊತ್ತವು ಯುಎಸ್‌ಒ ನಿಧಿಗೆ ಜಮಾ ಆಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ದೂರವಾಣಿ ಸಂಪರ್ಕ ಕಲ್ಪಿಸಲು ಮತ್ತು ಅಲ್ಲಿ ಮೊಬೈಲ್‌ ಸಂಪರ್ಕಕ್ಕೆ ಅಗತ್ಯವಿರುವ ಮೂಲಸೌಕರ್ಯ ನಿರ್ಮಾಣಕ್ಕೆ ಈ ನಿಧಿಯನ್ನು ಬಳಸಿಕೊಳ್ಳಬೇಕು.

ಆದರೆ, ಮಹಾಲೇಖಪಾಲರ ವರದಿಯ ಅನ್ವಯ ಈ ನಿಧಿಯಲ್ಲಿ ಇರುವ ಮೊತ್ತವು ಪೂರ್ತಿಯಾಗಿ ಬಳಕೆ ಆಗುತ್ತಿಲ್ಲ. ಶೇಕಡ 50ಕ್ಕಿಂತಲೂ ಕಡಿಮೆ ಮೊತ್ತವು ಬಳಕೆ ಆಗಿದೆ ಎಂದು ಸಿಎಜಿ ವರದಿ ಹೇಳಿದೆ. ದೇಶದ ಅಂದಾಜು 28 ಕೋಟಿ ಜನ ಈಗಲೂ 2ಜಿ ಫೀಚರ್ ಫೋನ್ ಬಳಸುತ್ತಿದ್ದಾರೆ ಎಂಬ ಅಂದಾಜು ಇದೆ. ‘ಯುಎಸ್‌ಒ ನಿಧಿಯಲ್ಲಿನ ಹಣವನ್ನು ಬಳಸಿ, ನಿರ್ದಿಷ್ಟ ವರ್ಗಗಳ ಜನರಿಗೆ ಸಬ್ಸಿಡಿ ದರದಲ್ಲಿ ಸ್ಮಾರ್ಟ್‌ಫೋನ್ ಸಿಗುವಂತೆ ಮಾಡಬಹುದು’ ಎಂದು ಅಂಬಾನಿ ಸಲಹೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.