ವಾಹನ ತಯಾರಿಕಾ ಕಂಪನಿ ವಿನ್‌ಫಾಸ್ಟ್, ದೇಶದ ಮಾರುಕಟ್ಟೆಗೆ ವಿದ್ಯುತ್‌ಚಾಲಿತ ಎಸ್‌ಯುವಿ ವಿಎಫ್ 6 ಮತ್ತು ವಿಎಫ್ 7 ಬಿಡುಗಡೆ ಮಾಡಿದೆ
ಬೆಂಗಳೂರು: ವಿಯೆಟ್ನಾಂ ಮೂಲದ ವಾಹನ ತಯಾರಿಕಾ ಕಂಪನಿ ವಿನ್‌ಫಾಸ್ಟ್, ದೇಶದ ಮಾರುಕಟ್ಟೆಗೆ ವಿದ್ಯುತ್ ಚಾಲಿತ ಎಸ್‌ಯುವಿ ವಿಎಫ್ 6 ಮತ್ತು ವಿಎಫ್ 7 ಬಿಡುಗಡೆ ಮಾಡಿದೆ.
‘ವಿಎಫ್ 7 ಮತ್ತು ವಿಎಫ್ 6 ಕಾರುಗಳು ವಾಸ್ತವಕ್ಕೆ ಸರಿಹೊಂದುವ ವಿನ್ಯಾಸ, ಪ್ರೀಮಿಯಂ ಗುಣಮಟ್ಟ, ಅತ್ಯಾಧುನಿಕ ತಂತ್ರಜ್ಞಾನದ ಹೇಳಿಮಾಡಿಸಿದ ಸಂಗಮದಂತೆ ಇವೆ. ತೂತ್ತುಕುಡಿಯಲ್ಲಿ ಇರುವ ನಮ್ಮ ಅತ್ಯಾಧುನಿಕ ತಯಾರಿಕಾ ಘಟಕದಲ್ಲಿ ತಯಾರಿಸಲಾಗಿದೆ’ ಎಂದು ವಿನ್‌ಫಾಸ್ಟ್‌ನ ಏಷ್ಯಾ ಸಿಇಒ ಫಾಮ್ ಸ್ಯಾನ್ ಚಾವ್ ಹೇಳಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ವಿನ್‌ಫಾಸ್ಟ್‌ನ ವಿಎಫ್ 6:
ವಿನ್‌ಫಾಸ್ಟ್‌ನ ‘ವಿಎಫ್ 6’ ಪ್ರೀಮಿಯಂ ಶ್ರೇಣಿಯ ಕಾಂಪ್ಯಾಕ್ಟ್ ವಿದ್ಯುತ್ ಚಾಲಿತ ಎಸ್‌ಯುವಿ. ಇದು 59.6 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ 25 ನಿಮಿಷಗಳಲ್ಲಿ ಶೇಕಡ 70ರಷ್ಟು ಚಾರ್ಜ್ ಆಗುತ್ತದೆ. ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದರೆ 468 ಕಿ.ಮೀ (ಎಆರ್‌ಎಐ ಪ್ರಮಾಣೀಕೃತ) ಸಾಗಬಲ್ಲದು. ಈ ಎಸ್‌ಯುವಿಯ ವೀಲ್‌ಬೇಸ್ 2,730 ಎಂ.ಎಂ. ಇದ್ದು, ಗ್ರೌಂಡ್ ಕ್ಲಿಯರೆನ್ಸ್ 190 ಮಿ.ಮೀ ಇದೆ.
ಈ ವಾಹನವು ಅರ್ಥ್, ವಿಂಡ್ ಮತ್ತು ವಿಂಡ್ ಇನ್ಫಿನಿಟಿ ಮಾದರಿಗಳಲ್ಲಿ ಸಿಗುತ್ತದೆ. ಅರ್ಥ್ ಮಾದರಿಯನ್ನು ಒಂದು ಬಾರಿಗೆ ಚಾರ್ಜ್ ಮಾಡಿದರೆ 468 ಕಿ.ಮೀ ಮತ್ತು ವಿಂಡ್ ಮಾದರಿಯು 463 ಕಿ.ಮೀ ಸಾಗಬಲ್ಲದು ಎಂದು ಪ್ರಕಟಣೆ ಹೇಳಿದೆ.
ವಿಎಫ್ 6 ಅರ್ಥ್:
ಕಪ್ಪು ಬಣ್ಣದ ಇಂಟೀರಿಯರ್‌ಗಳು ಹಾಗೂ 12.9 ಇಂಚು ಇನ್ಫೋಟೇನ್‌ಮೆಂಟ್ ವ್ಯವಸ್ಥೆ, ಸ್ವಯಂಚಾಲಿತ ಹವಾನಿಯಂತ್ರಣ ವ್ಯವಸ್ಥೆ, ಕ್ರೂಸ್ ಕಂಟ್ರೋಲ್ ಈ ಮಾದರಿಯಲ್ಲಿ ಇದೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೊ ಹೋಲ್ಡ್ ಸೌಲಭ್ಯ ಕೂಡ ಇದೆ.
ವಿಎಫ್ 6 ವಿಂಡ್:
ಈ ಕಾರು 8.9 ಸೆಕೆಂಡುಗಳಲ್ಲಿ ನಿಂತ ಸ್ಥಿತಿಯಿಂದ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಲ್ಲದು. 8 ವೇ ಪವರ್ಡ್ ಡ್ರೈವರ್ ಸೀಟ್ ಅಡ್ಜೆಸ್ಟ್‌ಮೆಂಟ್, ಡ್ಯುಯಲ್ ಜೋನ್ ಎ.ಸಿ., ಏರ್ ಅಯೋನೈಸರ್ ಸೌಲಭ್ಯಗಳು ಪ್ರಯಾಣವನ್ನು ಆರಾಮದಾಯಕ ಆಗಿಸುತ್ತವೆ. 8 ಸ್ಪೀಕರ್‌ಗಳ ಆಡಿಯೊ ವ್ಯವಸ್ಥೆ, ಹೊಂದಿಕೊಳ್ಳುವ ಕ್ರೂಸ್ ಕಂಟ್ರೋಲ್ ವ್ಯವಸ್ಥೆ ಇದೆ. ಮುಂದೆ ಮತ್ತು ಹಿಂದೆ ಆಟೊ ಎಮರ್ಜೆನ್ಸಿ ಬ್ರೇಕಿಂಗ್, 18 ಇಂಚ್ ಮೆಷಿನ್ ಕಟ್ ಚಕ್ರಗಳು ಹಾಗೂ ಇತರೆ ವೈಶಿಷ್ಟ್ಯಗಳಿವೆ.
ವಿಎಫ್ 6 ವಿಂಡ್ ಇನ್ಫಿನಿಟಿ:
ಇದರಲ್ಲಿ ದೊಡ್ಡದಾದ ಪನೋರಮಿಕ್ ಗ್ಲಾಸ್ ರೂಫ್ ಸೌಲಭ್ಯ ಇದೆ.
ವಿನ್‌ಫಾಸ್ಟ್ ವಿಎಫ್ 7:
ಇದು 4.5 ಮೀಟರ್‌ಗಿಂತ ಉದ್ದವಿರುವ ಎಸ್‌ಯುವಿ. ಇದರ ವೀಲ್‌ಬೇಸ್ 2,840 ಎಂ.ಎಂ. ಎರಡು ಭಿನ್ನ ಬ್ಯಾಟರಿ ಪ್ಯಾಕ್‌ಗಳಲ್ಲಿ ಹಾಗೂ ಐದು ಮಾದರಿಗಳಲ್ಲಿ ಲಭ್ಯವಿರಲಿದೆ. ಅರ್ಥ್, ವಿಂಡ್, ವಿಂಡ್ ಇನ್ಫಿನಿಟಿ, ಸ್ಕೈ ಮತ್ತು ಸ್ಕೈ ಇನ್ಫಿನಿಟಿ ಈ ಮಾದರಿಗಳಾಗಿವೆ.
ಅರ್ಥ್:
ಇದು 59.6 ಕಿಲೋವಾಟ್ ಅವರ್ ಬ್ಯಾಟರಿ ಪ್ಯಾಕ್ ಹೊಂದಿದೆ. 24 ನಿಮಿಷಗಳಲ್ಲಿ ಶೇಕಡ 70ರವರೆಗೆ ಚಾರ್ಜ್ ಮಾಡಿಕೊಳ್ಳಬಹುದು. ರೇನ್ ಸೆನ್ಸಿಂಗ್ ವೈಪರ್‌ಗಳು, ಡ್ಯುಯಲ್ ಜೋನ್ ಎ.ಸಿ., ಪವರ್ಡ್ ಡ್ರೈವರ್ ಸೀಟು, ಕ್ರೂಸ್ ಕಂಟ್ರೋಲ್, 19 ಇಂಚುಗಳ ಅಲಾಯ್ ವೀಲ್ ಇದರಲ್ಲಿ ಇವೆ. ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೊ ಹೋಲ್ಡ್ ಸೌಲಭ್ಯ ಕೂಡ ಇವೆ.
ವಿಂಡ್:
ಇದರಲ್ಲಿ ದೊಡ್ಡದಾದ 70.8 ಕಿಲೋವಾಟ್ ಅವರ್ ಬ್ಯಾಟರಿ ಪ್ಯಾಕ್ ಇದೆ. 9.5 ಸೆಕೆಂಡುಗಳಲ್ಲಿ 100 ಗಂಟೆ ಕಿ.ಮೀ. ವೇಗವನ್ನು ತಲುಪಬಲ್ಲದು. 28 ನಿಮಿಷಗಳಲ್ಲಿ ಶೇ 70ರಷ್ಟು ಚಾರ್ಜ್ ಆಗಬಲ್ಲದು. 19 ಇಂಚುಗಳ ಅಲಾಯ್ ವೀಲ್, 8-ವೇ ಪವರ್ ಡ್ರೈವರ್ ಸೀಟ್ ಅಡ್ಜೆಸ್ಟ್‌ಮೆಂಟ್, 8-ಸ್ಪೀಕರ್‌ಗಳ ಆಡಿಯೊ ವ್ಯವಸ್ಥೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ವ್ಯವಸ್ಥೆ ಇದರಲ್ಲಿದೆ.
7 ಸ್ಕೈ:
ವಿಎಫ್ 7ನಲ್ಲಿ ಇರುವ ಎಲ್ಲ ಸೌಲಭ್ಯಗಳ ಜೊತೆ ಇದರಲ್ಲಿ ಡ್ಯುಯಲ್ ಮೋಟರ್ ವ್ಯವಸ್ಥೆ ಇದೆ. ಇದು 260 ಕಿಲೋವಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ. 100 ಗಂಟೆ ಕಿ.ಮೀ ವೇಗವನ್ನು ಕೇವಲ 5.8 ಸೆಕೆಂಡುಗಳಲ್ಲಿ ತಲುಪಬಲ್ಲದು.
ವಿಂಡ್ ಇನ್ಫಿನಿಟಿ ಮತ್ತು ಸ್ಕೈ ಇನ್ಫಿನಿಟಿ: ಇವುಗಳಲ್ಲಿ ದೊಡ್ಡದಾದ ಪನೋರಮಿಕ್ ಫಿಕ್ಸ್ಡ್ ಗ್ಲಾಸ್ ರೂಫ್ ಇದೆ.
ವಿಎಫ್ 6 ಮತ್ತು ವಿಫ್7 ಆರಂಭಿಕ ಬೆಲೆ ಕ್ರಮವಾಗಿ ₹16.49 ಲಕ್ಷ ಮತ್ತು ₹20.89 ಲಕ್ಷ.
ವಿನ್‌ಫಾಸ್ಟ್ ಕಂಪನಿಯು ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಹಲವು ಪ್ರಮುಖ ಬ್ಯಾಂಕ್‌ಗಳ ಜೊತೆ ಮತ್ತು ಎನ್‌ಬಿಎಫ್‌ಸಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಗ್ರಾಹಕರಿಗೆ ಅಗತ್ಯಗಳಿಗೆ ತಕ್ಕ ರೀತಿಯಲ್ಲಿ ಹಣಕಾಸಿನ ನೆರವನ್ನು ಒದಗಿಸಲಿದೆ. ಚಾರ್ಜಿಂಗ್ ಮತ್ತು ಮಾರಾಟ ನಂತರದ ಸೇವೆಗಳನ್ನು ಒದಗಿಸುವುದಕ್ಕಾಗಿ ರೋಡ್‌ಗ್ರಿಡ್, ಮೈಟಿವಿಎಸ್ ಮತ್ತು ಗ್ಲೋಬಲ್ ಅಶ್ಯೂರ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ವರ್ಷದ ಅಂತ್ಯಕ್ಕೆ ಮೊದಲು ದೇಶದಾದ್ಯಂತ 35 ಡೀಲರ್ ಕೇಂದ್ರ ಹಾಗೂ 26 ವರ್ಕ್‌ಶಾಪ್ ಹೊಂದುವ ಗುರಿಯನ್ನು ಕಂಪನಿಯು ಇರಿಸಿಕೊಂಡಿದೆ. ಒಟ್ಟು 27 ನಗರಗಳಲ್ಲಿ ಈ ಸೌಲಭ್ಯಗಳು ಆರಂಭವಾಗಲಿವೆ. ದೆಹಲಿ, ಮುಂಬೈ, ಬೆಂಗಳೂರು, ಪುಣೆ, ಹೈದರಾಬಾದ್, ಜೈಪುರ, ಕೊಚ್ಚಿ ಮತ್ತು ಲಖನೌಗಳಲ್ಲಿ ಈ ಸೌಲಭ್ಯಗಳು ಇರಲಿವೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.