ADVERTISEMENT

ಮೊಬೈಲ್‌ ಸೇವಾಶುಲ್ಕ ಹೆಚ್ಚಳ ಅನಿವಾರ್ಯ: ವೊಡಾಫೋನ್‌ ಐಡಿಯಾ

ಪಿಟಿಐ
Published 7 ಸೆಪ್ಟೆಂಬರ್ 2020, 11:23 IST
Last Updated 7 ಸೆಪ್ಟೆಂಬರ್ 2020, 11:23 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸರ್ಕಾರಕ್ಕೆ ಪಾವತಿಸಬೇಕಿರುವ ‘ಹೊಂದಾಣಿಕೆ ಮಾಡಿದ ಒಟ್ಟು ವರಮಾನ’ದಲ್ಲಿನ (ಎಜಿಆರ್‌) ಬಾಕಿಯನ್ನು 10 ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಕೊಡಬಹುದು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಒಳ್ಳೆಯದು ಎಂದು ಹೇಳಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್‌), ‘ಕಂಪನಿಗಳು ಸುಸ್ಥಿರವಾಗಬೇಕು ಎಂದಾದರೆ ಮೊಬೈಲ್‌ ಸೇವಾಶುಲ್ಕ ಹೆಚ್ಚಳ ಆಗಬೇಕು’ ಎಂದು ಹೇಳಿದೆ.

ಆನ್‌ಲೈನ್‌ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಕಂಪನಿಯ ಸಿಇಒ ರವೀಂದರ್ ಟಕ್ಕರ್, ‘ಕಂಪನಿಯು ಈ ಹಿಂದೆಯೂ ಶುಲ್ಕ ಹೆಚ್ಚಳದ ವಿಚಾರದಲ್ಲಿ ಹಿಂದೇಟು ಹಾಕಿಲ್ಲ’ ಎಂದರು. ದೂರಸಂಪರ್ಕ ಸೇವೆಗಳಿಗೆ ಕನಿಷ್ಠ ಶುಲ್ಕ ನಿಗದಿ ಮಾಡುವ ವಿಚಾರದಲ್ಲಿ ಸರ್ಕಾರ ಮತ್ತು ಟ್ರಾಯ್ (ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ಕಂಪನಿಯ ಆಡಳಿತ ಮಂಡಳಿಯು, ₹ 25 ಸಾವಿರ ಕೋಟಿ ಹಣ ಸಂಗ್ರಹಿಸಲು ಅನುಮತಿ ನೀಡಿದೆ. ‘ಎಜಿಆರ್‌ ಬಾಕಿ ಮೊತ್ತವನ್ನು 10 ವರ್ಷಗಳಲ್ಲಿ ಪಾವತಿಸುವುದರ ಜೊತೆಯಲ್ಲೇ, ಬಾಕಿ ಮೊತ್ತದಲ್ಲಿನ ಶೇಕಡ 10ರಷ್ಟನ್ನು ಆರಂಭದಲ್ಲೇ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಆ ಮೊತ್ತವನ್ನು ನಾವು ಈಗಾಗಲೇ ಪಾವತಿಸಿ ಆಗಿದೆ’ ಎಂದು ಟಕ್ಕರ್ ತಿಳಿಸಿದರು.

ADVERTISEMENT

‘ಭಾರತದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸೇವಾ ಶುಲ್ಕವು ಸುಸ್ಥಿರವಲ್ಲ ಎಂಬುದು ಇಡೀ ಉದ್ಯಮದ ಅಭಿಪ್ರಾಯ. ಕಂಪನಿಗಳು ತಾವು ಮಾಡುತ್ತಿರುವ ವೆಚ್ಚಕ್ಕಿಂತಲೂ ಕಡಿಮೆ ಮೊತ್ತದ ಸೇವಾ ಶುಲ್ಕ ಪಡೆಯುತ್ತಿವೆ ಎಂಬುದು ಕಂಪನಿಗಳ ಖರ್ಚು–ಆದಾಯಗಳ ವಿವರ ನೋಡಿದರೆ ಗೊತ್ತಾಗುತ್ತದೆ. ಸೇವಾ ಶುಲ್ಕ ಆದಷ್ಟು ಬೇಗ ಹೆಚ್ಚಾಗಬೇಕು’ ಎಂದರು.

‘ಸೇವಾ ಗುಣಮಟ್ಟವನ್ನು ಉತ್ತಮವಾಗಿ ಇರಿಸಿಕೊಳ್ಳಲು ಹೆಚ್ಚಿನ ಶುಲ್ಕ ಪಾವತಿಗೆ ಗ್ರಾಹಕರು ಸಿದ್ಧರಿದ್ದಾರೆ. ಹಿಂದೆಯೂ ಅವರು ಹೆಚ್ಚಿನ ಮೊತ್ತ ಪಾವತಿಸುತ್ತಿದ್ದರು. ಆರಂಭಿಕ ಹಂತದಲ್ಲಿ ಸೇವಾಶುಲ್ಕವನ್ನು ₹ 200ರ ಮಟ್ಟಕ್ಕೆ ತರುವುದು ಮುಖ್ಯವಾಗುತ್ತದೆ. ಕ್ರಮೇಣ ಇದನ್ನು ₹ 300ರ ಮಟ್ಟಕ್ಕೆ ತರಬಹುದು’ ಎಂದು ಹೇಳಿದರು.

ಹೊಸ ಬ್ರ್ಯಾಂಡ್‌ ‘ವಿ’

ನವದೆಹಲಿ: ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಸೋಮವಾರ ಹೊಸ ಬ್ರ್ಯಾಂಡ್‌ ಅನಾವರಣಗೊಳಿಸಿದೆ. ಹೊಸ ಬ್ರ್ಯಾಂಡ್‌ನ ಹೆಸರು ‘ವಿ’ (Vi).

‘ಭವಿಷ್ಯದತ್ತ ದೃಷ್ಟಿ ನೆಟ್ಟಿರುವ ಬ್ರ್ಯಾಂಡ್ ಇದು. ಎರಡು ಬ್ರ್ಯಾಂಡ್‌ಗಳು ಒಂದಾಗಿ ಈ ಹೆಸರು ಬಂದಿರುವುದರಿಂದ ವಿಶ್ವದ ದೂರಸಂಪರ್ಕ ಕ್ಷೇತ್ರದಲ್ಲಿನಅತಿದೊಡ್ಡ ವಿಲೀನ ಪೂರ್ಣಗೊಂಡಂತೆ ಆಗಿದೆ’ ಎಂದು ವಿಐಎಲ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.