
ನವದೆಹಲಿ: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು 2025ರ ಡಿಸೆಂಬರ್ ತಿಂಗಳಿನಲ್ಲಿ ಶೇ 0.83ರಷ್ಟು ಆಗಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ. ಇದು ಎಂಟು ತಿಂಗಳ ಗರಿಷ್ಠ ಮಟ್ಟದ ಏರಿಕೆಯಾಗಿದೆ.
ಆಹಾರ ಪದಾರ್ಥಗಳು, ಆಹಾರೇತರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳ ಬೆಲೆಯಲ್ಲಿನ ಹೆಚ್ಚಳವೇ ಸಗಟು ಹಣದುಬ್ಬರ ಏರಿಕೆಗೆ ಕಾರಣ ಎಂದು ತಿಳಿಸಿದೆ.
ನವೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರವು ಕ್ರಮವಾಗಿ (–) ಶೇ 0.32 ಮತ್ತು (–) ಶೇ 1.02ರಷ್ಟಾಗಿತ್ತು. 2024ರ ಡಿಸೆಂಬರ್‌ನಲ್ಲಿ ಶೇ 2.57ರಷ್ಟು ದಾಖಲಾಗಿತ್ತು.
ಆಹಾರ ಪದಾರ್ಥಗಳ ಹಣದುಬ್ಬರ ಡಿಸೆಂಬರ್‌ನಲ್ಲಿ ಶೇ 0.43 ಮತ್ತು ತರಕಾರಿಗಳ ಹಣದುಬ್ಬರ ಶೇ 3.50ರಷ್ಟಿದೆ ಎಂದು ತಿಳಿಸಿದೆ.
ಆಹಾರೇತರ ಪದಾರ್ಥಗಳ ಹಣದುಬ್ಬರ ನವೆಂಬರ್‌ನಲ್ಲಿ ಶೇ 2.27ರಷ್ಟಿತ್ತು. ಇದು ಡಿಸೆಂಬರ್‌ನಲ್ಲಿ ಶೇ 2.95ಕ್ಕೆ ಏರಿಕೆ ಆಗಿದೆ. ತಯಾರಿಕಾ ವಸ್ತುಗಳ ಹಣದುಬ್ಬರವು ಶೇ 1.33ರಿಂದ ಶೇ 1.82ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 1.33ರಷ್ಟು ದಾಖಲಾಗಿತ್ತು. ಇದು ಮೂರು ತಿಂಗಳ ಗರಿಷ್ಠ ಹೆಚ್ಚಳವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.