ನವದೆಹಲಿ: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿತ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ 2.38ಕ್ಕೆ ಏರಿಕೆಯಾಗಿದೆ.
ಜನವರಿಯಲ್ಲಿ ಶೇ 2.31ರಷ್ಟಾಗಿತ್ತು. ಸಸ್ಯಜನ್ಯ ತೈಲ ಮತ್ತು ಬೆವರೇಜಸ್ (ಪಾನೀಯಗಳು) ಬೆಲೆಯಲ್ಲಿ ಏರಿಕೆಯಾಗಿದೆ. ಇದು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ. ಕಳೆದ ವರ್ಷದ ಫೆಬ್ರುವರಿಯಲ್ಲಿ ಸೂಚ್ಯಂಕವು ಶೇ 0.2ರಷ್ಟಿತ್ತು.
ತಯಾರಿಸಿದ ಆಹಾರ ಪದಾರ್ಥಗಳ ಬೆಲೆ ಶೇ 11.06ರಷ್ಟು ಏರಿಕೆಯಾಗಿದೆ. ಸಸ್ಯಜನ್ಯ ತೈಲ ಶೇ 33.59 ಮತ್ತು ಬೆವರೇಜಸ್ ಬೆಲೆ ಶೇ 1.66 ಹೆಚ್ಚಳವಾಗಿದೆ. ಒಟ್ಟಾರೆ ತಯಾರಿಸಿದ ಉತ್ಪನ್ನಗಳ ಬೆಲೆ ಶೇ 0.42ರಷ್ಟು ಏರಿಕೆಯಾಗಿದೆ.
ಜನವರಿಯಲ್ಲಿ ಆಲೂಗೆಡ್ಡೆ ಬೆಲೆ ಶೇ 74.28ರಷ್ಟಿತ್ತು. ಫೆಬ್ರುವರಿಯಲ್ಲಿ ಶೇ 27.54ರಷ್ಟಕ್ಕೆ ಇಳಿಕೆಯಾಗಿದೆ. ಇಂಧನ ಮತ್ತು ವಿದ್ಯುತ್ ಬೆಲೆ ಶೇ 2.78ರಿಂದ ಶೇ 0.71ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ಏಳು ತಿಂಗಳ ಕನಿಷ್ಠ ಮಟ್ಟವಾದ ಶೇ 3.61ರಷ್ಟು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.