ADVERTISEMENT

ಹಣದುಬ್ಬರ ತಗ್ಗಿಸಲು ಎಲ್‌ನಿನೊ ಸವಾಲು: ಆರ್‌ಬಿಐ ಗವರ್ನರ್‌

ಪಿಟಿಐ
Published 25 ಜೂನ್ 2023, 17:47 IST
Last Updated 25 ಜೂನ್ 2023, 17:47 IST
ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್
ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ ದಾಸ್   

ಮುಂಬೈ: ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರವನ್ನು ಶೇಕಡ 4ಕ್ಕೆ ತಗ್ಗಿಸುವ ಪ್ರಯತ್ನ ನಡೆಸಲಾಗುವುದು. ಆದರೆ, ಇದಕ್ಕೆ ಎಲ್‌–ನಿನೊ ಸವಾಲಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‌ಬಿಐ ಅಂದಾಜು ಮಾಡಿರುವಂತೆಯೇ ದೇಶದ ಆರ್ಥಿಕತೆಯು ಶೇ 6.5ರಷ್ಟು ಬೆಳವಣಿಗೆ ಕಾಣುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ವಾಡಿಕೆಯಂತೆ ಇರುವ ನಿರೀಕ್ಷೆ ಇದ್ದರೂ ಎಲ್‌–ನಿನೊದ ಆತಂಕ ಇದೆ. ಇದರ ಪರಿಣಾಮ ಎಷ್ಟು ತೀವ್ರವಾಗಿ ಇರಲಿದೆ ಎನ್ನುವುದನ್ನು ನೋಡಬೇಕಿದೆ. ಹವಾಮಾನವು ಯಾವ ರೀತಿಯಲ್ಲಿ ಇರಲಿದೆ ಎನ್ನುವುದನ್ನೂ ಗಮನಿಸಬೇಕಿದೆ. ಅದು ಸಹ ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ ಎಂದು  ದಾಸ್‌ ಹೇಳಿದ್ದಾರೆ.

ADVERTISEMENT

ಕಳೆದ ವರ್ಷದ ಮೇ ತಿಂಗಳಿನಿಂದ ಈವರೆಗೆ ಒಟ್ಟು ರೆಪೊ ದರವನ್ನು 250 ಮೂಲಾಂಶದಷ್ಟು ಹೆಚ್ಚಿಸಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಪೂರೈಕೆ ವ್ಯವಸ್ಥೆಯನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿತು. ಈ ಕಾರಣಗಳಿಂದಾಗಿ ಚಿಲ್ಲರೆ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇ 4.25ಕ್ಕೆ ಇಳಿಕೆ ಕಂಡಿದೆ ಎಂದು ಅವರು ವಿವರಿಸಿದ್ದಾರೆ.

ಹಣದುಬ್ಬರದ ಪರಿಸ್ಥಿತಿಯನ್ನು ನಾವು ನಿರಂತರವಾಗಿ ಪರಿಶೀಲಿಸುತ್ತಿದ್ದೇವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ 5.1ರಲ್ಲಿ ಇರುವ ನಿರೀಕ್ಷೆ ಇದೆ. ಅದನ್ನು ಶೇ 4ಕ್ಕೆ ಇಳಿಸುವ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಸಾಲದ ಬಡ್ಡಿದರ ಗರಿಷ್ಠ ಮಟ್ಟದಲ್ಲಿ ಇರುವ ಕುರಿತು ಮಾತನಾಡಿದ ಅವರು, ‘ಬಡ್ಡಿದರಗಳು ಹಣದುಬ್ಬರದೊಂದಿಗೆ ನೇರವಾದ ಸಂಬಂಧ ಹೊಂದಿವೆ. ಹಣದುಬ್ಬರವು ಶೇ 4ಕ್ಕೆ ಇಳಿಕೆ ಕಂಡಲ್ಲಿ ಆರ್‌ಬಿಐ ಬಡ್ಡಿದರ ಕಡಿತ ಮಾಡಬಹುದು’ ಎಂದಿದ್ದಾರೆ.

ರಷ್ಯಾ–ಉಕ್ರೇನ್‌ ಯುದ್ಧದಿಂದಾಗಿ ಸರಕುಗಳ ದರ ಏರಿಕೆ ಕಂಡಿತು. ಅದರಿಂದಾಗಿ ಹಣದುಬ್ಬರ ಪ್ರಮಾಣ ಹೆಚ್ಚಾಯಿತು. ಹಣದುಬ್ಬರದ ದೃಷ್ಟಿಯಿಂದ ಕಚ್ಚಾ ತೈಲ ದರವು ಆತಂಕ ಪಡುವ ಮಟ್ಟದಲ್ಲಿ ಇಲ್ಲ. ಕಚ್ಚಾ ತೈಲ ದರವು ಸದ್ಯ ಬ್ಯಾರಲ್‌ಗೆ 76 ಡಾಲರ್‌ಗೆ ಇಳಿದಿದೆ ಎಂದು ದಾಸ್‌ ತಿಳಿಸಿದ್ದಾರೆ.

ಭಾರತೀಯ ಆಹಾರ ನಿಗಮವು ಗೋಧಿ ಮತ್ತು ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಸಹ ಆಹಾರ ಹಣದುಬ್ಬರ ಇಳಿಕೆಗೆ ನೆರವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.