ADVERTISEMENT

ನೌಕರರ ವಜಾ ಇಲ್ಲ: ವಿಪ್ರೊ ಅಧ್ಯಕ್ಷ ರಿಷದ್‌ ಪ್ರೇಮ್‌ಜಿ ಹೇಳಿಕೆ

ಪಿಟಿಐ
Published 13 ಜುಲೈ 2020, 12:29 IST
Last Updated 13 ಜುಲೈ 2020, 12:29 IST
ರಿಷಬ್‌ ಪ್ರೇಮ್‌ಜಿ
ರಿಷಬ್‌ ಪ್ರೇಮ್‌ಜಿ   

ಬೆಂಗಳೂರು:'ಕೋವಿಡ್‌–19ಪಿಡುಗಿನ ಕಾರಣಕ್ಕೆ ವಿಪ್ರೊದ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿಲ್ಲ, ಸದ್ಯಕ್ಕೆ ಅಂತಹ ಯಾವುದೇ ಆಲೋಚನೆಯೂ ಇಲ್ಲ’ ಎಂದು ಕಂಪನಿಯ ಅಧ್ಯಕ್ಷ ರಿಷದ್‌ ಪ್ರೇಮ್‌ಜಿ ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ ನಡೆದ ಕಂಪನಿಯ 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಷೇರುದಾರರೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡುತ್ತಿದ್ದರು.

‘ನಾವೀಗ ವೆಚ್ಚ ಕಡಿತಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಉದ್ಯೋಗಿಗಳ ಸುರಕ್ಷತೆ ಮತ್ತು ಒಳಿತಿಗಾಗಿ ಗರಿಷ್ಠ ಆದ್ಯತೆ ನೀಡುತ್ತಿದ್ದೇವೆ. ಕೋವಿಡ್‌ ಪಿಡುಗಿನ ಆರಂಭಿಕ ಲಕ್ಷಣಗಳು ಕಂಡು ಬಂದ ಮಾರ್ಚ್‌ನಲ್ಲಿಯೇ ನಮ್ಮ ವಹಿವಾಟಿಗೆ ವೇಗ ನೀಡಲು ನಿರ್ಧಾರಿಸಲಾಗಿತ್ತು. ನೌಕರರು ಮನೆಯಿಂದ ಕೆಲಸ ಮಾಡುವುದಕ್ಕೆ ಉತ್ತೇಜನ ನೀಡಿದ್ದೆವು. ವಿಶ್ವದಾದ್ಯಂತ ಕಂಪನಿಯ ಶೇ 93ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಸಂಘಟಿತ ಪ್ರಯತ್ನದ ಫಲವಾಗಿ ಈ ಬದಲಾವಣೆಯು ಸುಸೂತ್ರವಾಗಿ ಜರುಗಿದೆ.

ADVERTISEMENT

‘ಇತ್ತೀಚಿನ ದಿನಗಳಲ್ಲಿ ಈ ಹೊಸ ಬಗೆಯ ಕೆಲಸದ ಸಂಸ್ಕೃತಿಗೆ ನಾವು ಸಂಪೂರ್ಣವಾಗಿ ಹೊಂದಿಕೊಂಡಿದ್ದೇವೆ. ನಮ್ಮೆಲ್ಲ ಗ್ರಾಹಕರ ವಹಿವಾಟು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡಿದ್ದೇವೆ. ಭವಿಷ್ಯದಲ್ಲಿ ನಾವು ಹೇಗೆ ಕೆಲಸ ಮಾಡಲಿದ್ದೇವೆ ಎನ್ನುವುದಕ್ಕೆ ಈ ಬದಲಾವಣೆಗಳು ನಿರಂತರವಾಗಿ ಮುಂದುವರೆಯುವ ಸಾಧ್ಯತೆ ಇದೆ ಎಂಬುದು ನನ್ನ ನಂಬಿಕೆಯಾಗಿದೆ.

‘ಡಿಜಿಟಲ್‌ಗೆ ಆದ್ಯತೆ ನೀಡುವ ಧೋರಣೆಯು ಸದ್ಯದ ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ಡಿಜಿಟಲ್‌, ಕ್ಲೌಡ್‌, ಸೈಬರ್‌ ಸೆಕ್ಯುರಿಟಿ ಮತ್ತು ನಮ್ಮ ಎಂಜಿನಿಯರಿಂಗ್‌ ಸಾಮರ್ಥ್ಯದಲ್ಲಿ ನಾವು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೇವೆ’ ಎಂದೂ ಹೇಳಿದ್ದಾರೆ.

ಲಾಭದಾಯಕ ಪ್ರಗತಿ: ಕಂಪನಿಯನ್ನು ಲಾಭದಾಯಕ ಪ್ರಗತಿಯತ್ತ ಕೊಂಡೊಯ್ಯುವುದಕ್ಕೆ ನನ್ನ ಕಾರ್ಯಸೂಚಿಯಲ್ಲಿ ಆದ್ಯತೆ ನೀಡಿರುವೆ’ ಎಂದು ಕಂಪನಿಯ ಹೊಸ ಸಿಇಒ ಥಿಯೆರ‍್ರಿ ಡೆಲಾಪೋರ್ಟ್‌ ಹೇಳಿದ್ದಾರೆ.

‘ನಮ್ಮೆಲ್ಲ ಪಾಲುದಾರರ ಹಿತಾಸಕ್ತಿ ರಕ್ಷಣೆಗಾಗಿ ದೀರ್ಘಾವಧಿ, ಸುಸ್ಥಿರ ಬೆಳವಣಿಗೆ ಸಾಧಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ’ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.