ADVERTISEMENT

ವಿಪ್ರೊ ನಿವ್ವಳ ಲಾಭ ₹ 1,889 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 18:12 IST
Last Updated 24 ಅಕ್ಟೋಬರ್ 2018, 18:12 IST
ಅಬಿದಾಲಿ
ಅಬಿದಾಲಿ   

ಬೆಂಗಳೂರು:ಸಾಫ್ಟ್‌ವೇರ್‌ ರಫ್ತಿನಲ್ಲಿ ದೇಶದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೊ, ದ್ವಿತೀಯ ತ್ರೈಮಾಸಿಕದಲ್ಲಿ ₹ 1,889 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿನ ನಿವ್ವಳ ಲಾಭವು ₹ 2,191 ಕೋಟಿ ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ನಿವ್ವಳ ಲಾಭವು ಶೇ 14ರಷ್ಟು ಕುಸಿತ ಕಂಡಿದೆ.

ಸಂಸ್ಥೆಯ ವರಮಾನವು₹ 13,423 ಕೋಟಿಗಳಿಂದ ₹ 14,541 ಕೋಟಿಗಳಿಗೆ ತಲುಪಿ ಶೇ 8.3ರಷ್ಟು ಹೆಚ್ಚಳ ದಾಖಲಿಸಿದೆ. ಸಂಸ್ಥೆಯ ಬಹುತೇಕ ವರಮಾನವು ಐ.ಟಿ ಸೇವೆಗಳಿಂದಲೇ ಬರುತ್ತದೆ. ಸಂಸ್ಥೆಯ ಹಣಕಾಸು ಸಾಧನೆಯು ಮಾರುಕಟ್ಟೆಯ ನಿರೀಕ್ಷೆಗಿಂತ ಕಡಿಮೆ ಇದೆ.

ADVERTISEMENT

ವರಮಾನ ಗಳಿಕೆ ವಿಷಯದಲ್ಲಿ ಸಂಸ್ಥೆಯು ಈಗ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ. ಎಚ್‌ಸಿಎಲ್‌ನ ವರಮಾನವು ಶೇ 19.5ರಷ್ಟು ಹೆಚ್ಚಾಗಿ ₹ 14,860 ಕೋಟಿಗೆ ತಲುಪಿದೆ.

‘ಈ ಅವಧಿಯಲ್ಲಿ ಸಂಸ್ಥೆಯು ಅತಿದೊಡ್ಡ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಸಂಸ್ಥೆಯ ವಹಿವಾಟಿನ ನಾಲ್ಕು ವಿಭಾಗಗಳು ಶೇ 4ರ ದರದಲ್ಲಿ ಹೆಚ್ಚಳ ಸಾಧಿಸಿವೆ. ಡಿಜಿಟಲ್‌ ಬದಲಾವಣೆ ಮತ್ತು ವಹಿವಾಟಿನ ಆಧುನೀಕರಣ ಸೇವೆಗೆ ಬೇಡಿಕೆ ಹೆಚ್ಚುತ್ತಿದೆ’ ಎಂದು ಸಂಸ್ಥೆಯ ಸಿಇಒ ಅಬಿದಾಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ತ್ರೈಮಾಸಿಕದ ಅಂತ್ಯಕ್ಕೆ ಸಂಸ್ಥೆಯ ಒಟ್ಟಾರೆ ಸಿಬ್ಬಂದಿ ಸಂಖ್ಯೆ 1,75,346ಕ್ಕೆ ತಲುಪಿದೆ.

‘ಹಣಕಾಸು ಸೇವಾ ವಲಯಗಳ ಕುರಿತು ಅರುಂಧತಿ ಅವರ ಅಪಾರ ತಿಳಿವಳಿಕೆಯು ಸಂಸ್ಥೆಯ ಪ್ರಯೋಜನಕ್ಕೆ ಬರಲಿದೆ’ ಎಂದು ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಅರುಂಧತಿ ಸ್ವತಂತ್ರ ನಿರ್ದೇಶಕಿ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ (ಎಸ್‌ಬಿಐ) ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರನ್ನು ಸಂಸ್ಥೆಯ ಸ್ವತಂತ್ರ ನಿರ್ದೇಶಕಿಯನ್ನಾಗಿ ನೇಮಿಸಲಾಗಿದೆ. ಈ ಸಂಬಂಧ ಸಂಸ್ಥೆಯ ನಿರ್ದೇಶಕ ಮಂಡಳಿ ಸಭೆಯು ನಿರ್ಣಯ ಅಂಗೀಕರಿಸಿದೆ.

ಭಟ್ಟಾಚಾರ್ಯ ಅವರ ಅಧಿಕಾರಾವಧಿಯು 2019ರ ಜನವರಿ 1ರಿಂದ ಐದು ವರ್ಷಗಳವರೆಗೆ ಇರಲಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಕೂಡ ಅರುಂಧತಿ ಅವರನ್ನು ತನ್ನ ನಿರ್ದೇಶಕ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಭಟ್ಟಾಚಾರ್ಯ ಅವರು 2013ರಲ್ಲಿ ಎಸ್‌ಬಿಐನ ಮೊದಲ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.