ನವದೆಹಲಿ: ಐ.ಟಿ. ಸೇವೆಗಳನ್ನು ನೀಡುವ ವಿಪ್ರೊ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಯನ್ನೂ ಮೀರಿ ಲಾಭ ಗಳಿಸಿದೆ. ಡಿಸೆಂಬರ್ ತ್ರೈಮಾಸಿಕದ ಅಂತ್ಯಕ್ಕೆ ಕಂಪನಿಯು ₹ 2,900 ಕೋಟಿ ಲಾಭ ಗಳಿಸಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದರು. ಆದರೆ, ಕಂಪನಿಯು ಅಂದಾಜನ್ನು ಮೀರಿದ್ದು, ₹ 3,053 ಕೋಟಿ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹ 2,969 ಕೋಟಿ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 2.8ರಷ್ಟು ಹೆಚ್ಚಾಗಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯ ವರಮಾನ ಹಿಂದಿನ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 14.3ರಷ್ಟು ಹೆಚ್ಚಾಗಿ ₹ 23,229 ಕೋಟಿಗೆ ತಲುಪಿದೆ. ತ್ರೈಮಾಸಿಕದಲ್ಲಿ, ₹ 8,150 ಕೋಟಿಗೂ ಹೆಚ್ಚಿನ ದೊಡ್ಡ ಪ್ರಮಾಣದ ಒಪ್ಪಂದಗಳಿಗೆ ಸಹಿ ಹಾಕಿರುವುದನ್ನೂ ಒಳಗೊಂಡು ಒಟ್ಟು ₹ 35,045 ಕೋಟಿ ಮೊತ್ತದ ಒಪ್ಪಂದ ನಡೆದಿದೆ ಎಂದು ಕಂಪನಿಯ ಸಿಇಒ ಥಿಯರಿ ಡೆಲಾಪೋರ್ಟ್ ತಿಳಿಸಿದ್ದಾರೆ.
ಗ್ರಾಹಕರೊಂದಿಗಿನ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತಿದೆ. ಹೀಗಾಗಿ ಕಂಪನಿಯ ಮಾರುಕಟ್ಟೆ ಪಾಲು ಗಳಿಕೆಯು ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಕಂಪನಿಯು ಪ್ರತಿ ಷೇರಿಗೆ ₹ 1ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.