ADVERTISEMENT

ಇಳಿಕೆಯ ಹಾದಿಯಲ್ಲಿ ಸಗಟು ಹಣದುಬ್ಬರ

ಪಿಟಿಐ
Published 16 ಆಗಸ್ಟ್ 2022, 15:18 IST
Last Updated 16 ಆಗಸ್ಟ್ 2022, 15:18 IST
   

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರ ಪ್ರಮಾಣವು ಜುಲೈನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಜುಲೈನಲ್ಲಿ ಸಗಟು ಹಣದುಬ್ಬರವು ಶೇಕಡ 13.93ರಷ್ಟು ದಾಖಲಾಗಿದೆ. ಆಹಾರ ವಸ್ತುಗಳು ಮತ್ತು ತಯಾರಿಕಾ ಉತ್ಪನ್ನಗಳ ಬೆಲೆ ಇಳಿಕೆ ಆಗಿದ್ದು ಹಣದುಬ್ಬರ ಇಳಿಕೆಗೆ ಕಾರಣ.

ಸಗಟು ಹಣದುಬ್ಬರ ಪ್ರಮಾಣವು ಸತತ ಎರಡು ತಿಂಗಳುಗಳಿಂದ ಕಡಿಮೆ ಆಗುತ್ತಿದ್ದು, ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಇಳಿಕೆ ಆಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮೇ ತಿಂಗಳಲ್ಲಿ ದಾಖಲೆಯ ಶೇ 15.88ಕ್ಕೆ ಏರಿಕೆ ಆಗಿದ್ದ ಸಗಟು ಹಣದುಬ್ಬರವು ಜೂನ್‌ನಲ್ಲಿ ಶೇ 15.18ಕ್ಕೆ ತಗ್ಗಿತ್ತು.

ಹಿಂದಿನ ವರ್ಷದ ಜುಲೈನಲ್ಲಿ ಸಗಟು ಹಣದುಬ್ಬರವು ಶೇ 11.57ರಷ್ಟು ಇತ್ತು. ಈ ವರ್ಷದ ಜುಲೈನ ಪ್ರಮಾಣವನ್ನೂ ಪರಿಗಣಿಸಿದರೆ, ಸಗಟು ಹಣದುಬ್ಬರವು ಸತತ 16 ತಿಂಗಳುಗಳಿಂದ ಎರಡು ಅಂಕಿಗಳ ಮಟ್ಟದಲ್ಲಿ ಇದ್ದಂತಾಗಿದೆ.

ADVERTISEMENT

ಕಚ್ಚಾ ತೈಲದ ಬೆಲೆ ಇನ್ನೂ ಹೆಚ್ಚಿನ ಮಟ್ಟದಲ್ಲಿಯೇ ಉಳಿದಿರುವುದು, ಅಗತ್ಯ ವಸ್ತುಗಳ ಬೆಲೆ ಹೆಚ್ಚಿರುವುದು ತಯಾರಕರ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಅವರು ಬೆಲೆ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸುವುದರಿಂದ ಚಿಲ್ಲರೆ ಹಣದುಬ್ಬರ ಹೆಚ್ಚಾಗುತ್ತದೆ ಎಂದು ಸಿಆರ್‌ಸಿಎಲ್‌ ಎಲ್‌ಎಲ್‌ಪಿ ಕಂಪನಿಯ ಸಿಇಒ ಡಿಆರ್‌ಇ ರೆಡ್ಡಿ ಹೇಳಿದ್ದಾರೆ.

‘ಲೋಹಗಳು, ತೈಲ, ರಸಗೊಬ್ಬರ ಬೇಡಿಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಜಾಗತಿಕ ಅರ್ಥ ವ್ಯವಸ್ಥೆ ಚೇತರಿಕೆ ಕಾಣುತ್ತಿದೆ ಎನ್ನಬಹುದು. ಕಚ್ಚಾ ತೈಲದ ಬೆಲೆಯು ಕಡಿಮೆ ಆದರೆ, ಪೂರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಪರಿಹಾರ ಕಂಡರೆ ಸಗಟು ಹಣದುಬ್ಬರವು ಕಡಿಮೆ ಆಗಬಹುದು’ ಎಂದು ರೆಡ್ಡಿ ತಿಳಿಸಿದ್ದಾರೆ.

ರೆಪೊ ದರ ನಿಗದಿ ಮಾಡುವ ಸಂದರ್ಭದಲ್ಲಿ ಆರ್‌ಬಿಐ ಚಿಲ್ಲರೆ ಹಣದುಬ್ಬರದ ಪ್ರಮಾಣವನ್ನು ಗಮನಿಸುತ್ತದೆ.

ಸಗಟು ಹಣದುಬ್ಬರ ಇಳಿಕೆ

ವಿವರ;ಜುಲೈ;ಜೂನ್

ಆಹಾರ ವಸ್ತುಗಳು;10.77;14.39

ತರಕಾರಿ;18.25;56.75

ಇಂಧನ ಮತ್ತು ವಿದ್ಯುತ್;43.75;40.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.