ADVERTISEMENT

ಮಾರ್ಚ್‌ 18ಕ್ಕೆ ಯೆಸ್‌ ಬ್ಯಾಂಕ್‌ ನಿರ್ಬಂಧ ಅಂತ್ಯ; ಮಾ.19ರಿಂದ ಸೇವೆಗಳು ಲಭ್ಯ

ಪುನಶ್ಚೇತನ ಯೋಜನೆ: ಕೇಂದ್ರ ಸರ್ಕಾರದ ಅಧಿಸೂಚನೆ

ಪಿಟಿಐ
Published 16 ಮಾರ್ಚ್ 2020, 8:51 IST
Last Updated 16 ಮಾರ್ಚ್ 2020, 8:51 IST
ಯೆಸ್ ಬ್ಯಾಂಕ್ ಎದುರು ಜನಸಂದಣಿ
ಯೆಸ್ ಬ್ಯಾಂಕ್ ಎದುರು ಜನಸಂದಣಿ   

ನವದೆಹಲಿ: ಯೆಸ್‌ ಬ್ಯಾಂಕ್‌ ಮೇಲಿನ ನಿರ್ಬಂಧವನ್ನು ಇದೇ 18ರಂದು ಹಿಂಪಡೆಯಲಿದ್ದು, ಸಿಇಒ ಪ್ರಶಾಂತ್‌ ಕುಮಾರ್‌ ನೇತೃತ್ವದ ಹೊಸ ಆಡಳಿತ ಮಂಡಳಿಯು ತಿಂಗಳಾಂತ್ಯದಿಂದ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

'ಬ್ಯಾಂಕಿಂಗ್‌ನ ಎಲ್ಲ ಸೇವೆಗಳು 2020ರ ಮಾರ್ಚ್‌ 18ರಂದು ಸಂಜೆ 6ರಿಂದ ಆರಂಭವಾಗಲಿವೆ. ಮಾರ್ಚ್‌ 19ರಿಂದ ನಮ್ಮ 1,132 ಶಾಖೆಗಳಲ್ಲಿ ಯಾವುದೇ ಶಾಖೆಗೆ ಭೇಟಿ ನೀಡಿ, ಸೇವೆ ಪಡೆಯಿರಿ. ನಮ್ಮ ಎಲ್ಲ ಡಿಜಿಟಲ್‌ ಸೇವೆಗಳು ಹಾಗೂ ಪ್ಲಾಟ್‌ಫಾರ್ಮ್‌ಗಳೂ ಸೇವೆಗೆ ತೆರೆದುಕೊಳ್ಳಲಿವೆ' ಎಂದು ಯೆಸ್‌ ಬ್ಯಾಂಕ್‌ ಸೋಮವಾರ ಟ್ವೀಟಿಸಿದೆ.

ಯೋಜನೆಯಂತೆ, ಶೇ 49ರಷ್ಟು ಷೇರು ಖರೀದಿಸಲಿರುವ ಎಸ್‌ಬಿಐ ಮೂರು ವರ್ಷಗಳವರೆಗೆ ಷೇರುಪಾಲನ್ನು ಶೇ 26ಕ್ಕಿಂತಲೂ ಕೆಳಕ್ಕೆ ಇಳಿಸುವಂತಿಲ್ಲ. ಇತರೆ ಹೂಡಿಕೆದಾರರು ಮತ್ತು ಹಾಲಿ ಷೇರುದಾರರು ಬ್ಯಾಂಕ್‌ನಲ್ಲಿ ಶೇ 75ರಷ್ಟು ಷೇರುಪಾಲನ್ನು ಮೂರು ವರ್ಷಗಳ ಅವಧಿಗೆ (ಲಾಕ್‌ ಇನ್‌ ಪಿರಿಯಡ್‌) ತೆಗೆಯುವಂತಿಲ್ಲ. 100ಕ್ಕಿಂತಲೂ ಕಡಿಮೆ ಷೇರು ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.

ADVERTISEMENT

ಲಾಕ್‌ ಇನ್‌ ಪಿರಿಯಡ್‌ ವಿಧಿಸಿರುವುದರಿಂದ ಸೋಮವಾರ ಯೆಸ್‌ ಬ್ಯಾಂಕ್‌ ಷೇರು ಬೆಲೆ ಶೇ 43ರಷ್ಟು ಏರಿಕೆಯಾಗಿ ₹36.55 ತಲುಪಿತು.

ಬ್ಯಾಂಕ್‌ನ ಪುನಶ್ಚೇತನ ಯೋಜನೆಯು 13 ರಿಂದಲೇ (ಶುಕ್ರವಾರ) ಜಾರಿಗೆ ಬಂದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸುನಿಲ್‌ ಮೆಹ್ತಾ, ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಹೇಶ್‌ ಕೃಷ್ಣಮೂರ್ತಿ ಮತ್ತು ಅತುಲ್‌ ಭೇಡಾ ಅವರು ಹೊಸ ಆಡಳಿತ ಮಂಡಳಿಯಲ್ಲಿ ಇರಲಿದ್ದಾರೆ.

ಎಸ್‌ಬಿಐ ಅಲ್ಲದೆ, ಹಲವು ಬ್ಯಾಂಕ್‌ಗಳು ಹೂಡಿಕೆಗೆ ಮುಂದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.