ಬೆಂಗಳೂರು: ಜಾಗತಿಕ ತಂತ್ರಜ್ಞಾನ ಕಂಪನಿ ಜೊಹೊ, ತನ್ನದೇ ಆದ ಭಾಷಾ ಮಾದರಿ ಜಿಯಾ ಎಲ್‌ಎಲ್‌ಎಂ ಬಿಡುಗಡೆ ಮಾಡಿದೆ.
ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಧ್ವನಿಯನ್ನು ಗುರುತಿಸಿ, ಅದನ್ನು ಅಕ್ಷರ ರೂಪಕ್ಕೆ ತರುವ ಸಾಮರ್ಥ್ಯವು ಈ ಮಾದರಿಗೆ ಇದೆ. ಇದು ಭಾರತ ಮತ್ತು ಯುರೋಪ್‌ನ ಇನ್ನಷ್ಟು ಭಾಷೆಗಳಲ್ಲಿ ಕೂಡ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ಕಂಪನಿಯ ಸಿಇಒ ಮಣಿ ವೆಂಬು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಉದ್ಯೋಗ ಮತ್ತು ನೇಮಕಾತಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
2024ರಲ್ಲಿ ಕಂಪನಿಯು ಶೇ 32ರಷ್ಟು ಬೆಳವಣಿಗೆ ಸಾಧಿಸಿದೆ. ಜಾಗತಿಕವಾಗಿ ಭಾರತವು ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅಮೆರಿಕವು ಮೊದಲ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು (ಐಟಿಇಎಸ್), ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ವಿಮೆ, ತಯಾರಿಕೆ, ರಿಟೇಲ್ ಮತ್ತು ಶಿಕ್ಷಣ ಕ್ಷೇತ್ರದಿಂದ ಕಂಪನಿ ಹೆಚ್ಚಿನ ಪ್ರಗತಿ ದಾಖಲಿಸುತ್ತಿದೆ ಎಂದರು.
ಈ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್‌ಎಲ್‌ಎಂ) ಅನ್ನು ಕೆಲವು ನಿರ್ದಿಷ್ಟ ವ್ಯವಹಾರ ಉದ್ದೇಶಗಳಿಗೆ ಸಿದ್ಧಪಡಿಸಲಾಗಿದೆ. ಇದರ ವೆಚ್ಚವು ಕಡಿಮೆ ಎಂದು ಹೇಳಿದರು.
ಎನ್‌ವಿಡಿಯಾ ಕಂಪನಿಯ ಎ.ಐ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಳ್ಳುವ ಮೂಲಕ ತಮ್ಮದೇ ಆದ ಭಾಷಾ ಮಾದರಿಯನ್ನು ಸಂಪೂರ್ಣವಾಗಿ ಆಂತರಿಕವಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.