ADVERTISEMENT

10 ನಿಮಿಷಗಳಲ್ಲಿ ಆಹಾರ ತಲುಪಿಸುವ ಸೇವೆಗೆ ವಿರೋಧ, ಜೊಮ್ಯಾಟೊ ಸ್ಪಷ್ಟನೆ

ಪಿಟಿಐ
Published 22 ಮಾರ್ಚ್ 2022, 16:18 IST
Last Updated 22 ಮಾರ್ಚ್ 2022, 16:18 IST

ನವದೆಹಲಿ (‍ಪಿಟಿಐ): ಆಹಾರ ಪದಾರ್ಥವನ್ನು 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಜೊಮ್ಯಾಟೊ ಕಂಪನಿಯ ಹೊಸ ಯೋಜನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಈ ಕುರಿತಂತೆ ಕಂಪನಿಯು ವಿವರಣೆಯನ್ನೂ ನೀಡಿದೆ.

‘ಜೊಮ್ಯಾಟೊ ಇನ್‌ಸ್ಟಂಟ್‌’ ಹೆಸರಿನಲ್ಲಿ 10 ನಿಮಿಷದಲ್ಲಿ ಆಹಾರ ಪದಾರ್ಥ ತಲುಪಿಸುವ ಸೇವೆಯನ್ನು ಪ್ರಾಯೋಗಿಕವಾಗಿ ಗುರುಗ್ರಾಮದಲ್ಲಿ ಆರಂಭಿಸುವುದಾಗಿ ಸೋಮವಾರ ಹೇಳಿದ್ದ ಕಂಪನಿಯ ಸಂಸ್ಥಾಪಕ ದೀಪಿಂದರ್ ಗೋಯಲ್, ‘ಹತ್ತು ನಿಮಿಷಕ್ಕಿಂತ ತಡವಾಗಿ ಆಹಾರ ಪದಾರ್ಥ ತಲುಪಿಸಿದವರಿಗೆ ದಂಡ ವಿಧಿಸುವುದಿಲ್ಲ. ಸಕಾಲದಲ್ಲಿ ಆಹಾರ ತಲುಪಿಸುವವರಿಗೆ ಹೆಚ್ಚುವರಿ ಹಣ ಕೊಡುವ ಪ್ರಸ್ತಾವವೂ ಇಲ್ಲ’ ಎಂಬ ಸ್ಪಷ್ಟನೆ ನೀಡಿದ್ದಾರೆ.

10 ನಿಮಿಷಗಳಲ್ಲಿ ಆಹಾರ ಪದಾರ್ಥ ತಲುಪಿಸುವ ಯೋಜನೆಯು ಡೆಲಿವರಿ ಕೆಲಸದಲ್ಲಿ ತೊಡಗಿಸಿಕೊಂಡವರನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂಬ ಟೀಕೆ ವ್ಯಕ್ತವಾಗಿದೆ. ‘ಡೆಲಿವರಿ ಕೆಲಸಗಾರರ ಮೇಲೆ ಇದು ಅನಗತ್ಯ ಒತ್ತಡ ತರಲಿದೆ. ಇದನ್ನು ನಾನು ಸಂಸತ್ತಿನಲ್ಲಿಯೂ ಪ್ರಸ್ತಾಪಿಸಿದ್ದೇನೆ. ಸರ್ಕಾರಕ್ಕೂ ತಿಳಿಸಿದ್ದೇನೆ. ಈ ವಿಷಯವನ್ನು ನಾನು ಮುಂದೆಯೂ ಪ್ರಸ್ತಾಪಿಸುವೆ’ ಎಂದು ಕಾಂಗ್ರೆಸ್ಸಿನ ಲೋಕಸಭಾ ಸದಸ್ಯ ಕಾರ್ತಿ ಪಿ. ಚಿದಂಬರಂ ಹೇಳಿದ್ದರು.

ADVERTISEMENT

ಈ ಸೇವೆಯ ಕಾರಣದಿಂದಾಗಿ ಡೆಲಿವರಿ ವ್ಯಕ್ತಿಗಳು ವೇಗವಾಗಿ ವಾಹನ ಓಡಿಸಬೇಕಾಗುತ್ತದೆ. ಇದರಿಂದ ಅವರ ಜೀವಕ್ಕೂ ಅಪಾಯ, ಇತರರ ಜೀವಕ್ಕೂ ಅಪಾಯ ಎಂದು ಹಲವರು ಟ್ವೀಟ್ ಮಾಡಿದ್ದರು.

ಕೆಲವು ಸ್ಥಳಗಳಲ್ಲಿ ಮಾತ್ರ ಕಂಪನಿಯು ಆಹಾರ ಕೇಂದ್ರಗಳನ್ನು ಸ್ಥಾಪಿಸಲಿದೆ. ಅಲ್ಲಿ ಮಾತ್ರ 10 ನಿಮಿಷಗಳ ಸೇವೆ ಲಭ್ಯವಿರಲಿದೆ. 2–4 ನಿಮಿಷಗಳಲ್ಲಿ ಸಿದ್ಧಪಡಿಸಬಹುದಾದ ಆಹಾರ ಪದಾರ್ಥ, 3–6 ನಿಮಿಷಗಳಲ್ಲಿ ತಲುಪಿಸಬಹುದಾದ ಸ್ಥಳಗಳಿಗೆ ಮಾತ್ರ ಈ ಸೇವೆಯ ಅಡಿಯಲ್ಲಿ ಲಭ್ಯವಿರುತ್ತದೆ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.