ADVERTISEMENT

ಜೊಮಾಟೊ, ಸ್ವಿಗ್ಗಿ, ಮ್ಯಾಜಿಕ್‌ ಪಿನ್‌ ಪ್ಲಾಟ್‌ಫಾರ್ಮ್‌ ಶುಲ್ಕ ಏರಿಕೆ

ಪಿಟಿಐ
Published 7 ಸೆಪ್ಟೆಂಬರ್ 2025, 15:31 IST
Last Updated 7 ಸೆಪ್ಟೆಂಬರ್ 2025, 15:31 IST
   

ನವದೆಹಲಿ: ಊಟ, ತಿಂಡಿಯನ್ನು ಹೋಟೆಲ್‌ಗಳಿಂದ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜೊಮಾಟೊ, ಸ್ವಿಗ್ಗಿ ಮತ್ತು ಮ್ಯಾಜಿಕ್‌ಪಿನ್‌ ಪ್ರತಿ ಆರ್ಡರ್‌ ಮೇಲೆ ವಿಧಿಸುವ ಶುಲ್ಕವನ್ನು (ಪ್ಲಾಟ್‌ಫಾರ್ಮ್‌ ಫೀ) ಏರಿಕೆ ಮಾಡಿವೆ. ಹಬ್ಬಗಳ ಋತು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಯು ದರ ಹೆಚ್ಚಳ ಮಾಡಿವೆ.

ಅಲ್ಲದೆ, ಈ ಕಂಪನಿಗಳು ಊಟ, ತಿಂಡಿಯನ್ನು ಮನೆಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಶೇಕಡ 18ರಷ್ಟು ತೆರಿಗೆ ಸೆಪ್ಟೆಂಬರ್‌ 22ರಿಂದ ಜಾರಿ ಬರಲಿರುವ ಕಾರಣಕ್ಕೆ, ಅದರ ಹೊರೆಯೂ ಗ್ರಾಹಕರಿಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ.

ಸ್ವಿಗ್ಗಿ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ ಶುಲ್ಕವನ್ನು ಆಯ್ದ ನಗರಗಳಲ್ಲಿ ಪ್ರತಿ ಆರ್ಡರ್‌ಗೆ ₹15ಕ್ಕೆ ಹೆಚ್ಚಿಸಿದೆ. ಇದರಲ್ಲಿ ಜಿಎಸ್‌ಟಿ ಸೇರಿದೆ. ಜೊಮಾಟೊ ಜಿಎಸ್‌ಟಿ ಹೊರತುಪಡಿಸಿ ₹12.50 ಹೆಚ್ಚಿಸಿದೆ. ಮ್ಯಾಜಿಕ್‌ಪಿನ್‌ ₹10ಕ್ಕೆ ಏರಿಕೆ ಮಾಡಿದೆ.

ADVERTISEMENT

ಒಂದು ಅಂದಾಜಿನ ಪ್ರಕಾರ, ಶೇ 18ರಷ್ಟು ಜಿಎಸ್‌ಟಿ ಪರಿಣಾಮವಾಗಿ ಜೊಮಾಟೊ ಮತ್ತು ಸ್ವಿಗ್ಗಿ ಗ್ರಾಹಕರು ಕ್ರಮವಾಗಿ ₹2 ಮತ್ತು ₹2.60 ಹೆಚ್ಚುವರಿ ಶುಲ್ಕವನ್ನು ಪ್ರತಿ ಆರ್ಡರ್‌ಗೆ ನೀಡಬೇಕಾಗುತ್ತದೆ. ದರ ಹೆಚ್ಚಳದ ಬಗ್ಗೆ ಸ್ವಿಗ್ಗಿ ಮತ್ತು ಜೊಮಾಟೊ ಪ್ರತಿಕ್ರಿಯೆ ನೀಡಿಲ್ಲ.

'ಆಹಾರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಸೇವೆಗೆ ನಾವು ಈಗಾಗಲೇ ಶೇ 18ರಷ್ಟು ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಈಗಿನ ಜಿಎಸ್‌ಟಿ ಪರಿಷ್ಕರಣೆ ನಮ್ಮ ಮೇಲೆ ಪರಿಣಾಮ ಬೀರದು. ಗ್ರಾಹಕರ ಮೇಲೂ ಜಿಎಸ್‌ಟಿ ಪರಿಷ್ಕರಣೆಯು ಪರಿಣಾಮ ಬೀರದು. ನಮ್ಮ ಪ್ಲಾಟ್‌ಫಾರ್ಮ್‌ ಶುಲ್ಕವು ₹10 ಇದೆ. ಇದು ಇತರೆ ಪ್ರಮುಖ ಕಂಪನಿಗಳ ಶುಲ್ಕಕ್ಕಿಂತ ಕಡಿಮೆ’ ಎಂದು ಮ್ಯಾಜಿಕ್‌ಪಿನ್‌ ಕಂಪನಿಯ ವಕ್ತಾರರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.