ಹಣಕಾಸು
ಒಂದು ಕಾಲದಲ್ಲಿ ಶಾಂಪೂ, ಫೇಸ್ ಪೌಡರ್, ಫೇರ್ ನೆಸ್ ಕ್ರೀಂ, ಕಾಫಿ ಪುಡಿ, ಟೀ ಪುಡಿ, ವಾಷಿಂಗ್ ಪೌಡರ್ ಇವೆಲ್ಲಾ ದೊಡ್ಡಗಾತ್ರದ ಡಬ್ಬಿ ಮತ್ತು ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆ ತಲುಪುತ್ತಿದ್ದವು. ಆಗ ಸಾಕಷ್ಟು ದುಡ್ಡಿರುವ ಮಂದಿಯಷ್ಟೇ ಇವುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿತ್ತು. ಆ ಎಲ್ಲಾ ವಸ್ತುಗಳು ಕ್ರಮೇಣ ಸ್ಯಾಚೆಟ್ (ಸಣ್ಣ ಪ್ಯಾಕೆಟ್) ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿಲು ಶುರುವಾದವು. ಇದರಿಂದ ಜನಸಾಮಾನ್ಯರು ಕೂಡ ಬ್ರ್ಯಾಂಡೆಡ್ ವಸ್ತುಗಳನ್ನು ಸಣ್ಣ ಪ್ರಮಾಣದಲ್ಲಿ ಖರೀದಿಸಲು ಸಾಧ್ಯವಾಯಿತು.
ಹೌದು, ದೇಶದಲ್ಲಿ ಸ್ಯಾಚೆಟ್ ಪದ್ಧತಿಯನ್ನು ಹುಟ್ಟುಹಾಕಿ ಬ್ರ್ಯಾಂಡೆಡ್ ವಸ್ತುಗಳ ಸಾರ್ವತ್ರೀಕರಣ ಮಾಡಿದವರು ತಮಿಳುನಾಡಿನ ರೈತ, ಉದ್ಯಮಿ ಚಿನ್ನಿ ಕೃಷ್ಣನ್. ಈಗ ಅದೇ ಸ್ಯಾಚೆಟ್ ಪರಿಕಲ್ಪನೆಯು ಮ್ಯೂಚುವಲ್ ಫಂಡ್ ಹೂಡಿಕೆಯನ್ನೂ ಪ್ರವೇಶಿಸಿದೆ.
ಮ್ಯೂಚುವಲ್ ಫಂಡ್ ಮೈಕ್ರೊ ಎಸ್ಐಪಿ (ಸಣ್ಣ ಮೊತ್ತದ ಮ್ಯೂಚುವಲ್ ಫಂಡ್ ಹೂಡಿಕೆ) ಕಲ್ಪನೆಯನ್ನು ಎಸ್‌ಬಿಐ ಮ್ಯೂಚುವಲ್ ಫಂಡ್ ಪರಿಚಯಿಸಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ₹250 ಮೊತ್ತದ ಮೈಕ್ರೊ ಎಸ್ಐಪಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಅಗತ್ಯವಿದೆ ಎಂದು ಹಲವು ಬಾರಿ ಪ್ರಸ್ತಾಪಿಸಿತ್ತು. ಹಾಗಾಗಿ, ಎಸ್‌ಬಿಐ ಮ್ಯೂಚುವಲ್ ಫಂಡ್ ಜನ್‌ನಿವೇಶ್ ಎಸ್ಐಪಿ ಸ್ಕೀಂನಲ್ಲಿ ಕೇವಲ ₹250 ಹೂಡಿಕೆಗೆ ಅವಕಾಶ ಕಲ್ಪಿಸಿದೆ.
ಮೈಕ್ರೊ ಎಸ್ಐಪಿ ಎಂದರೇನು?: ಮೈಕ್ರೊ ಎಸ್ಐಪಿ ಒಂದು ಸಣ್ಣ ಪ್ರಮಾಣದ ಮ್ಯೂಚುವಲ್ ಫಂಡ್ ಹೂಡಿಕೆಯ ಉತ್ಪನ್ನವಾಗಿದೆ. ಪ್ರತಿ ದಿನ, ಪ್ರತಿ ವಾರ ಅಥವಾ ಪ್ರತಿ ತಿಂಗಳು ₹250 ಎಸ್ಐಪಿ ಮಾಡಲು ಕಲ್ಪಿಸಲಾಗಿದೆ. ಸದ್ಯ ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಡೇಟ್ ಫಂಡ್‌ನಲ್ಲಿ ಮೈಕ್ರೊ ಎಸ್ಐಪಿ ಆಯ್ಕೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಫಂಡ್‌ಗಳಿಗೆ ಈ ಎಸ್ಐಪಿ ವ್ಯವಸ್ಥೆ ಒದಗಿಸುವುದಾಗಿ ಎಸ್‌ಬಿಐ ಮ್ಯೂಚುವಲ್ ಫಂಡ್ ತಿಳಿಸಿದೆ.
ಜನರು ತೊಡಗಿಸಿದ ಹಣವನ್ನು ಷೇರುಪೇಟೆ ಮತ್ತು ಬಾಂಡ್‌ನಂತಹ ಡೆಟ್ ಹೂಡಿಕೆಗಳಲ್ಲಿ ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಹೂಡಿಕೆ ಮಾಡುವುದರಿಂದ ಮಾರುಕಟ್ಟೆ ಏರಿಳಿತವನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಈ ಫಂಡ್‌ನ ಒಂದು ವರ್ಷದ ಗಳಿಕೆ ಶೇ 9.9ರಷ್ಟಿದ್ದು ಮೂರು ವರ್ಷದ ವಾರ್ಷಿಕ ಸರಾಸರಿ ಗಳಿಕೆ ಶೇ 12.69ರಷ್ಟಿದೆ.
ಈ ಫಂಡ್‌ನ ಡೈರೆಕ್ಟ್ ಪ್ಲಾನ್‌ನಲ್ಲಿ (ನೀವೇ ನೇರವಾಗಿ ಹೂಡಿಕೆ ಮಾಡಿದರೆ ಶೇ 0.69ರಷ್ಟು (ಎಕ್ಸ್‌ಪೆನ್ಸ್ ರೇಷಿಯೊ) ಕಮಿಷನ್ ಇದೆ. ರೆಗ್ಯುಲರ್ ಫಂಡ್‌ನಲ್ಲಿ ಮ್ಯೂಚುವಲ್ ಫಂಡ್ ವಿತರಕರ ಮೂಲಕ ತೊಡಗಿಸಿದರೆ ಶೇ 1.57ರಷ್ಟು (ಎಕ್ಸ್ ಪೆನ್ಸ್ ರೇಷಿಯೊ) ಕಮಿಷನ್ ಕೊಡಬೇಕಾಗುತ್ತದೆ. ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ನಲ್ಲಿ ಹೂಡಿಕೆ ಮಾಡಲು ಸದ್ಯ ಎಸ್‌ಬಿಐ ಯೊನೊ, ಎಸ್‌ಬಿಐ ಮ್ಯೂಚುವಲ್ ಫಂಡ್ ಪ್ಲಾಟ್ ಫಾರಂಗಳನ್ನು ಬಳಸಬಹುದಾಗಿದೆ.
ಮುಂದಿನ ದಿನಗಳಲ್ಲಿ ಜೆರೊದಾ, ಗ್ರೋ, ಪೇಟಿಎಂ ಸೇರಿ ಇತರೆ ಡೈರೆಕ್ಟ್ ಮ್ಯೂಚುವಲ್ ಫಂಡ್ ಆ್ಯಪ್‌ಗಳು ಕೂಡ ಎಸ್‌ಬಿಐ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ತರಹದ ಮೈಕ್ರೊ ಎಸ್ಐಪಿ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಸೆಬಿ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಎಸ್ಐಬಿ ಅಷ್ಟೇ ಅಲ್ಲದೆ ಇನ್ನಿತರ ಮ್ಯೂಚುವಲ್ ಫಂಡ್ ಕಂಪನಿಗಳು ಸಹ ಮೈಕ್ರೊ ಎಸ್ಐಪಿ ಹೂಡಿಕೆ ಆಯ್ಕೆಗಳನ್ನು ತರುವ ಸಾಧ್ಯತೆ ಇದೆ
ಯಾರಿಗೆ ಅನುಕೂಲ?: ಹೊಸದಾಗಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವವರಿಗೆ, ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ವಾಸವಿರುವವರಿಗೆ, ವ್ಯಾಪಾರಸ್ಥರಿಗೆ, ಪ್ರತಿದಿನ ಆದಾಯ ಗಳಿಸುವವರಿಗೆ, ಪಾರ್ಟ್ ಟೈಂ ಕೆಲಸ ಮಾಡುವವರಿಗೆ, ಆಟೊ ಚಾಲಕರಿಗೆ, ಕ್ಯಾಬ್ ಚಾಲಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಬ್ಬರಿಗೂ ಹೂಡಿಕೆ ಮಾಡಲು ಮೈಕ್ರೊ ಎಸ್ಐಪಿ ಅನುಕೂಲಕರವಾಗಿದೆ.
ಮೈಕ್ರೊ ಎಸ್ಐಪಿ ಮೂಲಕ ಹೆಚ್ಚೆಚ್ಚು ಜನರಿಗೆ ಮ್ಯೂಚುವಲ್ ಫಂಡ್ ಹೂಡಿಕೆ ತಲುಪಿಸಲು ಸಾಧ್ಯವಾಗುವ ಜೊತೆಗೆ ಹಣಕಾಸು ನಿರ್ವಹಣೆ ಮತ್ತು ಉಳಿತಾಯದ ಶಿಸ್ತನ್ನು ತರಬಹುದಾಗಿದೆ. ಉದಾಹರಣೆಗೆ ಮುಂದಿನ 25 ವರ್ಷ ಕಾಲ ಪ್ರತಿ ತಿಂಗಳು ₹250 ಎಸ್ಐಪಿ ಹೂಡಿಕೆ ಮಾಡಿದರೆ ಶೇ 12ರಷ್ಟು ಗಳಿಕೆ ಲಾಭಾಂಶ ಸಿಕ್ಕರೆ ₹4.25 ಲಕ್ಷ ಸಿಗುತ್ತದೆ.
25 ವರ್ಷ ಕಾಲ ಪ್ರತಿದಿನ ₹250 ಎಸ್ಐಪಿ ಹೂಡಿಕೆ ಮಾಡಿ ಶೇ 12ರಷ್ಟು ಲಾಭಾಂಶ ದಕ್ಕಿದರೆ ₹16.50 ಲಕ್ಷ ಹೂಡಿಕೆ ಮೊತ್ತವೂ ಸೇರಿ 25 ವರ್ಷದ ಬಳಿಕ ₹1.04 ಕೋಟಿ ಲಭಿಸುತ್ತದೆ. ಸಣ್ಣ ಹೂಡಿಕೆಯೂ ಎಷ್ಟು ದೊಡ್ಡ ಮೊತ್ತ ತಂದುಕೊಡಬಹುದು ಎನ್ನುವುದು ಈ ಲೆಕ್ಕಾಚಾರದಿಂದ ಮನದಟ್ಟಾಗುತ್ತದೆ.
ಕಿವಿಮಾತು: ಸೆಬಿ ನಿರ್ದೇಶನಕ್ಕೂ ಮುಂಚೆಯೇ ₹100 ಮೈಕ್ರೊ ಎಸ್ಐಪಿಗಳನ್ನು ಹಲವು ಮ್ಯೂಚುವಲ್ ಫಂಡ್‌ಗಳು ಪರಿಚಯಿಸಿವೆ. ಆದರೆ, ಸಣ್ಣ ಮೊತ್ತದ ಹೂಡಿಕೆಗಳು ಲಾಭದಾಯಕವಲ್ಲದ ಕಾರಣ ಮ್ಯೂಚುವಲ್ ಫಂಡ್ ಕಂಪನಿಗಳು ಅಂತಹ ಮೈಕ್ರೊ ಎಸ್ಐಪಿಗಳಿಗೆ ಹೆಚ್ಚು ಒತ್ತು ನೀಡಿರಲಿಲ್ಲ. ಈಗ ಸೆಬಿ ಮುಂದಾಳತ್ವದಲ್ಲಿ ₹250 ಮೈಕ್ರೊ ಎಸ್ಐಪಿಗಳನ್ನು ಜನರ ಮೇಲೆ ಹೆಚ್ಚು ಶುಲ್ಕದ ಭಾರ ಹೇರದೆ ನಡೆಸಿದರೆ ಅವು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ.
ಷೇರುಪೇಟೆಯಲ್ಲಿ ಕರಡಿ ಹಿಡಿತ
ಷೇರುಪೇಟೆಯಲ್ಲಿ ಕರಡಿ ಹಿಡಿತ ಜೋರಾಗಿದೆ. ಫೆಬ್ರುವರಿ 28ಕ್ಕೆ ಕೊನೆಗೊಂಡ ವಾರದಲ್ಲಿ ಸೂಚ್ಯಂಕಗಳು ಗಣನೀಯ ಕುಸಿತ ದಾಖಲಿಸಿವೆ. 73198 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.81ರಷ್ಟು ತಗ್ಗಿದೆ. 22124 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 2.94ರಷ್ಟು ಇಳಿಕೆಯಾಗಿದೆ. ಇನ್ನು ನಿಫ್ಟಿ ಮಿಡ್ ಕ್ಯಾಪ್ ಸೂಚ್ಯಂಕ ಶೇ 5.09ರಷ್ಟು ಕುಗ್ಗಿದ್ದರೆ ಸ್ಮಾಲ್ ಕ್ಯಾಪ್ ಶೇ 5.99ರಷ್ಟು ಕುಸಿದಿದೆ. ನಿಫ್ಟಿ ಸತತ ಐದು ತಿಂಗಳಿಂದ ಕುಸಿತ ಕಾಣುತ್ತಿದ್ದರೆ ಸೆನ್ಸೆಕ್ಸ್ ಮೂರು ತಿಂಗಳಿಂದ ಇಳಿಮುಖವಾಗಿ ಸಾಗುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ನೀತಿ ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಮಂದಗತಿಯ ವಹಿವಾಟು ಕಂಪನಿಗಳ ಮುಂಬರುವ ತ್ರೈಮಾಸಿಕದ ಫಲಿತಾಂಶ ಕುಸಿಯಬಹುದು ಎಂಬ ಆತಂಕ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರುಗಳ ಮಾರಾಟ ಸೇರಿ ಹಲವು ಅಂಶಗಳು ಮಾರುಕಟ್ಟೆಯ ಗಣನೀಯ ಇಳಿಕೆಗೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ ಶೇ 7.96 ಮಾಧ್ಯಮ ಶೇ 7.07 ರಿಯಲ್ ಎಸ್ಟೇಟ್ ಶೇ 5.52 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 5.33 ಎನರ್ಜಿ ಶೇ 4.98 ಆಟೊ ಶೇ 4.68 ಲೋಹ ಶೇ 4.54 ಸರ್ವಿಸ್ ಶೇ 2.9 ಫಾರ್ಮಾ ಶೇ 2.81 ಎಫ್ಎಂಸಿಜಿ ಶೇ 2.7 ಮತ್ತು ಫೈನಾನ್ಸ್ ಶೇ 0.63ರಷ್ಟು ಕುಸಿದಿವೆ. ಇಳಿಕೆ–ಗಳಿಕೆ: ನಿಫ್ಟಿ 50 ಸೂಚ್ಯಂಕದಲ್ಲಿ ವಾರದ ಲೆಕ್ಕಾಚಾರ ನೋಡಿದಾಗ ಟೆಕ್ ಮಹೀಂದ್ರ ಶೇ 9.83 ಅಲ್ಟ್ರಾಟೆಕ್ ಸಿಮೆಂಟ್ ಶೇ 9.22 ವಿಪ್ರೊ ಶೇ 9.14 ಟಿಸಿಎಸ್ ಶೇ 8 ಟಾಟಾ ಮೋಟರ್ಸ್ ಶೇ 7.7 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 7.34 ಬಜಾಜ್ ಆಟೊ ಶೇ 7.09 ಇಂಡಸ್ ಇಂಡ್ ಬ್ಯಾಂಕ್ ಶೇ 6.74 ಇನ್ಫೊಸಿಸ್ ಶೇ 6.69 ಒಎನ್‌ಜಿಸಿ ಶೇ 5.9 ಬ್ರಿಟಾನಿಯಾ ಇಂಡಸ್ಟ್ರೀಸ್ ಶೇ 4.64ರಷ್ಟು ಕುಸಿತ ಕಂಡಿವೆ. ಶ್ರೀರಾಮ್ ಫೈನಾನ್ಸ್ ಶೇ 5.22 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.36 ಬಜಾಜ್ ಫೈನಾನ್ಸ್ ಶೇ 1.91 ಮತ್ತು ಎಕ್ಸಿಸ್ ಬ್ಯಾಂಕ್ ಶೇ 0.65ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಸದ್ಯದ ಸ್ಥಿತಿಯಲ್ಲಿ ಮಾರುಕಟ್ಟೆ ಸೂಚ್ಯಂಕಗಳು ಎಣಿಕೆಯ ಲೆಕ್ಕಾಚಾರಕ್ಕೆ ಸಿಗದ ಸ್ಥಿತಿ ತಲುಪಿವೆ. ಜಾಗತಿಕ ವಿದ್ಯಮಾನ ಟ್ರಂಪ್ ಸುಂಕ ನೀತಿ ಸೇರಿ ಇನ್ನೂ ಹಲವು ಅಂಶಗಳು ಮಾರುಕಟ್ಟೆ ಮೇಲೆ ಈ ವಾರವೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇದರ ನಡುವೆಯೂ ಮಾರುಕಟ್ಟೆ ಒಂದಷ್ಟು ಚೇತರಿಕೆ ಕಾಣಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಆದರೆ ಅದು ಎಷ್ಟರಮಟ್ಟಿಗೆ ವಾಸ್ತವಕ್ಕೆ ಬರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.