ADVERTISEMENT

ಹಣಕಾಸು ಸಾಕ್ಷರತೆ: ಎಂಎಫ್‌ ಹೂಡಿಕೆ ಯಶಸ್ಸಿಗೆ ಮೂರು ಸೂತ್ರಗಳು

ಪ್ರಮೋದ್
Published 9 ಜನವರಿ 2022, 19:52 IST
Last Updated 9 ಜನವರಿ 2022, 19:52 IST
ಪ್ರಮೋದ್ ಬಿ.ಪಿ.
ಪ್ರಮೋದ್ ಬಿ.ಪಿ.   

ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವ ಮುನ್ನ ಪ್ರಮುಖವಾಗಿ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಯಾವ ಮಾದರಿಯ ಮೂಲಕ ಹೂಡಿಕೆ ಮಾಡಿದರೆ ಲಾಭ ಹೆಚ್ಚು, ನಿರ್ದಿಷ್ಟ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅನ್ವಯವಾಗುವ ವೆಚ್ಚ ಅನುಪಾತ ಎಷ್ಟು ಮತ್ತು ಅವಧಿಗೆ ಮುನ್ನ ಮ್ಯೂಚುವಲ್ ಫಂಡ್‌ನಿಂದ ಹೊರನಡೆದರೆ ಕಟ್ಟಬೇಕಿರುವ ಎಕ್ಸಿಟ್ ಲೋಡ್ ಎಷ್ಟು ಎನ್ನುವ ಬಗ್ಗೆ ಸ್ಪಷ್ಟತೆಯಿದ್ದರೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಹೆಚ್ಚು ಯಶಸ್ಸು ಗಳಿಸಬಹುದು.

1) ಡೈರೆಕ್ಟ್ ಮ್ಯೂಚುವಲ್ ಫಂಡ್‌ನಲ್ಲಿ ಲಾಭ ಹೆಚ್ಚು: ಮ್ಯೂಚುಯಲ್ ಫಂಡ್ ಮೂಲಕ ಹೂಡಿಕೆ ಮಾಡುವಾಗ ಪ್ರಮುಖವಾಗಿ ಎರಡು ಆಯ್ಕೆಗಳು ನಿಮ್ಮ ಮುಂದೆ ಇರುತ್ತವೆ. ಒಂದನೆಯದ್ದು ಡೈರೆಕ್ಟ್ ಮ್ಯೂಚುವಲ್ ಫಂಡ್; ಎರಡನೆಯದ್ದು ರೆಗ್ಯೂಲರ್ ಮ್ಯೂಚುವಲ್ ಫಂಡ್. ಮಧ್ಯವರ್ತಿಯ (ಏಜೆಂಟ್) ಸಹಾಯವಿಲ್ಲದೆ ಆಸ್ತಿ ನಿರ್ವಹಣಾ ಕಂಪನಿಗಳ (ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ) ಮೂಲಕ ನೇರವಾಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಅದು ‘ಡೈರೆಕ್ಟ್’ ಹೂಡಿಕೆ. ಮಧ್ಯವರ್ತಿಯ ಕಮಿಷನ್ ಇಲ್ಲದ ಕಾರಣ ಈ ರೀತಿಯ ಫಂಡ್‌ಗಳಲ್ಲಿ ವೆಚ್ಚ ಅನುಪಾತ (Expense Ratio) ಶುಲ್ಕ ಕಡಿಮೆ. ಜಿರೋದಾ, ಗ್ರೋ, ಪೇಟಿಎಂ ಮನಿ ಸೇರಿ ಹಲವು ಆ್ಯಪ್‌ಗಳು ಡೈರೆಕ್ಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಅವಕಾಶ ಕಲ್ಪಿಸಿವೆ. ಆಯಾ ಆಸ್ತಿ ನಿರ್ವಹಣಾ ಕಂಪನಿಗಳ ವೆಬ್‌ಸೈಟ್‌ ಮೂಲಕವೂ ಡೈರೆಕ್ಟ್ ಹೂಡಿಕೆ ಮಾಡಲು ಅವಕಾಶ ಇದೆ.

ಮಧ್ಯವರ್ತಿಯ ಸಹಾಯದಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಅದು ‘ರೆಗ್ಯೂಲರ್’ ಹೂಡಿಕೆ. ಈ ಫಂಡ್‌ಗಳಲ್ಲಿ ಹಣಕಾಸು ಸಲಹೆಗಾರರು/ಬ್ಯಾಂಕ್‌ನ ರಿಲೇಷನ್‌ಶಿಪ್ ಮ್ಯಾನೇಜರ್‌ಗಳು ಗ್ರಾಹಕರಿಗೆ ಮ್ಯೂಚುವಲ್ ಫಂಡ್ ಹೂಡಿಕೆ ಸಲಹೆ ನೀಡುತ್ತಾರೆ. ಅದಕ್ಕಾಗಿ ಅವರಿಗೆ ಕಮಿಷನ್ ನೀಡಬೇಕಾಗುತ್ತದೆ. ಈ ಕಾರಣದಿಂದಾಗಿ ರೆಗ್ಯೂಲರ್ ಪ್ಲಾನ್‌ಗಳಲ್ಲಿ ವೆಚ್ಚ ಅನುಪಾತ ಶುಲ್ಕ ಹೆಚ್ಚಿಗೆ ಇರುತ್ತದೆ. ಡೈರೆಕ್ಟ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಸಿಗುವ ಲಾಭಾಂಶ ತುಸು ಹೆಚ್ಚು ಇರುತ್ತದೆ.

ADVERTISEMENT

2) ವೆಚ್ಚ ಅನುಪಾತ ಕಡಿಮೆಯಿದ್ದು ಲಾಭಾಂಶ ಹೆಚ್ಚಿರುವ ಫಂಡ್ ಆಯ್ಕೆ ಮಾಡಿ: ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಫಂಡ್ ಹೌಸ್‌ಗಳು ವಾರ್ಷಿಕ ಶುಲ್ಕ ಪಡೆಯುತ್ತವೆ. ಈ ಶುಲ್ಕವನ್ನು ಮ್ಯೂಚುವಲ್ ಫಂಡ್ ಪರಿಭಾಷೆಯಲ್ಲಿ ವೆಚ್ಚ ಅನುಪಾತ (Expense Ratio) ಎಂದು ಕರೆಯಲಾಗುತ್ತದೆ. ಎಲ್ಲ ರೀತಿಯ ನಿರ್ವಹಣಾ ಶುಲ್ಕಗಳನ್ನೂ ಇದು ಒಳಗೊಂಡಿರುತ್ತದೆ. ಉದಾಹರಣೆಗೆ, ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ವೆಚ್ಚ ಅನುಪಾತ ಶೇಕಡ 0.36ರಿಂದ ಶೇ 1.51ರವರೆಗೂ ಇರುತ್ತದೆ. ವೆಚ್ಚ ಅನುಪಾತ ಕಡಿಮೆ ಇದ್ದರೆ ನಿಮಗೆ ಸಿಗುವ ಒಟ್ಟಾರೆ ಲಾಭಾಂಶ ಹೆಚ್ಚಾಗುತ್ತದೆ. ಹಾಗಾಗಿ ಕಡಿಮೆ ವೆಚ್ಚ ಅನುಪಾತವಿರುವ ಮತ್ತು ಸ್ಥಿರವಾಗಿ ಹೆಚ್ಚು ಲಾಭಾಂಶ ನೀಡುವ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಿ.

3) ಮ್ಯೂಚುವಲ್ ಫಂಡ್ ಎಕ್ಸಿಟ್ ಲೋಡ್ ಬಗ್ಗೆ ತಿಳಿದುಕೊಳ್ಳಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ತಿಳಿಯಬೇಕಾದ ಪ್ರಮುಖ ವಿಚಾರಗಳಲ್ಲಿ ಎಕ್ಸಿಟ್ ಲೋಡ್ ಎನ್ನುವ ಅಂಶವೂ ಒಂದು. ನಿರ್ದಿಷ್ಟ ಅವಧಿಗೆ ಮುನ್ನ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹಿಂಪಡೆದುಕೊಂಡರೆ ಆಸ್ತಿ ನಿರ್ವಹಣಾ ಕಂಪನಿಗಳು ಹೂಡಿಕೆದಾರರಿಗೆ ವಿಧಿಸುವ ಶುಲ್ಕವೇ ಎಕ್ಸಿಟ್ ಲೋಡ್.

ಹೂಡಿಕೆದಾರರು ಅವಧಿಗೆ ಮುನ್ನ ಹೂಡಿಕೆ ಮೊತ್ತ ಹಿಂಪಡೆದುಕೊಳ್ಳುವುದನ್ನು ತಡೆಯಲು ಎಕ್ಸಿಟ್ ಲೋಡ್ ಶುಲ್ಕವನ್ನು ಕಂಪನಿಗಳು ವಿಧಿಸುತ್ತವೆ. ಒಂದು ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಹೂಡಿಕೆ ವರ್ಗಾಯಿಸುವ ಸಂದರ್ಭದಲ್ಲೂ ಎಕ್ಸಿಟ್ ಲೋಡ್ ಅನ್ವಯಿಸುತ್ತದೆ. ಹಾಗಾಗಿ ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಕ್ಸಿಟ್ ಲೋಡ್ ಎಷ್ಟು ಎಂದು ತಿಳಿದು ಮುಂದುವರಿಯುವುದು ಬಹಳ ಮುಖ್ಯ. ನಿರ್ದಿಷ್ಟ ಅವಧಿಗಿಂತ ಹೆಚ್ಚಿನ ಅವಧಿಗೆ ನೀವು ಹೂಡಿಕೆ ಮಾಡಿದರೆ ಎಕ್ಸಿಟ್ ಲೋಡ್‌ ಇರುವುದಿಲ್ಲ. ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ಎಕ್ಸಿಟ್ ಲೋಡ್ ವಿವಿಧ ಪ್ರಮಾಣದಲ್ಲಿ ಇರುತ್ತದೆ.

ಆದರೆ ಎಲ್ಲ ಮ್ಯೂಚುವಲ್ ಫಂಡ್‌ಗಳಲ್ಲೂ ಎಕ್ಸಿಟ್ ಲೋಡ್ ಇರುವುದಿಲ್ಲ ಎನ್ನುವುದು ಮುಖ್ಯವಾಗಿ ಗಮನಿಸಬೇಕಿರುವ ಅಂಶ. ಲಿಕ್ವಿಡ್ ಫಂಡ್‌ಗಳಿಗೆ ಎಕ್ಸಿಟ್ ಲೋಡ್ ಇರುವುದಿಲ್ಲ. ಹೂಡಿಕೆದಾರ ಅಗತ್ಯ ಅನ್ನಿಸಿದಾಗ ಹೂಡಿಕೆ ಹಣ ಹಿಂಪಡೆಯಬಹುದು. ಕೆಲವು ಡೆಟ್ ಫಂಡ್‌ಗಳಲ್ಲಿ ಎಕ್ಸಿಟ್ ಲೋಡ್ ಇರುವುದಿಲ್ಲ, ಇನ್ನು ಕೆಲವು ಫಂಡ್‌ಗಳಲ್ಲಿ ಇರುತ್ತದೆ. ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಹೈಬ್ರೀಡ್ ಫಂಡ್‌ಗಳಲ್ಲಿ ಅವಧಿಗೆ ಮುನ್ನ ಹೂಡಿಕೆ ಹಿಂದಕ್ಕೆ ಪಡೆದರೆ ಎಕ್ಸಿಟ್ ಲೋಡ್ ತೆರಬೇಕಾಗುತ್ತದೆ. ಮತ್ತೊಂದು ವಿಚಾರ ನೆನಪಿರಲಿ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದ ನಂತರ ನಿಮ್ಮ ಫಂಡ್ ನಷ್ಟದಲ್ಲಿದ್ದು, ಆ ವೇಳೆ ಫಂಡ್‌ನಿಂದ ಹೊರಬಂದರೂ ಎಕ್ಸಿಟ್ ಲೋಡ್ ಅನ್ವಯವಾಗುತ್ತದೆ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.