ADVERTISEMENT

ಹಣಕಾಸು ಸಾಕ್ಷರತೆ | ರೆಪೊ ಕಡಿತ; ಎಷ್ಟು ತಗ್ಗುತ್ತದೆ EMI ಭಾರ ?

ರಾಜೇಶ್ ಕುಮಾರ್ ಟಿ. ಆರ್.
Published 8 ಡಿಸೆಂಬರ್ 2025, 0:03 IST
Last Updated 8 ಡಿಸೆಂಬರ್ 2025, 0:03 IST
ರೆಪೊ ದರ
ರೆಪೊ ದರ    

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಳೆದ ಒಂದು ವರ್ಷದಲ್ಲಿ ರೆಪೊ ದರವನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ. 2024ರ ಡಿಸೆಂಬರ್‌ನಲ್ಲಿ ಶೇ 6.5ರಷ್ಟಿದ್ದ ರೆಪೊ ದರ, 2025ರ ಡಿಸೆಂಬರ್‌ನಲ್ಲಿ ಶೇ 5.25ಕ್ಕೆ ಇಳಿದಿದೆ. ಇದಕ್ಕೆ ಅನುಗುಣವಾಗಿ ನಿಮ್ಮ ಗೃಹ ಸಾಲದ ಬಡ್ಡಿ ದರ ಶೇ 8.25ರಿಂದ ಶೇ 7ಕ್ಕೆ ಇಳಿದರೆ, ₹50 ಲಕ್ಷದ ಸಾಲದ ಮೇಲೆ ನೀವು ತಿಂಗಳಿಗೆ ಕಟ್ಟುವ ಇಎಂಐ ಮೊತ್ತದಲ್ಲಿ ಸುಮಾರು ₹3,800, ವರ್ಷಕ್ಕೆ ₹46 ಸಾವಿರ ಮತ್ತು 20 ವರ್ಷಗಳ ಸಾಲದ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ ₹9.12 ಲಕ್ಷದಷ್ಟು ಬಡ್ಡಿ ಹಣ ಉಳಿತಾಯವಾಗುತ್ತದೆ!

ಅದು ಹೇಗೆ ಇಷ್ಟೊಂದು ಅನುಕೂಲವಾಗುತ್ತದೆ ಎಂಬುದನ್ನು ತಿಳಿಯುವ ಜೊತೆಗೆ ರೆಪೊ ದರ ಇಳಿಕೆಯ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ ಎನ್ನುವುದನ್ನು ಆಳಕ್ಕಿಳಿದು ನೋಡೋಣ.

ರೆಪೊ ದರ ಅಂದರೆ: ರೆಪೊ ದರ ಅಂದರೆ ಆರ್‌ಬಿಐ ಇತರ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲಕ್ಕೆ ನಿಗದಿ
ಮಾಡುವ ಬಡ್ಡಿ ದರ. ರೆಪೊ ದರ ಕಡಿಮೆಯಾದರೆ ಗ್ರಾಹಕರು ಪಡೆದಿರುವ ಸಾಲಗಳ ಬಡ್ಡಿ ಕಡಿಮೆಯಾಗುತ್ತದೆ. ರೆಪೊ ದರ ಹೆಚ್ಚಳವಾದರೆ ಸಾಲಗಳ ಮೇಲಿನ ಬಡ್ಡಿ ದರವೂ ಹೆಚ್ಚಳವಾಗುತ್ತದೆ. ರೆಪೊ ದರವನ್ನು ಯಾವಾಗ ಹೆಚ್ಚಳ ಮಾಡಬೇಕು ಯಾವಾಗ ಇಳಿಸಬೇಕು ಎನ್ನುವ ತೀರ್ಮಾನವನ್ನು ಆರ್‌ಬಿಐನ ಹಣಕಾಸು ನೀತಿ ಸಮಿತಿ ತೆಗೆದುಕೊಳ್ಳುತ್ತದೆ. ದೇಶದ ಆರ್ಥಿಕ ಸ್ಥಿತಿ, ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವಿನ ಪ್ರಮಾಣ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ ರೆಪೊ ದರ ನಿಗದಿಪಡಿಸಲಾಗುತ್ತದೆ.

ADVERTISEMENT

12 ತಿಂಗಳಲ್ಲಿ ಇಳಿಕೆ ಎಷ್ಟು?: ಕಳೆದ 12 ತಿಂಗಳಲ್ಲಿ ಆರ್‌ಬಿಐ ಹಲವು ಬಾರಿ ರೆಪೊ ದರ ಕಡಿತ ಮಾಡಿದೆ. 2024ರ ಡಿಸೆಂಬರ್‌ನಲ್ಲಿ ಶೇ 6.50ರಷ್ಟು ಇದ್ದ ದರ 2025ರ ಫೆಬ್ರುವರಿಯಲ್ಲಿ ಶೇ 6.25ಕ್ಕೆ ಇಳಿಯಿತು, ಏಪ್ರಿಲ್‌ನಲ್ಲಿ ಶೇ 6ಕ್ಕೆ ಬಂತು. ಜೂನ್‌ನಲ್ಲಿ ರೆಪೊ ದರವನ್ನು ಶೇ 5.50ಕ್ಕೆ ಇಳಿಸಲಾಯಿತು. ಈಗ ರೆಪೊ ಶೇ 5.25ಕ್ಕೆ ಇಳಿದಿದೆ.

ಯಾವ ಸಾಲ ಅಗ್ಗ?: ರೆಪೊ ದರ ಇಳಿಕೆಯಿಂದ ನಿಜವಾಗಲೂ ಯಾರಿಗೆ ಲಾಭ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ. ಇಂದಿನ ದಿನಗಳಲ್ಲಿ ಬಹುತೇಕ ಹೊಸ ಸಾಲಗಳನ್ನು ಫ್ಲೋಟಿಂಗ್ ದರ ಅಥವಾ ರೆಪೊ ದರ ಆಧರಿಸಿ ನೀಡುತ್ತಿರುವುದರಿಂದ ರೆಪೊ ಇಳಿಕೆಯಾದಾಗ ಅದರ ಲಾಭ ಗ್ರಾಹಕರಿಗೆ ಸಿಗುತ್ತದೆ. ಗೃಹ ಸಾಲ, ವಾಹನ ಸಾಲ, ಆಯ್ದ ವೈಯಕ್ತಿಕ ಸಾಲ ಮತ್ತು ಬಿಸಿನೆಸ್ ಸಾಲಗಳಿಗೆ ಬಡ್ಡಿ ದರ ಇಳಿಕೆಯ ಪ್ರಯೋಜನ ದಕ್ಕಲಿದೆ.

50 ಲಕ್ಷ ಗೃಹ ಸಾಲ: ಉದಾಹರಣೆಗೆ, ನೀವು ಗೃಹಸಾಲ ಪಡೆದಿದ್ದು, ರೆಪೊ ದರ ಇಳಿಕೆಯ ಅನುಕೂಲ ಅದಕ್ಕೆ ಹೇಗೆ ಸಿಗುತ್ತದೆ ಎನ್ನುವುದನ್ನು ನೋಡೋಣ. ನಿಮ್ಮ ಗೃಹ ಸಾಲದ ಮೊತ್ತ ₹50 ಲಕ್ಷ ಆಗಿದ್ದು ಶೇ 8.25ರ ಆರಂಭಿಕ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆದಿದ್ದೀರಿ ಎಂದುಕೊಳ್ಳೋಣ. ನಿಮ್ಮ ಮಾಸಿಕ ಇಎಂಐ ಮೊತ್ತ ಸುಮಾರು ₹42,600. ಒಂದು ವರ್ಷದ ಅವಧಿಯಲ್ಲಿ ಆಗಿರುವ ರೆಪೊ ದರ ಕಡಿತದ ಕಾರಣದಿಂದ ಸಾಲದ ಬಡ್ಡಿ ದರ ಶೇ 7ಕ್ಕೆ ಇಳಿಕೆಯಾಗಿದೆ ಎಂದುಕೊಳ್ಳೋಣ. ಆಗ ನಿಮ್ಮ ಸಾಲದ ಮಾಸಿಕ ಇಎಂಐ ₹38,800ರ ಆಸುಪಾಸಿಗೆ ಬರುತ್ತದೆ. ಅಂದರೆ ಪ್ರತಿ ತಿಂಗಳ ಇಎಂಐ ಮೊತ್ತದಲ್ಲಿ ಸುಮಾರು ₹3,800 ಉಳಿತಾಯವಾಗುತ್ತದೆ.

ಇದೇ ಲೆಕ್ಕಾಚಾರವನ್ನು ಸಾಲ ಪಡೆದಿರುವ ಇಡೀ ಅವಧಿಗೆ ಅನ್ವಯಿಸಿ ಲೆಕ್ಕ ಹಾಕಿದರೆ ಬಡ್ಡಿಯಲ್ಲಿ ಸುಮಾರು ₹9.12 ಲಕ್ಷದವರೆಗೂ ಉಳಿತಾಯವಾಗುತ್ತದೆ.

ಪ್ರಯೋಜನ ಯಾವಾಗ ಸಿಗುತ್ತದೆ?: ಆರ್‌ಬಿಐ ರೆಪೊ ಇಳಿಕೆಯ ಘೋಷಣೆ ಮಾಡಿದ ದಿನವೇ ನಿಮ್ಮಇಎಂಐ
ಕಡಿಮೆ ಆಗದು. ಅದು ನಿಮ್ಮ ಸಾಲದ ಮಾದರಿ ಮತ್ತು ಸಾಲದ ಒಪ್ಪಂದವನ್ನು ಅವಲಂಬಿತವಾಗಿರುತ್ತದೆ. ಈ ಅನುಕೂಲ ಪಡೆಯುವ ಮೊದಲು ನಿಮ್ಮ ಸಾಲ ‘ರೆಪೊ-ಲಿಂಕ್ಡ್’ (ರೆಪೊ ದರದ ಜೊತೆ ಜೋಡಣೆ) ಆಗಿದೆಯೇ ಅಥವಾ ಅನ್ಯ ಮಾನದಂಡದೊಂದಿಗೆ ಜೋಡಣೆ ಆಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಬಡ್ಡಿ ದರ ಕಡಿತವಾಯಿತು ಅಂತ ಸಂಭ್ರಮಿಸುವ ಮೊದಲು ಕೆಲವು ವಿಚಾರಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಬ್ಯಾಂಕಿನವರು ಈವರೆಗೆ ಆಗಿರುವ ಶೇ 1.25ರಷ್ಟು ರೆಪೊ ಕಡಿತವನ್ನು ಪೂರ್ತಿಯಾಗಿ ಗ್ರಾಹಕರಿಗೆ ವರ್ಗಾವಣೆ ಮಾಡುವುದಿಲ್ಲ. ರೆಪೊ ಇಳಿಕೆಯ ಒಂದಷ್ಟು ಭಾಗ ಮಾತ್ರ ನಿಮಗೆ ವರ್ಗಾವಣೆಯಾಗುತ್ತದೆ.

ವೈಯಕ್ತಿಕ ಸಾಲ ಅಥವಾ ಕೆಲವು ಕ್ರೆಡಿಟ್ ಕಾರ್ಡ್ ಆಧಾರಿತ ಸಾಲಗಳಿದ್ದರೆ ರೆಪೊ ಕಡಿತದಿಂದ ಸಿಗುವ ಲಾಭ ತುಂಬಾ ಕಡಿಮೆ. ಬಡ್ಡಿ ದರ ಇಳಿಕೆ ಘೋಷಣೆ ಆದ ಮೇಲೆ ನಿಮ್ಮ ಸಾಲದ ಸ್ಟೇಟ್‌ಮೆಂಟ್ ಪರಿಶೀಲಿಸಿ, ಅದರ ಅನುಕೂಲ ನಿಮಗೆ ಸಿಕ್ಕಿದೆಯೇ ಅಥವಾ ಯಾವಾಗ ಸಿಗುತ್ತದೆ ಎಂಬುದನ್ನು ನೋಡಿಕೊಳ್ಳಿ. ನಿಮ್ಮ ಸಾಲದ ಬಡ್ಡಿ ದರ ಮತ್ತು ಇಎಂಐ ಅಥವಾ ಅವಧಿ ನಿಜವಾಗಿಯೂ ಪರಿಷ್ಕರಣೆ ಕಂಡಿದೆಯೇ ಅಂತ ಪರಿಶೀಲಿಸಿ. ಒಂದು ವೇಳೆ ನಿಮಗೆ ಪೂರ್ತಿ ಲಾಭ ಸಿಕ್ಕಿದೆ ಎಂದಾದರೆ ನೀವು ಕಡಿಮೆ ಮೊತ್ತದ ಇಎಂಐ ಪಾವತಿಸಿ ಸಂಭ್ರಮಿಸಬಹುದು ಅಥವಾ, ಇಎಂಐ ಮೊತ್ತವನ್ನು ಅಷ್ಟೇ ಉಳಿಸಿಕೊಂಡು ಸಾಲ ಮರುಪಾವತಿ ಅವಧಿ ಕಡಿಮೆ ಮಾಡಿಸಿಕೊಂಡು ಸಂಭ್ರಮಿಸಬಹುದು.

(ಗಮನಿಸಿ: 2024ರ ಡಿಸೆಂಬರ್‌ನಿಂದ ಈ ವರ್ಷದ ಡಿಸೆಂಬರ್‌ವರೆಗೆ ಆಗಿರುವ ಶೇ 1.25ರಷ್ಟು ರೆಪೊ ಇಳಿಕೆಯನ್ನು ಗಣನೆಗೆ ತೆಗೆದುಕೊಂಡು ಲೆಕ್ಕಾಚಾರ ನೀಡಲಾಗಿದೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.