ನೀವು ಉದ್ಯೋಗದಲ್ಲಿದ್ದೀರಾ? ನಿವೃತ್ತಿ ಜೀವನದ ಬಗ್ಗೆ ಆಲೋಚನೆ ಮಾಡಿದ್ದೀರಾ? ನೆಮ್ಮದಿಯ ನಿವೃತ್ತಿಗೆ ಎಷ್ಟು ಹಣದ ಅಗತ್ಯ ಅನ್ನೋ ಲೆಕ್ಕಾಚಾರ ಇದೆಯೇ? ನಿಜ ಹೇಳಿ, ನಿವೃತ್ತಿಗೆ ಅಂತ ಅಲ್ಪಸ್ವಲ್ಪ ಹಣವನ್ನಾದರೂ ಉಳಿಸಿದ್ದೀರಾ? ವಯಸ್ಸು 40ರ ಆಸುಪಾಸಿನಲ್ಲಿದ್ದರೆ ಪ್ರತಿಯೊಬ್ಬರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು.
ಹೌದು, ಇಲ್ಲಿಯವರೆಗೆ ನಿವೃತ್ತಿಗಾಗಿ ಉಳಿತಾಯ ಮಾಡಿಲ್ಲ ಅಂತಾದರೆ ಎಚ್ಚೆತ್ತುಕೊಂಡು ಅದನ್ನು ತಿದ್ದಿಕೊಳ್ಳಲು ಇದು ಸರಿಯಾದ ಸಮಯ. ಬನ್ನಿ, ನಿವೃತ್ತಿ ಜೀವನಕ್ಕೆ ಆರ್ಥಿಕವಾಗಿ ಸಜ್ಜಾಗುವುದು ಹೇಗೆ ಎಂಬ ಬಗ್ಗೆ ತಿಳಿಯೋಣ.
ನಿವೃತ್ತಿಗೆ ಎಷ್ಟು ಹಣ ಬೇಕು?: ಭಾರತದಲ್ಲಿ ಉದ್ಯೋಗಿಗಳ ಸಾಮಾನ್ಯ ನಿವೃತ್ತಿ ವಯಸ್ಸು 60 ವರ್ಷ. ನಿಮಗೆ ಈಗಾಗಲೇ 40 ವರ್ಷ ತುಂಬಿದ್ದು, ಇಲ್ಲಿಯವರೆಗೆ ನಿವೃತ್ತಿಗಾಗಿ ಯಾವುದೇ ಹೂಡಿಕೆ ಮಾಡಿಲ್ಲ ಅಂತಾದರೆ ಇನ್ನೂ 15 ವರ್ಷಗಳು ನಿಮ್ಮ ಮುಂದಿವೆ. ಸರಿಯಾಗಿ ಯೋಜನೆ ರೂಪಿಸಿದರೆ ಈಗಲೂ ನೆಮ್ಮದಿಯ ನಾಳೆಗಳಿಗೆ ನೀವು ಸಜ್ಜಾಗಬಹುದು.
ಒಮ್ಮೆ ಆಲೋಚನೆ ಮಾಡಿ. ನಿಮ್ಮ 25 ಅಥವಾ 30ನೇ ವಯಸ್ಸಿನಲ್ಲಿ ಬರುವ ಸಂಬಳಕ್ಕೂ 40ರ ಆಸುಪಾಸಿನಲ್ಲಿರುವ ಸಂಬಳಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ ಅಲ್ಲವೇ? ಬಹುತೇಕರು 40ನೇ ವಯಸ್ಸಿನಲ್ಲಿ ಸಾಮಾನ್ಯವಾಗಿ ವೃತ್ತಿ ಜೀವನದ ಉನ್ನತ ಸ್ಥಾನದಲ್ಲಿದ್ದು, ಉತ್ತಮ ಸಂಬಳ ಪಡೆಯುತ್ತಿರುತ್ತಾರೆ. ಅದನ್ನು ಬಳಸಿಕೊಂಡು ಇನ್ನು ಹದಿನೈದರಿಂದ ಇಪ್ಪತ್ತು ವರ್ಷದವರೆಗೆ ಹೂಡಿಕೆ ಮಾಡಿದರೆ ನಿವೃತ್ತಿ ಜೀವನ ಸರಾಗವಾಗಿ ಸಾಗುತ್ತದೆ.
ನಿವೃತ್ತಿ ಜೀವನಕ್ಕೆ ಎಷ್ಟು ಹಣ ಬೇಕಾಗುತ್ತದೆ ಎನ್ನುವುದನ್ನು ಲೆಕ್ಕ ಮಾಡುವಾಗ ನಿಮ್ಮ ಸದ್ಯದ ವಾರ್ಷಿಕ ಖರ್ಚು ಎಷ್ಟು ಎನ್ನುವುದರ ಅಂದಾಜು ಮುಖ್ಯವಾಗುತ್ತದೆ. ಉದಾಹರಣೆಗೆ ನಿಮ್ಮ ವಯಸ್ಸು 40 ವರ್ಷ ಆಗಿದ್ದು, ಸದ್ಯದ ನಿಮ್ಮ ವಾರ್ಷಿಕ ಖರ್ಚು ₹12 ಲಕ್ಷವಿದೆ ಎಂದುಕೊಳ್ಳೋಣ. ಇನ್ನು 20 ವರ್ಷದಲ್ಲಿ ನೀವು ನಿವೃತ್ತಿಯಾಗಲು ಬಯಸಿದ್ದು, ಅದಕ್ಕಾಗಿ ವಾರ್ಷಿಕ ಖರ್ಚು 20ರಿಂದ 25 ಪಟ್ಟು ಹಣ ಬಯಸಿದರೆ ನಿಮ್ಮ ನಿವೃತ್ತಿಗಾಗಿ ₹9.62 ಕೋಟಿ ಬೇಕಾಗುತ್ತದೆ.
ಏಕೆಂದರೆ ವಾರ್ಷಿಕ ಬೆಲೆ ಏರಿಕೆಯ (ಹಣದುಬ್ಬರ) ಪ್ರಮಾಣ ಶೇ 6ರಷ್ಟು ಎಂದು ಅಂದಾಜು ಮಾಡಿದಾಗ ನಿಮ್ಮ ನಿವೃತ್ತಿ ಜೀವನದ ವಾರ್ಷಿಕ ವೆಚ್ಚ ಸುಮಾರು ₹12 ಲಕ್ಷವಿದ್ದ ಜಾಗದಲ್ಲಿ ₹38 ಲಕ್ಷಕ್ಕೆ ಏರಿಕೆಯಾಗುತ್ತದೆ. ಆ ಪ್ರಕಾರ ನಿವೃತ್ತಿ ಜೀವನಕ್ಕೆ ₹9.62 ಕೋಟಿ ಬೇಕಾಗುತ್ತದೆ. ಏನಪ್ಪಾ ಅಷ್ಟೊಂದು ಹಣ ಅಗತ್ಯವೇ ಅಂತ ನಿಮಗನಿಸಿದರೆ ಒಮ್ಮೆ ಅಂದಾಜು ಮಾಡಿ ನೋಡಿ. ಅಗತ್ಯ ವಸ್ತುಗಳ ಬೆಲೆ, ಆಸ್ಪತ್ರೆ ಖರ್ಚು, ಪ್ರಯಾಣ ವೆಚ್ಚ, ಬಾಡಿಗೆ ವೆಚ್ಚ ಎಲ್ಲವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಅವೆಲ್ಲಾ ಖರ್ಚುಗಳನ್ನು ಸುಗಮವಾಗಿ ನಿಭಾಯಿಸಿ ನೆಮ್ಮದಿಯ ಜೀವನ ನಡೆಸಬೇಕಾದರೆ ದೊಡ್ಡ ಮೊತ್ತ ಪೇರಿಸಲೇಬೇಕು. ಆದರೆ, ನೆನಪಿರಲಿ. ಈ ಅಂದಾಜು ಸದ್ಯ ನಿಮ್ಮ ವಾರ್ಷಿಕ ಖರ್ಚು ಎಷ್ಟಿದೆ ಎನ್ನುವುದರ ಮೇಲೆ ನಿಂತಿದೆ.
ಎಲ್ಲಿ ಹೂಡಿಕೆ ಮಾಡಬೇಕು?:
ನಿವೃತ್ತಿಗಾಗಿ ಎಲ್ಲಿ ಹೂಡಿಕೆ ಮಾಡಬೇಕು ಎನ್ನುವುದು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ನಿಮ್ಮ ವಯಸ್ಸು 40ರ ಆಸುಪಾಸಿನಲ್ಲಿದ್ದಾಗ ಹೂಡಿಕೆಗೆ 15ರಿಂದ 20 ವರ್ಷ ಸಮಯ ಸಿಗುವ ಕಾರಣ ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಪರಿಗಣಿಸಬಹುದು.
ಆದರೆ, ನಿವೃತ್ತಿ ಜೀವನ ಹತ್ತಿರಕ್ಕೆ ಬರುತ್ತಿದ್ದಂತೆ ಷೇರು ಮಾರುಕಟ್ಟೆ ಆಧರಿತ ಹೂಡಿಕೆಗಳನ್ನು ಫಿಕ್ಸೆಡ್ ಡೆಪಾಸಿಟ್, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿಯ ಮಾಸಿಕ ಯೋಜನೆಯಂತಹ ನಿಶ್ಚಿತ ಆದಾಯದ ಕಡೆಗೆ ವರ್ಗಾಯಿಸಿಕೊಳ್ಳುವುದು ಉತ್ತಮ.
ಹೂಡಿಕೆಗೆ ನೀಲನಕ್ಷ ಇರಲಿ:
ನಿವೃತ್ತಿಗೆ ಕೋಟಿಗಳಲ್ಲಿ ಹಣ ಪೇರಿಸಲು ಸಾಧ್ಯವಿದೆಯೇ ಎಂದು ನಿಮಗೆ ಅನಿಸಬಹುದು. ಆದರೆ ಸ್ಥಿರವಾಗಿ, ಶಿಸ್ತುಬದ್ಧವಾಗಿ ಹೂಡಿಕೆ ಮಾಡುತ್ತಾ ಸಾಗಿದರೆ ದೊಡ್ಡ ಮೊತ್ತ ಪೇರಿಸಬಹುದು. ನಿವೃತ್ತಿಗಾಗಿ ಮೊದಲು ಹೂಡಿಕೆ ಶುರು ಮಾಡಿ. ಕ್ರಮೇಣ ನಿಮ್ಮ ಆದಾಯ ಹೆಚ್ಚಾದಂತೆ ಹೂಡಿಕೆಯನ್ನೂ ಹೆಚ್ಚಿಸುತ್ತಾ ಸಾಗಿ.
ನಿವೃತ್ತಿಗಾಗಿ ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಉತ್ತಮ ಆಯ್ಕೆಗಳಾಗಿವೆ. ಇದರ ಜೊತೆ ಕ್ರಮಬದ್ಧವಾದ ಹೂಡಿಕೆಗೆ ಮ್ಯೂಚುವಲ್ ಫಂಡ್ ಎಸ್ಐಪಿಗಳನ್ನು ಪರಿಗಣಿಸಿ. ಮಾರುಕಟ್ಟೆ ಏರಿಳಿತಗಳಿಗೆ ತಲೆಕೆಡಿಸಿಕೊಳ್ಳದೆ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡಲು ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ನೆರವಾಗುತ್ತದೆ.
ಕೊಂಚ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೀರಿ ಎನ್ನುವವರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಿ. ರಿಸ್ಕ್ ಹೆಚ್ಚಿಗೆ ಇರಬಾರದು ಎನ್ನವವರು ಹೈಬ್ರೀಡ್ ಫಂಡ್‌ಗಳನ್ನು ಗಣನೆಗೆ ತೆಗೆದುಕೊಳ್ಳಬಹುದು. ನೆನಪಿರಲಿ ಹೈಬ್ರೀಡ್ ಫಂಡ್‌ಗಳಲ್ಲೂ ಅಗ್ರೆಸಿವ್ ಮತ್ತು ಕನ್ಸರ್ವೇಟಿವ್ ಎನ್ನುವ ಮಾದರಿಗಳಿರುತ್ತವೆ.
ಭಾರತ–ಪಾಕ್ ಸಂಘರ್ಷ; ಕುಸಿದ ಸೂಚ್ಯಂಕಗಳು
ಸತತ ಮೂರು ವಾರದ ಗಳಿಕೆಯ ಓಟವನ್ನು ಷೇರು ಸೂಚ್ಯಂಕಗಳು ನಿಲ್ಲಿಸಿವೆ. ಮೇ 9ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ. 79,454 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.3ರಷ್ಟು ತಗ್ಗಿದೆ. 24,008 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.39ರಷ್ಟು ಇಳಿಕೆಯಾಗಿದೆ.
ಇನ್ನು ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ ಶೇ 0.9ರಷ್ಟು ಕುಸಿದಿದ್ದರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕ
ಶೇ 2.17ರಷ್ಟು ಇಳಿಕೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವೇ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ವಾರದ ಲೆಕ್ಕಾಚಾರದಲ್ಲಿ ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ರಿಯಲ್ ಎಸ್ಟೇಟ್
ಶೇ 2.38, ಫೈನಾನ್ಸ್ ಶೇ 1.84, ಬ್ಯಾಂಕ್ ಶೇ 1.42, ಅನಿಲ ಮತ್ತು ತೈಲ ಶೇ 0.78, ಎಫ್‌ಎಂಸಿಜಿ ಶೇ 0.69, ಎನರ್ಜಿ ಶೇ 0.59, ಐ.ಟಿ ಶೇ 0.34, ಫಾರ್ಮಾ ಶೇ 0.21, ಆಟೊ ಶೇ 0.2 ಮತ್ತು ಲೋಹ ಶೇ 0.09ರಷ್ಟು ಕುಸಿದಿವೆ. ನಿಫ್ಟಿ ಡಿಫೆನ್ಸ್ ಸೂಚ್ಯಂಕ ಶೇ 3.04ರಷ್ಟು ಜಿಗಿದಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.59 ಮತ್ತು ಮಾಧ್ಯಮ ಶೇ 0.92ರಷ್ಟು ಗಳಿಸಿಕೊಂಡಿವೆ.
ಇಳಿಕೆ–ಏರಿಕೆ:
ನಿಫ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಶೇ 4.42, ಸನ್ ಫಾರ್ಮಾ ಶೇ 4.36, ಜಿಯೊ ಫೈನಾನ್ಶಿಯಲ್ ಶೇ 4.1, ಇಂಡಸ್ ಇಂಡ್ ಬ್ಯಾಂಕ್ ಶೇ 4.08, ಎನ್‌ಟಿಪಿಸಿ ಶೇ 4.07, ಒಎನ್‌ಜಿಸಿ ಶೇ 3.76, ಟಾಟಾ ಕನ್ಸ್ಯೂಮರ್ ಶೇ 3.64, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 3.54ರಷ್ಟು ಕುಸಿದಿವೆ.
ಟಾಟಾ ಮೋಟರ್ಸ್ ಶೇ 8.69, ಟೈಟನ್ ಶೇ 5.13, ಅದಾನಿ ಪೋರ್ಟ್ ಶೇ 3.16, ಎಲ್ ಆ್ಯಂಡ್ ಟಿ ಶೇ 3.13, ಹೀರೊ ಮೋಟೊಕಾರ್ಪ್ ಶೇ 3.12, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 1.79, ಭಾರತ್ ಎಲೆಕ್ಟ್ರಾನಿಕ್ಸ್ ಶೇ 1.45 ಮತ್ತು ಟಾಟಾ ಸ್ಟೀಲ್
ಶೇ 1.03ರಷ್ಟು ಹೆಚ್ಚಳ ಕಂಡಿವೆ.
ಮುನ್ನೋಟ:
ಈ ವಾರ ಟಾಟಾ ಸ್ಟೀಲ್, ಪಿವಿಆರ್ ಐನಾಕ್ಸ್, ಜ್ಯೋತಿ ಲ್ಯಾಬ್ಸ್, ಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಏಥರ್ ಎನರ್ಜಿ, ರೇಮಂಡ್ ಲೈಫ್ ಸ್ಟೈಲ್, ಸಿಪ್ಲಾ, ಏರ್‌ಟೆಲ್, ಟಾಟಾ ಮೋಟರ್ಸ್, ಹೀರೊ ಮೋಟೊಕಾರ್ಪ್, ಸೀಮನ್ಸ್, ಗೇಲ್ ಇಂಡಿಯಾ, ಮ್ಯಾಕ್ಸ್ ಫೈನಾನ್ಶಿಯಲ್ ಸರ್ವಿಸಸ್, ಆದಿತ್ಯ ಬಿರ್ಲಾ ಕ್ಯಾಪಿಟಲ್, ಎಚ್‌ಎಎಲ್, ಐಷರ್ ಮೋಟರ್ಸ್, ವಿಗಾರ್ಡ್, ಹುಂಡೈ ಮೋಟರ್ಸ್, ಬಿಎಲ್ಇಎಲ್, ಇಮಾಮಿ, ಹೆರಿಟೇಜ್ ಫುಡ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ.
ಭಾರತ–ಪಾಕ್ ಸಂಘರ್ಷ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದು ಮಾರುಕಟ್ಟೆಯ ಗತಿ ನಿರ್ಧರಿಸಲಿದೆ. ಸದ್ಯದ ಪರಿಸ್ಥತಿಯಲ್ಲಿ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.