ADVERTISEMENT

ಹಣಕಾಸು ಸಾಕ್ಷರತೆ| ನಾಮಿನಿ ಮರೆಯಬೇಡಿ, ಹಣ ಕಳೆದುಕೊಳ್ಳಬೇಡಿ...

ರಾಜೇಶ್ ಕುಮಾರ್ ಟಿ. ಆರ್.
Published 30 ಏಪ್ರಿಲ್ 2023, 17:52 IST
Last Updated 30 ಏಪ್ರಿಲ್ 2023, 17:52 IST
ಬ್ಯಾಂಕ್‌ ಉಳಿತಾಯ ಖಾತೆಯ ಮಹತ್ವ
ಬ್ಯಾಂಕ್‌ ಉಳಿತಾಯ ಖಾತೆಯ ಮಹತ್ವ   

ರಾಜೇಶ್ ಕುಮಾರ್ ಟಿ.ಆರ್.

ಬ್ಯಾಂಕ್ ಖಾತೆ, ಮ್ಯೂಚುವಲ್ ಫಂಡ್, ಪಿಪಿಎಫ್, ಇಪಿಎಫ್, ಎನ್‌ಪಿಎಸ್ ಸೇರಿ ಹಲವು ಹಣಕಾಸು ಹೂಡಿಕೆ ವ್ಯವಹಾರ ಮಾಡುವಾಗ ಅನೇಕರು ನಾಮಿನಿ ಕಾಲಂ ಭರ್ತಿ ಮಾಡುವುದನ್ನು ಕಡೆಗಣಿಸುತ್ತಾರೆ. ಆದರೆ, ಈ ಕಾಲಂ ಭರ್ತಿ ಮಾಡುವುದನ್ನು ಕಡೆಗಣಿಸಿದರೆ, ಪರಿಶ್ರಮದ ಸಂಪಾದನೆಯು ನಿಮ್ಮ ಪ್ರೀತಿಪಾತ್ರರಿಗೆ ಸೇರುವುದು ಕಷ್ಟ. ನಾಮಿನಿಯ ಮಹತ್ವ ಏನು, ಏಕೆ ಪ್ರತಿಯೊಬ್ಬರೂ ಹೂಡಿಕೆ ಮಾಡುವಾಗ ನಾಮಿನಿ (ನಾಮನಿರ್ದೇಶನ) ಮಾಡುವಲ್ಲಿ ಎಚ್ಚರಿಕೆ ವಹಿಸಬೇಕು ಎಂಬುದನ್ನು ಒಂದಿಷ್ಟು ತಿಳಿಯೋಣ.

ರಾಜೇಶ್ ಕುಮಾರ್ ಟಿ.ಆರ್.

₹ 35 ಸಾವಿರ ಕೋಟಿಗೆ ದಿಕ್ಕಿಲ್ಲ

ನಿಮಗೆ ಗೊತ್ತಾ? ಸರ್ಕಾರಿ ಸ್ವಾಮ್ಯದ 10.24 ಕೋಟಿ ಬ್ಯಾಂಕ್ ಖಾತೆಗಳಲ್ಲಿ ಇರುವ ಸುಮಾರು ₹ 35 ಸಾವಿರ ಕೋಟಿ ಹಣಕ್ಕೆ ವಾರಸುದಾರರರೇ ಇಲ್ಲ. ಹಾಗಾಗಿ ಈ ವರ್ಷದ ಫೆಬ್ರುವರಿಯಲ್ಲಿ ಒಟ್ಟು ₹ 35,012 ಕೋಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ವರ್ಗಾಯಿಸಲಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್‌ ಕರಾಡ್‌ ಇತ್ತೀಚೆಗಷ್ಟೇ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ. 10 ವರ್ಷಗಳಿಂದ ಖಾತೆಗಳಲ್ಲಿ ವಹಿವಾಟು ನಡೆಯದ ಕಾರಣ ಅಂತಹ ಖಾತೆಗಳಲ್ಲಿ ದಿಕ್ಕಿಲ್ಲದೆ ಉಳಿದುಕೊಂಡಿರುವ ಹಣವನ್ನು ಬ್ಯಾಂಕ್‌ಗಳು ಆರ್‌ಬಿಐಗೆ ವರ್ಗಾಯಿಸಿವೆ.

ADVERTISEMENT

ವಾರಸುದಾರರಿಲ್ಲದ ಠೇವಣಿಗಳನ್ನು ಹೊಂದರುವ ಬ್ಯಾಂಕ್‌ಗಳ ಪೈಕಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಮೊದಲ ಸ್ಥಾನದಲ್ಲಿದೆ. ಎಸ್‌ಬಿಐನಲ್ಲಿ ₹ 8,086 ಕೋಟಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ₹ 5,340 ಕೋಟಿ, ಕೆನರಾ ಬ್ಯಾಂಕ್‌ನಲ್ಲಿ ₹ 4,558 ಕೋಟಿ ಮತ್ತು ಬ್ಯಾಂಕ್‌ ಆಫ್‌ ಬರೋಡದಲ್ಲಿ ₹ 3,904 ಕೋಟಿ ವಾರಸುದಾರರಿಲ್ಲದ ಠೇವಣಿ ಇತ್ತು.

ನಾಮಿನಿ ಮಾಡದಿರುವುದೇ ಸಮಸ್ಯೆಗೆ ಕಾರಣ

ಮೇಲಿನ ಮಾಹಿತಿಯಂತೆ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ₹ 35 ಸಾವಿರ ಕೋಟಿ ಠೇವಣಿ ಉಳಿದುಕೊಳ್ಳಲು ಗ್ರಾಹಕರು ನಾಮಿನಿ ಮಾಡದಿರುವುದೇ ಪ್ರಮುಖ ಕಾರಣ. ನಾಮಿನಿ ಮಾಡದಿದ್ದಾಗ, ವ್ಯಕ್ತಿ ನಿಧನ ಹೊಂದಿದಾಗ ಬ್ಯಾಂಕ್ ಖಾತೆಗಳಲ್ಲೇ ಹಣ ಉಳಿದುಕೊಳ್ಳುತ್ತದೆ. ಹೀಗೆ 10 ವರ್ಷಕ್ಕಿಂತ ಹೆಚ್ಚು ಅವಧಿಗೆ ಠೇವಣಿಯಲ್ಲಿ ವಾರಸುದಾರರಿಲ್ಲದೆ ಉಳಿದುಕೊಳ್ಳುವ ಹಣವನ್ನು ಬ್ಯಾಂಕ್ ಗಳು ಆರ್‌ಬಿಐಗೆ ವರ್ಗಾಯಿಸುತ್ತವೆ.

ಬ್ಯಾಂಕ್ ಖಾತೆಗಳಲ್ಲಿ ಮಾತ್ರವಲ್ಲ, ಮ್ಯೂಚುವಲ್ ಫಂಡ್‌ ಖಾತೆಗಳು, ಷೇರು, ಪಿಪಿಎಫ್, ಇಪಿಎಫ್, ವಿಮಾ ಪಾಲಿಸಿಗಳು ಸೇರಿ ಹಲವೆಡೆ ಹೂಡಿಕೆದಾರರು ನಾಮಿನಿ ಗೊತ್ತುಪಡಿಸದ ಕಾರಣ ಹೂಡಿಕೆ ಹಣ ಅಲ್ಲೇ ಉಳಿದುಕೊಳ್ಳುತ್ತಿದೆ. ಇದನ್ನು ತಪ್ಪಿಸಲೆಂದೇ ಕೇಂದ್ರ ಸರ್ಕಾರವು ಹೂಡಿಕೆ ಉತ್ಪನ್ನಗಳಿಗೆ ನಾಮಿನಿ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದೆ. ಮ್ಯೂಚುವಲ್ ಫಂಡ್‌ಗಳಿಗೆ ನಾಮಿನಿ ಗೊತ್ತುಪಡಿಸಲು ಹೂಡಿಕೆದಾರರಿಗೆ ಸೆಪ್ಟೆಂಬರ್ 30ರ ಗಡುವು ನಿಗದಿಪಡಿಸಿದೆ.

ನಾಮಿನಿ ಸೂಚಿಸದಿದ್ದರೆ ಮಾಲೀಕತ್ವ ವರ್ಗಾವಣೆ ಕಷ್ಟಸಾಧ್ಯ

ವ್ಯಕ್ತಿಯ ಮರಣದ ನಂತರ ಆತನ ಹೂಡಿಕೆಯ ಮಾಲೀಕತ್ವ ಯಾರದ್ದಾಗಬೇಕು ಎಂದು ಸೂಚಿಸುವ ವ್ಯವಸ್ಥೆಯೇ ನಾಮನಿರ್ದೇಶನ ಮಾಡುವುದು. ಹೂಡಿಕೆಗಳಿಗೆ ನಾಮಿನಿ ಸೂಚಿಸದಿದ್ದರೆ ನಿರ್ದಿಷ್ಟ ಹೂಡಿಕೆಯ ಮಾಲೀಕತ್ವ ಕುರಿತು ವಿವಾದ ತಲೆದೋರುತ್ತದೆ. ಹೂಡಿಕೆ ಮೊತ್ತಕ್ಕೆ ಇಂತಹ ವ್ಯಕ್ತಿಯೇ ಉತ್ತರಾಧಿಕಾರಿ ಎನ್ನುವುದನ್ನು ಸಾಬೀತುಪಡಿಸಲು ಬಹಳಷ್ಟು ಕಾನೂನು ಪ್ರಕ್ರಿಯೆಗಳು ಇರುತ್ತವೆ. ನಿಯಮಾನುಸಾರ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರೈಸಲು ಬಹಳ ಸಮಯ ಕೂಡ ಬೇಕಾಗುತ್ತದೆ. ಹಾಗಾಗಿ ನಿಮ್ಮ ಕುಟುಂಬ ಇಂತಹ ಪರಿಸ್ಥಿತಿ ಎದುರಿಸಬಾರದು ಎಂದಾದಲ್ಲಿ ನಾಮಿನಿ ಕಾಲಂ ಭರ್ತಿ ಮಾಡಲು ಮರೆಯಬೇಡಿ.

ನಾಮಿನಿ ವಿವರಗಳನ್ನು ಯಾವಾಗ ಪರಿಷ್ಕರಿಸಬೇಕು?

ಮದುವೆಯಾದ ಸಂದರ್ಭದಲ್ಲಿ ಅಥವಾ ವಿಚ್ಛೇದನ ಪಡೆದಾಗ ನಾಮಿನಿ ವಿವರಗಳನ್ನು ಪರಿಷ್ಕರಿಸಬೇಕು. ಹೀಗೆ ಮಾಡಿದಾಗ ಸೂಕ್ತ ವ್ಯಕ್ತಿಗೆ ಹೂಡಿಕೆ ಲಾಭ ದಕ್ಕುತ್ತದೆ. ಮಕ್ಕಳು ಜನಿಸಿದ ನಂತರದಲ್ಲಿ ನಾಮಿನಿ ಬದಲಾಯಿಸುವ ಅಗತ್ಯತೆಯನ್ನು ಪರಿಶೀಲಿಸಬೇಕು. ದೀರ್ಘಕಾಲದ ಹೂಡಿಕೆಗಳಿಗೆ ಮಕ್ಕಳನ್ನು ನಾಮಿನಿ ಮಾಡುವುದರಿಂದ ಹೆಚ್ಚು ಅನುಕೂಲ. ನಾಮಿನಿ ಮಾಡಿರುವ ವ್ಯಕ್ತಿ ಸಾವನ್ನಪ್ಪಿದಾಗ ನಾಮಿನಿಯನ್ನು ಬದಲಿಸಬೇಕಾಗುತ್ತದೆ ಎಂಬುದು ನೆನಪಿರಲಿ. ನೀವು ನಾಮಿನಿ ಮಾಡಿರುವ ವ್ಯಕ್ತಿಗೆ ಆ ಬಗ್ಗೆ ಮೊದಲೇ ವಿವರ ಒದಗಿಸಿರಿ. ಹೀಗೆ ಮಾಡಿದಾಗ ಸಂಕಷ್ಟದ ಸಂದರ್ಭದಲ್ಲಿ ಬೇಗ ಕ್ಲೇಮ್‌ ಸಲ್ಲಿಸಲು ಸಾಧ್ಯವಾಗುತ್ತದೆ.

(ಸೂಚನೆ: ಇದು ಸಲಹೆ ಮಾತ್ರ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನಾಮಿನಿಯಲ್ಲಿ ಬದಲಾವಣೆ ಮಾಡಬಹುದು)

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.