ADVERTISEMENT

ಬಂಡವಾಳ ಮಾರುಕಟ್ಟೆ: ಸಾಲ ನಿರ್ವಹಣೆ: ಮೂರು ವಿಚಾರ ನೆನಪಿರಲಿ

ಅವಿನಾಶ್ ಕೆ.ಟಿ
Published 17 ಜನವರಿ 2022, 8:43 IST
Last Updated 17 ಜನವರಿ 2022, 8:43 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಸಾಲ ನಿರ್ವಹಣೆಯಲ್ಲಿ ಯಾರು ಎಡವುತ್ತಾರೋ ಅವರು ಆರ್ಥಿಕ ನಿರ್ವಹಣೆಯಲ್ಲಿ ಹಿಂದೆ ಬೀಳುತ್ತಾರೆ. ಸಾಲ ನಿರ್ವಹಣೆ ಅಂತ ಬಂದಾಗ ಕ್ರೆಡಿಟ್ ಸ್ಕೋರ್, ಕ್ರೆಡಿಟ್ ಕಾರ್ಡ್ ಮತ್ತು ಸಾಲ ಖಾತರಿದಾರ ಎಂಬ ಮೂರು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.

ಸುಲಭ ಸಾಲಕ್ಕೆ ಬೇಕು ಉತ್ತಮ ಕ್ರೆಡಿಟ್ ಸ್ಕೋರ್: ಕಡಿಮೆ ಬಡ್ಡಿ ದರದಲ್ಲಿ, ಸುಲಭದಲ್ಲಿ ಸಾಲ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಸುಲಭ ಸಾಲಕ್ಕೆ ಮಾನದಂಡ ಕ್ರೆಡಿಟ್ ಸ್ಕೋರ್. ನಿಮ್ಮ ಹಣಕಾಸಿನ ವ್ಯವಹಾರದ ಶಿಸ್ತು ಅಥವಾ ಅಶಿಸ್ತಿಗೆ ಕ್ರೆಡಿಟ್ ಸ್ಕೋರ್ ಕನ್ನಡಿ ಇದ್ದಂತೆ. ಸಾಲ ಮರುಪಾವತಿ ಇತಿಹಾಸ, ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿ, ಸಾಲ ಮರುಪಾವತಿಗೆ ತೆಗೆದುಕೊಂಡ ಅವಧಿ, ಸಾಲಕ್ಕೆ ಎಷ್ಟು ಬಾರಿ ಅರ್ಜಿ ಸಲ್ಲಿಸಲಾಗಿದೆ, ಸಾಲವಾಗಿ ಪಡೆದ ಹಣ ಬಳಸುವಲ್ಲಿ ವೈವಿಧ್ಯತೆ ಸೇರಿ ಹತ್ತಾರು ಅಂಶಗಳು ಕ್ರೆಡಿಟ್ ಸ್ಕೋರ್‌ಅನ್ನು (ಸಾಲ ಸಾಮರ್ಥ್ಯದ ಅಂಕಗಳು) ನಿರ್ಧರಿಸುತ್ತವೆ. ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಾದ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿ. (CIBIL), ಈಕ್ವಿಫ್ಯಾಕ್ಸ್, ಎಕ್ಸ್ಪೀರಿಯನ್ ಸಂಸ್ಥೆಗಳು ಬ್ಯಾಂಕ್‌ಗಳಿಂದ ಮಾಹಿತಿ ಪಡೆದು ಸಾಲಗಾರರ ಮಾಹಿತಿಯನ್ನು ಭರ್ತಿ ಮಾಡಿ ದತ್ತಾಂಶವನ್ನು ಹಂಚಿಕೊಳ್ಳುತ್ತವೆ.

300ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ಅಂಕಗಳನ್ನು ನೀಡಲಾಗುತ್ತದೆ. 750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹಲವಾರು ವೆಬ್‌ಸೈಟ್‌ಗಳು ಕೆಲವು ಪೂರಕ ಮಾಹಿತಿ ಭರ್ತಿ ಮಾಡಿದರೆ ಉಚಿತವಾಗಿ ಕ್ರೆಡಿಟ್ ಸ್ಕೋರ್ ಮಾಹಿತಿ ಒದಗಿಸುತ್ತವೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಕೂಡಲೇ ಅಧಿಕಾರಿಗಳು ಕ್ರೆಡಿಟ್‌ ರಿಪೋರ್ಟ್ ಮತ್ತು ಕ್ರೆಡಿಟ್ ಸ್ಕೋರ್ ಕೇಳುತ್ತಾರೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಸಾಲ ಸಿಗುತ್ತದೆ. ಸಾಲದ (ಕ್ರೆಡಿಟ್) ರಿಪೋರ್ಟ್‌ನಲ್ಲಿ ನೀವು ಯಾವ ಬ್ಯಾಂಕ್‌ನಿಂದ ಸಾಲ ಪಡೆದಿದ್ದೀರಿ, ಸಾಲದ ಮೊತ್ತವೆಷ್ಟು, ನಿಗದಿತ ಸಮಯಕ್ಕೆ ಅದು ಮರುಪಾವತಿ ಆಗಿದೆಯಾ, ಸಾಲ ಮನ್ನಾ ಆಗಿದೆಯಾ, ಸಾಲಕ್ಕೆ ಸಲ್ಲಿಸಿದ ಅರ್ಜಿ ತಿರಸ್ಕೃತವಾಗಿದೆಯಾ ಎಂಬ ಮಾಹಿತಿ ಇರುತ್ತದೆ.

ADVERTISEMENT

ಕ್ರೆಡಿಟ್ ಕಾರ್ಡ್ ಬಳಕೆ ಎಷ್ಟು ಸರಿ?: ಕ್ರೆಡಿಟ್ ಕಾರ್ಡ್ ಎಂದಾಕ್ಷಣ, ‘ಅಯ್ಯೋ, ಅದರ ಸಹವಾಸವೇ ಬೇಡ’ ಎನ್ನುವ ಮಂದಿ ಒಂದು ಕಡೆಯಾದರೆ, ‘ನಾನು ಕ್ರೆಡಿಟ್‌ ಕಾರ್ಡ್ ಬಳಸಿಯೇ ಜೀವನ ಮಾಡುತ್ತಿದ್ದೇನೆ’ ಎನ್ನುವ ಮಂದಿ ಇನ್ನೊಂದು ಕಡೆ. ಈ ಎರಡೂ ರೀತಿಯ ಆಲೋಚನೆಗಳು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಸಮಂಜಸವಲ್ಲ.

ಅಗತ್ಯ ಅರಿತು ಬಳಸಿದರೆ ಕ್ರೆಡಿಟ್ ಕಾರ್ಡ್ ನಿಮ್ಮ ಪಾಲಿನ ಆಪತ್ಪಾಂಧವ. ಆದರೆ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ನಿಮ್ಮನ್ನು ಶೂಲವಾಗಿ ಕಾಡುತ್ತದೆ. ಕ್ರೆಡಿಟ್ ಕಾರ್ಡ್‌ನಿಂದಾಗಿ ಸುಮಾರು 45 ದಿನಗಳವರೆಗೆ ಬಡ್ಡಿ ರಹಿತ ಸಾಲ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದರೆ ಕ್ರೆಡಿಟ್‌ ಸ್ಕೋರ್‌ ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ಕ್ರೆಡಿಟ್ ಕಾರ್ಡ್‌ನ ಕ್ರೆಡಿಟ್ ಲಿಮಿಟ್ಅನ್ನು (ಸಾಲದ ಮಿತಿ) ಸಂಪೂರ್ಣವಾಗಿ ಬಳಸಬಾರದು. ಇದರಿಂದ ಕ್ರೆಡಿಟ್‌ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿದ ಮೇಲೆ ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಮಾಡಬೇಕು, ಕ್ರೆಡಿಟ್ ಕಾರ್ಡ್ ಸಾಲದ ಪಾವತಿಗೆ ಆಟೊ ಡೆಬಿಟ್ ವ್ಯವಸ್ಥೆ ಬಳಸಿಕೊಳ್ಳುವುದು ಒಳಿತು. ಯಾವುದೇ ಕಾರಣಕ್ಕೂ, ಕ್ರೆಡಿಟ್ ಕಾರ್ಡ್‌ನ ಮಾಸಿಕ ಬಿಲ್‌ನಲ್ಲಿ ಇರುವ ಮಿನಿಮಂ ಅಮೌಂಟ್ ಡ್ಯೂ (ಪಾವತಿಸಬೇಕಿರುವ ಕನಿಷ್ಠ ಮೊತ್ತ) ಮಾತ್ರವೇ ಪಾವತಿಸಿ ಬಡ್ಡಿಯ ಶೂಲಕ್ಕೆ ಸಿಲುಕಬಾರದು. ಪ್ರತಿ ತಿಂಗಳೂ ಕ್ರೆಡಿಟ್‌ ಕಾರ್ಡ್‌ ಬಿಲ್‌ನ ಪೂರ್ತಿ ಮೊತ್ತವನ್ನು ನಿಗದಿತ ದಿನದೊಳಗೆ ಪಾವತಿಸುವ ಶಿಸ್ತು ಪಾಲಿಸಬೇಕು. ಈ ಎಲ್ಲ ಸಲಹೆಗಳನ್ನು ಪಾಲಿಸಿದರೆ, ಕ್ರೆಡಿಟ್ ಕಾರ್ಡ್‌ನ ಅನುಕೂಲವನ್ನು ಪಡೆಯಬಹುದು.

ಬೇರೆಯವರ ಸಾಲಕ್ಕೆ ಖಾತರಿದಾರ ಆಗುವಾಗ ಎಚ್ಚರ: ಸಾಲ ಕೊಡುವವರು, ಸಾಲ ತೆಗೆದುಕೊಳ್ಳುವವರ ನಡುವೆ ಸೇತುವೆಯಂತೆ ಇರುವವ ಜಾಮೀನುದಾರ/ಖಾತರಿದಾರ. ನೀವು ಯಾರಾದರೂ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರಿಗೆ ಸಾಲಕ್ಕೆ ಖಾತರಿದಾರ ಆಗುವ ಮುನ್ನ ಅಳೆದು–ತೂಗಿ ನಿರ್ಧಾರಕ್ಕೆ ಬರಬೇಕು. ಸಾಲಕ್ಕೆ ಖಾತರಿದಾರ (ಗ್ಯಾರಂಟರ್)ಆಗುವುದೆಂದರೆ ಬೇರೆಯವರ ಹಣಕಾಸಿನ ಹೊರೆ ಹೊರುವ ದೊಡ್ಡ ಜವಾಬ್ದಾರಿ. ಪೂರ್ವಾಪರ ಯೋಚಿಸದೆ ಬೇರೆಯವರ ಸಾಲದ ಜಾಮೀನು ಕರಾರಿಗೆ ಸಹಿ ಹಾಕಿದರೆ, ಆ ಬಲೆಯಲ್ಲಿ ನೀವೇ ಸಿಲುಕಿ ಪರದಾಡಬೇಕಾಗಬಹುದು. ಸಾಲ ಪಡೆಯುವ ವ್ಯಕ್ತಿಗೆ ಸಾಲ ಮರುಪಾವತಿ ಸಾಮರ್ಥ್ಯ ಕಡಿಮೆ ಇದೆ ಅನ್ನಿಸಿದರೆ ಅಥವಾ ಸಾಲ ಪಡೆಯಲು ನಿರ್ದಿಷ್ಟ ವ್ಯಕ್ತಿಗೆ ಅಗತ್ಯ ಅರ್ಹತೆಗಳು ಇಲ್ಲ ಎನ್ನುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಖಾತರಿದಾರ ಬೇಕು ಎಂದು ಕೇಳುತ್ತವೆ. ಬ್ಯಾಂಕ್‌ಗಳು ಅಡಮಾನ ಸಾಲ ಅಥವಾ ಅಡಮಾನ ರಹಿತ ಸಾಲಗಳಿಗೂ ಸಾಲ ಖಾತರಿದಾರರನ್ನು ಕೇಳಬಹುದು.

ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಾಗ, ಸಾಲದ ಮೊತ್ತ ಜಾಸ್ತಿ ಇದ್ದಾಗ, ಸಾಲ ಪಡೆಯುವ ವ್ಯಕ್ತಿಗೆ ವಯಸ್ಸಾಗಿದ್ದಾಗಲೂ ಬ್ಯಾಂಕ್‌ಗಳು ಸಾಲ ಖಾತರಿದಾರರನ್ನು ಕೇಳುತ್ತವೆ. ಜಾಮೀನುದಾರ/ಖಾತರಿದಾರ ಆಗುವುದೆಂದರೆಸಾಲ ಪಡೆದ ವ್ಯಕ್ತಿಯು ಒಂದೊಮ್ಮೆ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದಿದ್ದರೆ ಅದರ ಹೊಣೆಯನ್ನು ತಾನು ಹೊರುತ್ತೇನೆ ಎಂದು ವಾಗ್ದಾನ ಮಾಡಿದಂತೆ. ಅಂದರೆ ನೀವು ಸಾಲಕ್ಕೆ ಕರಾರು ಮಾಡಿರುವ ವ್ಯಕ್ತಿಯು ಬ್ಯಾಂಕ್ ಸಾಲ ಕಟ್ಟದಿದ್ದರೆ ನಿಮ್ಮ ಜೇಬಿನಿಂದ ಅದನ್ನು ಕಟ್ಟಬೇಕಾಗುತ್ತದೆ. ಒಂದೊಮ್ಮೆ ಕಟ್ಟದಿದ್ದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ಖಾತರಿದಾರ ಆಗುವಾಗ ಯೋಚಿಸಿ ನಿರ್ಧಾರಕ್ಕೆ ಬನ್ನಿ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.