ADVERTISEMENT

ಬಂಡವಾಳ ಮಾರುಕಟ್ಟೆ: ನಿಫ್ಟಿ ಮಿಡ್ ಕ್ಯಾಪ್ 150: ಹೂಡಿಕೆ ಹೇಗೆ?

ಅವಿನಾಶ್ ಕೆ.ಟಿ
Published 8 ಮೇ 2022, 20:18 IST
Last Updated 8 ಮೇ 2022, 20:18 IST
   

ಉತ್ತಮ ಬೆಳವಣಿಗೆ ಸಾಧಿಸಿರುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಏಕೆಂದರೆ, ಉತ್ತಮ ಕಂಪನಿಯೊಂದು ಲಾಭದಾಯಕವಾಗಿ ಮುನ್ನಡೆದರೆ ಹೂಡಿಕೆ ಮೊತ್ತ ಹಲವು ಪಟ್ಟು ಹೆಚ್ಚಾಗಿ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ ಎನ್ನುವುದು ನಮ್ಮ ಲೆಕ್ಕಾಚಾರವಾಗಿರುತ್ತದೆ. ಹೀಗೆ ಹೆಚ್ಚು ಲಾಭಾಂಶ ತಂದುಕೊಡುವ ಕಂಪನಿಗಳನ್ನು ನಾವು ಷೇರುಪೇಟೆಯ ಮಿಡ್ ಕ್ಯಾಪ್ ಸೂಚ್ಯಂಕದಲ್ಲಿ ನೋಡಬಹುದು. ಮಿಡ್ ಕ್ಯಾಪ್ ಅಂದರೆ ಸರಳವಾಗಿ, ಷೇರುಪೇಟೆಯಲ್ಲಿರುವ ಮಧ್ಯಮ ಗಾತ್ರದ ಕಂಪನಿಗಳು ಎಂದು ಅರ್ಥ.

ಷೇರು ಮಾರುಕಟ್ಟೆಯಲ್ಲಿರುವ ಲಾರ್ಜ್ ಕ್ಯಾಪ್ (ದೊಡ್ಡ ಗಾತ್ರದ) ಕಂಪನಿಗಳು ಬಹಳಷ್ಟು ಬೆಳವಣಿಗೆ ಸಾಧಿಸಿವೆ. ಅವುಗಳಲ್ಲಿ ಹೂಡಿಕೆ ಮಾಡಿದಾಗ ಬಹಳ ದೊಡ್ಡ ಲಾಭ ನಿರೀಕ್ಷೆ ಮಾಡುವುದು ಕಷ್ಟ. ಆದರೆ, ಅವುಗಳಲ್ಲಿನ ಹೂಡಿಕೆಯಲ್ಲಿ ರಿಸ್ಕ್ ಕಡಿಮೆ ಎಂಬುದು ನಿಜ. ಮಧ್ಯಮ ಗಾತ್ರದ (ಮಿಡ್ ಕ್ಯಾಪ್) ಕಂಪನಿಗಳು ಬಂಡವಾಳ ವೃದ್ಧಿಯ ದೃಷ್ಟಿಯಿಂದ ಹೆಚ್ಚು ಆಕರ್ಷಕ. ಹಾಗೆಯೇ, ಇವುಗಳಲ್ಲಿನ ಹೂಡಿಕೆಯಲ್ಲಿ ರಿಸ್ಕ್‌ ತುಸು ಹೆಚ್ಚಿರುತ್ತದೆ ಎಂಬುದೂ ನಿಜ.

ನಿಫ್ಟಿ ಮಿಡ್ ಕ್ಯಾಪ್ 150 ಏಕೆ ಮುಖ್ಯ?: ನೀವು ನಿಫ್ಟಿ 50 (50 ದೊಡ್ಡ ಕಂಪನಿಗಳ ಗುಚ್ಛ) ಸೂಚ್ಯಂಕ ಮತ್ತು ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕವನ್ನು ಹೋಲಿಕೆ ಮಾಡಿ ನೋಡಿದಾಗ ಕಳೆದ ಮೂರು ವರ್ಷಗಳಲ್ಲಿ ನಿಫ್ಟಿ ಮಿಡ್ ಕ್ಯಾಪ್ 150 (150 ಮಧ್ಯಮ ಗಾತ್ರದ ಕಂಪನಿಗಳ ಗುಚ್ಛ) ಸೂಚ್ಯಂಕ ವಾರ್ಷಿಕ ಸರಾಸರಿ ಶೇಕಡ 22ರಷ್ಟು ಲಾಭಾಂಶ ಕೊಟ್ಟಿರುವುದು ಕಂಡುಬರುತ್ತದೆ. ಆದರೆ, ನಿಫ್ಟಿ 50 ಸೂಚ್ಯಂಕ ವಾರ್ಷಿಕ ಸರಾಸರಿ ಶೇ 16ರಷ್ಟು ಮಾತ್ರ ಲಾಭಾಂಶ ನೀಡಿದೆ. ದೀರ್ಘಾವಧಿಯಲ್ಲಿ ಎರಡೂ ಸೂಚ್ಯಂಕಗಳ ಬೆಳವಣಿಗೆಯನ್ನು ತುಲನೆ ಮಾಡಿ ನೋಡಿಗದಾಗಲೂ ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಉತ್ತಮ ರೀತಿಯಲ್ಲಿ ಮುನ್ನಡೆದಿರುವುದು ಕಂಡುಬರುತ್ತದೆ.

ADVERTISEMENT

ನಿಮ್ಮ ಹೂಡಿಕೆ ತಂತ್ರಗಾರಿಕೆಯಲ್ಲಿ ಮಧ್ಯಮ ಗಾತ್ರದ ಕಂಪನಿಗಳನ್ನು ಪರಿಗಣಿಸಬಹುದು ಎನ್ನುವುದನ್ನು ಮೇಲಿನ ಅಂಶಗಳು ಸ್ಪಷ್ಟವಾಗಿ ಹೇಳುತ್ತವೆ. ಹಾಗೆಂದಮಾತ್ರಕ್ಕೆ ಕಣ್ಣು ಮುಚ್ಚಿ ಮಿಡ್ ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡುವುದಲ್ಲ. ಅದರ ಸಾಧಕ-ಬಾಧಕ ಅರಿತು ಮುನ್ನಡೆಯಬೇಕು.

ಮೌಲ್ಯಮಾಪನ ಹೇಗೆ?: ನಿಫ್ಟಿ 500 ಸೂಚ್ಯಂಕ ಎನ್ನುವುದು ರಾಷ್ಟ್ರೀಯ ಷೇರುಪೇಟೆಯಲ್ಲಿನ (ಎನ್‌ಎಸ್‌ಇ) ಟಾಪ್ 500 ಕಂಪನಿಗಳ ಪಟ್ಟಿ. ಈ ಪಟ್ಟಿಯಲ್ಲಿ ಬರುವ ಮೊದಲ ನೂರು ಕಂಪನಿಗಳು ನಿಫ್ಟಿ 100 ಸೂಚ್ಯಂಕಕ್ಕೆ ಸೇರ್ಪಡೆಗೊಳ್ಳುತ್ತವೆ. ಹಾಗೆಯೇ ನಿಫ್ಟಿ ಪಟ್ಟಿಯಲ್ಲಿರುವ 101ರಿಂದ 250ನೇ ಸಂಖ್ಯೆವರೆಗಿನ ಕಂಪನಿಗಳು ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕದ ಭಾಗ. ವಿವಿಧ ವಲಯಗಳ ಕಂಪನಿಗಳು ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕದಲ್ಲಿ ಸ್ಥಾನ ಪಡೆದಿರುತ್ತವೆ. ಕಂಪನಿಯೊಂದರ ಷೇರಿನ ಬೆಲೆಯನ್ನು, ಕಂಪನಿಯ ಎಲ್ಲ ಷೇರುದಾರರ ಬಳಿ ಇರುವ ಒಟ್ಟು ಷೇರುಗಳ ಜೊತೆ ಗುಣಿಸಿದಾಗ ಬರುವ ಸಂಖ್ಯೆಯು ಆ ಕಂಪನಿಯ ಮಾರುಕಟ್ಟೆ ಮೌಲ್ಯ, ಅಂದರೆ ಮಾರ್ಕೆಟ್ ಕ್ಯಾಪ್ ಆಗಿರುತ್ತದೆ. ಉದಾಹರಣೆಗೆ ಕಂಪನಿಯೊಂದರ 1 ಲಕ್ಷ ಷೇರುಗಳು ಇದ್ದು, ಪ್ರತಿ ಷೇರಿನ ಬೆಲೆ ₹ 30 ಎಂದಾದಲ್ಲಿ ಆ ಕಂಪನಿಯ ಮಾರುಕಟ್ಟೆ ಮೌಲ್ಯ ₹ 30 ಲಕ್ಷ ಆಗಿರುತ್ತದೆ. ಹೀಗೆ ಒಂದೊಂದು ವಲಯದ ಕಂಪನಿಯೂ ತನ್ನ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಸೂಚ್ಯಂಕದಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಉದಾಹರಣೆಗೆ ಈ ವರ್ಷದ ಮಾರ್ಚ್ 31ರ ಅಂಕಿ-ಅಂಶದಂತೆ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಮಾರುಕಟ್ಟೆ ಮೌಲ್ಯ ಸುಮಾರು ₹ 2.5 ಲಕ್ಷ ಕೋಟಿ. ಈ ಷೇರಿನ ಮಾರುಕಟ್ಟೆ ಮೌಲ್ಯ ಹೆಚ್ಚಿರುವುದರಿಂದ ಸೂಚ್ಯಂಕದಲ್ಲಿ ಇದಕ್ಕೆ ಪ್ರಾಧಾನ್ಯತೆ ಹೆಚ್ಚು.

ಮಿಡ್ ಕ್ಯಾಪ್ 150 ಸೂಚ್ಯಂಕದ ಲಾಭಾಂಶ: ಷೇರು ಹೂಡಿಕೆಯಲ್ಲಿ ಏರಿಳಿತ ಸಾಮಾನ್ಯ. ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ದೀರ್ಘಾವಧಿಯಲ್ಲಿ ಈ ಸೂಚ್ಯಂಕ ಉತ್ತಮ ಲಾಭಾಂಶ ನೀಡಿದೆ. ಕಳೆದ 15 ವರ್ಷಗಳಲ್ಲಿ ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಸರಾಸರಿ ಶೇ 16.5ರಷ್ಟು ಲಾಭಾಂಶ ನೀಡಿದೆ. ಅಂದರೆ ಕಳೆದ 15
ವರ್ಷಗಳಿಂದ ಪ್ರತಿ ತಿಂಗಳು ನೀವು ₹ 10 ಸಾವಿರ ಹೂಡಿಕೆ ಮಾಡಿದ್ದರೆ 2022ರಮಾರ್ಚ್ ವೇಳೆಗೆ ಅದು ₹ 78 ಲಕ್ಷ ಆಗಿರುತ್ತಿತ್ತು.

ಫಂಡ್ ಮ್ಯಾನೇಜರ್‌ಗಳು ನಿರ್ವಹಣೆ ಮಾಡುವ ಆ್ಯಕ್ಟಿವ್ ಮಿಡ್ ಕ್ಯಾಪ್ ಫಂಡ್‌ಗಳು ಕಳೆದ 15 ವರ್ಷಗಳಲ್ಲಿ ವಾರ್ಷಿಕ ಸರಾಸರಿ ಶೇ 14ರಷ್ಟು ಮಾತ್ರ ಲಾಭಾಂಶ ನೀಡಿವೆ. ಅಂದರೆ ನಿಫ್ಟಿ ಮಿಡ್ ಕ್ಯಾಪ್ 150 ಸೂಚ್ಯಂಕ ಶೇ 2.5ರಷ್ಟು ಹೆಚ್ಚು ಲಾಭಾಂಶ ನೀಡಿದೆ. ಒಟ್ಟಾರೆಯಾಗಿ, ಟಾಪ್ ಮ್ಯೂಚುವಲ್ ಫಂಡ್ ಯಾವುದು ಎಂದು ಹುಡುಕಾಡುವ ಬದಲು ಈ ರೀತಿಯ ಉತ್ತಮ ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಒಳ್ಳೆಯ ಇಡುಗಂಟು ಸೃಷ್ಟಿಸಲು ಸಾಧ್ಯವಾಗುತ್ತದೆ.

ಕರಡಿ ಹಿಡಿತದಲ್ಲಿ ಷೇರುಪೇಟೆ

ಷೇರು ಮಾರುಕಟ್ಟೆಯ ಮೇಲೆ ಕರಡಿ ಹಿಡಿತ ಜೋರಾಗಿದ್ದು ಸೂಚ್ಯಂಕಗಳು ಸತತ ನಾಲ್ಕನೇ ವಾರವೂ ಕುಸಿತ ಕಂಡಿವೆ. ಮೇ 6ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಭಾರೀ ಇಳಿಕೆ ದಾಖಲಿಸಿವೆ. 54,835 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 3.89ರಷ್ಟು ತಗ್ಗಿದೆ. 16,411 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 4.04ರಷ್ಟು ಇಳಿಕೆಯಾಗಿದೆ. ಜಾಗತಿಕವಾಗಿ ಅಮೆರಿಕದ ಫೆಡರಲ್ ರಿಸರ್ವ್ ಸೇರಿದಂತೆ ಪ್ರಮುಖ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡುತ್ತಿರುವುದು, ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಹೆಚ್ಚಳ ಮಾಡಿದ್ದು, ಹಣದುಬ್ಬರ ಏರಿಕೆ, ರಷ್ಯಾ-ಉಕ್ರೇನ್ ಬಿಕ್ಕಟ್ಟು ಸೇರಿದಂತೆ ಹಲವು ಕಾರಣಗಳಿಗೆ ಸೂಚ್ಯಂಕಗಳು ಕುಸಿದಿವೆ.

ವಲಯವಾರು ಪ್ರಗತಿಯಲ್ಲಿ ಈ ವಾರ ಎಲ್ಲ ಕ್ಷೇತ್ರಗಳಲ್ಲಿಯೂ ಕುಸಿತ ಕಂಡುಬಂದಿದೆ. ನಿಫ್ಟಿ ರಿಯಲ್ ಎಸ್ಚೇಟ್ ಸೂಚ್ಯಂಕ ಶೇ 8ರಷ್ಟು ಕುಸಿದಿದೆ. ಮಾಧ್ಯಮ ವಲಯ ಶೇ 6ರಷ್ಟು, ವಾಹನ ಉತ್ಪಾದನಾ ವಲಯ ಶೇ 5ರಷ್ಟು, ನಿಫ್ಟಿ ಫಾರ್ಮಾ ವಲಯ ಶೇ 4.7ರಷ್ಟು ತಗ್ಗಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಪವರ್ ಗ್ರಿಡ್ ಶೇ 5ರಷ್ಟು, ಒಎನ್‌ಜಿಸಿ ಶೇ 4ರಷ್ಟು, ಐಟಿಸಿ ಶೇ 2.7ರಷ್ಟು, ಟೆಕ್ ಮಹೀಂದ್ರ ಶೇ 2.5ರಷ್ಟು ಗಳಿಕೆ ದಾಖಲಿಸಿವೆ. ಅಪೋಲೊ ಹಾಸ್ಪಿಟಲ್ಸ್ ಶೇ 14ರಷ್ಟು, ಐಷರ್ ಮೋಟರ್ಸ್ ಶೇ 10ರಷ್ಟು, ಟೈಟನ್ ಶೇ 10ರಷ್ಟು, ಬಜಾಜ್ ಫೈನಾನ್ಸ್ ಶೇ 10.5ರಷ್ಟು, ಬಜಾಜ್ ಫಿನ್‌ಸರ್ವ್ ಶೇ 8.5ರಷ್ಟು ಮತ್ತು ಹಿಂಡಾಲ್ಕೊ ಶೇ 8ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಜಾಗತಿಕವಾಗಿ ಪ್ರಮುಖ ದೇಶಗಳ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡುತ್ತಿರುವುದರಿಂದ ಷೇರುಪೇಟೆಯಲ್ಲಿ ಸದ್ಯ ಸಕಾರಾತ್ಮಕತೆ ಕಂಡುಬರುವುದು ಕಷ್ಟ. ದೊಡ್ಡ ಕಂಪನಿಗಳ (ಲಾರ್ಜ್‌ ಕ್ಯಾಪ್) ಷೇರುಗಳೇ ಶೇ 20ರಿಂದ ಶೇ 30ರ ವರೆಗೆ ಕುಸಿತ ಕಾಣುತ್ತಿದ್ದು ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದು ಎಣಿಕೆಗೆ ಸಿಗುತ್ತಿಲ್ಲ. ಈಗಿನ ಮಟ್ಟಿಗೆ ಹೂಡಿಕೆದಾರರು ಬಂಡವಾಳ ರಕ್ಷಣೆಗೆ ಹೆಚ್ಚು ಒತ್ತು ಕೊಡುವುದು ಅತ್ಯಗತ್ಯ. ಹೆಚ್ಚು ಲಾಭಾಂಶ (ಡಿವಿಡೆಂಟ್) ಕೊಡುವ ಷೇರುಗಳನ್ನು ಹೂಡಿಕೆಗೆ ಪರಿಗಣಿಸಿದರೆ ತೊಂದರೆ ಇಲ್ಲ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.