ADVERTISEMENT

ಹಣಕಾಸಿನ ಭವಿಷ್ಯ: ವಿಳಂಬ ಕೇಡು ಬಗೆದೀತು...

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 3:04 IST
Last Updated 19 ಫೆಬ್ರುವರಿ 2026, 3:04 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಲವು ಬಾರಿ ಜನರು ಹಣಕಾಸಿನ ಭವಿಷ್ಯದ ಬಗ್ಗೆ ಆಲೋಚಿಸುವುದನ್ನೇ ತಡ ಮಾಡುತ್ತಾರೆ. ಆದರೆ ಹಣಕಾಸಿನ ವಿಚಾರದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಜೀವಿತಾವಧಿಯಲ್ಲಿನ ಹೆಚ್ಚಳವನ್ನು ಪರಿಗಣಿಸಿದರೆ, ಈ ವಿಳಂಬವು ಸಮಸ್ಯೆ ಸೃಷ್ಟಿ ಮಾಡಬಹುದು ಎಂಬುದು ಗೊತ್ತಾಗುತ್ತದೆ.

ಕೆಲವು ದತ್ತಾಂಶಗಳನ್ನು ಪರಿಗಣಿಸಿದಾಗ, ಹಣಕಾಸಿಗೆ ಸಂಬಂಧಿಸಿದ ಯೋಜನೆ ರೂಪಿಸುವುದನ್ನು 45 ವರ್ಷ ವಯಸ್ಸಿಗಿಂತ ಆಚೆಗೆ ಮುಂದಕ್ಕೆ ಹಾಕಿದಾಗ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂಬುದು ತಿಳಿಯುತ್ತದೆ. ಹಣಕಾಸಿನ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಮಾಡುವ ವಿಳಂಬವು ಆತಂಕ ಮೂಡುವುದಕ್ಕೆ ಕಾರಣವಾಗುತ್ತದೆ, ವ್ಯಕ್ತಿ ತನ್ನ ಕೊನೆಯ ವರ್ಷಗಳಲ್ಲಿ ಮನಃಶಾಂತಿಯ ಬದಲು ಅವಲಂಬನೆಯ ಅನಿವಾರ್ಯಕ್ಕೆ ಸಿಲುಕಬಹುದು.

ADVERTISEMENT

ಹಣಕಾಸು, ಹೂಡಿಕೆಯ ತೀರ್ಮಾನವನ್ನು ತಡ ಮಾಡಿದಂತೆಲ್ಲ, ಬಡ್ಡಿಗೆ ಚಕ್ರಬಡ್ಡಿ ಸೇರಿಕೊಳ್ಳುವುದರಿಂದ ಸಿಗುವ ಪ್ರಯೋಜನವನ್ನು ಪೂರ್ತಿಯಾಗಿ ಪಡೆಯಲು ಆಗುವುದಿಲ್ಲ. ಬಡ್ಡಿಗೆ ಚಕ್ರಬಡ್ಡಿ ಸಿಗುವುದು, ಬಡ್ಡಿ ಹಾಗೂ ಚಕ್ರಬಡ್ಡಿಯು ಅಸಲು ಮೊತ್ತಕ್ಕೆ ಸೇರಿಕೊಳ್ಳುವುದು ದೀರ್ಘಾವಧಿಯಲ್ಲಿ ಬಹಳ ದೊಡ್ಡ ಮೊತ್ತವನ್ನು ಒಗ್ಗೂಡಿಸಲು ನೆರವಾಗುತ್ತವೆ. ಹೂಡಿಕೆಯನ್ನು ಬೇಗನೆ ಆರಂಭಿಸಿದರೆ, ಅದನ್ನು ನಿಯಮಿತವಾಗಿ ಮುಂದುವರಿಸಿದರೆ ವರ್ಷಗಳು ಕಳೆದಂತೆಲ್ಲ ಸಂಪತ್ತು ಅಗಾಧವಾಗಿ ಬೆಳೆಯುತ್ತದೆ. ಹೂಡಿಕೆಯನ್ನು ಬೇಗ ಆರಂಭಿಸಿದರೆ ಹಣಕಾಸಿನ ಭದ್ರತೆಯೂ ಹೆಚ್ಚಿನ ಮಟ್ಟದಲ್ಲಿರುತ್ತದೆ.

ಮೂರು ಸಂಗತಿಗಳು

ಜೀವಿತಾವಧಿ ಹೆಚ್ಚಳ, ಹಣದುಬ್ಬರ ಪ್ರಮಾಣ ಮತ್ತು ಸಾಕಷ್ಟು ಮೊತ್ತದ ವಿಮಾ ರಕ್ಷೆ ಇಲ್ಲದಿರುವುದು ಹಣಕಾಸಿನ ಯೋಜನೆಗಳನ್ನು ಬೇಗನೆ ಶುರುವಾಗಬೇಕಿರುವುದರ ಮಹತ್ವವನ್ನು ಹೇಳುತ್ತವೆ.

ವೈದ್ಯಕೀಯ ವಿಜ್ಞಾನದಲ್ಲಿನ ಪ್ರಗತಿಯ ಕಾರಣದಿಂದಾಗಿ ಜೀವಿತಾವಧಿ ಕೂಡ ಹೆಚ್ಚಾಗಿದೆ. ಆದರೆ ಇದಕ್ಕೆ ಅನುಗುಣವಾಗಿ ಹಣಕಾಸಿನ ಸ್ಥಿತಿ ಸುಧಾರಿಸಿದೆಯೇ? ಜೀವಿತಾವಧಿ ಹೆಚ್ಚಿದಾಗ ಉಳಿತಾಯದ ಮೊತ್ತವೂ ಹೆಚ್ಚಬೇಕಾಗುತ್ತದೆ. ಅದಿಲ್ಲದಿದ್ದರೆ, ವ್ಯಕ್ತಿಗೆ ಕೊನೆಗಾಲದಲ್ಲಿ ವೆಚ್ಚಕ್ಕೆ ಹಣ ಕೊರತೆ ತೀವ್ರವಾಗಬಹುದು. ಇದೊಂದು ಬಗೆಯಲ್ಲಿ ಭೀತಿ ಮೂಡಿಸುವಂತಹ ಸ್ಥಿತಿ.

ಜೀವನದ ವೆಚ್ಚ ಹಾಗೂ ಆರೋಗ್ಯಸೇವಾ ವೆಚ್ಚಗಳು ಮುಂದಿನ 20ರಿಂದ 30 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಲಿವೆ. ಹೀಗಾಗಿ ಹಣದುಬ್ಬರ ಪ್ರಮಾಣವನ್ನು ಮೀರುವ ಪ್ರಮಾಣದಲ್ಲಿ ವ್ಯಕ್ತಿಯ ಉಳಿತಾಯವು ಹೆಚ್ಚಾಗಬೇಕು. ಆಗ ಮಾತ್ರ ಆ ವ್ಯಕ್ತಿ ತನ್ನ ಈಗಿನ ಜೀವನ ಶೈಲಿಯನ್ನು ಕಾಪಾಡಿಕೊಳ್ಳಬಲ್ಲ. ಹೂಡಿಕೆಯನ್ನು ತಡವಾಗಿ ಆರಂಭಿಸಿದವರಿಗೆ ಹಣದುಬ್ಬರದ ವಿರುದ್ಧದ ಹೋರಾಟ ತೀರಾ ಕಷ್ಟಕರವಾಗುತ್ತದೆ.

2019ರಲ್ಲಿ ಸ್ವಿಸ್‌ ರಿ ನಡೆಸಿದ ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ವ್ಯಕ್ತಿಯೊಬ್ಬ ಹಠಾತ್ ಮೃತಪಟ್ಟರೆ ಆತನ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟು ನೆರವು ವಿಮಾ ಪಾಲಿಸಿಗಳಿಂದ ಸಿಗುವುದಿಲ್ಲ. ಅಂದರೆ ಅಗತ್ಯ ಪ್ರಮಾಣದ ವಿಮೆಯನ್ನು ವ್ಯಕ್ತಿ ಹೊಂದಿರುವುದಿಲ್ಲ. ಕೆಲವು ಬಗೆಯ ವಿಮಾ ರಕ್ಷೆಯನ್ನು ಹೊಂದಿರುವ ಕುಟುಂಬಗಳು, ತಮ್ಮ ಅಗತ್ಯದ ಅಲ್ಪ ಪ್ರಮಾಣವನ್ನು ಮಾತ್ರವೇ ವಿಮೆಯ ರೂಪದಲ್ಲಿ ಪಡೆಯುತ್ತವೆ. ಜೀವ ವಿಮೆಯಲ್ಲಿ ಹಣ ತೊಡಗಿಸುವುದನ್ನು ಬೇಗನೆ ಶುರು ಮಾಡುವುದರಿಂದ, ದೀರ್ಘಾವಧಿಯ ಉಳಿತಾಯಕ್ಕೆ ಅಗತ್ಯವಿರುವ ರಕ್ಷಾ ಕವಚವೊಂದು ಸಿಕ್ಕಂತಾಗುತ್ತದೆ.

ಜೀವ ವಿಮಾ ಯೋಜನೆಗಳು ವ್ಯಕ್ತಿಯ ಅನಿರೀಕ್ಷಿತ ಸಾವಿನ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಒಂದು ಇಡುಗಂಟು ಒದಗಿಸುವುದಕ್ಕಿಂತ ಹೆಚ್ಚಿನ ನೆರವನ್ನು ಕೊಡುತ್ತವೆ.

ವಿಮೆ ಹೊಂದಿರುವ ವ್ಯಕ್ತಿಯು ಅನಿರೀಕ್ಷಿತವಾಗಿ ಮೃತ್ಯುವಿಗೆ ಈಡಾದಾಗ, ಆತ ಮಾಡಿದ್ದ ಸಾಲಗಳನ್ನು ತೀರಿಸಲು ಕುಟುಂಬದ ಸದಸ್ಯರಿಗೆ ಈ ವಿಮೆಯು ನೆರವಾಗಬಹುದು. ವಿಮೆಯ ಮೊತ್ತವು ಉತ್ತಮವಾಗಿದ್ದರೆ ಕುಟುಂಬದ ನಿತ್ಯದ ಖರ್ಚುಗಳನ್ನು ನಿಭಾಯಿಸಲು ಆ ವಿಮಾ ಮೊತ್ತವು ಅನುಕೂಲ ಮಾಡಿಕೊಡಬಹುದು. ಆದರೆ ಇಂತಹ ನೆರವುಗಳ ಆಚೆಗೂ ವಿಮೆಯ ಪ್ರಯೋಜನ ಇದೆ.

ಹಣಕಾಸಿನ ಸ್ವಾತಂತ್ರ್ಯ

ಎಂಡೋಮೆಂಟ್‌ ಅಥವಾ ಪಿಂಚಣಿ ಯೋಜನೆಗಳು ಅವಧಿಯ ಕೊನೆಯಲ್ಲಿ ಖಚಿತ ಮೊತ್ತವನ್ನು ನೀಡುವ, ಸ್ಥಿರವಾದ ವರಮಾನವನ್ನು ಒದಗಿಸುವ ಪ್ರಯೋಜನ ಹೊತ್ತು ತರುತ್ತವೆ. ಈ ಮೂಲಕ ಅವು ವ್ಯಕ್ತಿಗೆ ಮತ್ತು ಆತನ ಕುಟುಂಬಕ್ಕೆ ಹಣಕಾಸಿನ ನೆರವು ಒದಗಿಸುತ್ತವೆ. ಯೂಲಿಪ್‌ ಯೋಜನೆಗಳು ಹೂಡಿಕೆದಾರರಿಗೆ ತಾವು ತೊಡಗಿಸಿದ ಹಣಕ್ಕೆ ಮಾರುಕಟ್ಟೆ ಆಧಾರಿತ ಹೆಚ್ಚಿನ ಲಾಭದ ಆಯ್ಕೆಯನ್ನು ನೀಡುತ್ತವೆ.

ಅನಾರೋಗ್ಯ ಕಾಡಿದಾಗ

ಜೀವ ವಿಮೆ ಖರೀದಿಸುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಕೆಲವು ರೈಡರ್‌ಗಳನ್ನು ಪಡೆದುಕೊಳ್ಳಬಹುದು. ಕ್ರಿಟಿಕಲ್ ಇಲ್ನೆಸ್‌ ರೈಡರ್ ಅಂಥವುಗಳಲ್ಲಿ ಒಂದು. ಕೈಗೆಟಕುವ ಬೆಲೆಗೆ ಸಿಗುವ ಇವು ಕ್ಯಾನ್ಸರ್‌, ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದಾಗ ವ್ಯಕ್ತಿಗೆ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣಕಾಸಿನ ನೆರವು ಒದಗಿಸುತ್ತವೆ. ಹೀಗೆ ಸಿಗುವ ನೆರವು ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯಕ್ಕೆ ಬರಬಲ್ಲದು. ವ್ಯಕ್ತಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದಾಗ ಪ್ರೀಮಿಯಂ ಕಟ್ಟುವ ಪ್ರಮೇಯವನ್ನು ಕೆಲವು ವಿಮಾ ಯೋಜನೆಗಳು ಇಲ್ಲವಾಗಿಸುತ್ತವೆ. ಈ ಸೌಲಭ್ಯ ಪಡೆದಿದ್ದರೆ, ಪ್ರೀಮಿಯಂ ಹೊರೆ ಇಲ್ಲದಿದ್ದರೂ ಜೀವ ವಿಮಾ ರಕ್ಷೆಯು ಚಾಲ್ತಿಯಲ್ಲಿ ಇರುತ್ತದೆ.

ಸಾಲ ಮತ್ತು ಬಿಕ್ಕಟ್ಟು

ಸಾಲ ಪಡೆಯುವಾಗ ಜೀವ ವಿಮಾ ಯೋಜನೆಗಳು ಅಡಮಾನದ ರೂಪದಲ್ಲಿ ನೆರವಿಗೆ ಬರಬಲ್ಲವು. ಕೆಲವು ವಿಮಾ ಯೋಜನೆಗಳು ಉಳಿತಾಯದ ಹೂಡಿಕೆ ಉತ್ಪನ್ನವಾಗಿಯೂ ಬಳಕೆಗೆ ಸಿಗಬಲ್ಲವು. ಯೂಲಿಪ್‌ ಮತ್ತು ಎಂಡೋಮೆಂಟ್‌ ಯೋಜನೆಗಳನ್ನು ಬಳಸಿ ಪಾಲಿಸಿಯನ್ನು ಚಾಲ್ತಿಯಲ್ಲಿ ಇರಿಸಿಕೊಂಡೇ ತುರ್ತು ಸಂದರ್ಭಗಳಲ್ಲಿ ಹಣ ಪಡೆಯಬಹುದು.

ಹಣಕಾಸಿಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನವನ್ನು ವಿಳಂಬ ಮಾಡುವುದು ದೊಡ್ಡ ತಪ್ಪು ಎಂಬುದನ್ನು ಹಣಕಾಸು ತಜ್ಞರು ಒಪ್ಪುತ್ತಾರೆ. ದೇಶದ ಪಶ್ಚಿಮ ವಲಯದಲ್ಲಿನ ನಗರವಾಸಿಗಳ ಪೈಕಿ ಪ್ರತಿ 10 ಮಂದಿಯಲ್ಲಿ ಒಂಬತ್ತು ಮಂದಿ, ಹಣಕಾಸಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದನ್ನು ತಾವು ವಿಳಂಬ ಮಾಡಿದ್ದರ ಬಗ್ಗೆ ವಿಷಾದ ಹೊಂದಿದ್ದಾರೆ. ನಿಮ್ಮ ಬಳಿ ಇರುವ ಉಳಿತಾಯದ ಹಣವು ಮುಂದಿನ ಜೀವನಕ್ಕೆ ಸಾಕಾಗುವುದಿಲ್ಲ ಎಂಬುದನ್ನು 40ನೆಯ ವಯಸ್ಸಿನ ನಂತರ ಅಥವಾ 50ನೆಯ ವಯಸ್ಸಿನ ನಂತರ ಅರಿತುಕೊಳ್ಳುವುದರ ಮಾನಸಿಕ ಪರಿಣಾಮವು ಬಹಳ ಕೆಟ್ಟದ್ದಾಗಿರುತ್ತದೆ. ಹೀಗೆ ಆದಾಗ ಕೆಲವರು ತಪ್ಪು ಹೂಡಿಕೆ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಜೀವ ವಿಮೆಯು ಕುಟುಂಬಕ್ಕೆ ರಕ್ಷಣೆ ಒದಗಿಸುವುದರ ಜೊತೆಯಲ್ಲೇ ದೀರ್ಘಾವಧಿಯಲ್ಲಿ ಉತ್ತಮ ಮೊತ್ತವನ್ನು ಉಳಿತಾಯ ಮಾಡಲು ಕೂಡ ದಾರಿ ತೋರಿಸಿಕೊಡುತ್ತದೆ. ಕೆಲವು ವಿಮಾ ಯೋಜನೆಗಳು ಹಣಕಾಸಿನ ರಕ್ಷೆಯ ಜೊತೆಯಲ್ಲೇ ಉಳಿತಾಯದ ಅಂಶವನ್ನೂ ಹೊಂದಿರುತ್ತವೆ. ಈ ಮೂಲಕ ಅವು ಕುಟುಂಬಕ್ಕೆ ಹಣಕಾಸಿನ ರಕ್ಷಣೆ ಒದಗಿಸುತ್ತಲೇ, ಉಳಿತಾಯದ ಅವಕಾಶವನ್ನೂ ಕಲ್ಪಿಸುತ್ತಿರುತ್ತವೆ. ಹಣಕಾಸಿನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವವರಿಗೆ ಈ ಎರಡು ಪ್ರಯೋಜನಗಳು ಮಹತ್ವದ್ದಾಗುತ್ತವೆ.

ವಿಳಂಬ ಬೇಡ

ಹಣಕಾಸಿನ ಯೋಜನೆ ಎಂಬುದು ಒಂದು ಬಾರಿಗೆ ಮಾಡಿ ಮುಗಿಸುವ ಕೆಲಸ ಅಲ್ಲ. ಅದು ದೀರ್ಘಾವಧಿಯ ಒಂದು ಪಯಣ. ಆದರೆ ಅತ್ಯಂತ ಪ್ರಭಾವಶಾಲಿ, ಪರಿಣಾಮಕಾರಿ ಪಯಣಗಳು ಒಂದು ಹೆಜ್ಜೆಯೊಂದಿಗೆ ಆರಂಭವಾಗುತ್ತವೆ. ಇಂಥದ್ದೊಂದು ತೀರ್ಮಾನ ತೆಗೆದುಕೊಳ್ಳಲು ಬಹುಕಾಲ ಕಾಯುವುದರಿಂದ ‘ಸಮಯ’ ಎನ್ನುವ ಅತ್ಯಂತ ಅಮೂಲ್ಯವಾದ ಆಸ್ತಿಯನ್ನು ಸವೆಯಲು ಬಿಟ್ಟಂತೆ ಆಗುತ್ತದೆ.

20ರ, 30ರ ಅಥವಾ 40ರ ಪ್ರಾಯದಲ್ಲಿ ಇರುವ ವ್ಯಕ್ತಿ ನೀವಾಗಿದ್ದರೆ, ಹಣಕಾಸಿನ ವಿಷಯಗಳ ಲಗಾಮನ್ನು ಕೈಗೆ ತೆಗೆದುಕೊಳ್ಳಬೇಕಾದ ಸಮಯ ಇದು. ಹಣಕಾಸು ಸಲಹೆಗಾರ ಜೊತೆ ಮಾತುಕತೆ ಆರಂಭಿಸಿ, ಸರಿಯಾದ ವಿಮೆ ಹಾಗೂ ಇತರ ಹಣಕಾಸಿನ ಯೋಜನೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇದು ಸಕಾಲ.

ಜೆನ್‌ ಝೀ ದ್ವಂದ್ವ

ಜೆನ್‌ ಝೀ ಎಂದು ಕರೆಸಿಕೊಳ್ಳುತ್ತಿರುವ ತಲೆಮಾರಿನವರು ದುಡಿಯಲು ಆರಂಭಿಸಿದ್ದಾರೆ. ಆದರೆ ಅವರ ದುಡಿಮೆಯ ವಾತಾವರಣವು ಅವರ ತಂದೆ–ತಾಯಿ ಹೊಂದಿದ್ದ ಕೆಲಸದ ವಾತಾವರಣಕ್ಕಿಂತ ಭಿನ್ನವಾಗಿದೆ. ಕೆಲಸದಲ್ಲಿ ಭದ್ರತೆ ಕಡಿಮೆಯಾಗಿರುವುದು, ಗಿಗ್ ಕೆಲಸಗಳು ವ್ಯಾಪಕವಾಗಿರುವುದು, ಕಂಪನಿಯ ಕಡೆಯಿಂದ ಪಿಂಚಣಿ ಸಿಗುತ್ತದೆ ಎಂಬ ಖಾತರಿ ಇಲ್ಲದಿರುವುದು... ಇವೆಲ್ಲ ಜೆನ್‌ ಝೀ ತಲೆಮಾರಿನವರ ವಾಸ್ತವಗಳು.

ಹೀಗಾಗಿ, ಹಣಕಾಸಿನ ವಿಚಾರದಲ್ಲಿ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುವುದು ಅನಿವಾರ್ಯ ಎಂಬುದು ಅವರಿಗೆ ಗೊತ್ತಾಗಿದೆ. ಜೆನ್‌ ಝೀ ತಲೆಮಾರಿನವರ ಪೈಕಿ ಶೇ 18ರಷ್ಟು ಮಂದಿ ದೀರ್ಘಾವಧಿಯ ಉಳಿತಾಯ ಯೋಜನೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳುತ್ತದೆ. ಈ ತಲೆಮಾರಿನ ಶೇ 31ರಷ್ಟು ಮಂದಿ ಅವಧಿ ವಿಮೆಗೆ ಆದ್ಯತೆ ನೀಡುತ್ತಿದ್ದಾರೆ.

ಹಣಕಾಸಿಗೆ ಸಂಬಂಧಿಸಿದಂತೆ ಯುವ ಸಮುದಾಯದಲ್ಲಿ ಇರುವ ಆತಂಕವು ಎಲ್ಲ ವರ್ಗದವರಿಗೂ ಒಂದು ಎಚ್ಚರಿಕೆಯ ಕರೆಗಂಟೆ. ಹಣಕಾಸಿನ ಸುರಕ್ಷತಾ ಸೌಲಭ್ಯಗಳು ಕಡಿಮೆ ಇರುವಾಗ ಹಣಕಾಸಿನ ಯೋಜನೆ ಸಿದ್ಧಪಡಿಸುವುದು ಆಯ್ಕೆಯಲ್ಲ, ಅದು ಸಹಜವಾಗಿ ಆಗಲೇಬೇಕಾದ ಕೆಲಸ. ಹಣಕಾಸಿನ ಯೋಜನೆ ಸಿದ್ಧಪಡಿಸದ ಹಳಬರಿಗೆ ಇಲ್ಲಿ ತಿಳಿಸಿರುವ ಕೆಲವು ಸಂಗತಿಗಳು ‘ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗೃತವಾಗಿರುವ ತಲೆಮಾರೊಂದರ ಎದುರು ನೀವು ಹಿಂದೆ ಬಿದ್ದಿದ್ದೀರಿ’ ಎಂಬ ಪಾಠ ಹೇಳುತ್ತಿವೆ.

ಲೇಖಕ ಗೋಡಿಜಿಟ್‌ ಜೀವ ವಿಮಾ ಕಂಪನಿಯ

ಎಂ.ಡಿ ಹಾಗೂ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.