
ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ...
ನಿಮಗೆ ಹಲವು ವರ್ಷಗಳಿಂದ ಆರೋಗ್ಯ ವಿಮೆಯೊಂದರ ರಕ್ಷೆ ಇದೆ. ಆದರೆ ಕಳೆದ ವರ್ಷದಲ್ಲಿ ಒಂದು ಮರೆಯಲಾಗದ ವಿದ್ಯಮಾನ ಘಟಿಸಿತು. ನೀವು ಅನಾರೋಗ್ಯದ ಕಾರಣದಿಂದಾಗಿ ಭರಿಸಿದ ವೈದ್ಯಕೀಯ ವೆಚ್ಚಗಳಿಗೆ ಸಂಬಂಧಿಸಿದ ಕ್ಲೇಮ್ ಅರ್ಜಿಯನ್ನು ವಿಮಾ ಕಂಪನಿಗೆ ಸಲ್ಲಿಸಿದಿರಿ. ಆದರೆ ವಿಮಾ ಕಂಪನಿಯಿಂದ ಆರಂಭದಲ್ಲಿ ದೊರೆತ ಸ್ಪಂದನವು ತೃಪ್ತಿಕರವಾಗಿರಲಿಲ್ಲ, ಅವರು ‘ನಿಮ್ಮ ಕ್ಲೇಮ್ ಅರ್ಜಿ ತಿರಸ್ಕೃತಗೊಂಡಿದೆ’ ಎಂಬ ಮಾಹಿತಿ ನೀಡಿದರು. ಯಾವ ಕಾಯಿಲೆಗೆ ನೀವು ಚಿಕಿತ್ಸೆ ಪಡೆದಿದ್ದೀರೋ ಅದು ನೀವು ಪಡೆದ ವಿಮಾ ಸೌಲಭ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು.
ಈ ವಿವರಣೆಯು ನಿಮಗೆ ಸಮಾಧಾನ ನೀಡಲಿಲ್ಲ. ಆಗ ನೀವು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್‌ಡಿಎಐ) ದೂರು ಸಲ್ಲಿಸುತ್ತೀರಿ. ನಿಮ್ಮ ದೂರನ್ನು ಪರಿಶೀಲಿಸಿದ ನಂತರ ಅಲ್ಲಿಂದ ಧನಾತ್ಮಕವಾದ ಫಲಿತಾಂಶವೊಂದು ಸಿಕ್ಕಿತು. ವಿಮಾ ಕಂಪನಿಯು ನೀವು ಕ್ಲೇಮ್ ಮಾಡಿದ್ದ ಮೊತ್ತವನ್ನು ಅಂತೂ ಬಿಡುಗಡೆ ಮಾಡಿತು. ಈ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಸರಿಸುಮಾರು ಐದು ತಿಂಗಳು ಹಿಡಿಯಿತು.
ನಿಮ್ಮ ಆರೋಗ್ಯ ವಿಮಾ ಕ್ಲೇಮ್ ಅರ್ಜಿಯು ಇತ್ಯರ್ಥ ಆಯಿತಾದರೂ, ಇಡೀ ಪ್ರಕ್ರಿಯೆಯು ನಿಮ್ಮಲ್ಲಿ ಅಸಮಾಧಾನ ಮೂಡಿಸಿತು. ನಿಮ್ಮ ವಿಮಾ ಕಂಪನಿಯು ನಿಮ್ಮ ಕ್ಲೇಮ್ ಅರ್ಜಿಯನ್ನು ಆರಂಭದಿಂದ ಅಂತ್ಯದವರೆಗೆ ನಿರ್ವಹಿಸಿದ ಬಗೆಯು ನಿಮ್ಮಲ್ಲಿ ಬಹಳ ಅತೃಪ್ತಿ ಉಂಟುಮಾಡಿತು. ನಂತರದಲ್ಲಿ, ಈ ಅನುಭವದ ಕಾರಣದಿಂದಾಗಿ ನೀವು ಈಗಿನ ವಿಮಾ ಪಾಲಿಸಿಯನ್ನು ನವೀಕರಿಸದೆ ಇರುವ ತೀರ್ಮಾನ ಮಾಡಿದಿರಿ.
ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಇರುವ ಬಹಳ ಅಮೂಲ್ಯವಾದ ಆಯ್ಕೆ, ಚಾಲ್ತಿಯಲ್ಲಿಇರುವ ಆರೋಗ್ಯ ವಿಮಾ ಪಾಲಿಸಿಯನ್ನು ಇನ್ನೊಂದು ವಿಮಾ ಕಂಪನಿಗೆ ವರ್ಗಾವಣೆ ಮಾಡಿಕೊಳ್ಳುವುದು. ಆರೋಗ್ಯ ವಿಮಾ ಪಾಲಿಸಿ ಹೊಂದಿದವರ ಹಕ್ಕುಗಳನ್ನು ಗುರುತಿಸಿ, ಪಾಲಿಸಿಯ ನವೀಕರಣದ ಸಂದರ್ಭದಲ್ಲಿ ಅದನ್ನು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾಯಿಸಿಕೊಳ್ಳುವ ಸೌಲಭ್ಯವನ್ನು ಐಆರ್‌ಡಿಎಐ ಕಲ್ಪಿಸಿದೆ. ಪಾಲಿಸಿಯನ್ನು ಪೋರ್ಟ್ ಮಾಡಿಕೊಳ್ಳುವುದು, ಅಂದರೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ವರ್ಗಾವಣೆ ಮಾಡಿಕೊಳ್ಳುವುದರಲ್ಲಿ ಹಲವು ಅನುಕೂಲಗಳಿವೆ. ಹೀಗೆ ಮಾಡುವುದರಿಂದ ಸೌಲಭ್ಯ ಗಳ ಮುಂದುವರಿಕೆ ಇರುತ್ತದೆ. ಇದೇ ಸಂದರ್ಭದಲ್ಲಿ ಹೊಸ ಕಂಪನಿಯ ಹಾಗೂ ಹೊಸ ವಿಮಾ ಯೋಜನೆಯ ಪ್ರಯೋಜನಗಳೂ ಲಭ್ಯವಾಗುತ್ತವೆ.
ನಿಮ್ಮ ಅಗತ್ಯಗಳಿಗೆ ಅತ್ಯಂತ ಹೆಚ್ಚು ಸೂಕ್ತವೆನಿಸುವ ವಿಮಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಿ: ಕಾಲ ಕಳೆದಂತೆಲ್ಲ, ಚಾಲ್ತಿಯಲ್ಲಿರುವ ನಿಮ್ಮ ಆರೋಗ್ಯ ವಿಮೆಯು ನಿಮ್ಮ ಅಗತ್ಯಗಳಿಗೆ ಸರಿಹೊಂದದಂತೆ ಆಗಬಹುದು. ಬಹುಶಃ, ಅಗತ್ಯ ಪ್ರಮಾಣದಲ್ಲಿ ವಿಮಾ ರಕ್ಷೆ ಇಲ್ಲದೆಯೂ ಹೆಚ್ಚಿನ ಪ್ರೀಮಿಯಂ ಪಾವತಿಸುವ ಸಂದರ್ಭ ಸೃಷ್ಟಿಯಾಗಬಹುದು. ಚಾಲ್ತಿಯಲ್ಲಿರುವ ವಿಮಾ ಪಾಲಿಸಿಯನ್ನು ಒದಗಿಸಿರುವ ಕಂಪನಿಯಲ್ಲಿ ಕ್ಲೇಮ್ ಪ್ರಕ್ರಿಯೆಯು ಬಹಳ ಸಂಕೀರ್ಣವಾಗಿರಬಹುದು, ವಿಮೆಯನ್ನು ಪಡೆದವರಿಗೆ ನೆರವು ಒದಗಿಸುವ ವ್ಯವಸ್ಥೆಯು ಅಲ್ಲಿ ಸಮರ್ಪಕವಾಗಿಲ್ಲದಿರಬಹುದು. ಅಥವಾ ಇನ್ನೊಂದು ಕಂಪನಿಯು ಹೆಚ್ಚು ಉತ್ತಮವಾದ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ನಿಮಗೆ ಅನ್ನಿಸಬಹುದು.
ಬೇರೆ ಬೇರೆ ಕಂಪನಿಗಳು ನೀಡುತ್ತಿರುವ ಆರೋಗ್ಯ ವಿಮಾ ಪಾಲಿಸಿಗಳಲ್ಲಿ ಇರುವ ಸೌಲಭ್ಯಗಳ ಬಗ್ಗೆ ಆನ್‌ಲೈನ್ ಮೂಲಕ ತಿಳಿದುಕೊಳ್ಳಿ. ಬೇರೆ ಬೇರೆ ಪಾಲಿಸಿಗಳನ್ನು ಜಾಗರೂಕವಾಗಿ ತುಲನೆ ಮಾಡಿ, ನಿಮ್ಮ ಅಗತ್ಯಗಳಿಗೆ ಹೆಚ್ಚು ಸೂಕ್ತವಾಗುವ ವಿಮೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಳೆಯ ಕಂಪನಿಗೆ ಮಾಹಿತಿ ಕೊಡಿ: ಆರೋಗ್ಯ ವಿಮಾ ಪಾಲಿಸಿಯನ್ನು ಬೇರೊಂದು ಕಂಪನಿಗೆ ವರ್ಗಾಯಿಸಿಕೊಳ್ಳುವ ತೀರ್ಮಾನ ತೆಗೆದುಕೊಂಡ ನಂತರದಲ್ಲಿ, ನೀವು ಪ್ರಸ್ತುತ ಪಾಲಿಸಿ ಸೌಲಭ್ಯ ಪಡೆದಿರುವ ಕಂಪನಿಗೆ ಅದರ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಚಾಲ್ತಿಯಲ್ಲಿರುವ ಪಾಲಿಸಿಯ ನವೀಕರಣದ ದಿನಾಂಕಕ್ಕೆ 45 ದಿನಗಳ ಮೊದಲು ಆ ಬಗ್ಗೆ ಮಾಹಿತಿ ಒದಗಿಸಬೇಕಾಗುತ್ತದೆ. ಹೀಗೆ 45 ದಿನಗಳ ಸಮಯಾವಕಾಶ ನೀಡುವುದರಿಂದ ನಿಮ್ಮ ಅರ್ಜಿಯನ್ನು ಸ್ವೀಕರಿಸಿ, ಪೋರ್ಟ್ ಮನವಿಯನ್ನು ಪರಿಶೀಲಿಸಲು ಹೊಸ ವಿಮಾ ಕಂಪನಿಗೆ ಅಗತ್ಯ ಸಮಯ ಸಿಗುತ್ತದೆ. ನಿಮಗೆ ಹಾಲಿ ಆರೋಗ್ಯ ವಿಮಾ ಸೌಲಭ್ಯ ನೀಡಿರುವ ಕಂಪನಿಗೆ ನಿಮ್ಮ ಪಾಲಿಸಿಯ ಮಾಹಿತಿಯನ್ನು ಹೊಸ ಕಂಪನಿಯ ಜೊತೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಪೋರ್ಟ್ ಮಾಡುವ ಕುರಿತ ಮಾಹಿತಿಯನ್ನು ಇಮೇಲ್ ಅಥವಾ ಪತ್ರದ ಮೂಲಕ ತಿಳಿಸಬೇಕು.
ಹೊಸ ಕಂಪನಿಗೆ ಪೋರ್ಟಿಂಗ್ ಅರ್ಜಿ: ಹೊಸ ಕಂಪನಿಯನ್ನು ಆಯ್ಕೆ ಮಾಡಿದ ನಂತರದಲ್ಲಿ, ಪೋರ್ಟ್ ಆಗುವುದಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಕಡೆ ಮುಂದಡಿ ಇರಿಸಬಹುದು. ಇದರ ಭಾಗವಾಗಿ ಹೊಸ ಅರ್ಜಿಯೊಂದನ್ನು ಭರ್ತಿ ಮಾಡಿ, ಅದನ್ನು ಸಂಬಂಧಪಟ್ಟ ಕಂಪನಿಗೆ ಸಲ್ಲಿಸಬೇಕು. ಹೊಸ ಕಂಪನಿಯು ನಿಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬಹುದು. ಹಿಂದಿನ ವಿಮಾ ಕಂಪನಿಯ ಬಳಿ ನೀವು ಯಾವುದೇ ಕ್ಲೇಮ್ ಸಲ್ಲಿಸದೆ ಇದ್ದರೆ ಅದರ ಬಗ್ಗೆ ಹೊಸ ಕಂಪನಿಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಬೇಕಿರುವುದು ಮಹತ್ವದ್ದು. ಹೀಗೆ ಮಾಡಿದಾಗ ಹಿಂದೆ ಇದ್ದ ‘ನೋ ಕ್ಲೇಮ್ ಬೋನಸ್’ ಸೌಲಭ್ಯವನ್ನು ಮುಂದುವರಿಸಿಕೊಳ್ಳಲು ಅನುಕೂಲ ಆಗುತ್ತದೆ. ಅಲ್ಲದೆ, ಪೋರ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ದಾಖಲೆಗಳನ್ನು, ಹೊಸ ವಿಮಾ ಕಂಪನಿಯವರು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಹೊಸ ಪಾಲಿಸಿ ಪಡೆದುಕೊಳ್ಳುವುದು: ಅಗತ್ಯ ಎದುರಾದರೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ, ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿದ ನಂತರದಲ್ಲಿ, ಹೊಸ ಕಂಪನಿಯು ತನ್ನ ಕಡೆಯಿಂದ ಎಲ್ಲ ಪರಿಶೀಲನೆಗಳನ್ನು ನಡೆಸುತ್ತದೆ. ಇದು ಸಾಮಾನ್ಯವಾಗಿ ಎರಡು ವಾರಗಳ ಪ್ರಕ್ರಿಯೆಯಾಗಿರುತ್ತದೆ. ಕಂಪನಿಯವರು ತಮಗೆ ಹೆಚ್ಚುವರಿಯಾಗಿ ಯಾವುದೇ ಮಾಹಿತಿ ಬೇಕು ಎಂದು ಭಾವಿಸಿದರೆ, ಅದರ ಬಗ್ಗೆ ಅರ್ಜಿದಾರರ ಬಳಿ ತಕ್ಷಣವೇ ಕೇಳುತ್ತಾರೆ. ಕಂಪನಿಯ ಕಡೆಯಿಂದ ಅನುಮೋದನೆ ಸಿಕ್ಕ ನಂತರದಲ್ಲಿ ನಿಮ್ಮ ಹೊಸ ಆರೋಗ್ಯ ವಿಮಾ ಪಾಲಿಸಿಯು ಮಂಜೂರಾಗುತ್ತದೆ.
ಹೊಸ ಪಾಲಿಸಿ ಮಂಜೂರಾದ ನಂತರದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ಓದಿಕೊಳ್ಳುವುದು ಬಹಳ ಮಹತ್ವದ್ದು. ಹಾಗೆ ಓದಿದಾಗ ಮಾತ್ರ, ಹಳೆಯ ಪಾಲಿಸಿಯಲ್ಲಿನ ಸೌಲಭ್ಯಗಳು ಹೊಸ ಪಾಲಿಸಿಯಲ್ಲಿಯೂ ಮುಂದುವರಿದಿವೆಯೇ ಎಂಬದನ್ನು ಖಾತರಿಪಡಿಸಿಕೊಳ್ಳಲು ಸಾಧ್ಯ. ಹಿಂದಿನ ಪಾಲಿಸಿಯಲ್ಲಿ ಒಗ್ಗೂಡಿದ್ದ ‘ನೋ ಕ್ಲೇಮ್ ಬೋನಸ್’ ಮೊತ್ತವು ಸರಿಯಾಗಿ ವರ್ಗಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಹಾಲಿ ಇರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಹಿಂದಿನ ಪಾಲಿಸಿಯಲ್ಲಿ ಇದ್ದ ‘ಕಾಯುವಿಕೆ ಅವಧಿ’ಯು ಹೊಸ ಪಾಲಿಸಿಯಲ್ಲಿಯೂ ಮುಂದುವರಿದಿದೆಯೇ ಎಂಬುದನ್ನು ಗಮನಿಸಿ. ಹೊಸ ಪಾಲಿಸಿಯು ಮಂಜೂರಾದ ನಂತರದಲ್ಲಿ ಅದರಲ್ಲಿ ಸೌಲಭ್ಯಗಳನ್ನು ನೀವು ಯಾವ ಸಮಸ್ಯೆಗಳೂ ಇಲ್ಲದೆ ಬಳಸಿಕೊಳ್ಳಲು ಸಾಧ್ಯವಾಗಬೇಕು.
ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಆರೋಗ್ಯ ವಿಮೆಯನ್ನು ಹೊಂದಿರುವುದು ಅತ್ಯಗತ್ಯ. ಆರೋಗ್ಯ ವಿಮೆ ಬೇಡ ಎನ್ನಲು ವಾಸ್ತವದಲ್ಲಿ ಅವಕಾಶವೇ ಇಲ್ಲ. ತಾವು ಏನನ್ನೇ ಖರೀದಿಸಿದರೂ ಅದು ತಮ್ಮ ನಿರೀಕ್ಷೆ ಮೀರಿ ಚೆನ್ನಾಗಿರಲಿ ಎಂದು ಗ್ರಾಹಕರು ಬಯಸುತ್ತಾರೆ. ಆರೋಗ್ಯ ವಿಮೆಗೂ ಇದೇ ಮಾತು ಅನ್ವಯ. ಆರೋಗ್ಯ ವಿಮೆಯು ಅದನ್ನು ಪಡೆದಾತನ ನಿರೀಕ್ಷೆಗಿಂತ ಹೆಚ್ಚು ಚೆನ್ನಾಗಿರಬೇಕು. ಇಂದು ಹಲವು ಕಂಪನಿಗಳು ಆರೋಗ್ಯಸೇವಾ ವೆಚ್ಚಗಳನ್ನು ಭರಿಸುವುದರ ಜೊತೆಯಲ್ಲೇ, ಸಮಗ್ರ ಆರೋಗ್ಯ–ಆರೈಕೆ ಸೇವೆಗಳ ವೆಚ್ಚಗಳನ್ನೂ ಒಳಗೊಳ್ಳುತ್ತಿವೆ. ಈ ರೀತಿ ಎಲ್ಲ ಬಗೆಯ ವೆಚ್ಚಗಳನ್ನೂ ಒಳಗೊಳ್ಳುವ ಆರೋಗ್ಯ ವಿಮೆಗಳು ನಿಮ್ಮ ಅಗತ್ಯಗಳಿಗೆ ಹೆಚ್ಚು ಸೂಕ್ತವಾಗಬಹುದು.
ಬೇರೆ ಕಂಪನಿಗಳು ಹೆಚ್ಚು ಉತ್ತಮವಾದ ವಿಮಾ ಯೋಜನೆಗಳನ್ನು ಹೊಂದಿವೆ ಎಂದು ನಿಮಗೆ ಅನ್ನಿಸಿದರೆ, ಪೋರ್ಟ್ ಮಾಡುವ ಬಗ್ಗೆ ಆಲೋಚಿಸಿ. ನೀವು ಈಗಾಗಲೇ ಪಾವತಿ ಮಾಡಿರುವ ಪ್ರೀಮಿಯಂ ಮೊತ್ತಕ್ಕೆ ಪ್ರತಿಯಾಗಿ ಪಡೆದ ಪ್ರಯೋಜನಗಳು ನಷ್ಟವಾಗುವುದಿಲ್ಲ ಎಂಬುದು ನೆನಪಿನಲ್ಲಿರಲಿ.
ಲೇಖಕ: ಡಿಜಿಟ್ ಇನ್ಶೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ (Appointed Actuary)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.