ADVERTISEMENT

MSME Loan | ಎಂಎಸ್‌ಎಂಇ: ಸಾಲಕ್ಕೆ ಅರ್ಹತೆ ಹೆಚ್ಚಿಸಿಕೊಳ್ಳುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 23:48 IST
Last Updated 18 ಜೂನ್ 2025, 23:48 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭಾರತದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳ ಪಾಲಿಗೆ ವಾಣಿಜ್ಯ ಉದ್ದೇಶದ ಸಾಲ ಪಡೆಯುವುದು ದೊಡ್ಡ ಸವಾಲಾಗಿಯೇ ಉಳಿದಿದೆ. ಆ ಉದ್ದಿಮೆಗಳಿಗೆ ಸಾಮರ್ಥ್ಯ ಇಲ್ಲದ್ದಕ್ಕೆ ಹೀಗಾಗುತ್ತಿದೆ ಎನ್ನಲು ಸಾಧ್ಯವಿಲ್ಲ. ಬದಲಿಗೆ, ಅವುಗಳ ಹಣಕಾಸಿನ ದಾಖಲೆಗಳು ಅವುಗಳ ವಹಿವಾಟನ್ನು ಸಮರ್ಥವಾಗಿ ಪ್ರತಿಫಲಿಸದೆ ಇರುವುದು ಇದಕ್ಕೆ ಕಾರಣ. ಎಂಎಸ್‌ಎಂಇ ವಲಯದ ಬಹುತೇಕ ಉದ್ಯಮಿಗಳು ದಿನನಿತ್ಯದ ವಹಿವಾಟುಗಳ ಮೇಲೆ ಹೆಚ್ಚು ಗಮನ ಕೊಡುತ್ತ, ಕೆಲವು ಪ್ರಮುಖ ಕೆಲಸಗಳನ್ನು ಮರೆತುಬಿಟ್ಟಿರುತ್ತಾರೆ.

ಸಾಲ ಕೊಡುವವರು ಸಿಬಿಲ್‌ ಅಂಕ ಮತ್ತು ಕಂಪನಿಯ ಸಾಲದ ವಿವರವನ್ನು (ಸಿಸಿಆರ್‌) ಪರಿಶೀಲಿಸುತ್ತಾರೆ. ಉದ್ದಿಮೆಯು ಸಾಲ ಪಡೆಯಲು ಎಷ್ಟರಮಟ್ಟಿಗೆ ಅರ್ಹ ಎಂಬುದನ್ನು ಪರಿಶೀಲಿಸಲು ಇದು ಮುಖ್ಯ. ಎಂಎಸ್‌ಎಂಇ ವಲಯದ ಉದ್ಯಮದ ಸಾಲ ಮರುಪಾವತಿ ಸಾಮರ್ಥ್ಯ, ಹಣಕಾಸಿನ ವಿಚಾರದಲ್ಲಿ ಅದು ಪಾಲಿಸುತ್ತಿರುವ ಶಿಸ್ತನ್ನು ಅರಿಯಲು ಬ್ಯಾಂಕ್‌ಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ಇವು ನೆರವಾಗುತ್ತವೆ. ಹಣಕಾಸಿನ ಬುನಾದಿಯು ಭದ್ರವಾಗಿ ಇದ್ದಲ್ಲಿ ಸಾಲ ಪಡೆಯಲು ಹೆಚ್ಚು ಅರ್ಹತೆ ಸಿಗುತ್ತದೆ, ಆಕರ್ಷಕ ಬಡ್ಡಿ ದರಕ್ಕೆ ಸಾಲ ಸಿಗುತ್ತದೆ ಮತ್ತು ಮರುಪಾವತಿಯ ಷರತ್ತುಗಳು ಹೆಚ್ಚು ಅನುಕೂಲಕರವಾಗಿ ಇರುತ್ತವೆ.

ADVERTISEMENT

ಹಾಗಾದರೆ, ಸಣ್ಣ ಪ್ರಮಾಣದ ಉದ್ದಿಮೆಗಳು ಸಾಲ ಪಡೆಯುವ ಅರ್ಹತೆಯನ್ನು ಹೇಗೆ ಹೆಚ್ಚು ಮಾಡಿಕೊಳ್ಳಬಹುದು? ಅವು ಸಾಲದಾತ ಕಂಪನಿಗಳ ವಿಶ್ವಾಸವನ್ನು ಗಳಿಸುವುದು ಹೇಗೆ? ಈ ದಿಸೆಯಲ್ಲಿ ಪಾಲಿಸಬಹುದಾದ ಕೆಲವು ಪ್ರಮುಖ ಅಂಶಗಳನ್ನು ಗಮನಿಸೋಣ.

ನಗದು ಹರಿವು, ಶಿಸ್ತು ಇರಲಿ: ನಗದು ಹರಿವು ಯಾವುದೇ ಉದ್ದಿಮೆಯ ಪಾಲಿನ ಜೀವದ್ರವ್ಯ. ದಾಖಲೆಗಳ ಪ್ರಕಾರ ಉದ್ದಿಮೆಯು ಲಾಭದಲ್ಲಿ ಇದ್ದರೂ, ನಗದು ಹರಿವು ಚೆನ್ನಾಗಿ ಇಲ್ಲದಿದ್ದರೆ ಹಣಕಾಸಿನ ಅಸ್ಥಿರತೆ ಎದುರಾಗುತ್ತದೆ. ಆಗ ಉದ್ದಿಮೆಗೆ ಸಾಲ ಪಡೆದುಕೊಳ್ಳುವುದು ಕಷ್ಟವಾಗುತ್ತದೆ. ನಗದು ಹರಿವು ಚೆನ್ನಾಗಿ ಇರಿಸಿಕೊಳ್ಳಲು ಉದ್ದಿಮೆಗಳು ಇನ್ವಾಯ್ಸ್‌ಗಳನ್ನು ಸರಿಯಾಗಿ ನೀಡಬೇಕು, ಹಣದ ಪಾವತಿ ವಿಚಾರವಾಗಿ ಗ್ರಾಹಕರ ಜೊತೆ ಸ್ಪಷ್ಟ ನಿಯಮಗಳನ್ನು ಹೊಂದಿರಬೇಕು, ಹಣದ ಪಾವತಿ ವಿಳಂಬ ಆಗದಂತೆ ನೋಡಿಕೊಳ್ಳಲು ಕಾಲಕಾಲಕ್ಕೆ ವಿಚಾರಿಸುವ ಕೆಲಸವನ್ನೂ ಮಾಡಬೇಕು.

ಒಂದಿಷ್ಟು ಮಿಗತೆ ಹಣವನ್ನು ಇರಿಸಿಕೊಳ್ಳುವುದು ಉತ್ತಮ ಕ್ರಮವಾಗುತ್ತದೆ, ಅನಿರೀಕ್ಷಿತ ವೆಚ್ಚಗಳನ್ನು ನಿಭಾಯಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಕಷ್ಟಕಾಲದಲ್ಲಿ ಉದ್ದಿಮೆಯ ವಹಿವಾಟಿಗೆ ಧಕ್ಕೆ ಎದುರಾಗದಂತೆ ನೋಡಿಕೊಳ್ಳಲು ಆಗುತ್ತದೆ.

ನಿಶ್ಚಿತ ವೆಚ್ಚಗಳು ಹಾಗೂ ವ್ಯತ್ಯಾಸವಾಗುವ ವೆಚ್ಚಗಳ ಬಗ್ಗೆ ಗಮನ ಇರಿಸುವುದರಿಂದ ಉದ್ದಿಮೆಗಳಿಗೆ ತಮ್ಮ ಕಾರ್ಯಾಚರಣೆಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು, ವೆಚ್ಚಗಳನ್ನು ಹೆಚ್ಚು ಪರಿಣಾಮಕಾರಿ ಆಗಿಸಲು ಸಾಧ್ಯವಾಗುತ್ತದೆ. ಸಣ್ಣ ಉದ್ದಿಮೆಗಳನ್ನು ನಡೆಸುವವರು ತಮ್ಮ ವೈಯಕ್ತಿಕ ವೆಚ್ಚ ಹಾಗೂ ಉದ್ದಿಮೆಗೆ ಸಂಬಂಧಿಸಿದ ವೆಚ್ಚಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಇಲ್ಲವಾದರೆ ಹಣಕಾಸಿನ ದಾಖಲೆಗಳಲ್ಲಿ ಲೋಪಗಳು ನುಸುಳಬಹುದು. ಉದ್ದಿಮೆಗೆ ಮೀಸಲಾದ ಪ್ರತ್ಯೇಕ ಖಾತೆಯನ್ನು ತೆರೆಯುವುದರಿಂದ ಸಾಲದಾತ ಕಂಪನಿಗಳಲ್ಲಿ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ.

ಸಿಬಿಲ್ ರ್‍ಯಾಂಕ್ ಮತ್ತು ಸಿಸಿಆರ್‌: ಉದ್ದಿಮೆಯ ಸಿಬಿಲ್‌ ರ್‍ಯಾಂಕ್‌ ಸಾಲದ ಮಂಜೂರಾತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 1ನೇ ರ್‍ಯಾಂಕ್ ಪಡೆದಿರುವ ಉದ್ದಿಮೆಗಳಿಗೆ ಸಾಲ ನೀಡಲು ಯಾವುದೇ ಹಿಂಜರಿಕೆ ಇರುವುದಿಲ್ಲ. 10ನೇ ರ್‍ಯಾಂಕ್‌ನ ಉದ್ದಿಮೆಗಳಿಗೆ ಸಾಲ ನೀಡುವುದು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಸಿಬಿಲ್ ರ್‍ಯಾಂಕ್‌ ಚೆನ್ನಾಗಿದ್ದಾಗ ಉದ್ದಿಮೆಯ ಬಗ್ಗೆ ಹೆಚ್ಚು ವಿಶ್ವಾಸ ಮೂಡುತ್ತದೆ, ಅದು ಸುಲಭವಾಗಿ ಸಾಲ ಪಡೆಯಲು ನೆರವು ನೀಡುತ್ತದೆ.

ಸಿಬಿಲ್ ರ್‍ಯಾಂಕ್‌ ಮೇಲೆ ಕಣ್ಣಿರಲಿ: ಕಂಪನಿಯ ಸಾಲದ ವಿವರಗಳ ವರದಿಯನ್ನು (ಸಿಆರ್‌ಆರ್‌) ಆಗಾಗ ಪರಿಶೀಲನೆ ನಡೆಸುತ್ತಿರಬೇಕು. ಅದರಲ್ಲಿ ಯಾವುದೇ ಲೋಪಗಳು ಕಂಡುಬಂದರೆ ಸಂಬಂಧಪಟ್ಟವರಿಗೆ ತಕ್ಷಣ ತಿಳಿಸಬೇಕು. 

ಸಕಾಲಕ್ಕೆ ಸಾಲದ ಮರುಪಾವತಿ: ಪಡೆದ ಸಾಲವನ್ನು ಸಕಾಲದಲ್ಲಿ ಹಿಂದಿರುಗಿಸಬೇಕು. ಸಾಲದ ಕಂತುಗಳ ಪಾವತಿ ತಪ್ಪಿದರೆ ಸಿಬಿಲ್ ರ್‍ಯಾಂಕ್‌ ಕುಸಿಯಬಹುದು. ಸ್ವಯಂಚಾಲಿತವಾಗಿ ಪಾವತಿಗಳು ಆಗುವಂತೆ ಮಾಡಿದರೆ ಶಿಸ್ತು ಕಾಪಾಡಿಕೊಳ್ಳಬಹುದು.

ಅನಗತ್ಯವಾಗಿ ಸಾಲದ ಬಗ್ಗೆ ವಿಚಾರಿಸಬೇಡಿ: ಸಾಲ ಕೋರಿ ಬಹಳ ಕಡಿಮೆ ಅವಧಿಯಲ್ಲಿ ಹಲವು ಕಡೆ ಅರ್ಜಿಗಳನ್ನು ಸಲ್ಲಿಸುವುದರಿಂದ ಕ್ರೆಡಿಟ್ ರ್‍ಯಾಂಕ್ ತಗ್ಗುತ್ತದೆ. ಅಗತ್ಯ ಇದ್ದಾಗ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಿ, ಸಾಲದಾತರ ಬಗ್ಗೆ ಸರಿಯಾಗಿ ತಿಳಿದು ಅರ್ಜಿ ಸಲ್ಲಿಸಿ.

ವಿಭಿನ್ನ ಬಗೆಯ ಸಾಲ ಇರಲಿ: ಅಲ್ಪಾವಧಿ, ದೀರ್ಘಾವಧಿ ಸಾಲ ಸೇರಿ ಬೇರೆ ಬೇರೆ ಬಗೆಯ ಸಾಲಗಳನ್ನು ಪಡೆದಾಗ, ಉದ್ದಿಮೆಯು ಬೇರೆ ಬೇರೆ ಬಗೆಯ ಸಾಲವನ್ನು ಜವಾಬ್ದಾರಿಯಿಂದ ನಿಭಾಯಿಸಬಲ್ಲದು ಎಂಬ ವಿಶ್ವಾಸವು ಸಾಲದಾತರಲ್ಲಿ ಮೂಡುತ್ತದೆ.

ಹಣಕಾಸಿನ ದಾಖಲೆಗಳಲ್ಲಿ ಪಾರದರ್ಶಕತೆ: ಹಣಕಾಸಿನ ದಾಖಲೆಗಳು ಪೂರ್ತಿಯಾಗಿ ಇಲ್ಲದಿರುವ, ಸುವ್ಯವಸ್ಥಿತವಾಗಿ ಇಲ್ಲದಿರುವ ಕಾರಣದಿಂದಾಗಿ ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಸಾಲ ಮಂಜೂರಾತಿಯ ಸಮಸ್ಯೆ ಎದುರಾಗುವುದಿದೆ. ಸಾಲ ನೀಡುವ ಕಂಪನಿಗಳು ಸುವ್ಯವಸ್ಥಿತವಾಗಿ ಇರುವ ಲೆಕ್ಕಪತ್ರಗಳನ್ನು, ಲಾಭ–ನಷ್ಟದ ದಾಖಲೆಗಳನ್ನು ಮತ್ತು ತೆರಿಗೆ ಪಾವತಿ ವಿವರಗಳನ್ನು ಬಯಸುತ್ತವೆ. ಅದನ್ನು ಆಧರಿಸಿ ಅವು ಉದ್ದಿಮೆಯ ಸ್ಥಿತಿಯನ್ನು ಅರಿಯುತ್ತವೆ.

ಜಿಎಸ್‌ಟಿ ವಿವರ ಸಲ್ಲಿಸಿ: ತೆರಿಗೆ ವಿವರಗಳನ್ನು ಕಾಲಕಾಲಕ್ಕೆ ಸರಿಯಾಗಿ ಸಲ್ಲಿಸುವುದರಿಂದ ಉದ್ದಿಮೆಗಳ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ, ಅದು ಉದ್ದಿಮೆಗಳು ಹಣಕಾಸಿನ ದೃಷ್ಟಿಯಿಂದ ಸ್ಥಿರವಾಗಿವೆ ಎಂಬ ಸಂದೇಶ ನೀಡುತ್ತವೆ.

ಈಚಿನ ದಾಖಲೆಗಳು ಇರಲಿ: ಸಾಲದಾತರು ನಗದು ಹರಿವಿನ ವಿಶ್ಲೇಷಣೆ ನಡೆಸಲು ಈಚಿನ ಬ್ಯಾಂಕ್‌ ವಹಿವಾಟು ದಾಖಲೆಗಳನ್ನು ಪರಿಶೀಲಿಸುತ್ತಾರೆ. ಹೀಗಾಗಿ, ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಕನಿಷ್ಠ 6ರಿಂದ 12 ತಿಂಗಳ ಬ್ಯಾಂಕ್‌ ವಹಿವಾಟಿನ ವಿವರಗಳನ್ನು ಇಟ್ಟುಕೊಂಡಿರಬೇಕು.

ಬೆಳವಣಿಗೆಗೆ ಸಾಲ ಪಡೆಯಿರಿ: ಸೂಕ್ತ ಕಾರ್ಯತಂತ್ರ ರೂಪಿಸಿ ಸಾಲ ಪಡೆದರೆ ವಹಿವಾಟು ವಿಸ್ತರಿಸಲು, ಹೂಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಲು ಮತ್ತು ದುಡಿಯುವ ಬಂಡವಾಳವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನೆರವಾಗುತ್ತದೆ. ಸುಲಭವಾಗಿ ತೀರಿಸಲು ಸಾಧ್ಯವಿರುವ ಮೊತ್ತವನ್ನು ಮಾತ್ರ ಸಾಲದ ರೂಪದಲ್ಲಿ ಪಡೆಯುವುದು ಸೂಕ್ತ. ಮಿತಿಯನ್ನು ಮೀರಿ ಸಾಲ ಪಡೆದರೆ ಹಣಕಾಸಿನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ, ಸಿಬಿಲ್ ರ್‍ಯಾಂಕ್ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ.

ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಹಣಕಾಸಿನ ಸ್ಥಿರತೆಯು ಕಾರ್ಯಾಚರಣೆಯಲ್ಲಿ ಯಶಸ್ಸು ಪಡೆಯುವಷ್ಟೇ ಮುಖ್ಯವಾಗಿರುತ್ತದೆ. ನಗದು ಹರಿವಿನ ನಿರ್ವಹಣೆಯಲ್ಲಿ ಶಿಸ್ತು ಕಾಯ್ದುಕೊಂಡು, ಹಣಕಾಸಿನ ದಾಖಲೆಗಳನ್ನು ಸರಿಯಾಗಿ ಇರಿಸಿಕೊಂಡು, ಸಾಲವನ್ನು ಜವಾಬ್ದಾರಿಯಿಂದ ಬಳಕೆ ಮಾಡಿಕೊಂಡರೆ ಈ ವಲಯದ ಉದ್ದಿಮೆಗಳು ಸಿಬಿಲ್ ರ್‍ಯಾಂಕ್‌ ಉತ್ತಮಪಡಿಸಿಕೊಳ್ಳಬಹುದು.

ಲೇಖಕ :ಟ್ರಾನ್ಸ್‌ಯೂನಿಯನ್ ಸಿಬಿಲ್‌ ಕಂಪನಿಯ ಡಿ2ಸಿ ವಹಿವಾಟುಗಳ ಮುಖ್ಯಸ್ಥ ಮತ್ತು ಹಿರಿಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.