ADVERTISEMENT

ಪ್ರಶ್ನೋತ್ತರ | ತೆರಿಗೆ ಉಳಿಸಲು ತಜ್ಞರ ಸಲಹೆ

ಯು.ಪಿ.ಪುರಾಣಿಕ್
Published 4 ಜನವರಿ 2022, 19:31 IST
Last Updated 4 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೆಸರು, ಊರು ಬೇಡ

l ಪ್ರಶ್ನೆ: ನಾನು ವಿಧವೆ. ನನಗೆ ಮಾನಸಿಕ ಕಾಯಿಲೆ ಇರುವ 27 ವರ್ಷವಯಸ್ಸಿನ ಮಗ ಇದ್ದಾನೆ. ಗಂಡನ ಪಿಂಚಣಿ ಬರುತ್ತಿದೆಯಾದರೂ ಅದು ಜೀವನಕ್ಕೆ ಸಾಲುವುದಿಲ್ಲ. ನನಗೆ ಎರಡು ವಾಸದ ಮನೆಗಳು ಮತ್ತು ಸ್ವಲ್ಪ ಕೃಷಿ ಜಮೀನು ಇವೆ. ಇವುಗಳ ಉಸ್ತುವಾರಿ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಆಸ್ತಿ ಮಾರಾಟ ಮಾಡಿ ಬರುವ ಮೊತ್ತಕ್ಕೆ ತೆರಿಗೆ ಬರಬಹುದೇ? ತೆರಿಗೆ ಉಳಿಸಲು ಉಪಾಯ ತಿಳಿಸಿ.

ಉತ್ತರ: ನಿಮ್ಮ ಪರಿಸ್ಥಿತಿ ತಿಳಿದು ಬೇಸರವಾಯಿತು. ನೀವು ಬಯಸಿದಂತೆ ಆಸ್ತಿ ಮಾರಾಟ ಮಾಡುವುದೇ ಉತ್ತಮ. ಉಳಿಯಲು ಒಂದು ಮನೆ ಮಾತ್ರ ಇರಿಸಿಕೊಳ್ಳಿ. ಆಸ್ತಿ ಮಾರಾಟ ಮಾಡಿ ಬರುವ ಹಣ ₹ 50 ಲಕ್ಷದೊಳಗಿದ್ದಲ್ಲಿ ಆ ಮೊತ್ತವನ್ನು ನ್ಯಾಷನಲ್‌ ಹೈವೇ ಅಥಾರಿಟಿ ಆಫ್ ಇಂಡಿಯಾ (ಎನ್‌ಎಚ್‌ಎಐ) ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ ಬಾಂಡ್‌ನಲ್ಲಿ (ಆರ್‌ಇಸಿ) ತೊಡಗಿಸಿದರೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇದೆ. ಉಳಿದ ಹಣಕ್ಕೆ ಶೇಕಡ 20ರಷ್ಟು ತೆರಿಗೆ ಬರುತ್ತದೆ. ಇದೇ ವೇಳೆ ಹಣದುಬ್ಬರವನ್ನು ಕೂಡ ಲಾಭದಿಂದ ಕಳೆಯಬಹುದು. ನನಗೆ ಕರೆ ಮಾಡಿ, ತಿಳಿಸುತ್ತೇನೆ. ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲವನ್ನೂ ಲೆಕ್ಕಹಾಕಿ ಮುಂದೇನು ಮಾಡಬಹುದು ಎನ್ನುವುದನ್ನು ಹೇಳುತ್ತೇನೆ. ಬಾಂಡ್‌ಗಳ ಅವಧಿ ಐದು ವರ್ಷ. ಬಡ್ಡಿದರ ಶೇ 5ರಷ್ಟು. ಈ ಅವಧಿಯಲ್ಲಿ ಬಡ್ಡಿ ಪಡೆಯಬಹುದು. ಆದರೆ, ಅಸಲು ಮುಟ್ಟುವಂತಿಲ್ಲ.

ADVERTISEMENT

ಹೆಸರು ಬೇಡ, ಊರು ಬ್ರಹ್ಮಾವರ, ಉಡುಪಿ ಜಿಲ್ಲೆ

l ಪ್ರಶ್ನೆ: ನಾನು ಶಿಕ್ಷಕನಾಗಿ ನಿವೃತ್ತಿಯಾಗಿದ್ದೇನೆ. ಸ್ವಂತ ಮನೆ ಇದೆ. ಇಬ್ಬರು ಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ. ನನಗೆ ನಿವೃತ್ತಿಯಿಂದ ₹ 47,74,581 ಬಂದಿದೆ. ಅದರಲ್ಲಿ ಪತ್ನಿಯ ಹೆಸರಿನಲ್ಲಿ ಎಲ್‌ಐಸಿ ಪಿಂಚಣಿ ಯೋಜನೆಯಲ್ಲಿ ₹ 17,27,000 ತೊಡಗಿಸಿದ್ದೇನೆ. ಈಗ ನನ್ನ ಖಾತೆಯಲ್ಲಿ ₹ 30,47,581 ಇದೆ. ಉತ್ತಮ ಉಳಿತಾಯ ಯೋಜನೆ–ತೆರಿಗೆ ವಿನಾಯಿತಿ ವಿಚಾರದಲ್ಲಿ ತಿಳಿಸಿ.

ಉತ್ತರ: ತೆರಿಗೆ ಉಳಿಸಲು ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಮೊತ್ತವನ್ನು 5 ವರ್ಷಗಳ ಬ್ಯಾಂಕ್‌ ಠೇವಣಿ ಮಾಡಬಹುದು. ಇದೇ ವೇಳೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್‌ 16(I), ಠೇವಣಿಯ ಮೇಲಿನ ಬಡ್ಡಿ ಸೆಕ್ಷನ್‌ 80ಟಿಟಿಬಿ ಇವೆರಡರಿಂದ ಕ್ರಮವಾಗಿ ₹ 50 ಸಾವಿರ (ಒಟ್ಟಿನಲ್ಲಿ ₹ 1 ಲಕ್ಷ) ಒಟ್ಟು ಅದಾಯದಿಂದ ಕಳೆದು ತೆರಿಗೆ ಕೊಡಬಹುದು. ಈ ಮೂರು ಸೆಕ್ಷನ್‌ಗಳಿಂದ ಹಾಗೂ ಆದಾಯದ ಮಿತಿಯಿಂದ ನಿಮ್ಮ ವಾರ್ಷಿಕ ಆದಾಯ ₹ 7.5 ಲಕ್ಷದವರೆಗೆ ನಿಮಗೆ ತೆರಿಗೆ ಬರುವುದಿಲ್ಲ. ಆದರೆ ಐ.ಟಿ. ರಿಟರ್ನ್ಸ್‌ ಸಲ್ಲಿಸಬೇಕು. ನಿಮ್ಮಲ್ಲಿರುವ ಹಣ ನಿಮ್ಮ ಪ್ರಾಪ್ತ ವಯಸ್ಕರಾದ ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಬಹುದು. ನಿಮ್ಮ ಹೆಸರಿನಲ್ಲಿ ₹ 15 ಲಕ್ಷ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ಇರಿಸಿ. ಮಕ್ಕಳ ಹೆಸರಿನಲ್ಲಿ ಇರಿಸುವುದಾದರೆ ಅಂಚೆ ಕಚೇರಿ ತಿಂಗಳ ವರಮಾನ ಯೋಜನೆಯಲ್ಲಿ (ಎಂಐಎಸ್‌) ಇರಿಸಿ. ಈ ಯೋಜನೆಯಲ್ಲಿ ತಲಾ ಗರಿಷ್ಠ ಮಿತಿ ₹ 4.50 ಲಕ್ಷ. ಇಂದಿನ ಬಡ್ಡಿದರ ಶೇ 6.6. ನಿಮ್ಮ ನಿವೃತ್ತ ಜೀವನ ಸುಖಮಯವಾಗಿರಲಿ.

ಪಿ.ವಿ. ಹಿರೇಮಠ, ಹುಬ್ಬಳ್ಳಿ

l ಪ್ರಶ್ನೆ: ನಾನು ಹುಬ್ಬಳ್ಳಿಯಲ್ಲಿ ಖಾಲಿ ನಿವೇಶನ ಮಾರಾಟ ಮಾಡಿ ಬಂದ ಹಣದಿಂದ ಬೆಂಗಳೂರಿನಲ್ಲಿ 5–6 ವರ್ಷ ಹಳೆಯದಾದ ಅಪಾರ್ಟ್‌ಮೆಂಟ್‌ ಖರೀದಿಸಬಹುದೇ? ಹಾಗೆ ಖರೀದಿಸಿದರೆ ಬಂಡವಾಳ ವೃದ್ಧಿ ತೆರಿಗೆ ಉಳಿಯುತ್ತದೆಯೇ? ಅಥವಾ ಹಣಕಾಸು ಸಂಸ್ಥೆಗಳ ಮೂಲಕವೇ ಅಪಾರ್ಟ್‌ಮೆಂಟ್‌ಗೆ ಇ.ಎಂ.ಐ. ಸಾಲ ಪಡೆಯಬೇಕಾ? ನಿವೇಶನ ಮಾರಾಟ ಮಾಡಿದರೆ ₹ 36 ಲಕ್ಷದಿಂದ ₹ 40 ಲಕ್ಷ ಬರುವ ಸಾಧ್ಯತೆ ಇದೆ. ಹುಬ್ಬಳ್ಳಿಯಲ್ಲಿಯೇ 10–15 ವರ್ಷ ಹಳೆಯ ಮನೆ ಖರೀದಿಸಬಹುದೇ ಅಥವಾ ಹೊಸ ಅಪಾರ್ಟ್‌ಮೆಂಟ್‌ನ ಮನೆ ಖರೀದಿಸಬೇಕಾ ಎಂಬ ಅನುಮಾನ ಇದೆ.

ಉತ್ತರ: ನೀವು ನಿಮ್ಮ ಹುಬ್ಬಳ್ಳಿಯ ನಿವೇಶನ ಮಾರಾಟ ಮಾಡಿ ದೇಶದ ಯಾವ ಭಾಗದಲ್ಲಿಯೂ ಬೇರೊಂದು ಅಪಾರ್ಟ್‌ಮೆಂಟ್‌ ಅಥವಾ ಮನೆ ಕೊಳ್ಳಬಹುದು ಅಥವಾ ನಿವೇಶನ ಕೊಂಡು ಮನೆ ಕಟ್ಟಿಸಬಹುದು (ಸೆಕ್ಷನ್‌ 54). ಹೊಸ ಮನೆ ಅಥವಾ ಅಪಾರ್ಟ್‌ಮೆಂಟ್‌ ಅನ್ನೇ ಕೊಳ್ಳಬೇಕು ಅಥವಾ ಆರ್ಥಿಕ ಸಂಸ್ಥೆಗಳ ಮೂಲಕವೇ ಕೊಳ್ಳಬೇಕು ಎನ್ನುವ ನಿರ್ಬಂಧ ಇಲ್ಲ. ಒಟ್ಟಿನಲ್ಲಿ ಹಳೆಯದಾಗಲಿ, ಹೊಸತಾಗಲಿ ಖರೀದಿಸುವುದು ವಾಸದ ಮನೆ ಆಗಿರಬೇಕು. ನಿವೇಶನ ಮಾರಾಟ ಮಾಡಿ ಬರುವ ಮೊತ್ತವನ್ನು ಈ ಕೆಳಗಿನಂತೆ ವಿನಿಯೋಗಿಸಬೇಕು. 1) ಕಟ್ಟಿದ ಮನೆ–ಅಪಾರ್ಟ್‌ಮೆಂಟ್‌ ಆದಲ್ಲಿ ಮಾರಾಟ ಮಾಡಿದ ತಾರೀಕಿನಿಂದ ಎರಡು ವರ್ಷ 2) ನಿವೇಶನ ಕೊಂಡು ಮನೆ ಕಟ್ಟಿಸುವುದಾದರೆ ಮೂರು ವರ್ಷ. ಈ ಅವಧಿಯಲ್ಲಿ ಮಾರಾಟ ಮಾಡಿ ಬಂದ ಲಾಭ ಕ್ಯಾಪಿಟಲ್‌ ಗೇನ್‌ ಕಾಯ್ದೆ 1988ರಂತೆ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಅಥವಾ ಅವಧಿ ಠೇವಣಿಯಲ್ಲಿ ಇರಿಸಬೇಕು.

ಯು.ಪಿ. ಪುರಾಣಿಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.