ADVERTISEMENT

ಮಾಹಿತಿ ಕಣಜ: ‘ಲಾಂಗ್ ಟರ್ಮ್‌’ ಹೂಡಿಕೆ ಅಂದರೆ ಏನು?

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 23:30 IST
Last Updated 10 ಸೆಪ್ಟೆಂಬರ್ 2025, 23:30 IST
   

ಮ್ಯೂಚುವಲ್‌ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಹಣ ತೊಡಗಿಸುವವರಿಗೆ ಈಗಿನ ಸಂದರ್ಭದಲ್ಲಿ ಸಿಗುವ ಸಲಹೆಯೊಂದು ಹೀಗಿರುತ್ತದೆ: ‘ದೀರ್ಘಾವಧಿಗೆ ಹೂಡಿಕೆ ಮಾಡಿ, ನಿಮಗೆ ಹೂಡಿಕೆಯ ಮೇಲೆ ಹೆಚ್ಚಿನ ಪ್ರಮಾಣದ ಲಾಭ ಸಿಗುವ ಸಾಧ್ಯತೆ ಇರುತ್ತದೆ.’

ಆದರೆ ದೀರ್ಘಾವಧಿ ಅಂದರೆ ಏನು? ಹೂಡಿಕೆ ಸಲಹೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ, ಮಾತಿನ ಸಂದರ್ಭದಲ್ಲಿ ನೀಡುವ ಹಲವರು ‘ಲಾಂಗ್‌ ಟರ್ಮ್‌ಗೆ ಹೂಡಿಕೆ ಮಾಡಿ’ ಎಂದು ಹೇಳುತ್ತಾರಾದರೂ, ‘ಲಾಂಗ್‌ ಟರ್ಮ್‌’ ಅಂದರೆ ದೀರ್ಘಾವಧಿ ಅಂದರೆ ಏನು ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ. ವಾಸ್ತವದಲ್ಲಿ ‘ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ದೀರ್ಘಾವಧಿಯ ಹೂಡಿಕೆ ಅಂದರೆ ಏನು, ಯಾವ ಅವಧಿ ದೀರ್ಘಾವಧಿ’ ಎಂಬ ಪ್ರಶ್ನೆಗೆ ಎಲ್ಲರೂ ಒಪ್ಪುವಂತಹ ಉತ್ತರ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ತೆರಿಗೆ ಲೆಕ್ಕಾಚಾರದ ದೃಷ್ಟಿಯಿಂದ ನೋಡಿದರೆ, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಹೂಡಿಕೆಯನ್ನು ದೀರ್ಘಾವಧಿ ಹೂಡಿಕೆ ಎಂದೂ, ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆಯನ್ನು ಅಲ್ಪಾವಧಿ ಹೂಡಿಕೆ ಎಂದೂ ಪರಿಗಣಿಸಲಾಗುತ್ತದೆ. ಆದರೆ ಲಾಭ ಗಳಿಕೆಯ ದೃಷ್ಟಿಕೋನದಿಂದ ಹೇಳುವುದಾದರೆ, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯೇ ದೀರ್ಘಾವಧಿ ಎನ್ನಲು ಆಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಗಳಿಂದ ಗಣನೀಯ ಲಾಭ ಸಿಗದೆ ಇರಬಹುದು.

ADVERTISEMENT

ದೀರ್ಘಾವಧಿಗೆ ಹೂಡಿಕೆ ಮಾಡಿ ಎನ್ನುವುದರ ಬದಲಿಗೆ, ಗುರಿ ಆಧಾರಿತ ಹೂಡಿಕೆ ಮಾಡಿ ಎಂಬ ಸಲಹೆ ನೀಡುವ ಪದ್ಧತಿಯೊಂದು ಚಾಲ್ತಿಯಲ್ಲಿದೆ. ವ್ಯಕ್ತಿಯು ನಿರ್ದಿಷ್ಟ ಹಣಕಾಸಿನ ಗುರಿಯನ್ನು ತಲುಪುವ ಉದ್ದೇಶದೊಂದಿಗೆ ಹೂಡಿಕೆಯನ್ನು ಆರಂಭಿಸಬೇಕು, ಆ ಗುರಿಯನ್ನು ತಲುಪಿದ ನಂತರದಲ್ಲಿ ಹೂಡಿಕೆಯನ್ನು ನಗದೀಕರಿಸಿಕೊಳ್ಳಬಹುದು ಎಂದು ಈ ನೆಲೆಯಲ್ಲಿ ಸಲಹೆ ನೀಡುವವರು ಹೇಳುತ್ತಾರೆ. ಈ ತತ್ತ್ವದೊಂದಿಗೆ ಹೂಡಿಕೆ ಮಾಡುವವರಿಗೆ ‘ದೀರ್ಘಾವಧಿ’ ಹೂಡಿಕೆ ಎಂಬ ಮಾತು ಹೆಚ್ಚು ಅರ್ಥಪೂರ್ಣ ಎಂದು ಅನ್ನಿಸುವುದಿಲ್ಲ. ಅವರು ತಮ್ಮ ಹಣಕಾಸಿನ ಗುರಿ ಈಡೇರುವವರೆಗೆ ಹೂಡಿಕೆಯನ್ನು ಮುಂದುವರಿಸುತ್ತಾರೆ.

ಉದಾಹರಣೆಗೆ, ಕಾರು ಖರೀದಿಸಲು ನಿರ್ದಿಷ್ಟ ಮೊತ್ತ ಒಗ್ಗೂಡಿಸುವ ಉದ್ದೇಶದೊಂದಿಗೆ ಹೂಡಿಕೆ ಮಾಡುವ ವ್ಯಕ್ತಿಯು, ಆ ನಿರ್ದಿಷ್ಟ ಮೊತ್ತ ಸಂಗ್ರಹ ಆಗುವವರೆಗೆ ಹೂಡಿಕೆಯನ್ನು ಮುಂದುವರಿಸುತ್ತಾನೆ. ಅಲ್ಪಾವಧಿ, ದೀರ್ಘಾವಧಿ ಎಂಬ ಪದಗಳ ಬಗ್ಗೆ ಆತ ಹೆಚ್ಚು ಗಮನ ಕೊಡುವುದಿಲ್ಲ.

‘ಪ್ರತಿ ಹೂಡಿಕೆಗೂ ಒಂದು ಉದ್ದೇಶ ಇರಬೇಕು, ಒಂದು ಗುರಿ ಇರಬೇಕು’ ಎಂದು ವೈಯಕ್ತಿಕ ಹಣಕಾಸು ತಜ್ಞರಲ್ಲಿ ಹಲವರು ಹೇಳುವುದಿದೆ. ಅವರ ಮಾತಿಗೆ ಇರುವ ಮಹತ್ವವು ಈಗ ಹೇಳಿರುವ ನಿದರ್ಶನವನ್ನು ಅವಲೋಕಿಸಿದಾಗ ಗೊತ್ತಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.