ಹೂಡಿಕೆ: ಸಾಂಕೇತಿಕ ಚಿತ್ರ
2010ರ ದಶಕದ ಆರಂಭದಲ್ಲಿ ಭಾರತದಲ್ಲಿ ಹೂಡಿಕೆ ಎನ್ನುವುದು ಸಕ್ರಿಯವಾಗಿ ನಿರ್ವಹಿಸುವ ಮ್ಯೂಚುವಲ್
ಫಂಡ್‌ಗಳು ಅಥವಾ ಸಾಂಪ್ರದಾಯಿಕವಾದ ನಿಶ್ಚಿತ ಬಡ್ಡಿ ದರದ ಉತ್ಪನ್ನಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವುದಾಗಿತ್ತು. ಸೂಚ್ಯಂಕ ಆಧರಿಸಿದ ಇಂಡೆಕ್ಸ್ ಫಂಡ್ ಅಥವಾ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಮೂಲಕ ‘ಮಾರುಕಟ್ಟೆ ಲಾಭಕ್ಕೆ ಅನುಗುಣವಾದ ಲಾಭ ಪಡೆಯಬಹುದು’ ಎಂಬ ಮಾತು ಆ ಸಂದರ್ಭಕ್ಕೆ ಬಹುತೇಕ ಹೂಡಿಕೆದಾರರಿಗೆ ಗೊತ್ತಿರದ ಸಂಗತಿ ಆಗಿತ್ತು.
2025ಕ್ಕೆ ಬಂದರೆ, ಹಿಂದೆ ಅಂಚಿನಲ್ಲಿ ಇದ್ದ ಪ್ಯಾಸಿವ್ ಹೂಡಿಕೆಗಳು ಈಗ ಕೇಂದ್ರ ಸ್ಥಾನಕ್ಕೆ ಬಂದಿವೆ. ಇಂಡೆಕ್ಸ್ ಫಂಡ್ ಹಾಗೂ ಇಟಿಎಫ್‌ಗಳಲ್ಲಿನ ಹೂಡಿಕೆಗಳು ಹಲವು ಪಟ್ಟು ಹೆಚ್ಚಳ ಕಂಡಿವೆ. ಇದು ಜಾಗತಿಕ ಮಟ್ಟದಲ್ಲಿನ ಬದಲಾವಣೆಯು ಇಲ್ಲಿಯೂ ಪರಿಣಾಮ ಉಂಟುಮಾಡಿರುವುದನ್ನು, ಕಡಿಮೆ ವೆಚ್ಚದ, ಸರಳವಾದ ಹಾಗೂ ಪಾರದರ್ಶಕವಾದ ಹೂಡಿಕೆ ಆಯ್ಕೆಯೊಂದರ ಬಗ್ಗೆ ಭಾರತದ ಹೂಡಿಕೆದಾರರು ಆಸ್ಥೆ ವಹಿಸುತ್ತಿರುವುದನ್ನು ತೋರಿಸುತ್ತಿದೆ.
ಇದು ಅಂಕಿ-ಅಂಶಗಳಿಗೆ ಮಾತ್ರ ಸಂಬಂಧಿಸಿದ ಬದಲಾವಣೆ ಅಲ್ಲ. ಇದು ದೇಶದ ಕುಟುಂಬಗಳು ಸಂಪತ್ತು ಸೃಷ್ಟಿಯಲ್ಲಿ, ಹೂಡಿಕೆಯ ಮೊತ್ತವನ್ನು ಸರಿಯಾಗಿ ನಿಯೋಜಿಸುವುದರಲ್ಲಿ ಹಾಗೂ ಹಣಕಾಸಿನ ಶಿಸ್ತಿನಲ್ಲಿ ಹೊಸ ಪರಿಕಲ್ಪನೆಗಳನ್ನು ರೂಪಿಸಿಕೊಳ್ಳುತ್ತಿರುವುದನ್ನು ಹೇಳುತ್ತಿದೆ.
ಪ್ಯಾಸಿವ್ ಫಂಡ್ ಬೆಳೆದುಬಂದ ಹಾದಿ: 2000ನೇ ಇಸವಿಯಲ್ಲಿ ದೇಶದ ಮೊದಲ ಇಂಡೆಕ್ಸ್ ಫಂಡ್ ಹಾಗೂ 2001ರಲ್ಲಿ ಮೊದಲ ಇಟಿಎಫ್ ಆರಂಭ ಆಗುವುದರೊಂದಿಗೆ ದೇಶದಲ್ಲಿ ಪ್ಯಾಸಿವ್ ಹೂಡಿಕೆಗಳು ಅಂಬೆಗಾಲು ಇರಿಸಲು ಆರಂಭಿಸಿದವು. ಹಲವು ವರ್ಷಗಳವರೆಗೆ ಇವುಗಳ ಬೆಳವಣಿಗೆಯು ಬಹಳ ನಿಧಾನವಾಗಿತ್ತು. ಜನರಲ್ಲಿ ಇವುಗಳ ಬಗ್ಗೆ ಅರಿವು ಹೆಚ್ಚಿಲ್ಲದೆ ಇದ್ದುದು, ಹೂಡಿಕೆಗೆ ಆಯ್ಕೆಗಳು ಸೀಮಿತವಾಗಿ ಇದ್ದುದು, ವಿತರಣಾ ಜಾಲವು ಸಕ್ರಿಯ ನಿರ್ವಹಣೆಯ ಫಂಡ್‌ಗಳ ಕಡೆ ಹೆಚ್ಚು ವಾಲಿಕೊಂಡು ಇದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಬದಲಾವಣೆಗೆ ವೇಗ ಸಿಕ್ಕಿತು.
ಪ್ಯಾಸಿವ್ ಹೂಡಿಕೆಗಳ ಕೇಂದ್ರದಲ್ಲಿ ಇರುವುದು ಎರಡು ಉತ್ಪನ್ನಗಳು – ಇಂಡೆಕ್ಸ್ ಫಂಡ್‌ಗಳು ಹಾಗೂ
ಇಟಿಎಫ್‌ಗಳು. ಇವೆರಡೂ ಉತ್ಪನ್ನಗಳ ಉದ್ದೇಶ ಒಂದೇ. ತಾವು ಅನುಕರಣೆ ಮಾಡುವ ಸೂಚ್ಯಂಕವು ನೀಡುವ ಲಾಭಕ್ಕೆ ಸಮನಾದ ಲಾಭವನ್ನು ಅವು ಕೂಡ ನೀಡಲು ಯತ್ನಿಸುತ್ತವೆ. ಇಟಿಎಫ್‌ಗಳನ್ನು ದಿನದ ವಹಿವಾಟಿನ ಹೊತ್ತಿನಲ್ಲಿ ಷೇರುಗಳ ರೀತಿಯಲ್ಲಿಯೇ ಖರೀದಿಸಬಹುದು, ಮಾರಾಟ ಮಾಡಬಹುದು. (ಇದಕ್ಕೆ ಡಿಮ್ಯಾಟ್ ಖಾತೆ ಹೊಂದಿರುವುದು ಅಗತ್ಯ). ಆದರೆ ಇಂಡೆಕ್ಸ್ ಫಂಡ್‌ಗಳನ್ನು ಖರೀದಿಸುವುದು, ಮಾರಾಟ ಮಾಡುವುದು ದಿನದ ಅಂತ್ಯಕ್ಕೆ ಮಾತ್ರ ಸಾಧ್ಯ. ಈ ಎರಡೂ ಹೂಡಿಕೆ ಉತ್ಪನ್ನಗಳು ಹೂಡಿಕೆದಾರರಿಗೆ ಸಕ್ರಿಯ ಫಂಡ್‌ಗಳಿಗಿಂತ ಕಡಿಮೆ ವೆಚ್ಚದಲ್ಲಿ ವೈವಿಧ್ಯಮಯವಾದ ಪೋರ್ಟ್‌ಫೋಲಿಯೊ ಹೊಂದಲು ಅವಕಾಶ ಮಾಡಿಕೊಡುತ್ತವೆ.
ದೇಶದಲ್ಲಿ ಈಗ ಪ್ಯಾಸಿವ್ ಫಂಡ್‌ಗಳು ಶುದ್ಧ ಈಕ್ವಿಟಿಯ ಆಚೆಗೂ ಚಾಚಿಕೊಂಡಿವೆ. ಇಂದು ಹೂಡಿಕೆದಾರರು
ಮಾರುಕಟ್ಟೆ ಬಂಡವಾಳ ಆಧಾರಿತ ಸೂಚ್ಯಂಕಗಳ ಮೂಲಕ, ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಸೂಚ್ಯಂಕಗಳ ಮೂಲಕ, ನಿರ್ದಿಷ್ಟ ಅಂಶ ಆಧಾರಿತ ಸೂಚ್ಯಂಕದ ಮೂಲಕ ಈಕ್ವಿಟಿ ಮಾರುಕಟ್ಟೆಯಲ್ಲಿ ಹಣ ತೊಡಗಿಸಬಹುದು. ಸರ್ಕಾರಿ ಸಾಲಪತ್ರಗಳಲ್ಲಿ ಮೇಲೆ ಹಣ ತೊಡಗಿಸುವ ಇಟಿಎಫ್‌ಗಳು ಹಾಗೂ ಇಂಡೆಕ್ಸ್ ಫಂಡ್‌ಗಳು ಕೂಡ ಇವೆ. ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಮೇಲೆ ಇಟಿಎಫ್‌ಗಳ ಮೂಲಕ ಹೂಡಿಕೆ ಮಾಡಬಹುದು.
ಹೂಡಿಕೆದಾರರು ಪ್ಯಾಸಿವ್ ಫಂಡ್‌ಗಳತ್ತ ಏಕೆ ಬರುತ್ತಿದ್ದಾರೆ?: ಹಲವು ಅನುಕೂಲಗಳ ಕಾರಣದಿಂದಾಗಿ ಹೂಡಿಕೆದಾರರು ಈಗ ಪ್ಯಾಸಿವ್ ಫಂಡ್‌ಗಳತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ಫಂಡ್‌ಗಳ ವೆಚ್ಚವು ಸಕ್ರಿಯ ಫಂಡ್‌ಗಳ ವೆಚ್ಚಕ್ಕಿಂತ ಬಹಳ ಕಡಿಮೆ. ಇವುಗಳ ಎಕ್ಸ್‌ಪೆನ್ಸ್ ರೇಷ್ಯೊ ಸಕ್ರಿಯ ಫಂಡ್‌ಗಳ ಎಕ್ಸ್‌ಪೆನ್ಸ್ ರೇಷ್ಯೊ ಜೊತೆ ಹೋಲಿಸಿದರೆ ಮೂರನೆಯ ಒಂದರಷ್ಟು ಅಥವಾ ಅದಕ್ಕಿಂತ ಕಡಿಮೆ. ಈ ಕಾರಣದಿಂದಾಗಿ ಇವು ದೀರ್ಘಾವಧಿಯಲ್ಲಿ ಬಹಳ ದಕ್ಷವಾಗಿ ಕಾಣುತ್ತವೆ. ಇದರ ಜೊತೆ ಪಾರದರ್ಶಕತೆಯು ಇವುಗಳ ಇನ್ನೊಂದು ಶಕ್ತಿ. ಪ್ಯಾಸಿವ್ ಹೂಡಿಕೆಗಳು ನಿರ್ದಿಷ್ಟ ಸೂಚ್ಯಂಕವನ್ನು ಅನುಕರಿಸುವ ಕಾರಣಕ್ಕೆ, ತಾವು ತೊಡಗಿಸಿದ ಹಣವು ಎಲ್ಲಿ ಹೂಡಿಕೆ ಆಗಿದೆ ಎಂಬುದು ಹೂಡಿಕೆದಾರರಿಗೆ ಗೊತ್ತಿರುತ್ತದೆ.
ಸೂಚ್ಯಂಕಗಳನ್ನು ನೇರವಾಗಿ ಅನುಕರಣೆ ಮಾಡುವ ಮೂಲಕ ಪ್ಯಾಸಿವ್ ಫಂಡ್‌ಗಳು ಸ್ಥಿರತೆಯನ್ನು
ಒದಗಿಸುತ್ತವೆ, ನಿಧಿ ನಿರ್ವಾಹಕರ ತೀರ್ಮಾನಗಳಿಂದಾಗಿ ಫಂಡ್‌ನ ಗಳಿಕೆಯು ಕಡಿಮೆ ಆಯಿತು ಎಂಬ ತಕರಾರು ಇಲ್ಲಿ ಇರುವುದಿಲ್ಲ.
ಈ ಫಂಡ್‌ಗಳು ಹೂಡಿಕೆಯಲ್ಲಿ ತಕ್ಷಣಕ್ಕೆ ವೈವಿಧ್ಯತೆಯನ್ನು ತಂದುಕೊಡುತ್ತವೆ. ಒಂದೇ ಒಂದು ಫಂಡ್
ಡಜನ್ನುಗಟ್ಟಲೆ ಕಂಪನಿಗಳ ಷೇರುಗಳಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ನೂರಾರು ಕಂಪನಿಗಳ ಷೇರುಗಳಲ್ಲಿ ಹಣ ತೊಡಗಿಸಬಹುದು. ಬಹಳ ಮುಖ್ಯವಾಗಿ ಹೇಳಬೇಕೆಂದರೆ, ಈ ಬಗೆಯ ಫಂಡ್‌ಗಳು ಸುಲಭವಾಗಿ ಲಭ್ಯ. ₹500ರಿಂದ ಎಸ್‌ಐಪಿ ಮೂಲಕ ಇವುಗಳಲ್ಲಿ ಹೂಡಿಕೆ ಮಾಡಬಹುದು. ಹೀಗಾಗಿ ಇವು ಎಲ್ಲ ಬಗೆಯ ಆದಾಯ ವರ್ಗದವರಿಗೂ ಸೂಕ್ತ.
ಫಂಡ್ ಆಯ್ಕೆಯಲ್ಲಿ ಏನು ಪರಿಗಣಿಸಬೇಕು?: ಪ್ಯಾಸಿವ್ ಫಂಡ್ ಆಯ್ಕೆ ಮಾಡುವಾಗ ಅವು ಯಾವ ಸೂಚ್ಯಂಕವನ್ನು ಅನುಕರಿಸುತ್ತವೆ, ಆ ಸೂಚ್ಯಂಕದ ಮಹತ್ವ ಏನು ಎಂಬುದನ್ನು ಪರಿಶೀಲಿಸಬೇಕಿರುವುದು ಮುಖ್ಯ. ಮುಖ್ಯವಾದ ಹಾಗೂ ದೀರ್ಘಾವಧಿಯ ಹೂಡಿಕೆಗೆ ವಿಸ್ತೃತ ಮಾರುಕಟ್ಟೆಯ ಸೂಚ್ಯಂಕಗಳು ಹೆಚ್ಚು ಸೂಕ್ತ. ಕೆಲವು ವಲಯಗಳಿಗೆ ಸೀಮಿತವಾದ ಸೂಚ್ಯಂಕಗಳ ಮೇಲಿನ ಹೂಡಿಕೆಯನ್ನು ಬದಲಿ ಹೂಡಿಕೆಯನ್ನಾಗಿ ಪರಿಗಣಿಸಬಹುದು. ಹೂಡಿಕೆಯ ಗುರಿ ಹಾಗೂ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ಯಾವ ಸೂಚ್ಯಂಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಸೂಕ್ತವಾದ ಸೂಚ್ಯಂಕವನ್ನು ಆಯ್ಕೆ ಮಾಡಿಕೊಂಡ ನಂತರದಲ್ಲಿ ಮುಂದಿನ ಹೆಜ್ಜೆ ಎರಡು ಮುಖ್ಯ ಅಂಶಗಳನ್ನು ಪರಿಗಣಿಸುವುದು. ವೆಚ್ಚ (ಎಕ್ಸ್‌ಪೆನ್ಸ್ ರೇಷ್ಯೊ) ಹಾಗೂ ಫಂಡ್‌ನ ಲಾಭ ಗಳಿಕೆಯ ದಾಖಲೆಯನ್ನು ಪರಿಶೀಲಿಸಬೇಕು. ಎಕ್ಸ್‌ಪೆನ್ಸ್ ರೇಷ್ಯೊ ಕಡಿಮೆ ಇರುವ ಹಾಗೂ ಸೂಚ್ಯಂಕ ನೀಡುವ ಗಳಿಕೆಗೆ ಅತ್ಯಂತ ಸನಿಹದಗಳಿಕೆಯನ್ನು ನೀಡುವ ಫಂಡ್‌ಗಳು ದೀರ್ಘಾವಧಿಯಲ್ಲಿ ಹೆಚ್ಚು ದಕ್ಷ ಎಂದು ಪರಿಗಣಿತವಾಗುತ್ತವೆ. ಇವುಗಳಷ್ಟೇ ಮುಖ್ಯವಾಗುವುದು ಫಂಡ್‌ಅನ್ನು ನಿರ್ವಹಿಸುತ್ತಿರುವ ಕಂಪನಿಯ ವಿಶ್ವಾಸಾರ್ಹತೆ.
ಸದೃಢವಾದ ಹಾಗೂ ಉತ್ತಮವಾದ ಆಡಳಿತದ ಗುಣಮಟ್ಟ ಇರುವ ಆಸ್ತಿ ನಿರ್ವಹಣಾ ಕಂಪನಿಗಳು (ಎಎಂಸಿ)ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿರುತ್ತವೆ.
ಮುಂದಿನ ಹಾದಿ: ದೇಶದ ಮ್ಯೂಚುವಲ್ ಫಂಡ್ ಉದ್ದಿಮೆಯ ಹರವು ಬಹಳ ವೇಗವಾಗಿ ವಿಕಾಸ ಹೊಂದುತ್ತಿದೆ. ಮುಂದಿನ ಒಂದು ದಶಕದಲ್ಲಿ ಪ್ಯಾಸಿವ್ ಫಂಡ್‌ಗಳು ಉದ್ಯಮದಲ್ಲಿನ ಒಟ್ಟು ಹೂಡಿಕೆಗಳ ಶೇ 25-30ರಷ್ಟು ಪಾಲನ್ನು ಹೊಂದಬಹುದು. ಜಾಗತಿಕ ಮಟ್ಟದಲ್ಲಿ ಕೂಡ ಪ್ಯಾಸಿವ್ ಫಂಡ್‌ಗಳ ಪಾಲು ಸರಿಸುಮಾರು ಹೀಗೆಯೇ ಇದೆ. ಇಲ್ಲಿ ಹೊಸತನಗಳು ಈಗಾಗಲೇ ಕಾಣುತ್ತಿವೆ. ಹೈಬ್ರಿಡ್, ಮಲ್ಟಿ-ಅಸೆಟ್ ಪ್ಯಾಸಿವ್ ಹೂಡಿಕೆ ಉತ್ಪನ್ನಗಳು ಆರಂಭವಾಗುವ ನಿರೀಕ್ಷೆ ಇದೆ.
ಹೂಡಿಕೆದಾರರಿಗೆ ಇಲ್ಲಿರುವ ಸಂದೇಶ ಸ್ಪಷ್ಟ. ಪ್ಯಾಸಿವ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅಂದರೆ ಲಾಭದ ಪ್ರಮಾಣವನ್ನು ಬಿಟ್ಟುಕೊಡುವುದು ಎಂದಲ್ಲ. ಬದಲಿಗೆ, ಹೆಚ್ಚಿನ ನಿಯಂತ್ರಣವನ್ನು ಹೊಂದಿರುವುದು.
ಬಹಳಷ್ಟು ಆಯ್ಕೆಗಳನ್ನು ನೀಡುವ ಪ್ಯಾಸಿವ್ ಫಂಡ್‌ಗಳು ಈಗ ಬಂಡವಾಳ ಮಾರುಕಟ್ಟೆಯ ನಕಲು ಅಲ್ಲ; ಅವು ಹೂಡಿಕೆಯ ಮೊತ್ತವನ್ನು ಹಂಚಿಕೆ ಮಾಡಲು, ವೈವಿಧ್ಯತೆಯನ್ನು ಸಾಧಿಸಲು ಹಾಗೂ ಶಿಸ್ತಿನಿಂದ ಸಂಪತ್ತು ಸೃಷ್ಟಿಸಲು ಇರುವ ಮಹತ್ವದ ಆಯ್ಕೆಗಳು.
ಲೇಖಕ ಯುಟಿಐ ಆಸ್ತಿ ನಿರ್ವಹಣಾ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಲೇಖಕರವು, ಯುಟಿಐ ಆಸ್ತಿ ನಿರ್ವಹಣಾ ಕಂಪನಿಯ ಅಭಿಪ್ರಾಯ ಆಗಿರಬೇಕಾಗಿಲ್ಲ.
ಹೂಡಿಕೆ: ಸಾಂಕೇತಿಕ ಚಿತ್ರ
ಪ್ಯಾಸಿವ್ ಹೂಡಿಕೆ: ವೇಗವರ್ಧಕಗಳಾದವು ಇವು...
1. ಜಾಗತಿಕ ಬದಲಾವಣೆ: ಜಗತ್ತಿನಾದ್ಯಂತ ಪ್ಯಾಸಿವ್ ಫಂಡ್‌ಗಳು ಪ್ರವರ್ಧಮಾನಕ್ಕೆ ಬಂದವು. 2024ರಲ್ಲಿ ಅಮೆರಿಕದ ಪ್ಯಾಸಿವ್ ಮ್ಯೂಚುವಲ್ ಫಂಡ್ ಹಾಗೂ ಇಟಿಎಫ್‌ಗಳಲ್ಲಿನ ಒಟ್ಟು ಮೊತ್ತವು ಸಕ್ರಿಯ ಹೂಡಿಕೆ ಉತ್ಪನ್ನಗಳಲ್ಲಿನ ಮೊತ್ತಕ್ಕಿಂತ ಹೆಚ್ಚಳ ಕಂಡಿತು. ಈ ರೀತಿ ಆಗಿದ್ದು ಇದೇ ಮೊದಲು.
2. ಸಾಂಸ್ಥಿಕ ಸ್ವೀಕೃತಿ: ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) 2015ರಲ್ಲಿ ಇಟಿಎಫ್‌ಗಳಲ್ಲಿ ಹೂಡಿಕೆ ಆರಂಭಿಸಿದ್ದುದು ಬಹುದೊಡ್ಡ ಬೆಳವಣಿಗೆ. ಇದು ಭಾರತದಲ್ಲಿ ಪ್ಯಾಸಿವ್ ಫಂಡ್‌ಗಳ ಕುರಿತಾಗಿ ವಿಶ್ವಾಸ ಹೆಚ್ಚಿಸಿತು ಅವುಗಳಲ್ಲಿ ಹೂಡಿಕೆಯು ಹೆಚ್ಚುವಂತೆ ಮಾಡಿತು. ಇದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿತು ಹಾಗೂ ಭಾರತದಲ್ಲಿ ಪ್ಯಾಸಿವ್ ಹೂಡಿಕೆಗಳಿಗೆ ಮಾನ್ಯತೆ ತಂದುಕೊಟ್ಟಿತು. ಅವುಗಳ ಬೆಳವಣಿಗೆ ಹಾಗೂ ಅವುಗಳ ವ್ಯಾಪಕ ಸ್ವೀಕೃತಿ ಸಾಧ್ಯವಾಯಿತು.
3. ಹೂಡಿಕೆದಾರರಲ್ಲಿ ಜಾಗೃತಿ: ಕಳೆದ ಕೆಲವು ವರ್ಷಗಳಿಂದ ಹೂಡಿಕೆದಾರರಲ್ಲಿ ಜಾಗೃತಿ ಮೂಡಿದೆ. ಉದ್ಯಮವು ನಡೆಸಿದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳು ಪ್ಯಾಸಿವ್ ಹೂಡಿಕೆ ಉತ್ಪನ್ನಗಳು ನೀಡಿರುವ ಗಳಿಕೆ ಹಾಗೂ ಅವುಗಳ ಪೋರ್ಟ್‌ಫೋಲಿಯೊ ವಿವರ ಬಹಿರಂಗಪಡಿಸುವುದನ್ನು ಇನ್ನಷ್ಟು ಪಾರದರ್ಶಕವಾಗಿಸುವುದನ್ನು ನಿಯಂತ್ರಣ ಸಂಸ್ಥೆಗಳು ಕಡ್ಡಾಯಗೊಳಿಸಿರುವುದು ಮತ್ತು ಡಿಜಿಟಲ್ ರೂಪದಲ್ಲಿ ಮಾಹಿತಿ ವಿವಿಧೆಡೆ ಸಿಗುತ್ತಿರುವುದು ಜಾಗೃತಿಗೆ ಕಾರಣವಾಗಿವೆ. ಆಗಸ್ಟ್ 2025ರ ವೇಳೆಗೆ ಭಾರತದಲ್ಲಿ ಪ್ಯಾಸಿವ್ ಹೂಡಿಕೆ ಉತ್ಪನ್ನಗಳಲ್ಲಿ ತೊಡಗಿಸಲಾದ ಮೊತ್ತವು ₹12 ಲಕ್ಷ ಕೋಟಿಗಿಂತ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ಅಂದರೆ ಇದು ಮ್ಯೂಚುವಲ್ ಫಂಡ್‌ಗಳಲ್ಲಿ ಈಕ್ವಿಟಿ ಸಾಲಪತ್ರ ಸರಕುಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೂಡಿಕೆ ಆಗಿರುವ ಒಟ್ಟು ಮೊತ್ತಕ್ಕೆ ಹೋಲಿಸಿದರೆ ಶೇಕಡ 16ರಷ್ಟು ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.