ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 14 ಜೂನ್ 2022, 19:45 IST
Last Updated 14 ಜೂನ್ 2022, 19:45 IST
   

ಎನ್.ಎಸ್. ಭಟ್, ಮೊಗ್ರಾಲ್,ಪುತ್ತೂರು

ಪ್ರಶ್ನೆ: ನಾನು ಪ್ರತಿ ವರ್ಷ ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ಕಳೆದ ಸಾಲಿನಲ್ಲಿ (2020-21) ನನಗೆ ಮರುಪಾವತಿ ಬರಬೇಕಿತ್ತು. ಆದರೆ, ಹಳೆಯದೊಂದು ಡಿಮಾಂಡ್ ಬಾಕಿ ಇದೆ ಎಂದು ಇಮೇಲ್, ಎಸ್ಎಂಎಸ್ ಬರುತ್ತಿವೆ. ಇವು ನಿಜ ಇರಬಹುದೇ ಅಥವಾ ಮರುಪವಾತಿ ಇಲ್ಲವಾಗಿಸಲು ತಂತ್ರವೇ? ಇದು ಸರಿ ಎಂದಾದಲ್ಲಿ ನಾನು ಏನು ಮಾಡಬೇಕು?

ಉತ್ತರ: ಇತ್ತೀಚಿನ ಕೆಲವು ವರ್ಷಗಳಿಂದ ಆದಾಯ ತೆರಿಗೆ ವಿವರ ಸಲ್ಲಿಸುವಾಗ ಪ್ರತಿ ತೆರಿಗೆದಾರರ ಇಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ಐಟಿಆರ್ ನಮೂನೆಯಲ್ಲಿ ತುಂಬಬೇಕು. ಪತ್ರದ ಮೂಲಕ ನೋಟಿಸ್ ಹಾಗೂ ಪ್ರತ್ಯುತ್ತರ ವಿನಿಮಯ ಇಂದು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿಮ್ಮ ಆದಾಯ ತೆರಿಗೆ ಖಾತೆಗೆ ನಿಮ್ಮ ಪ್ಯಾನ್ ಮೂಲಕ ಲಾಗಿನ್ ಆಗಿ ತೆರಿಗೆ ಬಾಕಿ ಅಥವಾ ನೀವು ಮೇಲೆ ಉಲ್ಲೇಖಿಸಿದ ತೆರಿಗೆ ವಜಾದ ನೋಟಿಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ADVERTISEMENT

ಆದಾಯ ತೆರಿಗೆ ನಿಯಮ 245ರ ಪ್ರಕಾರ ಹಿಂದಿನ ವರ್ಷಗಳಲ್ಲಿ ಬಾಕಿ ಇರುವ ತೆರಿಗೆಗೆ ಪ್ರತಿಯಾಗಿ ಯಾವುದೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ಮರುಪಾವತಿ ಬಾಕಿ ಇದ್ದರೆ ಅದನ್ನು ಸರಿಹೊಂದಿಸಲು ತೆರಿಗೆ ಅಧಿಕಾರಿಗಳಿಗೆ ಆ ಮೊತ್ತವನ್ನು ಹಿಡಿದಿರಿಸುವ ಅಧಿಕಾರ ಇರುತ್ತದೆ. ಆದರೆ ಅದಕ್ಕೂ ಮೊದಲು ತೆರಿಗೆದಾರರಿಗೆ ಅವರು ನೋಟಿಸ್ ನೀಡಬೇಕಾಗುತ್ತದೆ. ಪೂರ್ವ ಮಾಹಿತಿ ನೀಡದೆ ಮರುಪಾವತಿಯನ್ನು ಹಳೆಯ ಬಾಕಿಗೆ ವಜಾ ಮಾಡುವುದು ಅಮಾನ್ಯ. ಹೀಗಾಗಿ ಮೊದಲು ನಿಮ್ಮ ಹಳೆಯ ತೆರಿಗೆ ಬಾಕಿಯ ಬಗೆಗಿನ ಕಾರಣಗಳನ್ನು ಹಾಗೂ ವ್ಯತ್ಯಾಸಗಳನ್ನು ಮೊದಲು ಅರಿಯುವ ಪ್ರಯತ್ನ ಮಾಡಿ. ಅಗತ್ಯವಿದ್ದರೆ ನಿಮ್ಮ ಹತ್ತಿರದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಮರುಪಾವತಿ ಬಗ್ಗೆ ಅನಾಮಧೇಯ ಮಾಹಿತಿ ಇದ್ದಾಗ, ಬ್ಯಾಂಕ್ ಖಾತೆಯ ಅನಗತ್ಯ ಮಾಹಿತಿ ಕೇಳಿದಾಗ ಜಾಗರೂಕರಾಗಿರಿ. ಸಾಮಾನ್ಯವಾಗಿ, ಯಾವುದೇ ತೊಂದರೆಗಳು ಇಲ್ಲದಿದ್ದಲ್ಲಿ, ಕಳೆದ ವರ್ಷ ನಿಮ್ಮ ಐಟಿಆರ್ ನಮೂನೆ ತುಂಬಿದಾಗ ನೀವು ನಮೂದಿಸಿದ ಬ್ಯಾಂಕ್ ಖಾತೆಗೆ ವಿವರ ಸಲ್ಲಿಸಿದ ಒಂದೆರಡು ತಿಂಗಳಲ್ಲಿ ಮರುಪಾವತಿ ಮೊತ್ತವು ನೇರವಾಗಿ ಜಮಾ ಆಗುತ್ತದೆ. ಹೀಗಾಗಿ ಪ್ರತ್ಯೇಕ ಮಾಹಿತಿಯ ಅಗತ್ಯವಿರುವುದಿಲ್ಲ. ಇದಾಗಿಯೂ ಮರುಪಾವತಿ ಆಗದಿದ್ದಲ್ಲಿ, ತಿಂಗಳಲ್ಲಿ ಒಂದೆರಡು ಬಾರಿ ನಿಮ್ಮ ಆದಾಯ ತೆರಿಗೆ ಖಾತೆ ಪರಿಶೀಲಿಸುವ ಮೂಲಕ ಡಿಮಾಂಡ್ ನೋಟಿಸ್ ಜಾರಿ ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅದಕ್ಕೆ ಸಮರ್ಪಕ ಪ್ರತ್ಯುತ್ತರ ನೀಡಿ.

****

ಪಾಂಡುರಂಗ ಭಯ್ಯಾ,ಕಲಬುರಗಿ

ಪ್ರಶ್ನೆ: ನಾನು ನಿವೃತ್ತ ಸರ್ಕಾರಿ ಅಧಿಕಾರಿ. ವಯಸ್ಸು 78 ವರ್ಷ. ನನ್ನ ವಾರ್ಷಿಕ ನಿವೃತ್ತಿ ವೇತನ ₹ 5,76,000 ಹಾಗೂ ಬ್ಯಾಂಕ್ ಬಡ್ಡಿ ಸುಮಾರು ₹ 1.40 ಲಕ್ಷ. ಬ್ಯಾಂಕಿನವರು ₹ 22,000 ಟಿಡಿಎಸ್ ಮಾಡಿರುತ್ತಾರೆ. ನಾನು ಇನ್ನೂ ಎಷ್ಟು ಆದಾಯ ತೆರಿಗೆ ಪಾವತಿಸಬೇಕಾಗಿರುತ್ತದೆ? ಪೂರ್ಣ ತೆರಿಗೆ ಉಳಿಸಬಹುದೇ?

ಉತ್ತರ: ನೀವು 60 ವರ್ಷ ವಯಸ್ಸು ಮೀರಿರುವುದರಿಂದ, ಹಿರಿಯ ನಾಗರೀಕರಾಗಿರುತ್ತೀರಿ. ಹೀಗಾಗಿ ನಿಮ್ಮ ‘ಒಟ್ಟು ಆದಾಯ’ದಲ್ಲಿ ಮೊದಲ ₹ 3 ಲಕ್ಷಕ್ಕೆ ತೆರಿಗೆ ವಿನಾಯಿತಿ ಇದೆ. ಇದಕ್ಕೂ ಮೊದಲು, ಸೆಕ್ಷನ್ 80ಸಿ ಅಡಿ ಪರಿಗಣಿಸಲ್ಪಡುವ ಯಾವುದೇ ಹೂಡಿಕೆ, ಉಳಿತಾಯವನ್ನು ಆಯಾ ಆರ್ಥಿಕ ವರ್ಷದಲ್ಲಿ ನೀವು ಮಾಡಿದ್ದರೆ ಆ ಮೊತ್ತಕ್ಕೂ ತೆರಿಗೆ ವಿನಾಯಿತಿ ಇದೆ. ನಂತರ ಉಳಿಯುವ ಮೊತ್ತವನ್ನಷ್ಟೇ ‘ಒಟ್ಟು ಆದಾಯ’ವೆಂದು ಪರಿಗಣಿಸಿ ತೆರಿಗೆ ಲೆಕ್ಕಹಾಕಲಾಗುತ್ತದೆ. ಮಾತ್ರವಲ್ಲದೆ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಟಿಟಿಬಿ ಅಡಿ ಬ್ಯಾಂಕ್‌, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿಟ್ಟ ಠೇವಣಿಗಳಿಂದ ಗಳಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ.

ನೀವು ಕೊಟ್ಟ ಮಾಹಿತಿಯಂತೆ, ಮೊದಲ ₹ 3 ಲಕ್ಷದ ತನಕ ತೆರಿಗೆ ಇರುವುದಿಲ್ಲ. ನಂತರ, ₹ 3 ಲಕ್ಷದಿಂದ ₹ 5 ಲಕ್ಷದ ತನಕ ಶೇ 5ರಷ್ಟು ತೆರಿಗೆ, ಹಾಗೂ 5 ಲಕ್ಷಕ್ಕೂ ಮಿಕ್ಕ, ₹ 10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ಇರುತ್ತದೆ. ನಿಮ್ಮ ವಿಚಾರದಲ್ಲಿ ಯಾವುದೇ ಹೂಡಿಕೆ ಇಲ್ಲದ ಕಾರಣ, ಬಡ್ಡಿಗೆ ಸಂಬಂಧಪಟ್ಟು ₹ 50 ಸಾವಿರಕ್ಕೆ ವಿನಾಯಿತಿ ಇದೆ. ಉಳಿದ ಮೊತ್ತವನ್ನು, ಅಂದರೆ ರೂಪಾಯಿ 6.66 ಲಕ್ಷವನ್ನು ‘ಒಟ್ಟು ಆದಾಯ’ವೆಂದು ಪರಿಗಣಿಸಲಾಗುತ್ತದೆ ಹಾಗೂ ಮೂಲ ತೆರಿಗೆ ಮೊತ್ತಕ್ಕೆ ಮೇಲಿನ ದರಗಳ ಅನ್ವಯ ಶೇ 4ರಷ್ಟು ಸೆಸ್ ಸೇರಿಸಿ ಸುಮಾರು ₹ 45 ಸಾವಿರ ತೆರಿಗೆ ಬರುತ್ತದೆ. ಈಗಾಗಲೇ ₹ 22,000 ತೆರಿಗೆ ಕಡಿತ ಆಗಿರುವುದರಿಂದ ಉಳಿದ ಮೊತ್ತವನ್ನಷ್ಟೇ ನೀವು ಪಾವತಿಸಬೇಕಾಗುತ್ತದೆ. ತೆರಿಗೆ ಉಳಿತಾಯ ಮಾಡಲು ಮುಂದಿನ ವರ್ಷಗಳಲ್ಲಿ ನೀವು ಅಂಚೆ ಕಚೇರಿಯಲ್ಲಿ ಅಥವಾ ತೆರಿಗೆ ವಿನಾಯಿತಿ ಸಿಗುವ 5 ವರ್ಷದ ಬ್ಯಾಂಕ್ ಠೇವಣಿಗಳಲ್ಲಿ ₹ 1.50 ಲಕ್ಷದ ತನಕ ಪ್ರತಿ ವರ್ಷ ಹೂಡಿಕೆ ಮಾಡಿ.

ಆದಾಯ ತೆರಿಗೆಯ ಸೆಕ್ಷನ್ 208ರ ಪ್ರಕಾರ, ವರ್ಷಕ್ಕೆ ಅಂದಾಜು ತೆರಿಗೆ ಹೊಣೆಗಾರಿಕೆಯು ₹ 10,000 ಅಥವಾ ಅದಕ್ಕಿಂತ ಹೆಚ್ಚು ಇರುವ ಪ್ರತಿ ವ್ಯಕ್ತಿಯೂ ಮುಂಗಡ ತೆರಿಗೆಯ ರೂಪದಲ್ಲಿ ತನ್ನ ತೆರಿಗೆಯನ್ನು ತ್ರೈಮಾಸಿಕ ಅವಧಿಗೊಮ್ಮೆ ಪಾವತಿಸಬೇಕು. ಆದರೆ, ಸೆಕ್ಷನ್ 207ರ ಪ್ರಕಾರ, ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯ ಹೊಂದಿರದ ನಿವಾಸಿ ಹಿರಿಯ ನಾಗರಿಕರಿಗೆ ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಮಾತ್ರವಲ್ಲ, ಇನ್ನೆರಡು ವರ್ಷಗಳ ನಂತರ, (ವಯಸ್ಸು 80 ಮೀರಿದ ವ್ಯಕ್ತಿಗಳಿಗೆ) ನೀವು ಅತಿ ಹಿರಿಯ ನಾಗರೀಕರಾದಾಗ, ಪ್ರಸ್ತುತ ನಿಯಮದಂತೆ ₹ 5 ಲಕ್ಷದವರೆಗೆ ತೆರಿಗೆ ಇರುವುದಿಲ್ಲ. ಉಳಿದ ಆದಾಯವನ್ನು ಮೇಲೆ ಉಲ್ಲೇಖಿಸಿದಂತೆಯೇ ತೆರಿಗೆಗೆ ಪರಿಗಣಿಸಲಾಗುತ್ತದೆ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.