ಎ.ಐ ಸಾಂದರ್ಭಿಕ ಚಿತ್ರ
ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
-ಕೇಶವ ಪ್ರಭು, ಶಿವಮೊಗ್ಗ
ಪ್ರಶ್ನೆ: ನನ್ನ ವಯಸ್ಸು 81 ವರ್ಷ. ನಾನು 1998ರಲ್ಲಿ ಶಿವಮೊಗ್ಗದಲ್ಲಿ ₹50,000ಕ್ಕೆ ಕೊಂಡ ನಿವೇಶನ ಈಗ ₹17 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ. ಆದಕ್ಕೆ ಎಷ್ಟು ಬಂಡವಾಳ ತೆರಿಗೆ ಬರಬಹುದು?
ಉತ್ತರ: ನೀವು ಖರೀದಿಸಿದ ನಿವೇಶನವನ್ನು ಈಗ ₹17 ಲಕ್ಷಕ್ಕೆ ಮಾರಾಟ ಮಾಡುವ ಹಂತದಲ್ಲಿದ್ದೀರಿ. ನಿಮ್ಮ ಮೂಲ ಹೂಡಿಕೆ ಕಳೆದು ಇದರಿಂದ ₹16.50 ಲಕ್ಷ ಲಾಭ ಸಿಗುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುವ ಅಂಶ. ಆದರೆ ತೆರಿಗೆ ನಿರ್ಣಯಕ್ಕೆ ಪ್ರಸ್ತುತ ಎರಡು ರೀತಿಯ ವಿಧಾನಗಳಿದ್ದು, ನಿಮಗೆ ಉತ್ತಮವಾದುದನ್ನು ಆಯ್ಕೆ ಮಾಡುವ ಅವಕಾಶ ಇದೆ. 2024ರ ಬಜೆಟ್ ಪ್ರಕಾರ, ನೀವು 2024ರ ಜುಲೈ 23ಕ್ಕೆ ಮೊದಲು ಆಸ್ತಿಯನ್ನು ಖರೀದಿಸಿರುವುದರಿಂದ ಹಳೆಯ ಹಾಗೂ ಹೊಸ ವಿಧಾನದಲ್ಲಿ ತೆರಿಗೆ ಲೆಕ್ಕ ಹಾಕುವ ಅವಕಾಶವಿದೆ.
ಹಳೆಯ ವಿಧಾನದಲ್ಲಿ ಹಣದುಬ್ಬರ ಸೂಚ್ಯಂಕ ಬಳಸಲಾಗುತ್ತದೆ. 2001–02ನೇ ಹಣಕಾಸು ವರ್ಷವನ್ನು ಆಧಾರ ವರ್ಷವಾಗಿ ಪರಿಗಣಿಸಲಾಗುತ್ತದೆ. ಅಂದರೆ, 2001ಕ್ಕೆ ಮೊದಲು ಖರೀದಿಸಿದ ಆಸ್ತಿಗಳಿಗೆ 2001ರ ಏಪ್ರಿಲ್ 1ರ ಮಾರುಕಟ್ಟೆ ಮೌಲ್ಯವನ್ನು ತೆಗೆದುಕೊಳ್ಳಬಹುದು. ನೀವು 1998ರಲ್ಲಿ ಖರೀದಿ ಮಾಡಿರುವುದರಿಂದ ₹50,000 ಬದಲು ಆ ದಿನ ಮುದ್ರಾಂಕ ಮೌಲ್ಯ ಎಷ್ಟು ಇದ್ದಿತ್ತೋ ಅದನ್ನು ಮೂಲ ಖರೀದಿ ಬೆಲೆ ಎಂದು ಪರಿಗಣಿಸಲು ಅವಕಾಶವಿದೆ. ಅದನ್ನು ನಂತರ 2025–26ರ ಹಣದುಬ್ಬರ ಸೂಚ್ಯಂಕದ ಮೂಲಕ ಹೆಚ್ಚಿಸಿ ಸರಿಹೊಂದಿಸಲಾಗುತ್ತದೆ. ಉದಾಹರಣೆಗೆ, 2001ರಲ್ಲಿ ಆಸ್ತಿ ಮೌಲ್ಯ ₹1 ಲಕ್ಷ ಇತ್ತು ಎಂದು ಅಂದಾಜಿಸಿದರೆ, ಅದನ್ನು ಸೂಚ್ಯಂಕದ ಪ್ರಕಾರ ಸರಿಹೊಂದಿಸಿದಾಗ (ಹಣದುಬ್ಬರ ಸೂಚ್ಯಂಕ: 376) ಸುಮಾರು ₹3.76 ಲಕ್ಷ ಆಗಬಹುದು. ಮಾರಾಟ ಬೆಲೆ ₹17 ಲಕ್ಷದಿಂದ ಸರಿಹೊಂದಿಸಿದ ಖರೀದಿ ವೆಚ್ಚವನ್ನು ಕಡಿತ ಮಾಡಿದರೆ ಬರುವ ದೀರ್ಘಾವಧಿ ಲಾಭ ಸುಮಾರು ₹13.24 ಲಕ್ಷ. ಇದರ ಮೇಲೆ ಶೇಕಡ 20ರಷ್ಟು ತೆರಿಗೆ ಬರಬಹುದು.
ಹೊಸ ವಿಧಾನದಲ್ಲಿ, ಯಾವುದೇ ಸೂಚ್ಯಂಕವನ್ನು ಪರಿಗಣಿಸುವುದಿಲ್ಲ. ₹17 ಲಕ್ಷ ಮಾರಾಟ ಬೆಲೆಯಿಂದ ₹50,000 ಮೂಲ ಬೆಲೆ ಕಡಿತ ಮಾಡಿ ಲಾಭ ₹16.5 ಲಕ್ಷ ಎಂದು ನಿರ್ಣಯ ಮಾಡಲಾಗುತ್ತದೆ. ಇದರ ಮೇಲೆ ಶೇ 12.5ರಷ್ಟು ತೆರಿಗೆ ಲೆಕ್ಕ ಹಾಕಿದರೆ ₹2.06 ಲಕ್ಷ ಪಾವತಿಸಬೇಕಾಗುತ್ತದೆ. ಹೀಗಾಗಿ ನಿಮಗಿರುವ ಈ ಎರಡು ಆಯ್ಕೆಗಳಲ್ಲಿ, ಹೊಸ ವಿಧಾನವನ್ನು ಬಳಸುವುದೇ ಹೆಚ್ಚು ಲಾಭದಾಯಕ ಆಗಬಹುದು. ಆದರೆ 2001ರಲ್ಲಿ ನಿಮ್ಮ ಜಾಗದ ಮುದ್ರಾಂಕ ಮೌಲ್ಯವನ್ನು ಅಧಿಕೃತವಾಗಿ ಅಂದಾಜಿಸಿ ಹಳೆಯ ವಿಧಾನದಲ್ಲಿ ಲೆಕ್ಕ ಹಾಕಿದಾಗ ಹೆಚ್ಚು ಲಾಭವಾಗುತ್ತದೆಯೇ ಎಂಬುದನ್ನು ಹೋಲಿಸಿ ನೋಡುವುದು ಒಳ್ಳೆಯದು. ಇದಕ್ಕೆ ನುರಿತ ತೆರಿಗೆ ಸಲಹೆಗಾರರ ಮಾರ್ಗದರ್ಶನ ಪಡೆಯಿರಿ.
****
-ಶಿವರಾಜ್ ಮರವಂಜಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ
ಪ್ರಶ್ನೆ: ನನಗೆ 29 ವರ್ಷ ವಯಸ್ಸು. ತಿಂಗಳಿಗೆ ₹40,000 ವೇತನ ಬರುತ್ತದೆ. ನನ್ನ ಭವಿಷ್ಯಕ್ಕಾಗಿ ಯಾವ ರೀತಿಯಲ್ಲಿ ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಕೊಡಿ.
ಉತ್ತರ: ನಿಮ್ಮ ಹೂಡಿಕೆಯ ಯೋಜನೆಯನ್ನು ಬದುಕಿನ ಆದ್ಯ ಹಂತದಲ್ಲೇ ರೂಪಿಸುತ್ತಿರುವುದು ಉತ್ತಮ ವಿಚಾರ. ನೀವು 29ನೇ ವಯಸ್ಸಿನಲ್ಲಿರುವುದರಿಂದ ನಿವೃತ್ತಿಯ ತನಕ ನಿಮಗೆ ಸುದೀರ್ಘ ಮೂರು ದಶಕಗಳ ಕಾಲ ಹೂಡಿಕೆ ಮಾಡಲು ಅವಕಾಶ ಇದೆ. ಇದು ಸಂಪತ್ತು ಸೃಷ್ಟಿಸುವ ವಿಚಾರದಲ್ಲಿ ಮಹತ್ವದ ಹಂತ. ತಿಂಗಳಿಗೆ ಸುಮಾರು ₹40,000 ಸಂಬಳ ಬಂದಾಗ, ಆ ಹಣದಲ್ಲಿ ನಿಮ್ಮ ಖರ್ಚು–ವೆಚ್ಚ ಕಳೆದು ಉಳಿಯುವ ಮೊತ್ತವನ್ನು ನಿಮ್ಮ ಹೂಡಿಕೆಗೆ ಬಳಸಿಕೊಳ್ಳಿ.
ಮೊದಲ ಹೆಜ್ಜೆಯಾಗಿ ತುರ್ತು ಅಗತ್ಯಕ್ಕೆ ಒಂದಿಷ್ಟು ಹಣ ಸಂಗ್ರಹಿಸಿ. ಅನಿರೀಕ್ಷಿತ ಸಂದರ್ಭಗಳಾದ ಯಾವುದೇ ಆರೋಗ್ಯ ಸಮಸ್ಯೆ, ಉದ್ಯೋಗದ ಅಸ್ಥಿರತೆ, ಕುಟುಂಬದ ಅವಶ್ಯಕತೆಗಳು — ಇವುಗಳನ್ನು ಎದುರಿಸಲು ಕನಿಷ್ಠ ಆರು ತಿಂಗಳ ವೆಚ್ಚಕ್ಕೆ ಸಮನಾದಷ್ಟು ಮೊತ್ತವನ್ನು ಸುಲಭವಾಗಿ ಹಿಂಪಡೆಯಬಹುದಾದ ಖಾತೆಯಲ್ಲಿ ಇಟ್ಟುಕೊಳ್ಳಿ. ಅನಿರೀಕ್ಷಿತ ಸಂಕಷ್ಟಗಳು ದೊಡ್ಡ ಹೊರೆ ಆಗುವುದನ್ನು ಇಂತಹ ಆರ್ಥಿಕ ಶಿಸ್ತಿನಿಂದ ತಡೆಯಬಹುದು. ಇದಾದ ಬಳಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗಳನ್ನು ಪರಿಗಣಿಸಿ. ಇಂದು ಆರೋಗ್ಯ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮೆ ಇಲ್ಲದಿರುವುದು ಅಪಾಯಕರ. ಇದಲ್ಲದೆ ಅವಧಿ ವಿಮೆ ಆದ್ಯ ಹಂತದಲ್ಲಿ ಪಡೆಯುವುದರಿಂದ, ಪ್ರೀಮಿಯಂ ಮೊತ್ತವನ್ನು ತಗ್ಗಿಸುತ್ತದೆ. ಕೆಲವು ಸಾಂಪ್ರದಾಯಿಕ ವಿಮೆಗಳನ್ನು ಹೊಂದುವುದು ಕೂಡ ಅಗತ್ಯ. ಇವು ಲಾಭದ ದೃಷ್ಟಿಯಿಂದ ಮಾಡುವ ಹೂಡಿಕೆಗಳಲ್ಲ. ಬದಲಾಗಿ ಕುಟುಂಬದ ಮಂದಿಗೆ ಅನಿವಾರ್ಯ.
ಹೂಡಿಕೆಗಳನ್ನು ದೀರ್ಘಾವಧಿಗೆ ಯೋಚಿಸಿ ಮಾಡುವುದೇ ಒಳಿತು. ಪಿಪಿಎಫ್ ಮತ್ತು ಎನ್‌ಪಿಎಸ್ ನಿವೃತ್ತಿಯ ನಂತರ ಆರ್ಥಿಕ ಭದ್ರತೆ ಒದಗಿಸುತ್ತವೆ. ಜೊತೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರತಿ ತಿಂಗಳ ಹೂಡಿಕೆ ಈಕ್ವಿಟಿ ಮಾರುಕಟ್ಟೆಯ ಲಾಭವನ್ನು ಪಡೆದುಕೊಳ್ಳಲು ಸಹಕಾರಿ. ಚಿನ್ನದಲ್ಲಿ ಹೂಡಿಕೆ ಹಣದ ಮೌಲ್ಯ ಸಂರಕ್ಷಣೆಗೆ ಸೂಕ್ತ ಆಯ್ಕೆ. ಒಳ್ಳೆಯ ಷೇರುಗಳಲ್ಲೂ ಹಂತ ಹಂತವಾಗಿ ಹೂಡಿಕೆ ಮಾಡಬಹುದು.
ಅತ್ಯಂತ ಮುಖ್ಯವಾಗಿ, ಖರ್ಚಿನ ಮೇಲೆ ನಿಯಂತ್ರಣ ಹಾಗೂ ಹೂಡಿಕೆಗಿರುವ ಶಕ್ತಿಯನ್ನು ಅರಿತು ಆದಾಯವನ್ನು ಸಮತೋಲನದಿಂದ ಹಂಚಿಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಆದಾಯದ ಶೇ 50ರಷ್ಟು ಮೊತ್ತದವರೆಗೆ ಹೂಡಿಕೆ ಮಾಡುವ ಅವಕಾಶ ಇದೆಯೇ ಎಂಬುದನ್ನು ನೋಡಿ. ಆದ್ಯ ಹಂತದಲ್ಲಿ ಇದು ಸಾಧ್ಯ. ನಂತರ ಆದಾಯ ವೃದ್ದಿಸಿದಂತೆ ಈ ಮೊತ್ತ ಹೆಚ್ಚಿಸಿಕೊಳ್ಳಿ. ಎಲ್ಲದಕ್ಕಿಂತ ಮುಖ್ಯವಾಗಿ ದೀರ್ಘಾವಧಿಗೆ ಹೂಡಿಕೆ ಮಾಡುತ್ತ ಇರಬೇಕಾದುದು ಮುಖ್ಯ. ಇದಕ್ಕಾಗಿ, ಆಯಾ ವಿಭಾಗದ ಹೂಡಿಕೆಗಳಿಗಿರುವ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳನ್ನು ಮನನ ಮಾಡುವುದು ಯಾವುದೇ ಹೂಡಿಕೆದಾರನ ಆದ್ಯ ಕರ್ತವ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.