ADVERTISEMENT

ಪ್ರಶ್ನೋತ್ತರ | ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಹರೀಶ ನಾಯ್ಕ

ಅನೇಕ ಮ್ಯೂಚುವಲ್ ಫಂಡ್ ಕಂಪನಿಗಳು ಇಂದು ಹೊಸ ಹೊಸ ಫಂಡ್‌ಗಳನ್ನು (ಎನ್‌ಎಫ್‌ಒ)  ಬಿಡುಗಡೆ ಮಾಡುತ್ತಿರುತ್ತವೆ. ಇವುಗಳು ಹೂಡಿಕೆಗೆ ಸುರಕ್ಷಿತವೇ. ನಾವು ಎಲ್ಲಾ ಫಂಡ್‌ಗಳ ದಿನ ನಿತ್ಯದ ನೆಟ್‌ ಅಸೆಟ್ ವ್ಯಾಲ್ಯು (ಎನ್‌ಎವಿ) ಯನ್ನು ಒಟ್ಟಾಗಿ ನೋಡಲು ಯಾವ ವೆಬ್ ಸೈಟ್ ನೋಡಬೇಕು. ಇದರಿಂದ ಒಂದೇ ರೀತಿಯ ಫಂಡ್‌ಗಳ ತುಲನೆ ಸುಲಭವೆಂದು ನಾನು ಭಾವಿಸುತ್ತಿದ್ದೇನೆ.

ADVERTISEMENT

ನಿಮಗೆ ಎಲ್ಲಾ ಮ್ಯೂಚುವಲ್ ಫಂಡ್‌ಗಳ ಬಗೆಗಿನ ಸಮಗ್ರ ಮಾಹಿತಿಯನ್ನು ‘ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ’ ಇದರ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಇದೊಂದು ಅಧಿಕೃತ ಜಾಲತಾಣವಾಗಿದ್ದು ಹೂಡಿಕೆದಾರರಿಗೆ ನಿಖರ ಮಾಹಿತಿ ಇಲ್ಲಿ ಲಭ್ಯವಿರುತ್ತದೆ. ಇದಲ್ಲದೆ, ಆಯಾ ಮ್ಯೂಚುವಲ್ ಫಂಡ್ ಕಂಪನಿಗಳ ವೆಬ್‌ಸೈಟ್‌ನಲ್ಲೂ ಅದೇ ಮಾಹಿತಿಯನ್ನು ನೀಡಲಾಗುತ್ತದೆ.

ಯಾವುದೇ ಹೊಸ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ನಿಮ್ಮ ಹೂಡಿಕೆಯ ಉದ್ದೇಶಕ್ಕೆ ಸರಿ ಹೊಂದುತ್ತದೆಯೇ ಹಾಗೂ ಅವುಗಳ ಆರ್ಥಿಕ ಅಪಾಯ ಮುನ್ಸೂಚಿಸುವ ‘ರಿಸ್ಕೊಮೀಟರ್’ ಮೊದಲು ತಿಳಿದುಕೊಳ್ಳಿ. ಎನ್‌ಎಫ್‌ಒಗಳು ಮಾರುಕಟ್ಟೆಗೆ ಬಂದೊಡನೆ ಷೇರುಗಳ ಐಪಿಒ ಮೌಲ್ಯದಂತೆ ಒಂದೇ ಬಾರಿಗೆ ಬೆಲೆಯಲ್ಲಿ ಜಿಗಿತ ಕಾಣುವುದಿಲ್ಲ. ಒಂದಷ್ಟು ಖರ್ಚು ವೆಚ್ಚ ಅದಕ್ಕೆ ಇದ್ದೇ ಇರುತ್ತದೆ. ಅವೆಲ್ಲಾ ಎನ್‌ಎವಿಯಲ್ಲಿ ಸರಿದೂಗಿ ನಿಧಾನವಾಗಿ ಹೂಡಿಕೆಯ ವಿಧಾನ ಪರಿಗಣಿಸಿ ತನ್ನ ಗತಿ ಆರಂಭಿಸುತ್ತದೆ. ಹೀಗಾಗಿ ನೀವು ಆರಂಭದಲ್ಲೇ ಖರೀದಿಸುವ ನಿರ್ಧಾರವನ್ನು ಕೈಬಿಟ್ಟರೂ ಅಂಥದ್ದೇನೂ ದೊಡ್ಡ ಮಟ್ಟದ ನಷ್ಟ ಇಲ್ಲ. ಫಂಡ್ ಹೂಡಿಕೆದಾರರ ಖರೀದಿಗೆ ಅನುವಾದ ನಂತರವೂ ಖರೀದಿಸುವ ಅವಕಾಶವಿರುತ್ತದೆ. ಕೆಲವೊಮ್ಮೆ ಮೂಲ ಬೆಲೆಗಿಂತ ಕಡಿಮೆಗೂ ಸಿಗಬಹುದು ಹಾಗೂ ಮುಂದಿನ ದಿನಗಳಲ್ಲಿ ಬೆಲೆ ನಿಧಾನವಾಗಿ ವೃದ್ಧಿಯಾಗಬಹುದು. ಹೀಗಾಗಿ ಕೇವಲ ಆರಂಭಿಕ ಬೆಲೆ ಕಡಿಮೆ (ಸಾಮಾನ್ಯವಾಗಿ ಮುಖಬೆಲೆ ₹10) ಎನ್ನುವ ಏಕೈಕ ಕಾರಣಕ್ಕೆ ಎನ್‌ಎಫ್‌ಒ ಖರೀದಿಸುವುದು  ಅಷ್ಟೇನೂ ಸಮಂಜಸವಲ್ಲ. ಎಲ್ಲ ಫಂಡ್‌ಗಳಿಗೂ ಆರಂಭದ ಕೆಲವೂ ತಿಂಗಳು ಹೆಚ್ಚಿನ ಸವಾಲುಗಳಿರುತ್ತವೆ. ಅದರಲ್ಲೂ ಇತ್ತೀಚೆಗಷ್ಟೇ ಈ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಕಂಪನಿಗಳಾಗಿದ್ದರೆ ತುಸು ಸಮಯ ವ್ಯವಹಾರ ಮಾಡದಿರುದುದು ಒಳಿತು.    

ಸದಾನಂದ ಗಂಜಿ, ಕಲಬುರ್ಗಿ

ನಾನು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ, ವಯಸ್ಸು 82. ಪ್ರತಿ ತಿಂಗಳೂ ಪಿಂಚಣಿ ಬರುತ್ತಿದೆ. ಇದರಲ್ಲಿ ಮೂಲ ವೇತನ, ತುಟ್ಟಿ ಭತ್ಯೆ, ಇತರೆ ಎಲ್ಲಾ ಸೇರಿ ₹ 64,333 ಸಿಗುತ್ತಿದೆ. ಬೇರೆ ಯಾವುದೇ ಆದಾಯವಿಲ್ಲ, ಸ್ವಂತ ಮನೆಯಿದೆ, ಬಾಡಿಗೆ ಆದಾಯವಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿಲ್ಲ. ನನ್ನ ಪ್ರಶ್ನೆ;
1) ಸೆಕ್ಷನ್ 194 ಪಿ ಇದರಂತೆ 75 ವರ್ಷ ಮೇಲ್ಪಟ್ಟವರು ತೆರಿಗೆ ರಿಟರ್ನ್ಸ್ ಸಲ್ಲಿಸಬೇಕೆ?
2) ₹ 7 ಲಕ್ಷದವರೆಗೆ ಆದಾಯ ತೆರಿಗೆ  ಬರುವುದಿಲ್ಲ ಎನ್ನುವುದು ಹೊಸ ತೆರಿಗೆ ನಿಯಮ ಅಲ್ಲವೇ?
3) ₹ 50 ಸಾವಿರ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ವಯಿಸುತ್ತದಲ್ಲಾ. ಹಾಗಿದ್ದರೂ ಏಪ್ರಿಲ್ 2023 ರಿಂದ ಪ್ರತಿ ತಿಂಗಳೂ ₹ 3,068 ತೆರಿಗೆಯಾಗಿ ಕಡಿತಗೊಳಿಸುತ್ತಿದ್ದಾರೆ ಹಾಗೂ ಕಳೆದ ವರ್ಷದ ಕಡಿತದ ಮೊತ್ತ ₹ 2,439 ಇತ್ತು. ಈ ಮೊತ್ತ ಸರಿಯಿದ್ದರೆ, ತೆರಿಗೆ ಉಳಿಸಲು ಏನು ಮಾಡಬೇಕು?

ನೀವು ನೀಡಿರುವ ಮಾಹಿತಿಯಂತೆ ನಿಮ್ಮ ವಾರ್ಷಿಕ ಆದಾಯ ₹ 7.72 ಲಕ್ಷ.  ಈ ಮೊತ್ತ ನಿಮಗೆ ಅನ್ವಯಿಸುವ ಮೂಲ ತೆರಿಗೆ ವಿನಾಯಿತಿ ಆದಾಯ ಮಟ್ಟಕ್ಕಿಂತ (₹ 5 ಲಕ್ಷ) ಅಧಿಕ ಇದೆ. ಹೀಗಾಗಿ ಯಾವುದೇ ಹೂಡಿಕೆ ಇಲ್ಲದೆ ತೆರಿಗೆ ಪ್ರಮಾಣ ತಗ್ಗಿಸುವುದು ಕಷ್ಟ. ₹ 1.50 ಲಕ್ಷದ ತನಕ ನೀವು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರಿಗೆ ಸಂಬಂಧಿತ ಹೂಡಿಕೆಗೆ ಅವಕಾಶವಿದೆ. ಆದರೆ ಇದಕ್ಕಾಗಿ ನೀವು ಹೆಚ್ಚು ತೆರಿಗೆ ದರ ಅನ್ವಯವಾಗುವ ಹಳೆಯ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  

ಆದರೆ ಯಾವುದೇ ಹೂಡಿಕೆಯ ಅಗತ್ಯವಿರದ ಹೊಸ ತೆರಿಗೆ ಪದ್ಧತಿ ಅನುಸರಿಸಿದರೂ ₹ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ ನೀಡಿದ ಮೇಲೂ ನಿಮ್ಮ ತೆರಿಗೆಗೊಳಪಡುವ ಆದಾಯ ₹ 7 ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ ಇಲ್ಲೂ ತೆರಿಗೆ ಶೂನ್ಯವಾಗುವುದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ₹ 7 ಲಕ್ಷವು ಹೊಸ ತೆರಿಗೆ ಪದ್ಧತಿ  ಆಯ್ದುಕೊಂಡವರಿಗಿರುವ ಮೂಲ ವಿನಾಯಿತಿ ಮಿತಿಯಲ್ಲ. ಅರ್ಥಾತ್ ₹ 7 ಲಕ್ಷ ಕ್ಕಿಂತ ಕಡಿಮೆ ಆದಾಯ ಇದ್ದಾಗ ಮಾತ್ರ ಈ ವಿಶೇಷ ವಿನಾಯಿತಿ ಸೆಕ್ಷನ್ 87 ಎ ಅಡಯಲ್ಲಿ ತೆರಿಗೆ ಶೂನ್ಯವಾಗಿರುತ್ತದೆ.  

ಇನ್ನು ಸೆಕ್ಷನ್ 194 ಪಿ ಅನ್ವಯವಾಗುವ ಸನ್ನಿವೇಶಗಳನ್ನು ಈ ಹಿಂದಿನ ಕೆಲವು ಸಂಚಿಕೆಗಳಲ್ಲೂ ವಿವರಿಸಲಾಗಿದೆ. ಇದರಂತೆ ನಿಮ್ಮ ಪಿಂಚಣಿ ಆದಾಯದ ಮೇಲೆ ಬ್ಯಾಂಕಿನವರು ತೆರಿಗೆ ಕಡಿತಗೊಳಿಸುತ್ತಿದ್ದಾರೆ. ಹಿಂದಿನ ವರ್ಷಕ್ಕಿಂತ ಹೆಚ್ಚುವರಿ ಮೊತ್ತವನ್ನು ಕಡಿತಗೊಳಿಸಿರುತ್ತಾರೆ ಎಂದು ತಿಳಿಸಿದ್ದೀರಿ. ಕೇವಲ ಪಿಂಚಣಿ ಹಾಗೂ ಬಡ್ಡಿ ಆದಾಯವಿದ್ದು ಒಂದೇ ಬ್ಯಾಂಕ್‌ನಿಂದ ಇವೆರಡೂ ಆದಾಯ ಮೂಲಗಳಿದ್ದಾಗ ಹಾಗೂ ಅಗತ್ಯವಿರುವ ತೆರಿಗೆಯನ್ನು ಬ್ಯಾಂಕಿನವರು ಸೆಕ್ಷನ್ 194 ಪಿ ಇದರಡಿ ಸಮರ್ಪಕವಾಗಿ ಕಡಿತಗೊಳಿಸಿದ್ದರೆ ನೀವು ರಿಟರ್ನ್ಸ್ ಸಲ್ಲಿಸುವುದು ಅನಿವಾರ್ಯವಲ್ಲ. ಈ ಬಗ್ಗೆ ನೀವು ಬ್ಯಾಂಕಿಗೆ ಅಗತ್ಯ ಘೋಷಣೆಯನ್ನೂ ನೀಡಬೇಕು. ನಿಮ್ಮ ತೆರಿಗೆ ಕಡಿತದ ಬಗ್ಗೆ ಮತ್ತಷ್ಟು ವಿವರಗಳನ್ನು ಬ್ಯಾಂಕ್ ಇಲ್ಲವೇ ಪೆನ್ಶನ್ ಲೆಕ್ಕಾಚಾರ ವಿಭಾಗದಿಂದ ಪಡೆದು ಮೇಲಿನ ಮಾಹಿತಿಯಂತೆ ತುಲನೆ ಮಾಡಿಕೊಳ್ಳಿ. ಸಮೀಪದ ತೆರಿಗೆ ಸಲಹೆಗಾರರನ್ನು ವಿವರಗಳೊಂದಿಗೆ ಮುಖತಾ ಭೇಟಿ ಮಾಡಿಯೂ ಪರಿಹಾರ ಕಂಡುಕೊಳ್ಳಬಹುದು. ತೆರಿಗೆ ವಿನಾಯಿತಿ ಪಡೆಯಲು ನಿಮಗಿರುವ ಹೂಡಿಕೆ ಸಾಧ್ಯತೆ ಅಥವಾ ತುಸು ತೆರಿಗೆ ಪಾವತಿ - ಇವೆರಡರಲ್ಲಿ ಉತ್ತಮ ಆಯ್ಕೆ ಯಾವುದು ಎಂಬುದನ್ನು ಚರ್ಚಿಸಿ ನಿರ್ಧಾರ ಕೈಗೊಳ್ಳಿ. ನಿಮ್ಮ ಹೂಡಿಕೆಯ ಮೊತ್ತ ವ್ಯತ್ಯಾಸವಾದಂತೆ ತೆರಿಗೆಯೂ ಬದಲಾಗುತ್ತದೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.ವಿಳಾಸ: ಪ್ರಶ್ನೋತ್ತರ ವಾಣಿಜ್ಯ ವಿಭಾಗ ಪ್ರಜಾವಾಣಿ ನಂ.75 ಮಹಾತ್ಮ ಗಾಂಧಿ ರಸ್ತೆ ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.