ADVERTISEMENT

ಪ್ರಶ್ನೋತ್ತರ: ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ

ಪ್ರಮೋದ ಶ್ರೀಕಾಂತ ದೈತೋಟ
Published 3 ಅಕ್ಟೋಬರ್ 2023, 23:30 IST
Last Updated 3 ಅಕ್ಟೋಬರ್ 2023, 23:30 IST
<div class="paragraphs"><p>ಶ್ರೀಕಾಂತ ದೈತೋಟ</p></div>

ಶ್ರೀಕಾಂತ ದೈತೋಟ

   

ಶಾಂತಾ , ಹುಬ್ಬಳ್ಳಿ

ಪ್ರಶ್ನೆ: ನನಗೆ 76 ವರ್ಷ ಆಗಿದ್ದು, ವಿಧವೆ. ಮಗನೊಂದಿಗೆ ವಾಸಿಸುತ್ತಿದ್ದೇನೆ. ನಾನು ಗೃಹಿಣಿಯಾಗಿ ಒಂದು ಲಕ್ಷ ರೂಪಾಯಿ ಉಳಿತಾಯ ಮಾಡಿದ್ದೇನೆ. ಬೇರೆ ಯಾವುದೇ ಆದಾಯವಿಲ್ಲ. ಡಿ–ಮ್ಯಾಟ್ ಖಾತೆಯನ್ನು ತೆರೆದಿದ್ದು, ನನ್ನ ಉಳಿತಾಯವನ್ನು ಟ್ರೇಡಿಂಗ್‌ ಖಾತೆಗೆ ವರ್ಗಾಯಿಸಿದ್ದೇನೆ. ಸ್ಟಾಕ್ ವಹಿವಾಟಿನಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಅನ್ವಯವಾಗುವ ಆದಾಯ ತೆರಿಗೆಯನ್ನು ತಿಳಿಯಲು ಬಯಸುತ್ತೇನೆ. ಒಂದು ವೇಳೆ ಯಾವುದೇ ಆದಾಯ ತೆರಿಗೆ ಅನ್ವಯವಾಗುವುದಾದರೆ, ನಾನು ಗಳಿಸುವ ಲಾಭ ಅಥವಾ ನಾನು ಮಾಡುವ ಹೂಡಿಕೆಗೆ ಇದು ಅನ್ವಯಿಸುತ್ತದೆಯೇ ಎಂದು ತಿಳಿಸಿ. ಆದಾಯ ತೆರಿಗೆಯನ್ನು ಲೆಕ್ಕ ಮಾಡಲು ಇದನ್ನು ಹೇಗೆ ಟ್ರ್ಯಾಕ್ ಮಾಡಬಹುದು.

ADVERTISEMENT

ಉತ್ತರ: ನೀವು ಹಿರಿಯ ನಾಗರಿಕರಾಗಿದ್ದು, ನಿಮ್ಮ ಇಳಿ ವಯಸ್ಸಿನಲ್ಲಿ ಷೇರು ಮಾರುಕಟ್ಟೆಯಂತಹ ಏರಿಳಿತ ಕಾಣುವ ಹಾಗೂ ಅನಿಶ್ಚಿತತೆ ಇರುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನಿರ್ಣಯಿಸಿರುವುದು ವಿಶೇಷ. ನಿಮಗೆ ಈ ಹಿಂದೆ ಹೂಡಿಕೆ ಮಾಡಿರುವ ಅನುಭವವಿದ್ದರೆ ಹಾಗೂ ಅಂತಹ ಕಂಪನಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಸುಲಭ. ಇಲ್ಲದಿದ್ದರೆ, ಆ ಬಗ್ಗೆ ಒಂದಷ್ಟು ನಿಗಾ ವಹಿಸಿ ಉತ್ತಮ ಕಂಪನಿಗಳಲ್ಲಷ್ಟೇ ಹೂಡಿಕೆ ಮಾಡಿ. ಪ್ರಸ್ತುತ ಸನ್ನಿವೇಶದಲ್ಲಿ, ಮುಂದೆ ಉತ್ತಮ ವಹಿವಾಟು ಮಾಡುವ ಹಾಗೂ ಆಡಳಿತ ಚೆನ್ನಾಗಿ ಮಾಡಬಹುದಾದ ಕಂಪನಿಗಳಲ್ಲಷ್ಟೇ ವ್ಯವಹರಿಸಿ. ನಿಮ್ಮ ಉಳಿತಾಯದ ಹಣದ ಬಗ್ಗೆ ನಿಗಾ ಇರಲಿ.

ಇನ್ನು ಆದಾಯ ತೆರಿಗೆಯ ಬಗ್ಗೆ ಹೇಳುವುದಾದರೆ, ನಿಮ್ಮ ಹೂಡಿಕೆ ಅವಧಿ ಒಂದು ವರ್ಷಕ್ಕಿಂತ ಹೆಚ್ಚಿನದಾಗಿದ್ದರೆ  (ದೀರ್ಘಾವಧಿ ಹೂಡಿಕೆ) ಹಾಗೂ  ಆ ವರ್ಗದ ಲಾಭ ಒಂದು ಲಕ್ಷದೊಳಗಿದ್ದರೆ ತೆರಿಗೆ ಇರುವುದಿಲ್ಲ. ಇದಕ್ಕೂ ಹೆಚ್ಚಿನ ಲಾಭಕ್ಕೆ ಶೇಕಡಾ 10  ತೆರಿಗೆ ಇದೆ. ಇನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯ ಹೂಡಿಕೆಗೆ (ಅಲ್ಪಾವಧಿ) ಶೇಕಡಾ 15 ರ ದರದಲ್ಲಿ ತೆರಿಗೆ ಇದೆ. ಸಾಮಾನ್ಯವಾಗಿ, ಡಿ–ಮ್ಯಾಟ್ ತೆರೆದ ಷೇರು ಬ್ರೋಕಿಂಗ್ ಕಂಪನಿಯವರು ಲಾಭ ನಷ್ಟವನ್ನು ಆನ್‌ಲೈನ್‌ ಮೂಲಕ ದಿನವಹಿ ನೋಡುವ ಅವಕಾಶ ಮಾಡಿಕೊಡುತ್ತವೆ. ಇಂದಿನ ಕಾಲದಲ್ಲಿ ಮೊಬೈಲ್ ಆ್ಯಪ್‌ಗಳು ಸಕ್ರಿಯ ಮಾಹಿತಿ ನೀಡುತ್ತವೆ. ಹೂಡಿಕೆಯಲ್ಲಾದ ನಷ್ಟವನ್ನು ಮುಂದಿನ 8 ವರ್ಷಗಳ ಅವಧಿಯಲ್ಲಿ ಬರುವ ಲಾಭದೊಡನೆ ವಜಾ ಮಾಡಿ ಉಳಿದ ಲಾಭದ ಮೇಲೆ ತೆರಿಗೆ ಕಟ್ಟುವುದಕ್ಕೆ ಅವಕಾಶವಿದೆ. ನೀವು ಹಿರಿಯ ನಾಗರಿಕರಾಗಿರುವುದರಿಂದ ಇತರ ತೆರಿಗೆಗೊಳಪಡುವ ಆದಾಯ ಯಾವುದೂ ಇಲ್ಲದೆ ಇದ್ದರೆ, ಷೇರು ಹೂಡಿಕೆಯಿಂದ ಬರುವ ಲಾಭಕ್ಕೆ ನೀವು ಆಯ್ಕೆ ಮಾಡುವ ತೆರಿಗೆ ಪದ್ದತಿಗೆ ಅನುಸರಿಸಿ ಮೂಲ ಆದಾಯ ವಿನಾಯಿತಿ ಮೊತ್ತಕ್ಕೆ ತೆರಿಗೆ ಇರುವುದಿಲ್ಲ.  

ಪ್ರವೀಣ್, ಊರು ತಿಳಿಸಿಲ್ಲ

ಪ್ರಶ್ನೆ: ನಾನು ವೃತ್ತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದು ವಯಸ್ಸು 40 ವರ್ಷ. ಇನ್ನೂ 20 ವರ್ಷಗಳ ಸರ್ವಿಸ್ ಬಾಕಿ ಇದೆ. ನನಗೆ ಇಬ್ಬರು ಹೆಣ್ಣು ಮಕ್ಕಳು. ಸದ್ಯ ಸಂಬಳ ₹40,000 ಇದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉಳಿತಾಯ ಹಾಗೂ ಹೂಡಿಕೆ ಮಾಡುವ ಬಗ್ಗೆ ತಿಳಿಸಿಕೊಡಿ. ನಾನು ಎನ್‌‌ಪಿಎಸ್ ಸ್ಕೀಮ್ ಅಡಿಯಲ್ಲಿ ಇದ್ದೇನೆ.

ಉತ್ತರ: ನೀವು ನೀಡಿದ ಮಾಹಿತಿಯಂತೆ ನಿಮಗೆ ಇನ್ನೂ ಸುದೀರ್ಘವಾದ ವೃತ್ತಿ ಬದುಕಿದೆ ಹಾಗೂ ಸಂಸಾರದ ಜವಾಬ್ದಾರಿಯೂ ಇದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಪೋಷಕರು, ಅವರ ಉನ್ನತ ಶಿಕ್ಷಣ ಮತ್ತು ಮದುವೆಯ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುವ ಉದ್ದೇಶಕ್ಕಾಗಿ ತಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಲು ಸಹಜವಾಗಿ ನೋಡುತ್ತಾರೆ. ಇದನ್ನು ಸಾಧಿಸಲು ಪೋಷಕರಿಗೆ ಸಹಾಯ ಮಾಡುವ ಅನೇಕ ಹೂಡಿಕೆ ಮಾರ್ಗಗಳಿದ್ದರೂ, ಸುಕನ್ಯಾ ಸಮೃದ್ಧಿ ಯೋಜನಾ ಖಾತೆ ಹೆಚ್ಚಿನ-ಬಡ್ಡಿ ದರ ಮತ್ತು ಅದು ನೀಡುವ ತೆರಿಗೆ ಪ್ರಯೋಜನಗಳ ಕಾರಣದಿಂದಾಗಿ ಅತ್ಯಂತ ಜನಪ್ರಿಯವಾದ ಯೋಜನೆಯಾಗಿದೆ. ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಲ್ಲಿ ಈ ಖಾತೆಯನ್ನು ತೆರೆಯಬಹುದು.

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ, ವ್ಯಕ್ತಿಗಳು ಈ ಖಾತೆಯಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ಗರಿಷ್ಠ ₹ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದಲ್ಲದೆ, ಹೂಡಿಕೆಯಿಂದ ಬರುವ ವಾರ್ಷಿಕ ಬಡ್ಡಿ ಆದಾಯವೂ ತೆರಿಗೆ-ವಿನಾಯತಿಯನ್ನು ಹೊಂದಿದೆ. ಅವಧಿ ಮುಗಿದ ನಂತರ ಬರುವ ಮೆಚ್ಯುರಿಟಿ ಮೊತ್ತಕ್ಕೂ ತೆರಿಗೆ ಪ್ರಯೋಜನಗಳನ್ನು ವಿಸ್ತರಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು ಅದು ನಿಶ್ಚಿತ ಬಡ್ಡಿ (ಪ್ರಸ್ತುತ ಶೇ 8) ಆದಾಯ ಒದಗಿಸುತ್ತದೆ . ಖಾತೆಯನ್ನು ಸಕ್ರಿಯವಾಗಿರಿಸಲು ಹೂಡಿಕೆದಾರರು ಪ್ರತಿ ವರ್ಷ ಕನಿಷ್ಠ ₹250 ಹೂಡಿಕೆಯಾಗಿ ಪಾವತಿಸಬೇಕು. ಹೆಣ್ಣು ಮಕ್ಕಳು 18 ವರ್ಷ ತುಂಬುವವರೆಗೆ ಪಾಲಕರು ಖಾತೆ ನಿರ್ವಹಿಸಬಹುದು. ತದನಂತರ ಅವರೇ ಖಾತೆ ನಿರ್ವಹಿಸಬೇಕಾಗಿರುತ್ತದೆ. ಖಾತೆಯಲ್ಲಿನ ಹಣವನ್ನು ಹತ್ತನೆಯ ತರಗತಿಯ ನಂತರ ಮುಂದಿನ ಶಿಕ್ಷಣಕ್ಕಾಗಿ ಉಪಯೋಗಿಸಬಹುದು. ಅಥವಾ ಅವರ ವಯಸ್ಸು 18 ಪೂರೈಸಿದ ನಂತರ ವಿವಾಹಕ್ಕೂ ಹಣ ಬಳಸಿಕೊಳ್ಳಬಹುದು. ತಮ್ಮ 21 ವರ್ಷದ ತನಕ ಖಾತೆ ಮುಂದುವರಿಸಬಹುದು. ನಂತರ ಸಂಪೂರ್ಣ ಹಣ ಹಿಂಪಡೆಯಬೇಕಾಗುತ್ತದೆ. ಯಾವುದೆ ಆಪತ್ಕಾಲದ ಸಂದರ್ಭಗಳಲ್ಲೂ ಖಾತೆಯಿಂದ ಭಾಗಶಃ ಮೊತ್ತ ಹಿಂಪಡೆಯಲು ಅಥವಾ ಖಾತೆ ಮುಚ್ಚಲು ಅವಕಾಶವಿದೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಇದಕ್ಕಾಗಿ ಸ್ಥಳೀಯ ಅಂಚೆ ಕಚೇರಿ ಅಥವಾ ಬ್ಯಾಂಕ್ ಸಂಪರ್ಕಿಸಿ.

ಒಂದು ವೇಳೆ ಮಕ್ಕಳ ವಯೋಮಿತಿಯ ಕಾರಣದಿಂದ ಹೂಡಿಕೆ ಸಾಧ್ಯವಿಲ್ಲದಿದ್ದರೆ, ಇತರ ಹೂಡಿಕೆಗಳಾದ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲೂ ಮಾಸಿಕ ಕಂತುಗಳ ಹೂಡಿಕೆ ಮಾಡಬಹುದು. ಮೂರು ವರ್ಷದಿಂದ ಐದು ವರ್ಷದ ಅವಧಿಯ ದೀರ್ಘಾವಧಿ ಹೂಡಿಕೆಯಿಂದ ಸಾಮಾನ್ಯ ಬಡ್ಡಿಗಿಂತ ಹೆಚ್ಚಿನ ಲಾಭ ಪಡೆಯಬಹುದು.  ಇದಕ್ಕಾಗಿ ಮುಲ್ಟಿ ಅಸ್ಸೆಟ್ ಫಂಡ್, ಹೈಬ್ರಿಡ್ ಫಂಡ್, ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್ ಇತ್ಯಾದಿಗಳನ್ನು ಆಯ್ಕೆ ಮಾಡಬಹುದು. ಇಂತಹ ಮೊತ್ತವನ್ನು ಮುಂದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಸಂದರ್ಭದಲ್ಲಿ ಹಿಂಪಡೆಯುವ ಅವಕಾಶ ಹೊಂದಿರುತ್ತದೆ. ಆದರೆ ಈ ಹೂಡಿಕೆಗೆ ತೆರಿಗೆ ವಿನಾಯಿತಿ ಇಲ್ಲ.

- ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ ವಾಣಿಜ್ಯ ವಿಭಾಗ ಪ್ರಜಾವಾಣಿ ನಂ.75 ಮಹಾತ್ಮ ಗಾಂಧಿ ರಸ್ತೆ ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.