ADVERTISEMENT

ಪ್ರಶ್ನೋತ್ತರ: ತೆರಿಗೆ ಉಳಿಸಲು ಕಂಟಕರಹಿತ ಹೂಡಿಕೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ

ಯು.ಪಿ.ಪುರಾಣಿಕ್
Published 16 ಫೆಬ್ರುವರಿ 2021, 21:54 IST
Last Updated 16 ಫೆಬ್ರುವರಿ 2021, 21:54 IST
ಪುರಾಣಿಕ್
ಪುರಾಣಿಕ್   

ಪ್ರಶ್ನೆ: ನಾನು ಬೆಂಗಳೂರಿನ ಬಾಷ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸದ್ಯ ನಮ್ಮ ಕಂಪನಿಯವರು ವಿಆರ್‌ಎಸ್‌ ಘೋಷಿಸಿದ್ದು, ಬಹಳಷ್ಟು ನೌಕರರು ವಿಆರ್‌ಎಸ್‌ ತೆಗೆದುಕೊಳ್ಳುತ್ತಿದ್ದಾರೆ. ನಾನು ಕೂಡ ಅರ್ಜಿ ಸಲ್ಲಿಸಿದ್ದೇನೆ. ನನಗೆ ₹ 60 ಲಕ್ಷ ಬರಬಹುದು. ತೆರಿಗೆ ಉಳಿಸಲು ಕಂಟಕರಹಿತ ಹೂಡಿಕೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ.
-ಶಂಕರನಾರಾಯಣ, ಜೆ.ಪಿ. ನಗರ, ಬೆಂಗಳೂರು

ಉತ್ತರ: ನಿಮ್ಮ ವಯಸ್ಸು, ಕುಟುಂಬದ ವಿವರ, ಸ್ವಂತಮನೆ ಅಥವಾ ಬಾಡಿಗೆ ಮನೆ, ಮಕ್ಕಳು, ತುರ್ತಾಗಿ ಮಾಡಬೇಕಾದ ಖರ್ಚು ಹಾಗೂ ವಿಆರ್‌ಎಸ್‌ ಪಡೆಯುವ ಉದ್ದೇಶ ತಿಳಿಸಿಲ್ಲ. ಈ ಎಲ್ಲ ಮಾಹಿತಿ ಇಲ್ಲದೆ ತಮಗೆ ಸರಿಯಾದ ಮಾರ್ಗದರ್ಶನ ಮಾಡುವುದು ಕಷ್ಟ. ನೀವು ಪಡೆಯುವ ಈ ಮೊತ್ತಕ್ಕೆ ಸರಿಯಾದ ಭದ್ರತೆ ಹಾಗೂ ಖಚಿತವಾದ ವರಮಾನ ಇರುವ ಹೂಡಿಕೆ ಅವಶ್ಯವಿದೆ. ಬರುವ ಹಣದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಹೀಗೆ ಮುರು ಹೂಡಿಕೆ ಮಾಡಬಹುದು. ಮುಖ್ಯವಾಗಿ ವಿಆರ್‌ಎಸ್‌ ಪಡೆಯುವ ಮುನ್ನ ನಿಮ್ಮ ಹೆಂಡತಿ, ಮಕ್ಕಳನ್ನು ವಿಚಾರಿಸಿಕೊಳ್ಳಿ. ಅವರ ಸಲಹೆ ಅಗತ್ಯ. ಮೇಲಿನಂತೆ ತಮಗೆ ಸಂಪೂರ್ಣ ಹೂಡಿಕೆ ವಿವರಣೆ ನೀಡಲು, ಎಲ್ಲಾ ಮಾಹಿತಿ ಕಳುಹಿಸಿರಿ ಅಥವಾ ನೇರವಾಗಿ ಸಂಪರ್ಕಿಸಿರಿ.

ಪ್ರಶ್ನೆ: ನನ್ನ ಪ್ರಶ್ನೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನ ಕುರಿತಾಗಿದೆ. ನನ್ನ ವಯಸ್ಸು 79 ವರ್ಷ. ನನ್ನ ಪಿಂಚಣಿ ಹಾಗೂ ಬಡ್ಡಿ ಆದಾಯ ವಾರ್ಷಿಕ ₹ 8.20 ಲಕ್ಷ. ನಾನು ಆದಾಯ ತೆರಿಗೆ ವಿನಾಯಿತಿ ಪಡೆಯಬಹುದೇ? ಹಾಗೂ ಐ.ಟಿ. ರಿಟರ್ನ್ಸ್‌ ಸಲ್ಲಿಸುವ ಅವಶ್ಯವಿಲ್ಲವೇ? 75 ವರ್ಷ ದಾಟಿದವರಿಗೆ ಆದಾಯ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ಸ್‌ ತುಂಬುವ ಅವಶ್ಯವಿಲ್ಲ ಎಂದು ಕೇಳಿದ್ದೇನೆ. ನನ್ನ ಹಾಗೆ ಹಲವರಿಗೆ ಈ ವಿಚಾರದಲ್ಲಿ ಗೊಂದಲವಿದೆ.
-ರಾಮೇಗೌಡ, ಮಂಡ್ಯ

ADVERTISEMENT

ಉತ್ತರ: ಇದೇ ವಿಚಾರದಲ್ಲಿ ನನಗೆ ಹಲವರು ದೂರವಾಣಿ ಕರೆ ಮಾಡುತ್ತಿದ್ದಾರೆ. 75 ವರ್ಷ ದಾಟಿದ, ಪಿಂಚಣಿ ಹಾಗೂ ಬಡ್ಡಿ ಪಡೆಯುವ ವ್ಯಕ್ತಿಗಳು ಆದಾಯ ತೆರಿಗೆಯಿಂದ ಮುಕ್ತರಾಗಿದ್ದಾರೆ ಎನ್ನುವ ಮಾತು ಸತ್ಯಕ್ಕೆ ದೂರ. ತಾ 1–2–2021ರಂದು ಮಂಡಿಸಿದ ಬಜೆಟ್‌ನಲ್ಲಿ ಯಾವ ವಯಸ್ಸಿನವರಿಗೂ ಆದಾಯ ತೆರಿಗೆಯಲ್ಲಿ ಸಂಪುರ್ಣ ವಿನಾಯಿತಿ ಕೊಟ್ಟಿಲ್ಲ. ನೀವು ಆದಾಯ ತೆರಿಗೆಗೆ ಒಳಗಾಗುತ್ತೀರಿ. 75 ವರ್ಷ ದಾಟಿದ ನಿಮ್ಮಂತಹ ಹಿರಿಯ ನಾಗರಿಕರು ಪಿಂಚಣಿ ಹಾಗೂ ಬಡ್ಡಿ ಆದಾಯ, ಇವೆರಡೇ ಆದಾಯ ಪಡೆಯುತ್ತಿದ್ದಲ್ಲಿ ಆದಾಯ ತೆರಿಗೆ ಸಲ್ಲಿಸುವ ಅವಶ್ಯಕತೆ ಇಲ್ಲವಾದರೂ ಸರ್ಕಾರ ನಿಗದಿ ಪಡಿಸಿದ ಒಂದೇ ಬ್ಯಾಂಕ್‌ನಲ್ಲಿ ತಮ್ಮ ಖಾತೆ ಹೊಂದಬೇಕು ಹಾಗೂ ಎಲ್ಲಾ ಹಣದ ವ್ಯವಹಾರ ಅಲ್ಲಿಯೇ ಮಾಡಬೇಕು.

ಹೀಗೆ ಖಾತೆ ಹೊಂದಿದ ಬ್ಯಾಂಕ್‌, ಖಾತೆದಾರರ ಆದಾಯಕ್ಕೆ ಲೆಕ್ಕ ಹಾಕಿ ಕಾನೂನಿನಂತೆ ತೆರಿಗೆ ಮುರಿದು (ಟಿಡಿಎಸ್‌) ಆದಾಯ ತೆರಿಗೆ ಇಲಾಖೆಗೆ ರವಾನಿಸಬೇಕು. ಸಾಮಾನ್ಯವಾಗಿ ಎಲ್ಲಾ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುತ್ತಾರೆ. ನಿಮ್ಮ ಗೊಂದಲ ನಿವಾರಣೆ ಆಗಿದೆ ಎಂದು ಭಾವಿಸುತ್ತೇನೆ.

ಪ್ರಶ್ನೆ: ನಾನು ಮಾಜಿ ಸೈನಿಕ. ನನಗೆ ತಿಂಗಳಿಗೆ ₹ 26,590 ಪಿಂಚಣಿ ಬರುತ್ತದೆ. ನಿವೃತ್ತಿಯ ನಂತರ ಅಂಚೆ ಕಚೇರಿಯಲ್ಲಿ ಕೆಲಸ ಸಿಕ್ಕಿದೆ. ತಿಂಗಳಿಗೆ ₹ 41,380 ಸಂಬಳ ಬರುತ್ತಿದೆ. ಮಾಜಿ ಸೈನಿಕನಾಗಿ ನಾನು ಪಡೆಯುವ ಪಿಂಚಣಿಯನ್ನು ಈಗ ಅಂಚೆ ಕಚೇರಿಯಲ್ಲಿ ಪಡೆಯುವ ಸಂಬಳಕ್ಕೆ ಸೇರಿಸದೆ ತೆರಿಗೆ ಕೊಡಬಹುದೇ ತಿಳಿಸಿ.
-ರಾಚಪ್ಪ ಉದನೂರು, ವಿಜಯಪುರ

ಉತ್ತರ: ನೀವು ಮಾಜಿ ಸೈನಿಕರಾಗಿ ಹಾಗೂ ಅಂಚೆ ಕಚೇರಿ ನೌಕರರಾಗಿ ಪಿಂಚಣಿ ಸಂಬಳದಿಂದ ಒಟ್ಟಾರೆ ತಿಂಗಳಿಗೆ
₹ 67,970 ಸಂಭಾವನೆ ಪಡೆಯುತ್ತಿದ್ದೀರಿ. ಇದರಿಂದಾಗಿ ನಿಮ್ಮ ವಾರ್ಷಿಕ ಒಟ್ಟು ಆದಾಯ ₹ 8,15,640 ಆಗಿರುತ್ತದೆ. ಈ ಸಂಪೂರ್ಣ ಆದಾಯಕ್ಕೆ ನೀವು ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ ಸೆಕ್ಷನ್‌ 16 (I) ಸ್ಟ್ಯಾಂಡರ್ಡ್‌ ಡಿಡಕ್ಷನ್‌ ನಿಂದ ₹ 50 ಸಾವಿರ, ಸೆಕ್ಷನ್‌ 80ಸಿ ಅಡಿಯಲ್ಲಿ ಹಣ ತೊಡಗಿಸಿದ್ದರೆ ಗರಿಷ್ಠ ₹ 1.50 ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಮಾಜಿ ಸೈನಿಕರು ಪಡೆಯುವ ಪಿಂಚಣಿ ತೆರಿಗೆ ಮುಕ್ತವಾಗಿಲ್ಲ. ಆದರೆ ಮಾಜಿ ಸೈನಿಕರಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ ಅಥವಾ ಪರಾಕ್ರಮದಿಂದ ಪಡೆದ ಪ್ರಶಸ್ತಿಗಳಿದ್ದಲ್ಲಿ ಸೆಕ್ಷನ್‌ 10 (18) ಆಧಾರದ ಮೇಲೆ ಅಂತಹ ವ್ಯಕ್ತಿಗಳು ಪಡೆಯುವ ಪಿಂಚಣಿಗೆ ತೆರಿಗೆ ವಿನಾಯಿತಿ ಇದೆ. ನಿಮ್ಮ ವಿಚಾರದಲ್ಲಿ ನೀವು ಪಡೆಯುವ ಪಿಂಚಣಿಗೆ ತೆರಿಗೆ ವಿನಾಯಿತಿ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.