ADVERTISEMENT

ಪ್ರಶ್ನೋತ್ತರ | ಶಿಕ್ಷಣದ ಸಾಲಕ್ಕೆ ಪಾವತಿಸುವ ಇಎಂಐಗೆ ತೆರಿಗೆ ವಿನಾಯಿತಿ ಇದೆಯೇ?

ಪ್ರಮೋದ ಶ್ರೀಕಾಂತ ದೈತೋಟ
Published 1 ನವೆಂಬರ್ 2023, 1:16 IST
Last Updated 1 ನವೆಂಬರ್ 2023, 1:16 IST
<div class="paragraphs"><p>ಸಾಂದರ್ಭಿಕಚಿತ್ರ</p></div>

ಸಾಂದರ್ಭಿಕಚಿತ್ರ

   

ರಂಗನಾಥ್, ಅರ್.ಟಿ. ನಗರ, ಬೆಂಗಳೂರು

ನಾನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನನ್ನ ಮಗಳು ಎಂಜಿನಿಯರಿಂಗ್  ಪದವಿಯ ಕೊನೆಯ ಹಂತದಲ್ಲಿದ್ದಾಳೆ. ಆಕೆಗೆ ಮುಂದೆ ಎಂ.ಟೆಕ್ ಕಲಿಯುವ ಆಸಕ್ತಿ ಇದೆ. ಇಂತಹ ಉನ್ನತ ಶಿಕ್ಷಣಕ್ಕಾಗಿ ತುಂಬಾ ಮೊತ್ತ ಬೇಕಾಗುತ್ತದೆ. ಹೀಗಾಗಿ ಅಗತ್ಯವಿರುವ ಸಾಲ ಪಡೆದು ಓದಿಸುವ ನಿರೀಕ್ಷೆಯಲ್ಲಿದ್ದೇನೆ. ನನ್ನ ಮಾಸಿಕ ಆದಾಯ ₹66,000. ನಾನು ತೆರಿಗೆದಾರನಾಗಿದ್ದೇನೆ. ನನ್ನ ಪ್ರಶ್ನೆ ಏನೆಂದರೆ, ಆದಾಯ ತೆರಿಗೆಯಡಿ ಶಿಕ್ಷಣಕ್ಕೆ ಪಡೆದ ಸಾಲಕ್ಕೆ ವಿನಾಯಿತಿ ಇದೆ ಎಂದು ತಿಳಿದಿದ್ದೇನೆ. ಸಾಲ ಪಡೆದು ಓದಿಸುವ ಕಾರಣ ಪಾವತಿಸುವ ಇಎಂಐಗೆ ತೆರಿಗೆ ವಿನಾಯಿತಿ ಸಿಗುತ್ತದೆಯೇ? ಇಂತಹ ಸಾಲವನ್ನು  ಯಾವ ರೀತಿ ಪಡೆಯಬೇಕು?

ADVERTISEMENT

ಶಿಕ್ಷಣಕ್ಕೆ ಸಂಬಂಧಿಸಿ ಪಡೆದ ಸಾಲಗಳಿಗೆ ಆದಾಯ ತೆರಿಗೆಯಡಿ ಕೆಲವು ರಿಯಾಯಿತಿಗಳಿವೆ. ಸೆಕ್ಷನ್ 80ಇ ಅಡಿ, ಯಾವುದೇ ವ್ಯಕ್ತಿ ತನ್ನ ಸ್ವಂತ ಶಿಕ್ಷಣಕ್ಕೆ ಅಥವಾ ತನ್ನ ಮಕ್ಕಳ, ಪತಿ-ಪತ್ನಿಯ ಉನ್ನತ ಶಿಕ್ಷಣಕ್ಕೆ ಪಡೆದ ಸಾಲದ ಬಡ್ಡಿ ಪಾವತಿಗೆ ಸಂಬಂಧಿಸಿ ಈ ರಿಯಾಯಿತಿ ಪಡೆದುಕೊಳ್ಳಬಹುದು. ಸಾಲವನ್ನು ಹಣಕಾಸು ಸಂಸ್ಥೆ, ಬ್ಯಾಂಕ್ ಅಥವಾ ಮಾನ್ಯತೆ ಪಡೆದ ದತ್ತಿ ಸಂಸ್ಥೆಗಳಿಂದ ಪಡೆಯಬಹುದು. ಉನ್ನತ ಶಿಕ್ಷಣ ಯಾವುದೇ ವಿಭಾಗದಲ್ಲಾಗಿರಬಹುದು. ಆದರೆ ಅದು ಕೇಂದ್ರ ಸರ್ಕಾರ, ರಾಜ್ಯ ಸರಕಾರ ಅಥವಾ ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರಬೇಕು. ಸಾಲ ಪಡೆದು 8 ವರ್ಷಗಳ ತನಕ ಪಾವತಿಸುವ ಬಡ್ಡಿಗೆ ತೆರಿಗೆ ರಿಯಾಯಿತಿ ಇದೆ. ಒಂದು ವೇಳೆ, 8 ವರ್ಷಗಳ ಅವಧಿ ಮುಗಿದ ಬಳಿಕವೂ ಸಾಲದ ಮರುಪಾವತಿ  ಮಂದುವರಿದರೆ ಆ ವರ್ಷದಿಂದ ಪಾವತಿಸುವ ಬಡ್ಡಿಗೆ ತೆರಿಗೆ ರಿಯಾಯಿತಿ ಇರುವುದಿಲ್ಲ.

ಸೆಕ್ಷನ್ 80ಇ ಅಡಿ ತೆರಿಗೆ ಕಡಿತವನ್ನು ಪಡೆಯಲು ಬಯಸುವ ವ್ಯಕ್ತಿಯು ಸಾಲವನ್ನು ತೆಗೆದುಕೊಂಡ ಹಣಕಾಸು ಸಂಸ್ಥೆ ಅಥವಾ ಯಾವುದೇ ಅನುಮೋದಿತ ದತ್ತಿ ಸಂಸ್ಥೆಯಿಂದ ಸಾಲ ಪಡೆದುದಕ್ಕೆ ದಾಖಲೆಗಳನ್ನು ಹೊಂದಿರಬೇಕು. ಪ್ರತಿ ವರ್ಷ ಆಯಾ ಹಣಕಾಸು ವರ್ಷಕ್ಕೆ ಸಂಬಂಧಿಸಿ ಪಾವತಿಸಿದ ಶಿಕ್ಷಣ ಸಾಲದ ಅಸಲು ಮೊತ್ತ ಮತ್ತು ಬಡ್ಡಿ ಮೊತ್ತವನ್ನು ಪ್ರತ್ಯೇಕವಾಗಿ ಧೃಢೀಕರಿಸಿದ ವಿವರವನ್ನೂ ಹೊಂದಿರಬೇಕು. ಇದರ ಆಧಾರದಲ್ಲಿ ಸಾಲದ ಬಡ್ಡಿ ಮೊತ್ತಕ್ಕೆ ವಿನಾಯಿತಿ ಪಡೆಯಬಹುದು. ಹೀಗಾಗಿ ಪಾವತಿಸುವ ಸಂಪೂರ್ಣ ಇಎಂಐ ಗೆ ವಿನಾಯಿತಿ ಸಿಗುವುದಿಲ್ಲ.

ನೀವು ಸಾಲದ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಯಾವುದೇ ಸ್ಥಳೀಯ ಬ್ಯಾಂಕ್‌ಗಳಲ್ಲಿ ವಿಚಾರಿಸಿಕೊಳ್ಳಬಹುದು. ಇಲ್ಲಿ ನೀವು ಗಮನಿಸಬೇಕಾದ ಬಹು ಮುಖ್ಯ ಅಂಶವೆಂದರೆ, ನೀವು ಈ ರಿಯಾಯಿತಿ ಪಡೆಯಲು ಹಳೆಯ ತೆರಿಗೆ ಪದ್ದತಿ ಅಯ್ಕೆ ಮಾಡಿಕೊಂಡರಷ್ಟೇ ಸಾಧ್ಯ.  ಹೀಗಾಗಿ ಎರಡೂ ವಿಧಾನದ ಮೂಲಕ ತೆರಿಗೆ ಲೆಕ್ಕ ಹಾಕಿ ತುಲನೆ ಮಾಡಿಕೊಳ್ಳಿ. ನಿಮಗೆ ಕೆಲವೊಮ್ಮೆ ಸೆಕ್ಷನ್ 80ಇ ಇದರಡಿ ತೆರಿಗೆ ರಿಯಾಯಿತಿ ಇಲ್ಲದೆಯೂ ಹೊಸ ಪದ್ದತಿ ಸೂಕ್ತವಾಗಲೂಬಹುದು. ಈ ಬಗ್ಗೆ ಪರಾಮರ್ಶಿಸಿ ತೆರಿಗೆ ಲೆಕ್ಕ ಹಾಕಿ.

ವಿನಯ್, ಹುಬ್ಬಳ್ಳಿ

ನನ್ನ ಸಿಬಿಲ್ ಸ್ಕೋರ್ ಚೆನ್ನಾಗಿದ್ದು (750+) ಯಾವುದೇ ವೈಯಕ್ತಿಕ ಸಾಲಗಳಿಲ್ಲ. ಆದರೆ ಎರಡು ವರ್ಷ ಹಿಂದೆ ನನ್ನ ತಂದೆ ಮನೆ ಸಾಲ ಪಡೆದಿದ್ದು ಅದಕ್ಕೆ ನಾನು ನಾಮಿನಿ ಆಗಿದ್ದೆ. ನಾನು ಈಗ ಕೃಷಿ ಭೂಮಿ ಖರೀದಿಸಬೇಕೆಂದಿದ್ದೇನೆ. ಇದಕ್ಕಾಗಿ ಬ್ಯಾಂಕ್  ಸಾಲ ಪಡೆಯಬೇಕೆಂದಿದ್ದೇನೆ. ನಾನು ಈಗಾಗಲೇ ಒಂದು ಸಾಲಕ್ಕೆ ನಾಮಿನಿ ಆಗಿರುವುದರಿಂದ ಆದನ್ನೂ ಪರಿಗಣಿಸುತ್ತಾರೆಯೇ ? ನಾನು ಕೃಷಿ ಭೂಮಿ ಖರೀದಿಸಲು ಯಾವ ಸ್ಕೀಂ ಉತ್ತಮ ಹಾಗೂ ಕಡಿಮೆ ಬಡ್ಡಿಗೆ ಯಾವ ಬ್ಯಾಂಕಿನಿಂದ ಸಾಲ ಪಡೆಯಬಹುದು. ನಾವು ಈವರೆಗೆ ಯಾವುದೇ ಕೃಷಿ ಭೂಮಿ ಹೊಂದಿಲ್ಲ. ನಾನು ಬೆಂಗಳೂರಿನ ಒಂದು ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ನನ್ನ ತಿಂಗಳ  ಸಂಬಳ ₹70 ಸಾವಿರ. ಈಗ ನಾನು ಬ್ಯಾಂಕ್ ಸಾಲ ಪಡೆದು ₹25 ಲಕ್ಷ ಬೆಲೆಯೊಳಗಿನ ಎರಡು ಎಕರೆ ಭೂಮಿಯನ್ನು   ಖರೀದಿಸಬೇಕೆಂದಿದ್ದೇನೆ.

ಸಾಮಾನ್ಯವಾಗಿ ಸಿಬಿಲ್ ಶ್ರೇಯಾಂಕವನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರ ಆರ್ಥಿಕ ಕ್ಷಮತೆಯ ಮಾನದಂಡವಾಗಿ ಪರಿಗಣಿಸಿ ತಮ್ಮ ಸಾಲ ನೀಡುವ ನೀತಿಯ ಭಾಗವಾಗಿ ಗಣನೆಗೆ ತೆಗೆದುಕೊಳ್ಳುತ್ತವೆ. ಉತ್ತಮ ಶ್ರೇಯಾಂಕ ಹೊಂದಿದ್ದರೆ ಒಂದಷ್ಟು ಬಡ್ಡಿ ದರದಲ್ಲಿ ರಿಯಾಯಿತಿ, ಹೆಚ್ಚಿನ ಸಾಲದ ಮೊತ್ತ ಪಡೆಯುವ ಸಾಧ್ಯತೆ... ಇತ್ಯಾದಿ ಇರುತ್ತದೆ. ಆದರೆ ಇದುವೇ ಏಕೈಕ ಅಂಶವಲ್ಲ. ಅಲ್ಲಿ ಗ್ರಾಹಕರ ಆದಾಯ, ಉದ್ಯೋಗ ಹಾಗೂ ಅವರು ನೀಡುವ ಸಾಲಕ್ಕೆ ಇರುವ ಭದ್ರತೆಯನ್ನು ನೋಡಿಕೊಂಡು ಸಾಲ ನೀಡುತ್ತವೆ. ಹೀಗಾಗಿ ನಿಮ್ಮ ವಿಚಾರದಲ್ಲಿ ಕೇವಲ ಸಾಲ ಪಾತ್ರಕ್ಕೆ ಜಾಮೀನು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಯಾವುದೇ ಸಾಲ ಸಿಗದಿರುವ ಪ್ರಮೇಯ ಇರಲಾರದು.

ಇನ್ನು ನೀವು ಕೃಷಿ ಭೂಮಿ ಖರೀದಿ ಮಾಡುವ ಬಗ್ಗೆ ಹೇಳುವುದಾದರೆ, ಕಳೆದ ಕೆಲವು ವರ್ಷಗಳ ಹಿಂದೆ ಕೃಷಿಯ ಹಿನ್ನೆಲೆ ಇಲ್ಲದ ವ್ಯಕ್ತಿಗಳು ಕೃಷಿ ಭೂಮಿ ಖರೀದಿಸಲು ಇದ್ದ ಅನೇಕ ನಿಬಂಧನೆಗಳನ್ನು ಸರ್ಕಾರವು ಕರ್ನಾಟಕ ಭೂಸುಧಾರಣೆ ಕಾನೂನು ತಿದ್ದುಪಡಿ ಮಾಡುವ ಮೂಲಕ ತೊಡೆದು ಹಾಕಿದೆ. ಹೀಗಾಗಿ ಪ್ರಸ್ತುತ ಅಂತಹ ನಿರ್ದಿಷ್ಟ ತಡೆಗಳು ಇದ್ದಂತಿಲ್ಲ. ಈ ವಿಚಾರದಲ್ಲಿ ಇನ್ನೂ ಮುಂದುವರಿದು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಕಾನೂನು ಸಲಹೆಯನ್ನು ಪಡೆದುಕೊಳ್ಳಿ. ಕೃಷಿ ಭೂಮಿ ಖರೀದಿಗಾಗಿ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಆದರೆ, ಸಾಲದ ಅರ್ಹತೆ ಪಡೆಯಲು ಈಗಾಗಲೇ ಕೃಷಿಕರಾಗಿ ಅನುಭವ ಹಾಗೂ ಒಂದಷ್ಟು ಕೃಷಿ ಭೂಮಿ ಹೊಂದಿರುವ ದಾಖಲೆ ಕೊಡುವಂತೆ ಕೇಳಬಹುದು. ಹೀಗಾಗಿ ನೀವು ಖುದ್ದಾಗಿ ಸಮೀಪದ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಅಧಿಕೃತ ಮಾಹಿತಿ ಪಡೆದುಕೊಳ್ಳಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.