ಪ್ರಶ್ನೆ: ನಮ್ಮದು ಗ್ರಾಮೀಣ ಪ್ರದೇಶ. ಕೃಷಿ ಹಾಗೂ ಸಣ್ಣ ಅಂಗಡಿ ವ್ಯಾಪಾರದ ಮೂಲಕ ಬದುಕು ಸಾಗಿಸುತ್ತಿದ್ದೇವೆ. ವಾರ್ಷಿಕ ಆದಾಯ ₹3ರಿಂದ ₹4 ಲಕ್ಷ. ಮನೆಯಲ್ಲಿ ನನ್ನ ಹಾಗೂ ಪತ್ನಿಯ ಹೆತ್ತವರು ಇದ್ದಾರೆ. ಅವರೆಲ್ಲಾ 60ರಿಂದ 75 ವಯಸ್ಸಿನವರು. ಅವರ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಅವರ ಆರೋಗ್ಯದ ವೆಚ್ಚಕ್ಕೆ ಯಾವುದಾದರೂ ಆಸ್ಪತ್ರೆಗೆ ದಾಖಲಿಸಬೇಕಾದ ಸ್ಥಿತಿ ಬಂದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಆಸ್ಪತ್ರೆಗೆ ಭರಿಸುವ ಸಾಮರ್ಥ್ಯ ನಮಗಿಲ್ಲ. ಇಂತಹ ಸಂದರ್ಭದಲ್ಲಿ ನಾವು ಏನು ಮಾಡಬಹುದು ಎಂಬ ಆತಂಕದಲ್ಲಿದ್ದೇವೆ. ಈ ಬಗ್ಗೆ ಮಾಹಿತಿ ನೀಡಿ.
–ಸಿದ್ದೇಶ್ವರ, ಹಾವೇರಿ
ಉತ್ತರ: ಮನೆಯಲ್ಲಿ ಹಿರಿಯರು ಇರುವಾಗ ವಯೋ ಸಹಜ ಕಾಯಿಲೆಗಳು ಅನಪೇಕ್ಷಿತವಾಗಿ ಬರುವುದು ಸಹಜ. ಹೀಗಿರುವಾಗ ಆತಂಕ ಬೇಡ. ಪ್ರಸ್ತುತ ಕೇಂದ್ರ ಸರ್ಕಾರದ ‘ಆಯುಷ್ಮಾನ್- ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ (ಎಬಿ ಪಿಎಂಜೆಎವೈ)’ ನಿಮ್ಮ ತಂದೆ, ತಾಯಿ ಅಥವಾ ಹಿರಿಯ ನಾಗರಿಕರನ್ನು ಫಲಾನುಭವಿಗಳನ್ನಾಗಿ ದಾಖಲಿಸಬಹುದು.
ಈ ಯೋಜನೆಯು 2024ರ ಸೆಪ್ಟೆಂಬರ್ 11ರಿಂದ ಜಾರಿಯಲ್ಲಿದ್ದು 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ₹5 ಲಕ್ಷ ಮೊತ್ತದ ಪ್ರತ್ಯೇಕ ವಿಮಾ ಯೋಜನೆಯ ಪ್ರಯೋಜನ ಪಡೆಯಬಹುದು. ಒಂದು ವೇಳೆ ಕುಟುಂಬದ ಸದಸ್ಯರು ಈಗಾಗಲೇ ಯೋಜನೆಯ ಇತರೆ ಷರತ್ತುಗಳಿಗೆ ಒಳಪಟ್ಟಿದ್ದರೂ, ಹಿರಿಯ ನಾಗರಿಕರಿಗೆ ಇದು ಪ್ರತ್ಯೇಕ ಹೆಚ್ಚುವರಿ ವಿಮಾ ಯೋಜನೆಯಾಗಿದೆ. ಇದನ್ನು ಇತರೆ ಸದಸ್ಯರೊಡನೆ ಹಂಚುವ ಅವಕಾಶವಿಲ್ಲ. ಅಲ್ಲದೆ, ಯಾವುದೇ ಆರ್ಥಿಕ ಸ್ಥಿತಿಗತಿಯ ಸಂಬಂಧವಿಲ್ಲದೆ ಅವರಿಗೆ ವರ್ಷಕ್ಕೆ ₹5 ಲಕ್ಷದ ಉಚಿತ ಚಿಕಿತ್ಸಾ ವೆಚ್ಚ ಭರಿಸುವ ಸೌಲಭ್ಯ ಇದೆ.
ಈ ಯೋಜನೆಯಡಿ ಸೇರ್ಪಡೆಗೆ ಅವರ ಆಧಾರ್ ಕಾರ್ಡ್ ಮಾತ್ರ ಸಾಕು. ಇ-ಕೆವೈಸಿ ಪ್ರಕ್ರಿಯೆ ಮೂಲಕ ನೋಂದಾಯಿಸಿಕೊಂಡ ನಂತರ ಆನ್‌ಲೈನ್ ಮೂಲಕವೇ ಆಯುಷ್ಮಾನ್ ಕಾರ್ಡ್ ಪಡೆಯಬಹುದು. ಈ ಕಾರ್ಡ್ ಪಡೆದುಕೊಂಡವರು ದೇಶದಾದ್ಯಂತ ನೂರಾರು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು.
ತಾವು ಕೃಷಿಕರಾಗಿ ಅಥವಾ ಚಿಕ್ಕ ವ್ಯಾಪಾರ ಮಾಡಿಕೊಂಡು ದಿನಚರಿ ಸಾಗಿಸುತ್ತಿದ್ದರೂ 70 ವರ್ಷ ದಾಟಿದ ನಾಗರಿಕರಿಗೆ ಈ ಯೋಜನೆಯಿಂದ ನಿಜವಾದ ಆರ್ಥಿಕ ಸಹಾಯ ಲಭಿಸುತ್ತದೆ.
––––
ಪ್ರಶ್ನೆ: ನಾನು ರಾಜ್ಯ ಸರ್ಕಾರಿ ನೌಕರಳಾಗಿದ್ದು, ಇನ್ನೂ ಎರಡು ವರ್ಷ ಸೇವಾವಧಿ ಇದೆ. ಸ್ವಂತ ಮನೆ ಖರೀದಿಸುವ ಉದ್ದೇಶ ಹೊಂದಿದ್ದೇನೆ. ನಾನೊಬ್ಬಳೇ ನಿಂತು ಮನೆ ಕಟ್ಟಿಸಲು ಸಾಧ್ಯವಾಗದ ಕಾರಣ ಕಟ್ಟಿರುವ ಮನೆಯನ್ನು ಸೇವಾವಧಿಯಲ್ಲಿ ಉಳಿಸಿರುವ ಆದಾಯದಿಂದ ಖರೀದಿಸಬೇಕೆಂದು ತೀರ್ಮಾನಿಸಿದ್ದೇನೆ. ದಾರಿಯಲ್ಲಿ ಕೆಲಸಕ್ಕೆ ಹೋಗುವಾಗ ಮನೆ ಮಾರಾಟಕ್ಕಿದೆ ಎಂಬ ಫಲಕಗಳನ್ನು ಗಮನಿಸಿರುತ್ತೇನೆ. ಕಷ್ಟಪಟ್ಟು ಉಳಿಸಿರುವ ಮೊತ್ತದಿಂದ ಸ್ವಂತ ಮನೆ ನನ್ನದಾಗಬೇಕೆಂಬುದು ನನ್ನ ಮಹಾದಾಸೆ. ಮಧ್ಯವರ್ತಿಗಳಿಂದಾಗಲಿ ಅಥವಾ ಯಾರಿಂದಾಗಲಿ ಹಣದ ದುರುಪಯೋಗವಾಗದೆ ಮನೆ ಖರೀದಿಸುವುದು ಹೇಗೆ? ಎಂಬ ಬಗ್ಗೆ ಮಾಹಿತಿ ನೀಡಲು ಕೋರಿಕೆ.
–ಗೌರಮ್ಮ, ಶಿವಮೊಗ್ಗ.
ಉತ್ತರ: ಮಾಹಿತಿ ನೀಡುವ ಉದ್ದೇಶದಿಂದ ಮನೆ ಮಾರಾಟ ಮಾಡುವವರು ಅಥವಾ ಬ್ರೋಕರ್ ಮಂದಿ ಈ ರೀತಿಯ ಫಲಕ ಹಾಕಿರುತ್ತಾರೆ. ನೀವು ಇಂತಹ ಮಾಹಿತಿ ನೋಡಿದಾಗ ಮನೆ ಖರೀದಿಯ ವ್ಯವಹಾರ ನಡೆಸುವ ಮೊದಲು ಆರ್ಥಿಕ ಹಾಗೂ ಕಾನೂನು ರೀತ್ಯ ದಾಖಲೆಗಳ ಬಗ್ಗೆ ತಪಾಸಣೆ ಮಾಡುವುದು ಅನಿವಾರ್ಯ. ಇದಕ್ಕೆ ಮೊದಲ ಹಂತದಲ್ಲಿ ನೀವು ಕಾನೂನು ಸಲಹೆಯನ್ನು ಪಡೆಯಬೇಕಾದೀತು. ಈ ಅಗತ್ಯ ಕ್ರಮ ನಿಮ್ಮ ಖರೀದಿ ಮೌಲ್ಯ, ಪರಿಸರದ ಹೊಂದಾಣಿಕೆ ಇತ್ಯಾದಿ ಸಾಮಾನ್ಯ ಮುಂಜಾಗ್ರತೆಯ ಹೊರತಾಗಿ ಇರುವ ವಿಚಾರವಾಗಿದೆ.
ಬಹುತೇಕ ಸಂದರ್ಭದಲ್ಲಿ ನಗದು ವ್ಯವಹಾರದಲ್ಲೇ ಖರೀದಿ ಮೊತ್ತದ ಪಾವತಿಗೆ ಬೇಡಿಕೆ ಇಡುವ ಮಾರಾಟಗಾರರು ಇರುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಅಂತಹ ವ್ಯವಹಾರವನ್ನು ತಿರಸ್ಕರಿಸಿ. ನೀವು ಪಾವತಿಗೆ ಒಪ್ಪಿರುವ ಮೌಲ್ಯ ನಿಮ್ಮ ಖರೀದಿ ಪತ್ರದಲ್ಲಿ ದಾಖಲಿಸುವುದು ಮತ್ತು ಅದರಂತೆ ಮುದ್ರಾಂಕ ಶುಲ್ಕ ಪಾವತಿಸುವುದು ಹೆಚ್ಚು ಸೂಕ್ತ.
ಖರೀದಿಗೂ ಮುನ್ನ ನೀವು ಕೊಂಡುಕೊಳ್ಳಲಿರುವ ಭೂ ಮಾಲೀಕರಿಂದ ಅಥವಾ ಮಾರಾಟಗಾರರಿಂದ ಸಂಬಂಧಟ್ಟ ಭೂಮಿಯ ದಾಖಲೆಗಳನ್ನು ನಿಮ್ಮ ವಿಶ್ವಸನೀಯ ವಕೀಲರನ್ನು ಕಂಡು ಅವರ ಮಾರ್ಗದರ್ಶನದಂತೆ ಕಾನೂನು ಸಲಹೆ ಪಡೆಯಿರಿ. ಭೂ ದಾಖಲೆಗಳ ಸತ್ಯಾಸತ್ಯತೆ, ಭೂ ಋಣರಾಹಿತ್ಯ, ಖಾತಾ ಮಾಹಿತಿ, ಕಟ್ಟಡ ಪರವಾನಗಿ, ನಕ್ಷೆ, ಕಟ್ಟಡದ ತೆರಿಗೆ ಹೀಗೆ ಇನ್ನೂ ಅನೇಕ ದಾಖಲೆಗಳನ್ನು ವಕೀಲರ ಅಗತ್ಯಕ್ಕೆ ತಕ್ಕಂತೆ ಪಡೆದು ಕಟ್ಟಡವನ್ನು ಕಾನೂನಿನ ಚೌಕಟ್ಟಿನೊಳಗೆ ಸಕ್ರಮವಾಗಿ ಕಟ್ಟಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಿ.
ನಿಮ್ಮ ಉಳಿತಾಯದ ಮೊತ್ತದಿಂದಲೇ ಮನೆ ಖರೀದಿಸುವುದಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ, ನೀವು ಯಾವುದೇ ಬ್ಯಾಂಕ್‌ನ ಸಾಲಕ್ಕೆ ಮೊರೆ ಹೋಗುವುದಿದ್ದರೆ ಮೇಲೆ ತಿಳಿಸಿರುವ ದಾಖಲೆಗಳನ್ನು ಬ್ಯಾಂಕ್‌ಗೆ ನೀಡಿ ಅವರ ವಕೀಲರಿಂದ ‘ಕಾನೂನು ಸಲಹೆ’ ಪಡೆಯಬೇಕಾಗುತ್ತದೆ. ಜೊತೆಗೆ, ‘ಕಟ್ಟಡದ ಮೌಲ್ಯಮಾಪನ’ ಕೂಡ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಸಾಲ ನೀಡುವ ಬ್ಯಾಂಕ್‌ನಿಂದ ನಿಯುಕ್ತಿಗೊಂಡ ಎಂಜಿನಿಯರ್, ಕಟ್ಟಡ ಹಾಗೂ ಭೂ ಮೌಲ್ಯಮಾಪನ ವರದಿ ನೀಡಬೇಕಾಗುತ್ತದೆ. ಸಾಲ ಪಡೆಯುವುದಿದ್ದರೆ ನಿಮ್ಮ ಇತ್ತೀಚಿನ ಕೆಲವು ವರ್ಷಗಳ ತೆರಿಗೆ ಪಾವತಿಸಿರುವ ದಾಖಲೆ ಮತ್ತು ನೀವು ನಿವೃತ್ತಿ ಅಂಚಿನಲ್ಲಿರುವುದರಿಂದ ಭದ್ರತೆಗೆ ಜಂಟಿ ಸಾಲಗಾರರನ್ನು ಹೆಸರಿಸಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.