ADVERTISEMENT

ಪ್ರಶ್ನೋತ್ತರ ಅಂಕಣ: ಹೂಡಿಕೆಗಳು ಮುಂದಿನ ಜೀವನಕ್ಕೆ ಸಾಗಬಹುದೇ?

ಪ್ರಮೋದ ಶ್ರೀಕಾಂತ ದೈತೋಟ
Published 8 ಅಕ್ಟೋಬರ್ 2025, 1:05 IST
Last Updated 8 ಅಕ್ಟೋಬರ್ 2025, 1:05 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ಜಯಶೀಲಾ ರಾವ್, ಶಿವಮೊಗ್ಗ

ನಾನು ನಿವೃತ್ತ ಶಾಲಾ ಶಿಕ್ಷಕಿ, ತಿಂಗಳಿಗೆ ₹25,000 ಪಿಂಚಣಿ ಪಡೆಯುತ್ತಿದ್ದೇನೆ. ನಾವು ಪಟ್ಟಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಮನೆ ಖರ್ಚು ಸೇರಿದಂತೆ ನಮ್ಮ ಮಾಸಿಕ ವೆಚ್ಚ ಸುಮಾರು ₹20,000. ನನ್ನ ಉಳಿತಾಯ ಮತ್ತು ಹೂಡಿಕೆ ಸೇರಿ ಸುಮಾರು ₹25 ಲಕ್ಷವಿದೆ. ಅದು ಬ್ಯಾಂಕ್‌ನ ನಿಶ್ಚಿತ ಠೇವಣಿಯಲ್ಲಿ ಇದೆ. ನಮಗೆ ಸ್ವಂತ ಮನೆ ಇದೆ. ಇದನ್ನು ಕಟ್ಟಿಸಿ ಸುಮಾರು 25 ವರ್ಷಗಳಾಗಿದ್ದು ಆ ಕಾಲದಲ್ಲಿ ಸುಮಾರು ₹15 ಲಕ್ಷ ವೆಚ್ಚವಾಗಿದೆ. ನಿವೇಶನದ ಅಳತೆ 2,000 ಚದರ ಅಡಿ ಇದೆ. ನನ್ನ ವಯಸ್ಸು 61 ವರ್ಷ. ಜೀವನ ನಿರ್ವಹಣೆ ಖರ್ಚುಗಳು ಮತ್ತು ಆರೋಗ್ಯ ವೆಚ್ಚಗಳು ಕ್ರಮೇಣ ಹೆಚ್ಚುತ್ತಿರುವುದನ್ನು ಪರಿಗಣಿಸಿದಾಗ, ಈ ಹೂಡಿಕೆಯಿಂದ ಬರುವ ಬಡ್ಡಿ ಮತ್ತು ನಮ್ಮ ಹೂಡಿಕೆಗಳು ನನ್ನ ಹಾಗೂ ಪತಿಯವರ ಮುಂದಿನ ಜೀವನಕ್ಕೆ ಸಾಕಾಗುತ್ತದೆಯೇ ಎಂಬ ಆತಂಕ ಇದೆ. ನಮಗೆ ಮಕ್ಕಳಿಲ್ಲ, ನಮ್ಮ ಭದ್ರತೆ ಸಂಪೂರ್ಣವಾಗಿ ಈ ಪಿಂಚಣಿ ಮತ್ತು ಉಳಿತಾಯದ ಮೇಲೆಯೇ ಅವಲಂಬಿತವಾಗಿದೆ.

ನಿಮ್ಮ ವಾರ್ಷಿಕ ಪಿಂಚಣಿ ಮೊತ್ತ ₹3 ಲಕ್ಷ ಹಾಗೂ ಸಂಚಿತ ಹೂಡಿಕೆ ಮೊತ್ತ ₹25 ಲಕ್ಷ. ಈ ಮೊತ್ತದ ಮೇಲೆ ನಿರೀಕ್ಷಿತ ಬಡ್ಡಿ ಶೇ 8ರಂತೆ ವರ್ಷಕ್ಕೆ ₹2 ಲಕ್ಷದಷ್ಟು ಹೆಚ್ಚುವರಿ ಆದಾಯ ನಿಮಗಿದೆ. ಹೀಗಾಗಿ ನಿಮ್ಮ ಒಟ್ಟು ಅಂದಾಜು ವಾರ್ಷಿಕ ಆದಾಯ ₹5 ಲಕ್ಷ. ಅಂದರೆ ತಿಂಗಳಿಗೆ ಸುಮಾರು ₹42 ಸಾವಿರ ಸರಾಸರಿ ಆದಾಯ.

ADVERTISEMENT

ನೀವು ಉಲ್ಲೇಖಿಸಿರುವಂತೆ, ನಿಮ್ಮ ತಿಂಗಳ ವೆಚ್ಚ ಸುಮಾರು ₹20,000. ಅಂದರೆ, ವಾರ್ಷಿಕವಾಗಿ ಇದು ₹2.40 ಲಕ್ಷ. ಆದಾಯದ ಸುಮಾರು ಅರ್ಧದಷ್ಟು ಮೊತ್ತ ನಿಮ್ಮ ಖರ್ಚುಗಳಿಗೆ ಮೀಸಲಿಡಬೇಕಾಗುತ್ತದೆ. ನಿಮ್ಮ ಹೂಡಿಕೆಯು ನಿಶ್ಚಿತ ಬಡ್ಡಿ ಆದಾಯ ನೀಡುವುದರಿಂದ ಇದರಿಂದ ಹೆಚ್ಚಿನ ಗಳಿಕೆ ಅಸಾಧ್ಯ. ಸಾಮಾನ್ಯವಾಗಿ ವರ್ಷಕ್ಕೆ ಶೇ 6ರಷ್ಟು ಹಣದುಬ್ಬರದ ಅಂದಾಜು ಮಾಡಬೇಕಾಗುತ್ತದೆ. ಹೀಗಾಗಿ ಇದೇ ವೆಚ್ಚ ಮುಂದಿನ 5 ವರ್ಷದಲ್ಲಿ ಸುಮಾರು ₹27 ಸಾವಿರ ಹಾಗೂ ಮುಂದಿನ 10 ವರ್ಷಗಳಲ್ಲಿ ₹36 ಸಾವಿರ ಆಗಬಹುದು. ಹೀಗಾಗಿ ಈ ವೆಚ್ಚ ವೃದ್ದಿಯನ್ನು ಸರಿದೂಗಿಸುವುದು ಹಣದುಬ್ಬರದ ಪ್ರಮಾಣಕ್ಕಿಂತ ತುಸು ಹೆಚ್ಚಿನ ಆದಾಯ ನೀಡುವ ದೀರ್ಘಾವಧಿ ಹೂಡಿಕೆಗಳಿಂದ ಸಾಧ್ಯ.

ನೀವು ಈಗಾಗಲೇ ನಿವೃತ್ತರಾಗಿದ್ದು ಸಾಂಪ್ರದಾಯಿಕ ಹೂಡಿಕೆಯಾದ ಬ್ಯಾಂಕ್ ಹಾಗೂ ಅಂಚೆ ಇಲಾಖೆಯ ಹೂಡಿಕೆಗಳನ್ನು ಬಿಟ್ಟು ಇತರ ಕ್ಷೇತ್ರಗಳಲ್ಲೂ ಹೂಡಿಕೆ ಬಗ್ಗೆ ಪರಿಗಣಿಸಬೇಕಾಗಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ ನಿಮಗೆ ಅನುಭವ ಇಲ್ಲದಿದ್ದರೆ, ಆ ಬಗ್ಗೆ ವಿಶ್ವಸನೀಯ ವ್ಯಕ್ತಿಗಳಿಂದ ಮಾಹಿತಿ ಪಡೆದು ಹಂತ ಹಂತವಾಗಿ ನಿಮ್ಮ ಹೂಡಿಕೆಯನ್ನು ಉತ್ತಮವಾದ ಈಕ್ವಿಟಿ ಫಂಡ್‌ಗಳಿಗೆ ವರ್ಗಾಯಿಸಿ. ಇದು ಸುಮಾರು 5 ವರ್ಷಗಳ ದೀರ್ಘ ಕಾಲದಲ್ಲಿ ವಾರ್ಷಿಕವಾಗಿ ಶೇಕಡಾ 10ಕ್ಕಿಂತ ಅಧಿಕ ಸರಾಸರಿ ಆದಾಯ ನೀಡೀತು. ಈ ಹಂತದಲ್ಲಿ ಮಾರುಕಟ್ಟೆ ಆಧಾರಿತವಾಗಿ ಹೂಡಿಕೆ ಮೌಲ್ಯ ಹೆಚ್ಚಿದಂತೆ ನೀವು ಬಂದ ಲಾಭದಲ್ಲಿ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಹಿಂಪಡೆಯಬಹುದು, ಇದು ನಿಮ್ಮ ಹೆಚ್ಚುವರಿ ವೆಚ್ಚ ನಿಭಾಯಿಸುವಲ್ಲಿ ನೆರವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಸಂಪೂರ್ಣ ಮೊತ್ತವನ್ನು ಹಿಂಪಡೆಯುವ ಅವಕಾಶ ಇದ್ದೇ ಇದೆ.

ಇದಲ್ಲದೆ, ವಿಶ್ವಸನೀಯ ಬಂಧುಗಳಿದ್ದರೆ, ನಿಮ್ಮನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಕಾನೂನಾತ್ಮಕವಾಗಿ ಆಸ್ತಿಯ ಉಯಿಲು ಬರೆಸುವ ಪ್ರಕ್ರಿಯೆ ಕೂಡಾ ನಿಮಗೆ ನೆರವಾಗಬಹುದು. ಇದಕ್ಕೆ ಪ್ರತ್ಯೇಕವಾಗಿ ಕಾನೂನು ಸಲಹೆ ಪಡೆದುಕೊಳ್ಳಿ.

ಸತೀಶ್, ಊರು ತಿಳಿಸಿಲ್ಲ

ನನ್ನ ಮಗನ ವಯಸ್ಸು 23 ವರ್ಷ. ಅವನು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ₹1,70,000 ವೇತನ ಪಡೆಯುತ್ತಿದ್ದಾನೆ. ಅವನ ಪ್ರಸ್ತುತ ಮಾಸಿಕ ಹೂಡಿಕೆಗಳು ಈ ಕೆಳಗಿನಂತಿವೆ — ಆವರ್ತಕ ಠೇವಣಿಗೆ ₹25,000, ಸ್ಮಾಲ್ ಕ್ಯಾಪ್ ಹೂಡಿಕೆ ₹20,000, ನಿಫ್ಟಿ ಇಂಡೆಕ್ಸ್ ಫಂಡ್‌ಗೆ ₹30,000 ಮತ್ತು ಫ್ಲೆಕ್ಸಿ ಕ್ಯಾಪ್ ಫಂಡ್‌ಗೆ ₹20,000. ಹೀಗೆ ಒಟ್ಟಾರೆ ಒಂದು ಲಕ್ಷ ರೂಪಾಯಿಯಷ್ಟನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಿದ್ದಾನೆ. ಅವನ ಮಾಸಿಕ ಖರ್ಚು ₹35,000ದಿಂದ ₹40,000ದಷ್ಟು ಇದೆ. ಮುಂದಿನ 2–3 ವರ್ಷಗಳಲ್ಲಿ ಬೆಂಗಳೂರಿನ ಸುತ್ತಮುತ್ತ ಆಸ್ತಿ (ಮನೆ/ಫ್ಲ್ಯಾಟ್) ಖರೀದಿಸುವ ಯೋಜನೆ ಇದೆ. ಅವನ ಪ್ರಸ್ತುತ ಆದಾಯ, ಖರ್ಚು ಮತ್ತು ಹೂಡಿಕೆ ಸ್ಥಿತಿಯನ್ನು ಪರಿಗಣಿಸಿ, ಈ ಗುರಿಯನ್ನು ಪರಿಣಾಮಕಾರಿಯಾಗಿ ಸಾಧಿಸಲು ಹಣಕಾಸು ಯೋಜನೆ ಹಾಗೂ ಹೂಡಿಕೆ ಹೇಗೆ ಮಾಡಬಹುದು ಎಂಬ ಮಾಹಿತಿ ನೀಡಿ.

ನಿಮ್ಮ ಮಗನಿಗೆ ಸಣ್ಣ ವಯಸ್ಸಿನಲ್ಲೇ ಸ್ಥಿರ ಆದಾಯ ಇದೆ. ಅವನಲ್ಲಿ ಶಿಸ್ತಿನ ಹೂಡಿಕೆ ಧೋರಣೆ ಬೆಳೆಸಿರುವುದು ಶ್ಲಾಘನೀಯ. ತಿಂಗಳ ₹1.7 ಲಕ್ಷ ಆದಾಯದಲ್ಲಿ ₹1 ಲಕ್ಷದಷ್ಟನ್ನು ಹೂಡಿಕೆ ಮಾಡುತ್ತಿರುವುದು ದೀರ್ಘಾವಧಿಯಲ್ಲಿ ಸಂಪತ್ತಿನ ಸೃಷ್ಟಿಗೆ ಉತ್ತಮ ಅಡಿಪಾಯ. ಆದರೆ ಮುಂದಿನ 2–3 ವರ್ಷಗಳಲ್ಲಿ ಆಸ್ತಿ ಖರೀದಿ ಗುರಿ ಹೊಂದಿರುವುದರಿಂದ ಹೂಡಿಕೆ ತಂತ್ರದಲ್ಲಿ ಸ್ವಲ್ಪ ಬದಲಾವಣೆ ಅಗತ್ಯ. ಪ್ರಸ್ತುತ ಶೇ 75ರಷ್ಟು ಮೊತ್ತ ಈಕ್ವಿಟಿ ವಿಭಾಗದಲ್ಲಿದೆ. ಇದು ಆರ್ಥಿಕ ಅಪಾಯ ತಡೆಯುವ ದೃಷ್ಟಿಯಿಂದ ಹಿತಕರವಲ್ಲ. ಇದನ್ನು ಶೇ 50ಕ್ಕೆ ತಗ್ಗಿಸಿ, ಉಳಿದ ಮೊತ್ತವನ್ನು ನಿಗದಿತ ಆದಾಯ ನೀಡುವ ಹೂಡಿಕೆಗಳಲ್ಲಿ ತೊಡಗಿಸಿ.

ಇದಲ್ಲದೆ ನಿಮ್ಮ ಹೂಡಿಕೆ ಬಜೆಟ್ ಏನೆಂಬುದನ್ನು ನಿರ್ಧರಿಸಿ. ಉದಾಹರಣೆಗೆ ₹1.25 ಕೋಟಿ ನಿಮ್ಮ ಒಟ್ಟು ಹೂಡಿಕೆ ಆಗಲಿದೆ ಎಂದಿದ್ದರೆ, ಈಗಿನ ಹೂಡಿಕೆಯಿಂದ ಒಗ್ಗೂಡಿರುವ ₹25-30 ಲಕ್ಷ ಮೊತ್ತವನ್ನು ಡೌನ್ ಪೇಮೆಂಟ್‌ಗೆ ಬಳಸಿಕೊಂಡು ಉಳಿದ ಮೊತ್ತವನ್ನು ಸಾಲ ಪಡೆದು ಹೊಂದಿಸಿಕೊಳ್ಳಬಹುದು. 20 ವರ್ಷದ ಸಾಲಕ್ಕೆ ಶೇ 8.5ರ ದರದಲ್ಲಿ ₹90 ಸಾವಿರದೊಳಗೆ ಇಎಂಐ ಇರುತ್ತದೆ. ಆದಾಯ ಹೆಚ್ಚಿದಂತೆ ಸಾಲವನ್ನು ತ್ವರಿತವಾಗಿ ಮರುಪಾವತಿಸಿ, ಹೂಡಿಕೆಯ ಪ್ರಮಾಣವನ್ನು ಮತ್ತೆ ಹೆಚ್ಚಿಸಿ.

ಒಂದು ವೇಳೆ ನೀವು ಈಗ ಇರುವಂತೆ ಆರ್ಥಿಕ ಅಪಾಯ ಅರಿತು ಹೆಚ್ಚಿನ ಮೊತ್ತವನ್ನು ಈಕ್ವಿಟಿ ವಿಭಾಗಕ್ಕೆ ನಿಯೋಜಿಸಲು  ಬದ್ಧರಾಗಿದ್ದರೆ, ಮೂರರಿಂದ ಐದು ವರ್ಷ ಕಾಲ ನಿಮ್ಮ ಹೂಡಿಕೆ ಮುಂದುವರಿಸಲು ಮಾನಸಿಕವಾಗಿ ಈಗಲೇ ಸನ್ನದ್ಧರಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.