ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ರಾಮಕೃಷ್ಣ, ಊರು ತಿಳಿಸಿಲ್ಲ
ನಾನು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ನನಗೆ ಪ್ರತಿ ತಿಂಗಳು ₹40,000 ಪಿಂಚಣಿ ಬರುತ್ತಿದೆ. ನಮ್ಮ ತಂದೆ ಕೃಷಿಕರಾಗಿದ್ದು, ಅವರ ಹೆಸರಿನಲ್ಲಿ ಅವಿಭಕ್ತ ಕುಟುಂಬದ ಆಸ್ತಿ ಇತ್ತು. ಈಗ ಆ ಆಸ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಕೇಳುತ್ತಿದ್ದಾರೆ. ಆ ಕಾರಣದಿಂದ ಸ್ವಲ್ಪ ತೋಟವನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಮಾರಾಟ ಮಾಡಿದರೆ ಒಟ್ಟು ಸುಮಾರು ₹40 ಲಕ್ಷ ದೊರೆಯುವ ನಿರೀಕ್ಷೆಯಿದೆ. ಅದರಲ್ಲಿ ನನಗೆ, ನನ್ನ ತಮ್ಮನಿಗೆ ಮತ್ತು ನನ್ನ ಅತ್ತಿಗೆಗೆ (ಅಣ್ಣ ಏಳು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ) ಹಂಚಿಕೆ ಬರಲಿದೆ. ನನಗೆ ಬರುವ ಹಂಚಿಕೆಯು ಸುಮಾರು ₹13 ಲಕ್ಷವಾಗಬಹುದು. ನಾನು ಕಳೆದ 15 ವರ್ಷಗಳಿಂದ ನಿಯಮಿತವಾಗಿ ಆದಾಯ ತೆರಿಗೆ ಕಟ್ಟುತ್ತಿದ್ದೇನೆ. ಈ ಕೃಷಿ ತೋಟ ಮಾರಾಟದ ಹಣದ ಮೇಲೆ ನಾನು ಎಷ್ಟು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ?
ಉತ್ತರ: ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ, ಮಾರಾಟವಾಗುತ್ತಿರುವ ಆಸ್ತಿ ಗ್ರಾಮೀಣ ಪ್ರದೇಶದಲ್ಲಿದೆಯೇ ಅಥವಾ ನಗರ/ನಗರಸಭೆ ವ್ಯಾಪ್ತಿಯೊಳಗೆ ಇದೆಯೇ ಎಂಬುದು. ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿರುವ ಕೃಷಿ ಜಮೀನು ಮಾರಾಟದಿಂದ ಬರುವ ಹಣಕ್ಕೆ ಬಂಡವಾಳ ಲಾಭ (ಕ್ಯಾಪಿಟಲ್ ಗೈನ್ಸ್ ) ತೆರಿಗೆ ವಿಧಿಸುವುದಿಲ್ಲ. ಆದರೆ, ಜಮೀನು ನಗರ ಅಥವಾ ಅದರ ಸುತ್ತಮುತ್ತ 8 ಕಿ.ಮೀ ವ್ಯಾಪ್ತಿಯೊಳಗೆ ಇದ್ದರೆ, ಅದನ್ನು ಬಂಡವಾಳ ಆಸ್ತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಮಾರಾಟದಿಂದ ಲಭಿಸುವ ಲಾಭಕ್ಕೆ ಬಂಡವಾಳ ಲಾಭ ತೆರಿಗೆ ವಿಧಿಸಲಾಗುತ್ತದೆ.
ತೋಟದ ಮಾರಾಟದಿಂದ ಸಿಗುವ ಹಣದಲ್ಲಿ ₹13 ಲಕ್ಷ ನಿಮ್ಮ ಪಾಲಿಗೆ ಬರಲಿದೆ. ನಿಮ್ಮ ಕೃಷಿ ಜಮೀನು ನಗರದ ವ್ಯಾಪ್ತಿಯಲ್ಲಿದ್ದರೆ, ನೀವು ಮಾರಾಟ ಮೌಲ್ಯವನ್ನು ಮೂಲ ಖರೀದಿ ಬೆಲೆಯ ಜೊತೆ ಹೋಲಿಸಿ ದೀರ್ಘಾವಧಿ ಲಾಭ ಎಂದು ನಿರ್ಧರಿಸಬೇಕಾಗುತ್ತದೆ. ದೀರ್ಘಾವಧಿ ಲಾಭಕ್ಕೆ ಶೇ 20 ತೆರಿಗೆ (ಇಂಡೆಕ್ಸೇಷನ್ ಪ್ರಯೋಜನದೊಂದಿಗೆ) ವಿಧಿಸಲಾಗುತ್ತದೆ. ಪರ್ಯಾಯವಾಗಿ ಈ ಪ್ರಯೋಜನ ಪಡೆಯದೆ, ನಿವ್ವಳ ಲಾಭದ ಶೇಕಡಾ 12.5ರ ಮೇಲೂ ತೆರಿಗೆ ಅಂದಾಜಿಸಬಹುದು. ಇವೆರಡರಲ್ಲಿ ಲಾಭದಾಯಕ ಆಯ್ಕೆ ಯಾವುದೋ ಅದನ್ನು ನೀಡುವ ಪಡೆಯಬಹುದು. ಆದರೆ ಕೃಷಿ ಜಮೀನು ಗ್ರಾಮೀಣ ಭಾಗದ್ದಾದರೆ, ಆ ಲಾಭ ಸಂಪೂರ್ಣವಾಗಿ ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ.
ಮತ್ತೊಂದು ಮುಖ್ಯ ಅಂಶವೆಂದರೆ, ಮಾರಾಟದಿಂದ ಬಂದ ಮೊತ್ತ ತೆರಿಗೆಗೆ ಒಳಪಡದ ಸಂದರ್ಭದಲ್ಲಿ, ಆ ಮೊತ್ತವನ್ನು ನೀವು ಆದಾಯ ತೆರಿಗೆ ವಿವರದಲ್ಲಿ ‘ವಿನಾಯಿತಿಗೊಳಪಟ್ಟ ಆದಾಯ’ ವಿಭಾಗದಲ್ಲಿ ಘೋಷಣೆ ಮಾಡುವುದು ಸೂಕ್ತ. ಇದು ಭವಿಷ್ಯದ ಯಾವುದೇ ವಿಚಾರಣೆ ಸಂದರ್ಭದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ನಿಮ್ಮ ಸಂಬಂಧಿಗಳೊಡನೆ ಹಂಚಿಕೆಯಾದ ಆಸ್ತಿ ಆದ್ದರಿಂದ, ನಿಮ್ಮ ಪಾಲಿಗೆ ಬಂದ ಮೊತ್ತದ ವಿವರವನ್ನು ಕುಟುಂಬ ಹಕ್ಕು ಹಂಚಿಕೆ ದಾಖಲೆಗಳೊಂದಿಗೆ ಸೇರಿಸಿ ಘೋಷಣೆ ಮಾಡುವುದು ಉತ್ತಮ.
ಆದ್ದರಿಂದ, ಮೊದಲು ಆಸ್ತಿಯ ನಿಖರ ಸ್ಥಳವನ್ನು ಸ್ಪಷ್ಟಪಡಿಸಿ. ಅದು ಗ್ರಾಮೀಣ ಕೃಷಿ ಜಮೀನು ಆಗಿದ್ದರೆ ತೆರಿಗೆ ಹೊಣೆ ಇರದು, ಆದರೆ ನಗರ ವ್ಯಾಪ್ತಿಯೊಳಗೆ ಇದ್ದರೆ ತೆರಿಗೆ ಲೆಕ್ಕಾಚಾರ ಮಾಡಿ ತೆರಿಗೆ ಕಟ್ಟಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ಮಾರ್ಗದರ್ಶನ ಪಡೆದುಕೊಳ್ಳಿ.
ಬಾಳಪ್ಪ ಉಮಚಗಿ, ಹೊಸಪೇಟೆ
ನನಗೆ ಪ್ರತಿ ತಿಂಗಳು ₹29,000 ಸಂಬಳ ಬರುತ್ತದೆ. ಅದರಲ್ಲಿ ಸುಮಾರು ₹16,000 ಉಳಿತಾಯ ಮಾಡುತ್ತಿದ್ದೇನೆ. ನನ್ನ ಸಂಬಳ ಖಾತೆ ಸಮೀಪದ ಬ್ಯಾಂಕ್ ಒಂದರಲ್ಲಿದೆ. ಅಲ್ಲಿ ರೆಗ್ಯುಲರ್ ಮ್ಯೂಚುವಲ್ ಫಂಡ್‌ಗಳನ್ನು ಮಾಡಿಸಲು ಅವಕಾಶವಿಲ್ಲವೆಂದು ಬ್ಯಾಂಕಿನ ಸಿಬ್ಬಂದಿಯಿಂದ ತಿಳಿಯಿತು. ನಾನು ಪ್ರತಿ ತಿಂಗಳು ₹15,000 ಮೊತ್ತವನ್ನು ರೆಗ್ಯುಲರ್ ಮ್ಯೂಚುವಲ್ ಫಂಡ್‌ಗೆ ಹೂಡಿಕೆ ಮಾಡಲು ಬಯಸುತ್ತೇನೆ. ಈ ಬಗ್ಗೆ ಯಾವ ಬ್ಯಾಂಕ್ ಅಥವಾ ಸಂಸ್ಥೆಯ ಮೂಲಕ ಹೂಡಿಕೆ ಮಾಡುವುದು ಉತ್ತಮ? ಹಾಗೆಯೇ ಯಾವ ರೀತಿಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ?
ನೀವು ಪ್ರತಿ ತಿಂಗಳು ಗಳಿಸುವ ಹಣದಲ್ಲಿ ಸುಮಾರು ಅರ್ಧದಷ್ಟು ಮೊತ್ತವನ್ನು ಉಳಿತಾಯ ಮಾಡುತ್ತಿರುವುದು ಆರ್ಥಿಕ ಶಿಸ್ತಿಗೆ ಉತ್ತಮ ನಿದರ್ಶನ. ಇದರಲ್ಲಿ ₹15,000ವನ್ನು ನಿಯಮಿತವಾಗಿ ಮ್ಯೂಚುವಲ್ ಫಂಡ್‌ಗೆ ಹೂಡಿಕೆ ಮಾಡುವ ಆಲೋಚನೆ ನಿಮ್ಮದು. ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ನಿರ್ದಿಷ್ಟ ಬ್ಯಾಂಕ್ ಮುಖಾಂತರವೇ ಮಾಡುವ ಅಗತ್ಯವಿಲ್ಲ; ಬದಲಾಗಿ ನಿಮ್ಮ ಆಯ್ಕೆಯ ಬ್ಯಾಂಕ್ ಖಾತೆಯಿಂದ ನೇರವಾಗಿ ತಿಂಗಳ ಕಂತು ಪಾವತಿ ಆಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಇದಕ್ಕೆ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಳ್ಳಿ. ಖಾತೆಯನ್ನು ನಿಮ್ಮ ಆಯ್ಕೆಯ ಸೆಬಿ ನೋಂದಾಯಿತ ಮ್ಯೂಚುವಲ್ ಫಂಡ್ ಸಂಸ್ಥೆಗಳ ವೆಬ್‌ಸೈಟ್ ಮೂಲಕ ನೇರವಾಗಿ ಅಥವಾ ನಿಮ್ಮ ಆಯ್ಕೆಯ ಸೆಬಿ ನೋಂದಾಯಿತ ಬ್ರೋಕರ್ ಮೂಲಕ, ಅವರ ಆ್ಯಪ್‌ಗಳ ಮೂಲಕ ನೋದಾಯಿಸಿ ಹೂಡಿಕೆ ಮಾಡಬಹುದು. ಡೈರೆಕ್ಟ್ ಪ್ಲ್ಯಾನ್ ಆಯ್ಕೆ ಮಾಡಿದರೆ ವಿತರಕರ ಶುಲ್ಕ ಕಡಿಮೆಯಾಗುತ್ತದೆ.
ಹೂಡಿಕೆಗೆ ಮೊದಲು ನಿಮ್ಮ ಆರ್ಥಿಕ ಗುರಿಗಳನ್ನು ಸ್ಪಷ್ಟಗೊಳಿಸುವುದು ಮುಖ್ಯ. ದೀರ್ಘಾವಧಿಯ ಗುರಿಗಳಿಗೆ (ಅಂದರೆ ನಿವೃತ್ತಿ ಅಥವಾ ಮಕ್ಕಳ ಶಿಕ್ಷಣ) ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಅಥವಾ ಇಂಡೆಕ್ಸ್ ಫಂಡ್‌ಗಳು ಸೂಕ್ತ. ಏಕೆಂದರೆ ಅವು ಮಾರುಕಟ್ಟೆಯ ಏರಿಳಿತಗಳ ನಡುವೆಯೂ ದೀರ್ಘಾವಧಿಯಲ್ಲಿ ಉತ್ತಮ ಲಾಭ ನೀಡುತ್ತವೆ. ಮಧ್ಯಮಾವಧಿ ಗುರಿಗಳಿಗೆ (ಮೂರರಿಂದ ಐದು ವರ್ಷ) ಹೈಬ್ರಿಡ್ ಅಥವಾ ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್‌ಗಳನ್ನು ಪರಿಗಣಿಸಬಹುದು. ತಕ್ಷಣದ ಅಥವಾ ಅಲ್ಪಾವಧಿಯ ಗುರಿಗಳಿಗೆ ಡೆಟ್ ಫಂಡ್‌ಗಳು ಅಥವಾ ಶಾರ್ಟ್ ಟರ್ಮ್ ಬಾಂಡ್ ಫಂಡ್‌ಗಳು ಹೆಚ್ಚು ಸುರಕ್ಷಿತ. ಹೂಡಿಕೆ ಮಾಡುವಾಗ ನಿಮ್ಮ ವಯಸ್ಸು, ಅಪಾಯ ತಾಳಿಕೊಳ್ಳುವ ಶಕ್ತಿ ಮತ್ತು ಭವಿಷ್ಯದ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ವಿವಿಧ ವರ್ಗಕ್ಕೆ ಸೇರಿದ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.