ADVERTISEMENT

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 7 ಜೂನ್ 2023, 5:17 IST
Last Updated 7 ಜೂನ್ 2023, 5:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಶ್ನೆ: ನಾನು ಕೇಂದ್ರ ಸರ್ಕಾರದ ನಿವೃತ್ತ ನೌಕರ. ನನ್ನ ವಾರ್ಷಿಕ ಒಟ್ಟು ಆದಾಯ ಸುಮಾರು ₹8 ಲಕ್ಷ. ವರ್ಷಕ್ಕೆ ₹50 ಸಾವಿರ ತೆರಿಗೆ ಪಾವತಿಸುತ್ತೇನೆ. ನನ್ನ ಪ್ರಶ್ನೆ ಏನೆಂದರೆ, ಕಳೆದ ವರ್ಷ ನಾನು ಯುರೋಪ್ ಪ್ರವಾಸ ಮಾಡಿದಾಗ, ₹14,000 ಟಿಸಿಎಸ್ ಕಡಿತ ಮಾಡಿರುತ್ತಾರೆ. ಈ ಹಣವನ್ನು ಈ ವರ್ಷ ತೆರಿಗೆ ಪಾವತಿಸುವಾಗ ಮರಳಿ ಪಡೆಯುವುದು ಹೇಗೆ?

–ನಾರಾಯಣ ಸ್ವಾಮಿ, ರಾಜಾಜಿನಗರ, ಬೆಂಗಳೂರು

ಉತ್ತರ: ಕೇಂದ್ರ ಸರ್ಕಾರವು 2020ರ ಬಜೆಟ್‌ನಲ್ಲಿ ವಿದೇಶಿ ಪ್ಯಾಕೇಜ್ ಪ್ರವಾಸಗಳಿಗೆ ಸಂಬಂಧಿಸಿದ ತೆರಿಗೆ ನಿಯಮಗಳನ್ನು ಜಾರಿಗೊಳಿಸಿತು. ತೆರಿಗೆ ಸಂಗ್ರಹದ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶವೂ ಇದರ ಪ್ರಮುಖ ಭಾಗವಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206ಸಿ(1ಜಿ) ಪ್ರಕಾರ, ಪ್ಯಾಕೇಜ್ ಪ್ರವಾಸ ಸೌಲಭ್ಯ ಪಡೆದು ವಿದೇಶ ಪ್ರಯಾಣ ಮಾಡುವ ವ್ಯಕ್ತಿ ತನ್ನ ಎಲ್ಲ ಪಾವತಿಗಳಿಗೆ ಹೆಚ್ಚುವರಿ ತೆರಿಗೆ ಕಟ್ಟಿ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಪ್ಯಾನ್ ಉಳ್ಳವರು ಖರೀದಿಸುವ ಪ್ರವಾಸ ಪ್ಯಾಕೇಜ್‌ಗಳಿಗೆ ಶೇ 5ರಷ್ಟು ತೆರಿಗೆ ಪಾವತಿ ಅನ್ವಯವಾಗುತ್ತದೆ. ಪ್ಯಾನ್ ರಹಿತ ಪಾವತಿಗೆ ಶೇ 10ರಷ್ಟು ತೆರಿಗೆ ಅನ್ವಯ.

ADVERTISEMENT

ಯಾವುದೇ ವ್ಯಕ್ತಿ ತನ್ನ ವಾರ್ಷಿಕ ತೆರಿಗೆ ವಿವರ ಭರ್ತಿ ಮಾಡುವ ಸಂದರ್ಭದಲ್ಲಿ ಈ ರೀತಿ ಮುಂಗಡವಾಗಿ ಪಾವತಿಸಿದ ತೆರಿಗೆಯನ್ನು ಒಟ್ಟಾರೆ ಮೊತ್ತದೊಡನೆ ವಜಾ ಮಾಡುವ ಅವಕಾಶವಿದೆ. ಆದರೆ, ನಿಮ್ಮ ಪ್ಯಾನ್ ಸಂಖ್ಯೆಯನ್ನು ಮೊದಲೇ ನೀಡಿ ಪ್ಯಾಕೇಜ್ ಪ್ರವಾಸ ನಿರ್ವಾಹಕರಲ್ಲಿ ನಿಮ್ಮ ಆದಾಯ ತೆರಿಗೆ ಖಾತೆಗೆ ಜಮಾ ಮಾಡಿರುವ ವಿಚಾರ ಖಾತರಿಪಡಿಸಿಕೊಳ್ಳಬೇಕು. ಅಥವಾ ನಿಮ್ಮ ಆದಾಯ ತೆರಿಗೆ ಜಮಾ ಖಾತೆಯಲ್ಲಿ (26 ಎ ಎಸ್) ಅದು ಬಂದಿರಬೇಕು. ಪ್ಯಾನ್ ಇಲ್ಲದೆ ನೀವು ತೆರಿಗೆ ಮೊತ್ತ ಪಾವತಿಸಿದ್ದರೆ, ಅಂತಹ ಹೆಚ್ಚುವರಿ ಪಾವತಿ ನಿಮಗೆ ಯಾವುದೇ ಬಗೆಯಲ್ಲಿ ಅಂತಿಮವಾಗಿ ವಜಾ ಮಾಡಲು ಲಭ್ಯವಿರುವುದಿಲ್ಲ.

ಇನ್ನೂ ಒಂದು ಮಹತ್ವದ ಅಂಶವೆಂದರೆ, ಮುಂದಿನ ಜುಲೈ 1ರಿಂದ ಅನ್ವಯವಾಗುವಂತೆ ಯಾವುದೇ ವಿದೇಶಿ ಪ್ರಯಾಣಕ್ಕೆ ಸಂಬಂಧಿಸಿ ಮಾಡುವ ಕಾಯ್ದಿರಿಸುವಿಕೆಗೆ ಶೇ 20ರಷ್ಟು ಟಿಸಿಎಸ್ ಅನ್ವಯ ಆಗಲಿದೆ. ಈ ಹಿಂದೆ ನೇರವಾಗಿ ಪ್ರಯಾಣಿಕರೇ ವಿಮಾನ ಟಿಕೆಟ್ ಕಾಯ್ದಿರಿಸಿದರೆ ಟಿಸಿಎಸ್ ಅನ್ವಯಿಸುತ್ತಿರಲಿಲ್ಲ. ಆದರೆ, ಈ ಬದಲಾವಣೆಯ ನಂತರ ವೈದ್ಯಕೀಯ ಹಾಗೂ ಶಿಕ್ಷಣಕ್ಕೆ ಸಂಬಂಧಿತ ಪ್ರಯಾಣ ಹೊರತುಪಡಿಸಿ ತೆರಿಗೆ ದರವೂ ವರ್ಧಿಸಿದೆ. ವಾರ್ಷಿಕವಾಗಿ ₹7 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ವಿದೇಶಿ ಹಣಕಾಸು ವ್ಯವಹಾರಗಳಿಗೆ ಬಳಸಿದರೆ ತೆರಿಗೆ ಅನ್ವಯ ಆಗುತ್ತದೆ. ಇದನ್ನು ಉದಾರ ವರ್ಗಾವಣೆ ಯೋಜನೆ (ಎಲ್ಆರ್‌ಎಸ್) ಅಡಿ ತರುವ ಮೂಲಕ ಮೇಲಿನ ತೆರಿಗೆ ಬದಲಾವಣೆ ಅನ್ವಯವಾಗುವಂತೆ ಮಾಡಲಾಗಿದೆ. 

ಪ್ರಶ್ನೆ: ನಾನು ಹಿರಿಯ ನಾಗರಿಕ. ವಯಸ್ಸು 66 ವರ್ಷ. ಆರ್ಥಿಕ ವರ್ಷ 2022-23ರಲ್ಲಿ ನನ್ನ ಒಟ್ಟು ಆದಾಯ ₹14.45 ಲಕ್ಷ. ಎಲ್ಐಸಿ, ಪಿಪಿಎಫ್ ಇತ್ಯಾದಿಯಲ್ಲಿ ಒಟ್ಟು ₹1.50 ಲಕ್ಷ ತೊಡಗಿಸಿದ್ದೇನೆ. ಬ್ಯಾಂಕ್ ಹಾಗೂ ಎಲ್ಐಸಿಯವರು ತೆರಿಗೆ ಕಡಿತ ಮಾಡಿದ್ದಾರೆ. ಆರ್ಥಿಕ ವರ್ಷ 2023-24ರಲ್ಲಿ ಯಾವ ತೆರಿಗೆ ಪದ್ಧತಿ ಅನುಸರಿಸಿದರೆ ಒಳ್ಳೆಯದು? ಕೇಂದ್ರ ಬಜೆಟ್‌ನ ಈ ಬದಲಾವಣೆ ಆರ್ಥಿಕ ವರ್ಷ 2023-24ಕ್ಕೆ (ಅಸೆಸ್ಮೆಂಟ್ ವರ್ಷ 2024-25) ಅನ್ವಯಿಸುತ್ತದೆಯೇ ಅಥವಾ ಆರ್ಥಿಕ ವರ್ಷ 2022-23ಕ್ಕೆ (ಅಸೆಸ್ಮೆಂಟ್ ವರ್ಷ 2023-24) ಅನ್ವಯಿಸುತ್ತದೆಯೇ? ಹೊಸ ತೆರಿಗೆ ಪದ್ಧತಿಯ ಅಡಿ ₹52,500 ನಿಗದಿತ ಕಡಿತ ಇದೆ ಎಂದು ತಿಳಿದಿದ್ದೇನೆ. ಇದು ಯಾವುದು? ವೇತನದಾರರನ್ನು ಹೊರತುಪಡಿಸಿ ಇತರ ತೆರಿಗೆದಾರರೂ ಹೊಸ ಯೋಜನೆಯನ್ನು ಅನುಸರಿಸಿದರೆ ಆ ಪದ್ದತಿಯನ್ನು ಮುಂದಿನ ವರ್ಷಗಳಲ್ಲಿ ಅನುಸರಿಸಬೇಕೇ?

–ತಿರುಮಲ ನಾಯ್ಕ, ಪುತ್ತೂರು

ಉತ್ತರ: ಹೊಸ ತೆರಿಗೆ ಪದ್ಧತಿಯ ಅಡಿ ನಿಗದಿತ ಕಡಿತವನ್ನು (ಸ್ಟ್ಯಾಂಡರ್ಡ್ ಡಿಡಕ್ಷನ್) ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಾಗಿ ಆರ್ಥಿಕ ವರ್ಷ 2023-24ರಿಂದ ಅನ್ವಯಿಸುವಂತೆ ಇದರ ಪ್ರಯೋಜನ ಸಿಗಲಿದೆ. ಇದು ಆದಾಯ ತೆರಿಗೆಯ ಸೆಕ್ಷನ್ 16 ಅಡಿ ₹50,000 ಮಾತ್ರ. ಇದು ವೇತನದಾರರಿಗೆ ಹಾಗೂ ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಮಾತ್ರ ಸಿಗುತ್ತದೆ. ಈ ಬದಲಾವಣೆ ಹೊರತುಪಡಿಸಿದರೆ, ಇನ್ಯಾವುದೇ ತೆರಿಗೆ ವಿನಾಯಿತಿಗಳು ಹೊಸ ತೆರಿಗೆ ಪದ್ದತಿಯ ಅಡಿ ಹೂಡಿಕೆಗೆ ಸಂಬಂಧಿಸಿದಂತೆ ಇರುವುದಿಲ್ಲ.

ಒಂದು ವೇಳೆ ಹೊಸ ತೆರಿಗೆ ಪದ್ಧತಿಯನ್ನು ನೀವು ಅನುಸರಿಸಿದರೆ, ಮುಂದಿನ ವರ್ಷದಲ್ಲಿ ನಿಮಗೆ ಲಾಭದಾಯಕವಾದ ತೆರಿಗೆ ಪದ್ದತಿಯನ್ನು ಆಯ್ಕೆ ಮಾಡುವ ಅವಕಾಶವಿದೆ. ಆದರೆ ನೀವು ಯಾವುದೇ ವ್ಯವಹಾರದಲ್ಲಿ ಆದಾಯ ಹೊಂದಿ, ಆ ಸಂದರ್ಭದಲ್ಲಿ ಹೊಸ ತೆರಿಗೆ ದರದ ಲಾಭ ಪಡೆಯುವ ಉದ್ದೇಶದಿಂದ ಅದನ್ನು ಆಯ್ಕೆ ಮಾಡಿದ್ದರೆ, ಪ್ರತಿ ವರ್ಷ ತೆರಿಗೆ ಲಾಭಕ್ಕೋಸ್ಕರ ಯೋಜನೆ ಬದಲಾವಣೆ ಮಾಡಲು ಅನುಮತಿ ಇಲ್ಲ. ಜೀವಿತಾವಧಿಯಲ್ಲಿ ಒಮ್ಮೆ ಬದಲಾವಣೆ ಮಾಡಿಕೊಳ್ಳುವ ಅವಕಾಶವಿದೆ.

ನಿಮ್ಮ ಆದಾಯದ ಮಾಹಿತಿಯಂತೆ, ನೀವು ವ್ಯವಹಾರದಲ್ಲಿರುವವರೇ ಅಥವಾ ನಿವೃತ್ತಿ ಹೊಂದಿ ಪಿಂಚಣಿ ಪಡೆಯುವವರೇ ಎಂಬುದು ಸ್ಪಷ್ಟವಿಲ್ಲ. ನೀವು ಪಿಂಚಣಿ ಹಾಗೂ ಇತರ ಆದಾಯ ಗಳಿಸುವವರೆಂದು ಊಹಿಸಿ ಹೇಳುವುದಾದರೆ, ನಿಮಗೆ ಹೊಸ ತೆರಿಗೆ ಪದ್ದತಿಯೇ ಲಾಭದಾಯಕ. ಹಳೆಯ ತೆರಿಗೆ ಪದ್ದತಿಗೆ ತುಲನೆ ಮಾಡಿದಾಗ ಇದು ಸುಮಾರು ₹56 ಸಾವಿರದ ಅಂದಾಜು ತೆರಿಗೆಯನ್ನು ತಗ್ಗಿಸುತ್ತದೆ. ವ್ಯವಹಾರದಲ್ಲಿ ಇರುವವರಾದರೆ, ಮೇಲೆ ನೀಡಿರುವ ಎರಡೂ ಮಾಹಿತಿಗಳನ್ನು ಪರಿಗಣಿಸಿ. ಅದಕ್ಕೆ ಸಂಬಂಧಿತ ಲೆಕ್ಕಾಚಾರದಂತೆ ಪ್ರತ್ಯೇಕವಾಗಿ ತೆರಿಗೆ ಲೆಕ್ಕ ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.