ADVERTISEMENT

ಪ್ರಶ್ನೋತ್ತರ| ನನ್ನ ಬಳಿ ಇರುವ ₹ 80 ಲಕ್ಷವನ್ನು ಹೇಗೆ ಬೆಳೆಸುವುದು?

ಪ್ರಮೋದ ಶ್ರೀಕಾಂತ ದೈತೋಟ
Published 6 ಸೆಪ್ಟೆಂಬರ್ 2022, 21:40 IST
Last Updated 6 ಸೆಪ್ಟೆಂಬರ್ 2022, 21:40 IST
   

ಹೆಸರು ಬೇಡ, ಊರು ಬೇಡ

l ಪ್ರಶ್ನೆ: ನನ್ನ ವಯಸ್ಸು 29 ವರ್ಷ, ನಾನು ಬ್ರಿಟನ್ ಮೂಲದ ಫಿನ್‌ಟೆಕ್ ಕಂಪನಿಯೊಂದರಲ್ಲಿ ಸೆಕ್ಯುರಿಟಿಸ್ ಅನಲಿಸ್ಟ್ ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. ತಿಂಗಳಲ್ಲಿ ಸರಿಸುಮಾರು 22 ದಿನ ಕೆಲಸ ಇರುತ್ತದೆ. ಇದು ಗುತ್ತಿಗೆ ಆಧಾರದ ಒಪ್ಪಂದವಾಗಿರುವ ಕಾರಣ ಕೆಲಸ ಮಾಡಿದ ದಿನಗಳಿಗೆ ಸಮಾನವಾಗಿ ನಾನು ಸಂಬಳವನ್ನು ಪೌಂಡ್‌ನಲ್ಲಿ ಪಡೆಯುತ್ತಿದ್ದೇನೆ. ಇದು ಭಾರತದ ರೂಪಾಯಿಗೆ ಪರಿವರ್ತನೆ ಆದಾಗ ತಿಂಗಳಿಗೆ ಸರಾಸರಿ ₹ 70,000 ಆಗುತ್ತದೆ. ನನ್ನ ಪ್ರಶ್ನೆಯೆಂದರೆ, ನಾನು ತೆರಿಗೆಯನ್ನು ಹೇಗೆ ನಿರ್ವಹಿಸಬಹುದು? ನಾನು ಉಳಿತಾಯ ಯೋಜನೆಯನ್ನು ಹೇಗೆ ಹೊಂದಬಹುದು? ನನ್ನ ಕುಟುಂಬಕ್ಕೆ (ತಂದೆ, ತಾಯಿ ಮತ್ತು ಕಿರಿಯ ಸಹೋದರಿ) ವೈದ್ಯಕೀಯ ವಿಮೆ ಹೊಂದುವ ಬಗೆಯನ್ನು ತಿಳಿಸಿ. ನಾನು ಚಿನ್ನ ಖರೀದಿಸುವ ಯೋಜನೆ ಹೊಂದಿದ್ದೇನೆ. ನನ್ನ ತಿಂಗಳ ವೆಚ್ಚ ₹ 10,000 ಮೀರುವುದಿಲ್ಲ ಎಂಬುದನ್ನು ಗಮನಿಸಿ.

ಪ್ರಮೋದ ಶ್ರೀಕಾಂತ ದೈತೋಟ

ಉತ್ತರ: ನೀವು ವಿದೇಶಿ ಕಂಪನಿಯೊಂದಕ್ಕೆ ಭಾರತದಲ್ಲಿದ್ದೇ ಕೆಲಸ ಮಾಡುತ್ತಿದ್ದೀರಿ. ವೇತನ ನಿಮ್ಮ ಖಾತೆಗೆ ಕೆಲಸ ಮಾಡಿದ ದಿನಗಳಿಗೆ ಅನುಗುಣವಾಗಿ ಜಮಾ ಆಗುತ್ತಿದೆ. ನೀವು ನಿವಾಸಿ ಭಾರತೀಯರಾಗಿರುವುದರಿಂದ ಹಾಗೂ ನಿಮ್ಮ ಸೇವೆ ಭಾರತದಿಂದ ದೊರೆಯುತ್ತಿರುವುದರಿಂದ ನಿಮ್ಮ ಒಟ್ಟು ಜಾಗತಿಕ ಆದಾಯವು ಭಾರತೀಯ ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆ. ನಿಮಗೆ ಎಲ್ಲರಂತೆ ತೆರಿಗೆ ಅನ್ವಯವಾಗುತ್ತದೆ. ಇಲ್ಲಿ ನಿಮಗೆ ಗುತ್ತಿಗೆ ಆಧಾರದ ಮೇಲೆ ವೇತನ ಪಾವತಿಸುವಾಗ ವಿದೇಶಿ ತೆರಿಗೆ ನಿಯಮಗಳ ಪ್ರಕಾರ ತೆರಿಗೆ ಕಡಿತ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅಲ್ಲಿ ತೆರಿಗೆ ಕಡಿತ ಮಾಡಿ, ಸಂಬಂಧಿತ ದಾಖಲೆಗಳಿದ್ದಲ್ಲಿ ಎರಡು ದೇಶಗಳ ನಡುವಿನ ದ್ವಿತೆರಿಗೆ ತಪ್ಪಿಸುವ ಒಪ್ಪಂದ ಮೇರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ವ್ಯತ್ಯಾಸವುಳ್ಳ ತೆರಿಗೆ ಮೊತ್ತವನ್ನಷ್ಟೇ ಪಾವತಿಸಬೇಕಾಗುತ್ತದೆ. ಇದಕ್ಕೆ ಸ್ಥಳೀಯ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ADVERTISEMENT

ತೆರಿಗೆ ಉಳಿತಾಯಕ್ಕೆ ಸಂಬಂಧಿಸಿದಂತೆ: ಮೊದಲು ಸೆಕ್ಷನ್ 80ಸಿ ಅಡಿ ಬರುವ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ. ವರ್ಷಕ್ಕೆ ₹ 1.50 ಲಕ್ಷದಷ್ಟು ಮೊತ್ತವನ್ನು ಹೂಡಿಕೆಯಾಗಿಯೂ, ತೆರಿಗೆ ಲಾಭದ ಉದ್ದೇಶಕ್ಕೂ ವಿವಿಧೆಡೆ ಜಮಾ ಮಾಡಬಹುದು. ಇದಲ್ಲದೆ, ನಿವೃತ್ತಿ ಜೀವನಕ್ಕಾಗಿ ನೀವು ಈಗಲೇ ಎನ್‌ಪಿಎಸ್‌ನಲ್ಲೂ ಹೂಡಿಕೆ ಆರಂಭಿಸಬಹುದು. ಇದರಲ್ಲಿ ಈಕ್ವಿಟಿಯಲ್ಲಿ ಹೆಚ್ಚಿನ ಹಣ ತೊಡಗಿಸುವುದರಿಂದ ದೀರ್ಘಾವಧಿಯಲ್ಲಿ ನಿಮ್ಮ ಹೂಡಿಕೆ ದೊಡ್ಡ ಮೊತ್ತವಾಗಬಲ್ಲದು.

ನೀವು ನಿಮ್ಮ ಹೆಸರಲ್ಲಿ ₹ 25 ಲಕ್ಷದಿಂದ ₹ 50 ಲಕ್ಷದವರೆಗಿನ ಅವಧಿ ವಿಮೆ ಪಡೆಯುವುದು ಉತ್ತಮ. ವೈದ್ಯಕೀಯ ವಿಮೆ ಯೋಜನೆಯಡಿ ಫ್ಲೋಟರ್ ಪಾಲಿಸಿ ಬಗ್ಗೆ ವಿಮಾ ಕಂಪನಿಯಿಂದ ಮಾಹಿತಿ ಪಡೆದು ಮುಂದುವರಿಯಿರಿ. ಈ ಎರಡು ವಿಮೆಗಳು ಹೂಡಿಕೆ ಅಲ್ಲದಿದ್ದರೂ ತೆರಿಗೆ ವಿನಾಯಿತಿ ಪ್ರಯೋಜನವನ್ನು ನೀಡುತ್ತವೆ ಹಾಗೂ ವಿಪತ್ತಿನ ಸಂದರ್ಭದಲ್ಲಿ ವಿಮಾ ರಕ್ಷೆ ನೀಡುತ್ತವೆ. ಹೂಡಿಕೆಯ ಉದ್ದೇಶಕ್ಕಾಗಿ ಸಾಂಪ್ರದಾಯಿಕ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಿ. ಹೆಚ್ಚುವರಿಯಾಗಿ ತೆರಿಗೆ ಉಳಿಸುವ ಉದ್ದೇಶವಿದ್ದಲ್ಲಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿಸಿಡಿ(1ಬಿ) ಅಡಿ ₹ 50,000 ಹೆಚ್ಚುವರಿ ಕಡಿತ ನೀಡುವ ಹೂಡಿಕೆಯಲ್ಲಿ ತೊಡಗಿಸಿ. ಹೂಡಿಕೆಯ ಉದ್ದೇಶಕ್ಕಾಗಿ ಚಿನ್ನ ಖರೀದಿಸುವ ಉದ್ದೇಶ ಇದ್ದರೆ ಚಿನ್ನದ ಬಾಂಡ್ ಉತ್ತಮ.

ಸಂಗನಬಸವ ರೆಡ್ಡಿ, ಊರುಬೇಡ

l ಪ್ರಶ್ನೆ: ನನ್ನ ಹತ್ತಿರ ₹ 80 ಲಕ್ಷ ಇದೆ. ಇದನ್ನು ಹೇಗೆ ಬೆಳೆಸುವುದು? ನನಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ನಿಮ್ಮ ವಯಸ್ಸು ಹಾಗೂ ನಿಮ್ಮ ಮಕ್ಕಳ ವಯಸ್ಸು ತಿಳಿಸಿಲ್ಲ. ಹೀಗಾಗಿ ವಯೋಮಾನಕ್ಕೆ ಸಂಬಂಧಿಸಿ ನಿಮ್ಮ ತಕ್ಷಣದ ಅಗತ್ಯ ಅಂದಾಜಿಸುವುದು ಕಷ್ಟ. ಆದರೂ, ನೀವು ನೀಡಿದ ಮಾಹಿತಿಯ ಅಡಿ ಊಹಿಸಿ ಉತ್ತರಿಸುವುದಾದರೆ, ನಿಮ್ಮಲ್ಲಿರುವ ಈ ಹೆಚ್ಚುವರಿ ಮೊತ್ತದಲ್ಲಿ ನಿಮ್ಮ ಹೆಣ್ಣು ಮಕ್ಕಳ ಶಿಕ್ಷಣ - ವಿವಾಹಕ್ಕೆ ಅಗತ್ಯವಾಗಿ ಬೇಕಾದ ಹಣವನ್ನು ಪ್ರತ್ಯೇಕವಾಗಿ ಬ್ಯಾಂಕ್ ಖಾತೆಯಲ್ಲಿ ಹೂಡಿಕೆ ಮಾಡಿ. ಇದು ನಿಮಗೆ ಶೇಕಡ 6-7ರಷ್ಟು ಬಡ್ಡಿ ಕೊಟ್ಟರೂ ಅಸಲು ಭದ್ರವಾಗಿರುತ್ತದೆ. ಅಷ್ಟು ಮೊತ್ತವನ್ನು ಏರಿಳಿತ ಕಾಣುವ ಮ್ಯೂಚುವಲ್ ಫಂಡ್ ಅಥವಾ ಷೇರು ಮಾರುಕಟ್ಟೆಯಲ್ಲಿ ತೊಡಗಿಸದಿರಿ. ಇನ್ನು ಉಳಿದ ಮೊತ್ತವನ್ನಷ್ಟೇ ನೀವು ಹೆಚ್ಚುವರಿ ಲಾಭ ಗಳಿಸುವ ಉದ್ದೇಶಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ನಿವೃತ್ತಿ ಬದುಕು ಹತ್ತಿರವಿದ್ದರೆ ಅಥವಾ ಈಗಾಗಲೇ ನಿವೃತ್ತಿಯಾಗಿದ್ದರೆ, ಸಂಪೂರ್ಣ ಮಾಹಿತಿ ಇಲ್ಲದೆ ಅಪಾಯ ಇರುವ ಎಲ್ಲಿಯೂ ತೊಡಗಿಸದಿರಿ.

ನಿಮ್ಮ ಹಾಗೂ ಮಕ್ಕಳ ವಯೋಮಾನಕ್ಕೆ ಅಗತ್ಯವಿರುವ ಜೀವ ವಿಮೆ, ಆರೋಗ್ಯ ವಿಮೆ ಹೊಂದಿಸಿಕೊಳ್ಳಿ. ಸ್ವಂತ ಮನೆ-ನಿವೇಶನ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿಲ್ಲದಿದ್ದರೆ ಸಾಮಾನ್ಯ ಅಗತ್ಯದಂತೆ ಆ ಬಗ್ಗೆಯೂ ಗಮನ ಹರಿಸಿ. ನೀವು ವೃತ್ತಿಯಲ್ಲಿದ್ದರೆ, ಪಿಂಚಣಿ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಹೆಚ್ಚಿನ ಲಾಭ ಬೇಕಾದರೆ ಉತ್ತಮ ಕಂಪನಿಯ ಷೇರು, ಇಟಿಎಫ್, ಮ್ಯೂಚುವಲ್ ಫಂಡ್‌ಗಳಲ್ಲಿ ಮೇಲೆ ಹೇಳಿರುವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕ್ರಮಬದ್ಧವಾಗಿ ಹೂಡಿಕೆ ಮಾಡಿ. ಒಂದೇ ಬಾರಿಗೆ ಒಂದೇ ರೀತಿಯ ಹೂಡಿಕೆಗಳಲ್ಲಿ ಅಷ್ಟೂ ಮೊತ್ತ ತೊಡಗಿಸದಿರಿ.

ಎಲ್ಲದಕ್ಕಿಂತ ಮುಖ್ಯವಾಗಿ, ಹೂಡಿಕೆದಾರ ನಿರೀಕ್ಷಿಸುವ ಲಾಭದ ಶೇಕಡಾವಾರು ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದು ಅವರವರ ಯೋಚನಾ ಸಾಮರ್ಥ್ಯ ಹಾಗೂ ಮಾನಸಿಕ ಸ್ಥೈರ್ಯ ಆಧರಿಸಿ ಭಿನ್ನವಾಗಿರುತ್ತದೆ. ಮಾತ್ರವಲ್ಲ, ನೀವು ಒಂದು ಹಂತದ ಸರಾಸರಿ ಲಾಭಕ್ಕಿಂತ ಅಧಿಕ ಲಾಭ ನಿರೀಕ್ಷಿಸುತ್ತಿದ್ದರೆ, ಕೆಲವೊಮ್ಮೆ ಅಂತಹ ಹೂಡಿಕೆಗಳಿಂದ ಸಂಭವಿಸಬಹುದಾದ ನಷ್ಟ ತಡೆದುಕೊಳ್ಳುವ ನಿಮ್ಮ ಸಾಮರ್ಥ್ಯದ ಬಗ್ಗೆಯೂ ಮೊದಲೇ ಖಚಿತತೆ ಹೊಂದಿರಬೇಕು.

ಇದಕ್ಕೆ ಬೇಕಾದ ಮಾನಸಿಕ ತಯಾರಿ ಹಾಗೂ ಆಯಾ ಹೂಡಿಕೆ ಕ್ಷೇತ್ರದ ಬಗೆಗಿನ ಸೂಕ್ಷ್ಮ ಮಾಹಿತಿ ಅಥವಾ ಪರಿಣತಿ ಅಗತ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.