ADVERTISEMENT

ಪ್ರಶ್ನೋತ್ತರ: Long Term ಹೂಡಿಕೆ, Short Term ಹೂಡಿಕೆಯಲ್ಲಿನ ವ್ಯತ್ಯಾಸಗಳೇನು?

ಪ್ರಮೋದ್ ಶ್ರೀಕಾಂತ್ ದೈತೋಟ ಅವರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 9 ಜನವರಿ 2024, 21:11 IST
Last Updated 9 ಜನವರಿ 2024, 21:11 IST
ಹೂಡಿಕೆ (ಸಾಂದರ್ಭಿಕ ಚಿತ್ರ)
ಹೂಡಿಕೆ (ಸಾಂದರ್ಭಿಕ ಚಿತ್ರ)   

ಯಲಗೂರೇಶ ಗೌಡ್ರ, ಊರು ತಿಳಿಸಿಲ್ಲ.. ಪ್ರಶ್ನೆ: ಲಾಂಗ್ ಟರ್ಮ್ ಹೂಡಿಕೆ ಮತ್ತು ಶಾರ್ಟ್ ಟರ್ಮ್‌ ಹೂಡಿಕೆಯಲ್ಲಿನ ವ್ಯತ್ಯಾಸಗಳೇನು? ಕಂಪನಿಯು ಕಡಿಮೆ ಲಾಭದಲ್ಲಿ ಸಾಗುತ್ತಿರುವಾಗ ನಾವು ಷೇರು ಮಾರಾಟ ಮಾಡಿ ಮಾರುಕಟ್ಟೆಯಿಂದ ಹಣ ತೆಗೆದುಕೊಂಡು ಮತ್ತೆ ಜಾಸ್ತಿಯಾಗುತ್ತಿರುವಾಗ ಹೂಡಿಕೆ ಮಾಡಿದರೆ ಲಾಂಗ್ ಟರ್ಮ್ ಪ್ರಾಫಿಟ್ ನಮಗೂ ಸಿಗುತ್ತದೆಯೇ? ಇದು ಲಾಂಗ್ ಟರ್ಮ್ ಅನಿಸಿಕೊಳ್ಳುತ್ತದೆಯೇ ಎಂಬ ಬಗ್ಗೆ ತಿಳಿಸಿ.

ಉತ್ತರ: ದೀರ್ಘಾವಧಿ ಹಾಗೂ ಅಲ್ಪಾವಧಿ ಹೂಡಿಕೆಯನ್ನು ಆದಾಯ ತೆರಿಗೆ ನಿಯಮ ಹಾಗೂ ಷೇರು ಮಾರುಕಟ್ಟೆಯ ಸಾಮಾನ್ಯ ವ್ಯವಹಾರ ಪದ್ಧತಿಯ ಆಧಾರದ ಮೇಲೆ ಅರ್ಥೈಸಿಕೊಳ್ಳಬಹುದು. ಆದಾಯ ತೆರಿಗೆ ನಿಯಮದ ಅನ್ವಯ ತೆರಿಗೆ ದರದ ನಿರ್ಣಯಕ್ಕೆ ಷೇರು ಹೂಡಿಕೆಗಳನ್ನು ದೀರ್ಘಾವಧಿ ಹಾಗೂ ಅಲ್ಪಾವಧಿ ಹೂಡಿಕೆಯಾಗಿ ವಿಂಗಡಿಸಲಾಗಿದೆ. ಇದು ಷೇರುಗಳನ್ನು ಕೊಂಡುಕೊಂಡ ದಿನಾಂಕದಿಂದ ಮಾರಾಟ ದಿನಾಂಕದ ಅವಧಿಯನ್ನು ಪರಿಗಣಿಸಿ ನಿರ್ಣಯಿಸಲಾಗುತ್ತದೆ. ನಮ್ಮ ದೇಶದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾರಾಟವಾಗುವ ಷೇರುಗಳೆಲ್ಲವೂ ಅಲ್ಪಾವಧಿ ಹೂಡಿಕೆಗಳೇ. ಇದಕ್ಕಿಂತ ಅಧಿಕ ಅವಧಿಯ ಡಿಮ್ಯಾಟ್ ಖಾತೆಯಲ್ಲಿ ಹೊಂದಿದ್ದರೆ ಅವು ತೆರಿಗೆ ಲೆಕ್ಕಾಚಾರದ ವಿಚಾರಕ್ಕೆ ಸಂಬಂಧಿಸಿ ದೀರ್ಘಾವಧಿ ಹೂಡಿಕೆಗಳಾಗಿವೆ.

ಆದರೆ, ಹೂಡಿಕೆ ವಿಚಾರವಾಗಿ ನೀಡುವ ಸಲಹೆ, ಸೂಚನೆಗೆ ಸಂಬಂಧಿಸಿ ಹೇಳುವುದಾದರೆ, ಅಷ್ಟೊಂದು ನಿಖರ ಸಮಯಾವಧಿಯನ್ನು ಪರಿಗಣಿಸಲಾಗುವುದಿಲ್ಲ. ಸಾಮಾನ್ಯವಾಗಿ 5 ವರ್ಷಕ್ಕಿಂತ ಅಧಿಕ ಅವಧಿಯ ಹೂಡಿಕೆಯಾಗಿದ್ದರಷ್ಟೇ ದೀರ್ಘಾವಧಿ ಎಂದು ಊಹಿಸಲಾಗುತ್ತದೆ. ಪ್ರಮುಖವಾಗಿ ನಾವು ಕೆಲವು ನಿರ್ದಿಷ್ಟ ಉದ್ದೇಶಕ್ಕಾಗಿ ಹೂಡಿಕೆ ಮಾಡುವಾಗ ಈ ವಿಚಾರವನ್ನು ಉಲ್ಲೇಖಿಸಲಾಗುತ್ತದೆ.

ADVERTISEMENT

ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ನಿವೃತ್ತಿ ಆದಾಯಕ್ಕಾಗಿ, ಮನೆ, ವಾಹನ ಇತ್ಯಾದಿ ಖರೀದಿಗಾಗಿ ಸಾಕಷ್ಟು ಸಮಯದಿಂದ ಉಳಿತಾಯ ಮಾಡಬೇಕಾಗುವ ಕಾರಣ ಈ ಅವಧಿಯನ್ನು ಉಲ್ಲೇಖಿಸಲಾಗಿದೆ. ಈ ಉಲ್ಲೇಖದಂತೆ ಒಂದೆರಡು ವರ್ಷದ ಅವಧಿಯನ್ನು ಅಲ್ಪಾವಧಿ ಹಾಗೂ ಮೂರರಿಂದ ಐದು ವರ್ಷದ ಕಾಲಾವಧಿಯನ್ನು ಮಧ್ಯಮಾವಧಿ ಎಂದೂ ಪರಿಗಣಿಸುತ್ತಾರೆ. ಪ್ರಮುಖವಾಗಿ ಇವು ನಮ್ಮ ಹೂಡಿಕೆ ಸಲಹೆ, ನಿರ್ಣಯ ಕೈಗೊಳ್ಳಲು ನೆರವಾಗುತ್ತವೆ.

ಇನ್ನು ಕಂಪನಿಯ ಲಾಭ, ನಷ್ಟ ಅಥವಾ ಅನಿರೀಕ್ಷಿತ ಲಾಭ ಇತ್ಯಾದಿ ಏನೇ ಇದ್ದರೂ ಷೇರು ಮೌಲ್ಯದಲ್ಲಿ ಏರುಪೇರು ಕಾಣಲು ಕಾರಣವಾಗುತ್ತದೆ. ಲಾಭ ಇದ್ದಾಗ ಅಲ್ಪ ಪ್ರಮಾಣದಲ್ಲಿ ಡಿವಿಡೆಂಟ್‌ ನೀಡುವ ಹೂಡಿಕೆದಾರರಿಗೆ ಲಾಭ ಹಂಚಲಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ನೀವು ಊಹಿಸಿದಂತೆ ಕಂಪನಿಯು ವರ್ಷದಿಂದ ವರ್ಷಕ್ಕೆ ಲಾಭ ಮಾಡುತ್ತಿರುವಾಗ ಸಹಜವಾಗಿ ಪ್ರತಿ ಷೇರಿನ ಲಾಭ ವೃದ್ಧಿಸುತ್ತದೆ. ತತ್ಪರಿಣಾಮ ಮಾರುಕಟ್ಟೆ ಬೆಲೆಯೂ ಏರುತ್ತದೆ. ಆದರೆ, ಇದಕ್ಕೆ ಕೆಲವು ತಿಂಗಳು ಕಾಯಬೇಕು ಹಾಗೂ ಲಾಭದ ಗತಿಯು ನಿರಂತರವಾಗಿ ವೃದ್ಧಿಸಿದಾಗ ಮಾತ್ರ ಇದನ್ನು ನಿರೀಕ್ಷಿಸಬಹುದು.

****

ಡಾ.ಅರುಣಕುಮಾರ್, ದಾವಣಗೆರೆ.. ಪ್ರಶ್ನೆ: ನಾನು ಮತ್ತು ನನ್ನ ಹೆಂಡತಿ ಇಬ್ಬರೂ 40 ವರ್ಷ ವಯಸ್ಸಿನ ಖಾಸಗಿ ವೈದ್ಯರಾಗಿದ್ದು, ಖರ್ಚು ತೆಗೆದು ತಿಂಗಳಿಗೆ ಅಂದಾಜು ₹30 ಸಾವಿರದಿಂದ ₹35 ಸಾವಿರ ಉಳಿತಾಯ ಮಾಡುತ್ತೇವೆ. ಒಂದು 30*40 ಸೈಟ್ ಹೊಂದಿದ್ದು ಸದ್ಯ ದಾವಣಗೆರೆಯಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. ನನ್ನ ಇಬ್ಬರು ಅವಳಿ ಮಕ್ಕಳು 6 ವರ್ಷದವರಾಗಿದ್ದು ಅವರು ಪಿಯುಸಿ ಮುಗಿಸಿದ ಮೇಲೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಮತ್ತು ನಮಗೆ 60 ವರ್ಷದ ನಂತರ ಮಾಸಿಕ ಪಿಂಚಣಿ ಪಡೆಯಲು ಷೇರು ಮಾರುಕಟ್ಟೆಯಂತಹ ರಿಸ್ಕ್ ಹೂಡಿಕೆಯನ್ನು ಹೊರತುಪಡಿಸಿ ಅನುಕೂಲವಾಗುವ ಒಳ್ಳೆಯ ಹೂಡಿಕೆಗಳ ಬಗ್ಗೆ ತಿಳಿಸಿ ಕೊಡಿ.

ಉತ್ತರ: ಹೂಡಿಕೆಯಲ್ಲಿ ಅನೇಕ ಪ್ರಕಾರದ ಅವಕಾಶಗಳಿವೆ ಎನ್ನುವುದು ಈಗಾಗಲೇ ತಮಗೆ ಗೊತ್ತಿರಬಹುದುದು. ನಮ್ಮ ಆದ್ಯತೆ, ಸಮಯದ ಪರಿಧಿ ಹಾಗೂ ಹೂಡಿಕೆಗೆ ಅಗತ್ಯವಿರುವ ಮೊತ್ತದ ಖಚಿತತೆ ಇದ್ದಾಗ ನಿರ್ಧಾರ ತುಸು ಸುಲಭ. ಈಗಾಗಲೇ, ಮನೆ ಕಟ್ಟಲು ನಿವೇಶನ ಕೊಂಡಿದ್ದೀರಿ. ಇದು ಹೂಡಿಕೆಯಾಗಿದ್ದರೂ ಮುಂದೆ ಹಣದ ನಗದೀಕರಣದ ದೃಷ್ಟಿಯಿಂದ ಮಾಡಿರುವ ಹೂಡಿಕೆಯಾಗಿರಲಾರದು. ಹೀಗಾಗಿ ಮುಂದಿನ ಹೂಡಿಕೆಯು ಭವಿಷ್ಯದಲ್ಲಿ ಸೂಕ್ತ ಲಾಭ ನೀಡುವ ದೃಷ್ಟಿಯಿಂದಷ್ಟೇ ಎಂದು ಊಹಿಸಿ ನಿಮ್ಮ ಪ್ರಶ್ನೆಗೆ ಉತ್ತರಿಸಲಾಗಿದೆ.

ಈಗಾಗಲೇ, ನೀವು ನೇರ ಷೇರು ಮಾರುಕಟ್ಟೆ ಬಿಟ್ಟು ಉಳಿದ ಹೂಡಿಕೆಗೆ ಮಾನಸಿಕವಾಗಿ ಸಿದ್ಧತೆ ನಡೆಸಿರುವುದರಿಂದ ಅದಕ್ಕೆ ಬದಲಾಗಿ ಮಧ್ಯಮ ದರದ ಲಾಭ ನೀಡುವ ಮ್ಯೂಚುವಲ್ ಫಂಡ್‌ಗಳನ್ನೂ ನಿಮ್ಮ ಉದ್ದೇಶಕ್ಕೆ ಆಯ್ಕೆ ಮಾಡಿಕೊಳ್ಳಬಹುದು.

ನಿಮ್ಮ ಅವಳಿ ಮಕ್ಕಳ ಪ್ರಸ್ತುತ ವಯಸ್ಸು 6 ವರ್ಷ ಹಾಗೂ ನಿಮ್ಮ ವಯಸ್ಸು 40 ವರ್ಷ. ಪಿಯುಸಿ ಕಳೆದಂತೆ ಮಕ್ಕಳ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಇನ್ನು 10 ವರ್ಷದ ಸಮಯಾವಕಾಶ ಇದೆ. ಅದೇ ರೀತಿ ನಿಮ್ಮ ನಿವೃತ್ತಿಗೆ ಇನ್ನು 20 ವರ್ಷದ ಸಮಯವಿದೆ. ಈ ಅವಧಿಯಲ್ಲಿ ನೀವು ಪ್ರತಿವರ್ಷ ಮಾಡುವ ₹3.60 ಲಕ್ಷ ನಿರಂತರ ಹೂಡಿಕೆಯು ಹತ್ತು ವರ್ಷದ ಕೊನೆಗೆ ಅಸಲು ₹36 ಲಕ್ಷವಾಗುತ್ತದೆ ಹಾಗೂ 20 ವರ್ಷದ ಕೊನೆಗೆ ನಿಮ್ಮ ಹೂಡಿಕೆಯ ಅಸಲು ₹72 ಲಕ್ಷ ಆಗಿರುತ್ತದೆ.

ಮಧ್ಯಮ ಬೆಳವಣಿಗೆ ದರ (8-10) ಅನ್ವಯಿಸಿ ನಾವು ಲೆಕ್ಕ ಹಾಕಿದರೂ ಹತ್ತು ವರ್ಷದ ಕೊನೆಗೆ ₹36 ಲಕ್ಷವು ಸುಮಾರಾಗಿ ₹56 ಲಕ್ಷದಿಂದ ₹63 ಲಕ್ಷ ಆಗುತ್ತದೆ. ಈ ಮೊತ್ತ ನಗದೀಕರಿಸದೆ ಮುಂದುವರಿಸಿದರೆ ಅದೇ ಬೆಳವಣಿಗೆ ದರದಲ್ಲಿ ₹1.78 ಕೋಟಿಯಿಂದ ₹2.26 ಕೋಟಿ ಮೊತ್ತವಾಗುತ್ತದೆ. ಪ್ರತಿವರ್ಷ ನೀವು ನಿಮ್ಮ ಹೂಡಿಕೆ ಮೊತ್ತವನ್ನು ಹಿಂದಿನ ವರ್ಷಕ್ಕಿಂತ ಶೇ 5ರಷ್ಟು ವೃದ್ಧಿಸುತ್ತಾ ಹೋದರೆ ಹತ್ತು ವರ್ಷದ ಕೊನೆಗೆ ₹45.28 ಲಕ್ಷವು ಸುಮಾರಾಗಿ ₹69 ಲಕ್ಷದಿಂದ ₹76 ಲಕ್ಷ ಆಗುತ್ತದೆ. ಇದೇ ಹೆಚ್ಚುವರಿ ಹೂಡಿಕೆ ಮೊತ್ತ ನಗದೀಕರಿಸದೆ ಮುಂದುವರಿಸಿದರೆ 20 ವರ್ಷದಲ್ಲಿ ₹2.60 ಕೋಟಿಯಿಂದ ₹3.22 ಕೋಟಿ ಮೊತ್ತವಾಗುತ್ತದೆ.

ಈ ಹೂಡಿಕೆ ಒಮ್ಮೆಗೆ ನೋಡಿದರೆ ಅಚ್ಚರಿಯಾಗಬಹುದು. ಇದಕ್ಕಾಗಿ ಪ್ರತಿ ತಿಂಗಳು ಮ್ಯೂಚುವಲ್ ಫಂಡ್ ಹೂಡಿಕೆಯೇ ಸೂಕ್ತ. ನಿಮ್ಮ ಹೂಡಿಕೆಯ ಶೇ 25ರಷ್ಟನ್ನು ಇಕ್ವಿಟಿ ವಿಭಾಗಕ್ಕೆ ಹೂಡಿಕೆ ಮಾಡುವ ಕನ್ಸರ್ವೇಟಿವ್ ಹೈಬ್ರಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ದೀರ್ಘಾವಧಿಯಲ್ಲಿ ಈ ಲಾಭ ನಿರೀಕ್ಷಿಸಬಹುದು. ಉಳಿದ ಮೊತ್ತ ಭದ್ರತೆ ಇರುವ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇತರ ಯಾವುದೇ ಇಕ್ವಿಟಿ ಹೂಡಿಕೆಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸವಿರುವ ಕಾರಣ ಮಾರುಕಟ್ಟೆ ಅಪಾಯ ತುಸು ಅಧಿಕ. ಆದರೆ, ದೀರ್ಘಾವಧಿಯಲ್ಲಿ ಈ ರಿಸ್ಕ್ ಗೌಣ ಎನ್ನುವುದು ಗಮನದಲ್ಲಿರಲಿ. ಇನ್ನೂ ಒಂದು ಆಯ್ಕೆಯಾಗಿ ವರ್ಷಕ್ಕೆ ₹50 ಸಾವಿರ ಎನ್‌ಪಿಎಸ್‌ನಲ್ಲೂ ಹೂಡಿಕೆ ಮಾಡಬಹುದು. 60 ವಯಸ್ಸಿನ ನಂತರ ಪಿಂಚಣಿ ಹಾಗೂ ಅಂದಿನ ಮೊತ್ತ ನಗದೀಕರಿಸುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.