ADVERTISEMENT

ಹಣಕಾಸು ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 1 ಸೆಪ್ಟೆಂಬರ್ 2020, 20:12 IST
Last Updated 1 ಸೆಪ್ಟೆಂಬರ್ 2020, 20:12 IST
   

ಪ್ರಶ್ನೆ: ನನ್ನ ಮಕ್ಕಳು ಪುಸ್ತಕದ ಅಂಗಡಿ ಹಾಗೂ ಕಂಪ್ಯೂಟರ್‌ ಸೆಂಟರ್‌ ಇಟ್ಟುಕೊಂಡಿದ್ದಾರೆ. ನನ್ನ ಉಳಿತಾಯ ಖಾತೆಯಿಂದ ಗ್ರಾಹಕರಿಗೆ, ಅಂದರೆ ಬೇರೊಬ್ಬರ ಖಾತೆಗೆ, ಬೇರೆ ಊರಿಗೆ ಪ್ರತಿ ದಿನ ₹ 10 ಸಾವಿರದಿಂದ ₹ 15 ಸಾವಿರ ಕಳಿಸುತ್ತಿದ್ದೇನೆ. ಈ ರೀತಿ ಹಣದ ವಹಿವಾಟು ಮಾಡಲು ಪರವಾನಗಿ ಬೇಕೇ? ಆದಾಯ ತೆರಿಗೆ ಬರುತ್ತದೆಯೇ?

ಶಂಕರಪ್ಪ (ಹೆಸರು ಬದಲಾಯಿಸಲಾಗಿದೆ), ತುಮಕೂರು

ಉತ್ತರ: ನಿಮ್ಮ ಪ್ರಶ್ನೆ ಅರ್ಥ ಆಗಲಿಲ್ಲ. ನೀವು ಪ್ರತಿ ದಿನ ಬೇರೆಯವರ ಬೇರೆ ಊರಿನ ಖಾತೆಗೆ ಹಣ ಜಮಾ ಮಾಡುವ ಉದ್ದೇಶ ಅಥವಾ ಅವಶ್ಯಕತೆ ಏನು ಎಂಬುದನ್ನು ತಿಳಿಸಿಲ್ಲ. ನೀವು ಲೇವಾದೇವಿದಾರರಾದಲ್ಲಿ ಪರವಾನಗಿ ಬೇಕಾಗುತ್ತದೆ. ನೀವು ಹಣ ಕಳಿಸುವುದನ್ನು ಮಾತ್ರ ಕೇಳಿದ್ದೀರಿ. ಲೇವಾದೇವಿಯಲ್ಲಿ ಸಾಲ ಕೊಟ್ಟು ವಾಪಾಸ್‌ ಪಡೆಯುವ ವ್ಯವಹಾರ ಇರುತ್ತದೆ. ಯಾವುದೇ ವ್ಯವಹಾರ, ಉದ್ಯೋಗದಲ್ಲಿ ಲಾಭಗಳಿಸಿದರೆ ಆದಾಯ ತೆರಿಗೆ ಇಲಾಖೆ ನಿಯಮಗಳ ಅನುಸಾರ ತೆರಿಗೆ ಕೊಡಬೇಕಾಗುತ್ತದೆ. ನೀವು ತಕ್ಷಣ ತುಮಕೂರಿನ ಯಾರಾದರೊಬ್ಬರು ಚಾರ್ಟರ್ಡ್‌ ಅಕೌಂಟೆಂಟ್ ಬಳಿ ವಿವರಣೆ ಪಡೆಯಿರಿ.

ADVERTISEMENT

ಪ್ರಶ್ನೆ: ನನ್ನ ವಯಸ್ಸು 81. ನಿವೃತ್ತಿ ಹೊಂದಿ ಮಾಸಿಕ ಪಿಂಚಣಿ ₹ 45 ಸಾವಿರ ಪಡೆಯುತ್ತಿದ್ದೇನೆ. ಮನೆ ಬಾಡಿಗೆ ಇತ್ಯಾದಿ ₹ 40 ಸಾವಿರ ಆದಾಯವಿದೆ. ನನ್ನ ಕಾಲಾನಂತರ ಒದಗಿಬರಬಹುದಾದ ಖರ್ಚು ನಿರ್ವಹಣೆಗೋಸ್ಕರ ಕುಟುಂಬದ ಟ್ರಸ್ಟ್ ಮಾಡಿ ಅದರಲ್ಲಿ ₹ 10 ಲಕ್ಷ ಇಟ್ಟಿದ್ದೇನೆ. ಈ ಹಣ ಬಡ್ಡಿ ಸಮೇತ ₹ 12 ಲಕ್ಷವಾಗಿದೆ. ಬಡ್ಡಿ ಆದಾಯಕ್ಕೆ ಆದಾಯ ತೆರಿಗೆ ಬರುತ್ತದೆಯೇ. ಬಾರದಂತೆ ಮಾಡಲು ಮಾರ್ಗ ತಿಳಿಸಿ.

ಸುಬ್ಬರಾಯ, ಬೆಂಗಳೂರು

ಉತ್ತರ: ನೀವು ಕುಟುಂಬದ ಟ್ರಸ್ಟ್ ಹೆಸರಿನಲ್ಲಿ ಚೆಕ್‌ ಮುಖಾಂತರ ₹ 10 ಲಕ್ಷ ವರ್ಗಾಯಿಸಿರಬೇಕು. ಇಲ್ಲಿ ಬರುವ ಬಡ್ಡಿ ನಿಮ್ಮ ಆದಾಯಕ್ಕೆ ಸೇರಿಸುವ ಅವಶ್ಯವಿಲ್ಲ. ನೀವಾಗಲಿ ಕುಟುಂಬದ ಟ್ರಸ್ಟ್‌ ಆಗಲಿ ಹೀಗೆ ಬಂದಿರುವ ₹ 2 ಲಕ್ಷ ಬಡ್ಡಿಗೆ ಆದಾಯ ತೆರಿಗೆ ಕೊಡುವ ಅವಶ್ಯಕತೆ ಇಲ್ಲ. ಕುಟುಂಬದ ಟ್ರಸ್ಟ್‌ಗೆ ಮುಂದೆ ಹೂಡಿಕೆ ಮಾಡಬಹುದು. ಇಂತಹ ಟ್ರಸ್ಟ್‌ಗಳು ಸ್ವತಂತ್ರವಾಗಿರುವುದರಿಂದ ಆದಾಯ ತೆರಿಗೆ ಮಿತಿ ದಾಟುವ ತನಕ ತೆರಿಗೆ ಕೊಡುವ ಅವಶ್ಯಕತೆ ಇಲ್ಲ.

ಪ್ರಶ್ನೆ: ನಾನು ಬ್ಯಾಂಕಿನ ನಿವೃತ್ತ ನೌಕರ. ವಯಸ್ಸು 64. 2015ರಲ್ಲಿ ನಿವೃತ್ತನಾದೆ. ನನ್ನ ಹಣಕಾಸಿನ ವಿವರ; ಪಿಂಚಣಿ ವಾರ್ಷಿಕ ₹ 4.20 ಲಕ್ಷ. ಬ್ಯಾಂಕ್‌ ಠೇವಣಿ ₹ 2.60 ಲಕ್ಷ. ಉಳಿತಾಯ ಖಾತೆ ಬಡ್ಡಿ ₹ 15 ಸಾವಿರ. ನಾನು ಈಗಾಗಲೇ ಎಸ್‌ಬಿಐನಲ್ಲಿ ಐದು ವರ್ಷಗಳ ಅವಧಿಗೆ ₹ 10 ಲಕ್ಷ ಠೇವಣಿ ಇರಿಸಿದ್ದೇನೆ. ಇನ್ನು ಎರಡು–ಮೂರು ತಿಂಗಳಿನಲ್ಲಿ ₹ 5 ಲಕ್ಷ ಇಡುತ್ತೇನೆ. ಇದು 80ಸಿಗೆ ಬರುತ್ತದೆಯೇ ತಿಳಿಸಿ. ಆರೋಗ್ಯ ವಿಮೆಗೆ ₹ 38 ಸಾವಿರ ಕಟ್ಟುತ್ತೇನೆ. ನಾನು ಈಗ ಬಾಡಿಗೆ ಮನೆಯಲ್ಲಿದ್ದೇನೆ. ಬಾಡಿಗೆ ತಿಂಗಳಿಗೆ ₹ 22 ಸಾವಿರ. ಇದಕ್ಕೆ ಎಷ್ಟು ತೆರಿಗೆ ವಿನಾಯಿತಿ ಬರುತ್ತದೆ?

ಡಿ.ಎನ್‌. ಮಂಜುನಾಥ, ಬೆಂಗಳೂರು

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಆದಾಯ ಹಾಗೂ ಠೇವಣಿ ಮೇಲಿನ ಬಡ್ಡಿ ಆದಾಯ ಸೇರಿಸಿ, ಅದರಲ್ಲಿ ಸೆಕ್ಷನ್ 16 ಆಧಾರದ ಮೇಲೆ ₹ 50 ಸಾವಿರ ಸ್ಟ್ಯಾಂಡರ್ಡ್‌ ಡಿಡಕ್ಷನ್‌, ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಬ್ಯಾಂಕ್‌ ಠೇವಣಿಯಲ್ಲಿ ಬರುವ ಬಡ್ಡಿಯಲ್ಲಿ ಗರಿಷ್ಠ ₹ 50 ಸಾವಿರ, ಹೀಗೆ ಇವೆರಡನ್ನೂ ಕಳೆಯಬಹುದು.

ನೀವು ಎಸ್‌ಬಿಐನಲ್ಲಿ ಇಟ್ಟಿರುವ ಠೇವಣಿ, ಸೆಕ್ಷನ್‌ 80ಸಿ ಆಧಾರದ ಮೇಲೆ ತೆರಿಗೆ ಉಳಿಸುವ ಠೇವಣಿ ಆದಲ್ಲಿ ಮಾತ್ರ (ಎಸ್‌ಬಿಐಗೆ ಹೋಗಿ ಬಾಂಡ್‌ ತೋರಿಸಿ ವಿವರ ತಿಳಿಯಿರಿ) ಇದರಲ್ಲಿ ಗರಿಷ್ಠ ₹ 1.50 ಲಕ್ಷ ಒಂದು ವರ್ಷಕ್ಕೆ ವಿನಾಯಿತಿಗೆ ಉಪಯೋಗವಾಗುತ್ತದೆ. ಒಟ್ಟಿನಲ್ಲಿ ನಿಮ್ಮ ವಾರ್ಷಿಕ ಆದಾಯದಲ್ಲಿ ಇಲ್ಲಿ ವಿವರಣೆ ನೀಡಿದಂತೆ ಸೆಕ್ಷನ್‌ 80ಟಿಟಿಬಿ, ಸೆಕ್ಷನ್‌ 16 ಹಾಗೂ ಸೆಕ್ಷನ್‌ 80ಸಿ... ಮೂರರಿಂದ ₹ 2.50 ಲಕ್ಷ ಒಟ್ಟು ಆದಾಯದಿಂದ ಕಳೆಯಬಹುದು. ಹೀಗೆ ವಿನಾಯಿತಿ ಪಡೆದ ನಂತರವೂ ಒಟ್ಟು ಆದಾಯ ₹ 5 ಲಕ್ಷ ದಾಟಿದಲ್ಲಿ ನೀವು ಆದಾಯ ತೆರಿಗೆ ಕೊಡಬೇಕಾಗುತ್ತದೆ. ಬಾಡಿಗೆ ಮನೆಯಲ್ಲಿದ್ದು ₹ 22 ಸಾವಿರ ತಿಂಗಳಿಗೆ ಕೊಡುತ್ತಿದ್ದರೂ ಈ ಖರ್ಚಿನಿಂದ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. ನವೆಂಬರ್‌ 30ರ ಒಳಗಾಗಿ ಐ.ಟಿ. ರಿಟರ್ನ್ಸ್‌ ಸಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.