ಸಂದೇಶ್ ದೇಸಾಯಿ, ಊರು ತಿಳಿಸಿಲ್ಲ
ಪ್ರಶ್ನೆ: ನನಗೆ 25 ವರ್ಷ ವಯಸ್ಸು. ನನಗೆ ಬರುವ ವೇತನದಲ್ಲಿ ನಾನು ಉಳಿತಾಯಕ್ಕಾಗಿ ಬಹುರಾಜ್ಯ ಸಹಕಾರ ಸಂಘದಲ್ಲಿ ₹20,000 ತಿಂಗಳ ಉಳಿತಾಯ ಮಾಡುತ್ತಿದ್ದೇನೆ. ಈ ಸಂಸ್ಥೆಯು ಬಹುರಾಜ್ಯ ಸಹಕಾರ ಕಾಯ್ದೆ 2002ರ ಅಡಿ ನೋಂದಣಿ ಆಗಿದೆ. ಇದು ಸೂಕ್ತ ನಿರ್ಧಾರವೇ?
ಉತ್ತರ: ನೀವು ಪ್ರತಿ ತಿಂಗಳು ₹20,000ವನ್ನು ಬಹುರಾಜ್ಯ ಸಹಕಾರ ಸಂಘವೊಂದರಲ್ಲಿ ಉಳಿತಾಯ ಮಾಡುತ್ತಿರುವುದು ಗಮನಾರ್ಹ. ಇಂತಹ ಸಹಕಾರ ಸಂಘಗಳು ಸಂಬಂಧಿತ ಕಾಯ್ದೆಯ ಅಡಿ ನೋಂದಾಯಿತ ಆಗಿದ್ದರೂ, ಇವು ‘ಬ್ಯಾಂಕಿಂಗ್ ಸಂಸ್ಥೆ’ಯ ವ್ಯಾಖ್ಯೆಯಡಿ ಬರುವ ವಾಣಿಜ್ಯ ಬ್ಯಾಂಕುಗಳು ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲ. ಆದ್ದರಿಂದ, ಆರ್ಥಿಕ ಅಪಾಯ ಅಥವಾ ಅದರ ಭದ್ರತೆಯ ವಿಚಾರವಾಗಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳುವುದು ಮುಖ್ಯ.
ಮೊದಲನೆಯದಾಗಿ, ಭದ್ರತೆ ವಿಷಯದಲ್ಲಿ ಈ ಸೊಸೈಟಿಗಳಲ್ಲಿ ಠೇವಣಿ ಮಾಡಿದ ಹಣಕ್ಕೆ, ಠೇವಣಿ ವಿಮಾ ಮತ್ತು ಋಣ ಭದ್ರತಾ ನಿಗಮ, ಆರ್‌ಬಿಐ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ನೇರ ಖಾತರಿ ಇರುವುದಿಲ್ಲ. ಆದರೆ ಇತರ ಬ್ಯಾಂಕ್‌ಗಳು ತಮ್ಮ ಗ್ರಾಹಕರು ಹೊಂದಿರುವ ಠೇವಣಿಗೆ ಪ್ರತಿ ವರ್ಷ ವಿಮಾ ಪ್ರಿಮಿಯಂ ಪಾವತಿಸಿ ₹5 ಲಕ್ಷದವರೆಗಿನ ಠೇವಣಿಗೆ ವಿಮೆ ನೀಡುತ್ತವೆ. ಆದರೆ, ಇಂತಹ ಸಂಘಗಳಲ್ಲಿ ಠೇವಣಿದಾರರು ಅವರ ಠೇವಣಿ ಕಳೆದುಕೊಂಡ ಸಂದರ್ಭದಲ್ಲಿ, ಹಣವನ್ನು ಮರಳಿ ಪಡೆಯಲು ವಿಮಾ ರಕ್ಷಣೆ ಇರುವುದಿಲ್ಲ.
ನಿಮ್ಮ ಇಪ್ಪತೈದನೆಯ ವಯಸ್ಸಿನಲ್ಲಿ ದೀರ್ಘಾವಧಿ ಉಳಿತಾಯ ಹಾಗೂ ಹೂಡಿಕೆಗೆ ನಿಗದಿತ ಬಡ್ಡಿ ನೀಡುವ ಠೇವಣಿಗಳನ್ನು ಮಾತ್ರವೇ ಆಶ್ರಯಿಸುವುದು ಬೇಡ. ನಿಮ್ಮ ಹೂಡಿಕೆ ಸಣ್ಣ ಪ್ರಮಾಣದ್ದಾದರೂ ವಿವಿಧ ವರ್ಗಗಳಿಗೆ ಸೇರಿದ ಹೂಡಿಕೆಗಳಲ್ಲಿ ಹಣ ತೊಡಗಿಸುವುದು ಮುಖ್ಯ. ಇದರಿಂದ ವಿವಿಧ ಸನ್ನಿವೇಶಗಳಲ್ಲಿ ಒಂದೊಂದು ರೀತಿಯ ಹೂಡಿಕೆಗಳು ಆಯಾ ಪರಿಸ್ಥಿತಿಗೆ ಅನುಗುಣವಾಗಿ ಲಾಭ ನೀಡುತ್ತವೆ. ನಿಮ್ಮ ಮುಂದಿನ ಹಂತದ ಹೂಡಿಕೆಯ ವೇಳೆ ಈ ವಿಚಾರ ಗಮನದಲ್ಲಿರಲಿ. ನೀವು ಹಣ ತೊಡಗಿಸಿರುವ ಸಂಸ್ಥೆಯು ಬಹುರಾಜ್ಯ ಸಹಕಾರ ಸಂಘದ ಕಾಯ್ದೆಯ ಅಡಿ ನೋಂದಣಿಯಾಗಿದ್ದರೆ ಮಾತ್ರ ಸಾಲದು, ಬದಲಾಗಿ ಠೇವಣಿಗೆ ಭದ್ರತೆಯೂ ಬೇಕು. ನಿಮ್ಮ ಹಣವನ್ನು ‘ಬ್ಯಾಂಕ್’ ವ್ಯಾಖ್ಯೆಯಡಿ ಬರುವ ಯಾವುದೆ ಬ್ಯಾಂಕ್‌ಗಳಲ್ಲಿ ತೊಡಗಿಸುವುದರಿಂದ ಆರ್ಥಿಕ ಭದ್ರತೆ ಹೆಚ್ಚಾಗುತ್ತದೆ.
ಮಹೇಶಗೌಡ ಪಾಟೀಲ, ಬೆಂಗಳೂರು
ಪ್ರಶ್ನೆ: ನಾನು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದ ನೌಕರ, ₹35,000 ತಿಂಗಳ ಸಂಬಳ. ನನ್ನ ವಯಸ್ಸು 25 ವರ್ಷ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಏಕೀಕೃತ ಪಿಂಚಣಿ ವ್ಯವಸ್ಥೆ (ಯುಪಿಎಸ್) ಆಯ್ಕೆ ಮಾಡಿಕೊಳ್ಳಬೇಕೆ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಯ (ಎನ್‌ಪಿಎಸ್) ಪದ್ಧತಿಯಲ್ಲೇ ಮುಂದುವರಿಯಬೇಕೆ ಎಂಬ ಬಗೆಗಿನ ಗೊಂದಲ ಪರಿಹಾರಕ್ಕೆ ಸೂಕ್ತ ಮಾಹಿತಿ ಬೇಕಾಗಿದೆ. ಇವೆರಡರಲ್ಲಿ ಯಾವುದು ನನ್ನ ಭವಿಷ್ಯಕ್ಕೆ ಉತ್ತಮ?
ಉತ್ತರ: ಕೇಂದ್ರ ಸರ್ಕಾರವು 2025ರ ಏಪ್ರಿಲ್ 1ರಿಂದ ಹೊಸದಾಗಿ ಜಾರಿಗೆ ತಂದಿರುವ ಯುಪಿಎಸ್, ಕೇಂದ್ರ ಸರ್ಕಾರದ ನೌಕರರಿಗೆ ಎನ್‌ಪಿಎಸ್‌ಗಿಂತ ತುಸು ಭಿನ್ನವಾದ ಪಿಂಚಣಿ ಯೋಜನೆ. ಈ ಹೊಸ ಯೋಜನೆಗೆ ವರ್ಗಾವಣೆಗೊಳ್ಳುವುದಕ್ಕೆ ಒಂದು ಅವಕಾಶ ನೀಡಲಾಗಿದೆ. ಇದು ಖಚಿತ ಹಾಗೂ ಮಾರುಕಟ್ಟೆ ಸೂಚ್ಯಂಕಕ್ಕೆ ಅನುಗುಣವಾಗಿ ದೊರೆಯುವ ಲಾಭಗಳನ್ನು ನೌಕರರಿಗೆ ನಿವೃತ್ತಿಯ ನಂತರ ನೀಡುತ್ತದೆ.
ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿರ್ವಹಿಸುವ ಎನ್‌ಪಿಎಸ್ ಪರಿಧಿಯೊಳಗೆ ಕಾರ್ಯಗತಗೊಳಿಸಲಾಗಿದೆ. ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ಸೇವೆಯಲ್ಲಿರುವ ಮತ್ತು ನಿವೃತ್ತ ನೌಕರರಿಗೆ ಯುಪಿಎಸ್ ಆಯ್ಕೆಗೆ ಅವಕಾಶವಿದೆ. ಎನ್‌ಪಿಎಸ್ ವ್ಯವಸ್ಥೆಯಲ್ಲಿ ಇರುವವರು ಯುಪಿಎಸ್ ಆಯ್ಕೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರ ಗಡುವು ನಿಗದಿ ಮಾಡಲಾಗಿದೆ (ಇದನ್ನು ವಿಸ್ತರಿಸುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳಿವೆ).
ಒಂದು ವೇಳೆ ನೀವು ಯುಪಿಎಸ್ ಆಯ್ಕೆ ಮಾಡದಿದ್ದಲ್ಲಿ, ನಿಮ್ಮ ಎನ್‌ಪಿಎಸ್ ಆಯ್ಕೆ ಮುಂದುವರಿಯುತ್ತದೆ. ನಿವೃತ್ತಿಯ ಕೊನೆಯ ವರ್ಷದಲ್ಲಿ ಅಥವಾ ರಾಜಿನಾಮೆ ನೀಡುವ ಸಂದರ್ಭದಲ್ಲಿ ಮತ್ತೆ ಎನ್‌ಪಿಎಸ್ ಯೋಜನೆಗೆ ವರ್ಗಾವಣೆಗೊಳ್ಳುವುದಕ್ಕೆ ಸೇವಾವಧಿಯಲ್ಲಿ ಒಂದು ಬಾರಿ ಅವಕಾಶವಿದೆ. ಆದರೆ, ಎನ್‌ಪಿಎಸ್ ಅಡಿ, ನೌಕರ ಹಾಗೂ ಸರ್ಕಾರದ ದೇಣಿಗೆ ಮೊತ್ತವು ಮಾರುಕಟ್ಟೆ ಆಧಾರಿತ ಹೂಡಿಕೆಗಳಾದ ಷೇರು, ಸಾಲಪತ್ರ ಹಾಗೂ ಸರ್ಕಾರದ ಭದ್ರತೆಯ ಠೇವಣಿಗಳಲ್ಲಿ ವಿನಿಯೋಗ ಆಗಿರುತ್ತದೆ. ಇದರ ಪರಿಣಾಮ, ಮಾರುಕಟ್ಟೆ ಬೆಳವಣಿಗೆ ಹೆಚ್ಚು ಇದ್ದರೆ ಲಾಭದ ಪ್ರಮಾಣ ಹೆಚ್ಚು ದೊರೆಯಬಹುದು. ಆದರೆ, ಮಾರುಕಟ್ಟೆ ಕುಸಿದರೆ ಲಾಭ ಕಡಿಮೆಯಾಗುವ ಅಪಾಯ ಇದೆ. ಇಲ್ಲಿ ‘ಕನಿಷ್ಠ ಪಿಂಚಣಿ’ ಎಂಬ ವಿಚಾರ ಇಲ್ಲ. ಎಲ್ಲವೂ ಮಾರುಕಟ್ಟೆ ಆಧಾರಿತ ಹೂಡಿಕೆಯ ಮೇಲಿನ ಲಾಭ-ನಷ್ಟವನ್ನು ಅವಲಂಬಿಸಿದೆ.
ನೀವು ಇನ್ನೂ ದೀರ್ಘವಾದ ಸೇವಾವಧಿ ಹೊಂದಿರುವ ಉದ್ಯೋಗಿ ಹಾಗೂ ಹೂಡಿಕೆಗೆ ಸಾಕಷ್ಟು ಅವಕಾಶ - ಸಮಯ ಎರಡೂ ಇದೆ. ಎನ್‌ಪಿಎಸ್ ಬಹಳ ಹೆಚ್ಚು ಬೆಳವಣಿಗೆಯ ಅವಕಾಶ ಕೊಡಬಹುದು, ಆದರೆ ಅದರಲ್ಲೂ ಮಾರುಕಟ್ಟೆ ಅಪಾಯವಿದೆ. ಇತ್ತೀಚೆಗೆ ಪರಿಚಯಿಸಲ್ಪಟ್ಟ ಯುಪಿಎಸ್ ಭದ್ರತೆ ಮತ್ತು ಮಾರುಕಟ್ಟೆ ಆಧಾರಿತ ಹೂಡಿಕೆಯ ಬೆಳವಣಿಗೆಯನ್ನೂ ಸರಿದೂಗಿಸುವ ಆಯ್ಕೆಯಾಗಿದೆ. ದೀರ್ಘಾವಧಿಯಲ್ಲಿ ಯುಪಿಎಸ್ ಹೆಚ್ಚು ಸಮತೋಲನದ ಆಯ್ಕೆಯಾಗಿ ಕಾಣುತ್ತದೆ, ಏಕೆಂದರೆ ಇದು ಕನಿಷ್ಠ ಪಿಂಚಣಿ ಭರವಸೆಯೊಡನೆ ಭವಿಷ್ಯದಲ್ಲಿ ಹೆಚ್ಚುವರಿ ಲಾಭಕ್ಕೂ ಅವಕಾಶ ಕಲ್ಪಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.