ADVERTISEMENT

ಪೇಟೆಯಲ್ಲಿ ಹೆಚ್ಚಿದ ಬಂಡವಾಳ ಹರಿವು

ಕೆ.ಜಿ ಕೃಪಾಲ್
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಪೇಟೆಯಲ್ಲಿ ಹೆಚ್ಚಿದ ಬಂಡವಾಳ ಹರಿವು
ಪೇಟೆಯಲ್ಲಿ ಹೆಚ್ಚಿದ ಬಂಡವಾಳ ಹರಿವು   

ಷೇರುಪೇಟೆಯಲ್ಲಿ ದಾಖಲೆಗಳ ಸುರಿಮಳೆಯಾಗುತ್ತಿದೆ. ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಶುಕ್ರವಾರ ಕಂಡ ಏರಿಕೆಯಿಂದ ಮತ್ತೊಮ್ಮೆ ಗರಿಷ್ಠ ಹಂತವಾದ 34,188.85 ನ್ನು ತಲುಪಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.  ಅಲ್ಲದೆ ಷೇರುಪೇಟೆಯ ಬಂಡವಾಳ ಮೌಲ್ಯವು ಸಹ ₹153.77 ಲಕ್ಷ ಕೋಟಿಗೆ ಏರಿಕೆ ಕಂಡು ಅದು ಸಹ ಸಾರ್ವಕಾಲಿಕ ಗರಿಷ್ಠ ದಾಖಲೆ ನಿರ್ಮಿಸಿದೆ.

ಇದಕ್ಕೆ ಪೂರಕ ಅಂಶವೆಂದರೆ ಪೇಟೆಯೊಳಗೆ ನುಸುಳಿ ಬರುತ್ತಿರುವ ಹಣದ ಪ್ರವಾಹವಾಗಿದೆ. ನವೆಂಬರ್ ಅಂತ್ಯದಲ್ಲಿ ಗ್ರಾಹಕ ಬಳಕೆ ಸಾಮಗ್ರಿಗಳು, ವಾಹನಗಳು ಕಳೆದ ಐದು ವರ್ಷಗಳಲ್ಲಿ ಕಾಣದ ಹಂತವನ್ನು ತಲುಪಿ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿರುವುದನ್ನು ಬಿಂಬಿಸುತ್ತದೆ.  ಹಾಗೆಯೇ ಸೇವಾ ವಲಯವು ಡಿಸೆಂಬರ್ ತಿಂಗಳಲ್ಲಿ ಉತ್ತಮವಾದ ಚೇತರಿಕೆ ಕಂಡಿದೆ ಎಂಬ ಅಂಶ  ಪಿಎಂಐ ಸೂಚ್ಯಂಕ ಹಿಂದಿನ ತಿಂಗಳ 48.5 ರಿಂದ  50.9 ಕ್ಕೆ ಏರಿಕೆಯಿಂದ ತಿಳಿಯುತ್ತದೆ.  ಇದರೊಂದಿಗೆ ಸರ್ಕಾರಿ ಬ್ಯಾಂಕಿಂಗ್ ವಲಯಕ್ಕೆ ಎಂಬತ್ತು ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಈ ವರ್ಷ  ಒದಗಿಸಲಿದೆ ಎಂಬ ವಿಷಯವು ಸಹ ಬ್ಯಾಂಕಿಂಗ್ ವಲಯದ ಷೇರುಗಳಲ್ಲಿನ ಚಟುವಟಿಕೆ ಉತ್ಸಾಹಮಯವನ್ನಾಗಿಸಿತು.

ಇತ್ತೀಚಿನ ದಿನಗಳ  ಚಟುವಟಿಕೆಯಲ್ಲಿ ಸಾಕಷ್ಟು ರಭಸದ ಚಟುವಟಿಕೆ ಬಿಂಬಿಸಿದ ಷೇರುಗಳಲ್ಲಿ ಕಾರ್ಬನ್ ವಲಯದ ಕಂಪನಿಗಳಾದ ಗ್ರಾಫೈಟ್ ಇಂಡಿಯಾ, ಪಾನಾಸೋನಿಕ್ ಕಾರ್ಬನ್ ಇಂಡಿಯಾ, ಎಚ್‌ಇಜಿ, ಗೋವಾ ಕಾರ್ಬನ್, ಓರಿಯಂಟಲ್ ಕಾರ್ಬನ್, ಫಿಲಿಪ್ಸ್ ಕಾರ್ಬನ್ ಪ್ರಮುಖವಾಗಿವೆ. ಓರಿಯಂಟಲ್ ಕಾರ್ಬನ್ ಆ್ಯಂಡ್ ಕೆಮಿಕಲ್ಸ್ ಕಂಪನಿ ಷೇರಿನ ಬೆಲೆಯು ಬುಧವಾರ ₹ 1,270 ರ ಸಮೀಪದಲ್ಲಿದ್ದು, ಗುರುವಾರ ₹1,589 ರವರೆಗೂ ಜಿಗಿದಿದೆ. ಪ್ಯಾನಾಸೋನಿಕ್ ಕಾರ್ಬನ್ ಷೇರಿನ ಬೆಲೆ ಬುಧವಾರ ₹665 ರ ಸಮೀಪವಿದ್ದು ಗುರುವಾರ ₹925 ಕ್ಕೆ ಜಿಗಿತ ಕಂಡಿದೆ. ಇಂತಹ ಅಸಹಜ ಚಟುವಟಿಕೆಯನ್ನು ಸಣ್ಣ ಹೂಡಿಕೆದಾರರು ಕೇವಲ ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಸರಿಯಾದ ಕ್ರಮವೆಂದು ನಂತರದಲ್ಲಿ ಈ ಷೇರುಗಳ ಬೆಲೆ ಕಂಡಿರುವ ಇಳಿಕೆ ತಿಳಿಸುತ್ತದೆ.

ADVERTISEMENT

ಇತ್ತೀಚಿಗೆ ಪೇಪರ್ ಕೈಗಾರಿಕೆಗಳು ತಮ್ಮ ಉತ್ಪಾದನೆಗಳ ಬೆಲೆ ಹೆಚ್ಚಿಸಿದ ಕಾರಣ ಆ ಕಂಪನಿಗಳ ಲಾಭ ಗಳಿಕೆ ಹೆಚ್ಚುವ ಸಾಧ್ಯತೆ ಇದೆ ಎಂಬ ಕಾರಣದಿಂದ ಆ ವಲಯದ ಕಂಪನಿಗಳ ಷೇರುಗಳ ಬೆಲೆಗಳು ಉಕ್ಕಿ ಬಂದು ಆಕರ್ಷಕ ಏರಿಕೆ ಕಂಡಿವೆ.   ಜೆ ಕೆ ಪೇಪರ್ ಷೇರಿನ ಬೆಲೆ ಒಂದೇ ವಾರದಲ್ಲಿ ₹136 ರ ಸಮೀಪದಿಂದ ₹169 ಜಿಗಿದಿದೆ. ಬಾಲಕೃಷ್ಣ ಪೇಪರ್ ಮಿಲ್ಸ್ ಕಳೆದ ಒಂದು ತಿಂಗಳಿಂದ ₹68 ರ ಸಮೀಪದಿಂದ ₹124  ರವರೆಗೂ ಏರಿಕೆ ಕಂಡು ₹98 ರ ಸಮೀಪ ವಾರಾಂತ್ಯ ಕಂಡಿದೆ. ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸಹ ಒಂದು ತಿಂಗಳಲ್ಲಿ ₹233 ರ ಸಮೀಪದಿಂದ ₹343 ರ ಸಮೀಪಕ್ಕೆ ಏರಿಕೆ ಕಂಡು ₹315 ರ ಸಮೀಪ ಕೊನೆಗೊಂಡಿದೆ.

ಈ ರೀತಿಯ ಭಾರಿ ಅಸಮತೋಲನೆ ಮತ್ತು ಏರಿಳಿತ ಪ್ರದರ್ಶಿಸುತ್ತಿರುವುದಕ್ಕೆ ಮುಖ್ಯ ಕಾರಣ ಪೇಟೆಯ ಸೂಚ್ಯಂಕಗಳು ಈಗಾಗಲೇ ಗರಿಷ್ಠ ಹಂತದಲ್ಲಿ ತೇಲಾಡುತ್ತಿವೆ.  ಒಳಬರುತ್ತಿರುವ ಹಣವು ಸಹ ಕೇವಲ ಲಾಭಗಳಿಕೆಯ ದೃಷ್ಟಿ ಹೊಂದಿದ್ದು ಯಾವುದೇ ಸಾಮಾಜಿಕ ಉದ್ದೇಶ ಹೊಂದಿರುವುದಿಲ್ಲದ ಕಾರಣ ದೀರ್ಘಕಾಲೀನ ಹೂಡಿಕೆಯನ್ನು ಮರೆಮಾಚಿದೆ.  ಅಲ್ಲದೆ ಈ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಸುಮಾರು 1,200 ವಿದೇಶಿ ಹೂಡಿಕೆ ಗುಚ್ಛಗಳ ಸಂಸ್ಥೆಗಳು ನೋಂದಾಯಿಸಿಕೊಂಡು ಚಟುವಟಿಕೆ ಪ್ರಾರಂಭಿಸಿವೆ. ಇವುಗಳೊಂದಿಗೆ ಸ್ವದೇಶಿ ಮ್ಯೂಚುಯಲ್ ಫಂಡ್ ಮೂಲಕ ಹರಿದು ಬರುತ್ತಿರುವ ಎಸ್‌ಐಪಿ ಹಣವು ಸಹ ಕೇವಲ ಮಧ್ಯಮ ಮತ್ತು ‘ಎ’ ಕೆಳಮಧ್ಯಮ ಶ್ರೇಣಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ತ್ವರಿತ ಲಾಭಕ್ಕೆ ಪ್ರಯತ್ನಿಸುವುದರಿಂದ ಷೇರಿನ ಬೆಲೆಗಳು ತ್ವರಿತ ಬದಲಾವಣೆ ಪ್ರದರ್ಶಿಸುತ್ತಿವೆ. ಈ ವರ್ಷ ವಿದೇಶಿ ಹೂಡಿಕೆ ಗುಚ್ಛಗಳ ಮೂಲಕ ಸುಮಾರು ₹2.2 ಲಕ್ಷ ಕೋಟಿ ಹಣ ಹರಿದುಬರುವ ನಿರೀಕ್ಷೆ ಇದ್ದು ಹಿಂದಿನ ವರ್ಷ ಇವುಗಳ ಮೂಲಕ ₹48,400 ಕೋಟಿ ಮಾತ್ರ ಹೂಡಿಕೆಯಾಗಿತ್ತು. ಅಂದರೆ ಸುಮಾರು 4 ಪಟ್ಟು ಹೆಚ್ಚು ಹಣ ಪೇಟೆಗಳತ್ತ ತಿರುಗಿರುವುದರಿಂದ ಪೇಟೆಯಲ್ಲಿ ಉತ್ಸಾಹದ ಚಿತ್ರಣ ಕಂಡು ಬರುತ್ತಿದೆ.

ಹೊಸ ಷೇರು: ಅಪೋಲೊ ಮೈಕ್ರೊ ಸಿಸ್ಟಮ್ಸ್ ಲಿಮಿಟೆಡ್ ಕಂಪನಿ ಜನವರಿ 10 ರಿಂದ 12 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಪ್ರತಿ ಷೇರಿಗೆ ₹270 ರಿಂದ ₹275 ರ ಅಂತರದಲ್ಲಿ ವಿತರಣೆ ಮಾಡಲಿರುವ ಈ ಕಂಪನಿ, ರಿಟೇಲ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹12 ರ ರಿಯಾಯ್ತಿ ನೀಡಲಿದೆ. ಅರ್ಜಿಯನ್ನು 50 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಶೇ 7.75 ಉಳಿತಾಯ ಬಾಂಡ್‌ಗಳು: ಕೇಂದ್ರ ಸರ್ಕಾರವು ಶೇ 7.75 ರಷ್ಟು ಬಡ್ಡಿ ನೀಡುವ ಉಳಿತಾಯ ಬಾಂಡ್‌ಗಳನ್ನು ಈ ತಿಂಗಳ 10 ರಿಂದ ಮಾರಾಟಕ್ಕೆ ಬಿಡುಗಡೆ ಮಾಡಲಿದೆ. ಈ ಬಾಂಡ್‌ಗಳು 7 ವರ್ಷ ಅವಧಿಯದಾಗಿದ್ದು, ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ನೀಡುವ ಈ ಯೋಜನೆಯಲ್ಲಿ ವಿಶೇಷವಾದ ಆದಾಯ ತೆರಿಗೆ ರಿಯಾಯ್ತಿ ಇರುವುದಿಲ್ಲ.  ₹1,000 ಮತ್ತು ಅದರ ಗುಣಕಗಳಲ್ಲಿ ಮಾರಾಟ ಮಾಡಲಾಗುವ ಈ ಬಾಂಡ್‌ಗಳು ಕೇವಲ ಡಿಮ್ಯಾಟ್ ರೂಪದಲ್ಲಿ ಲಭ್ಯವಿರುತ್ತವೆ.

ತ್ರೈಮಾಸಿಕ ಫಲಿತಾಂಶಗಳ ಮೇಲೆ ಕೇಂದ್ರೀಕೃತ

2017-18ರ ಮೂರನೇ ತ್ರೈಮಾಸಿಕವನ್ನು ಪೂರ್ಣಗೊಳಿಸಿ ವರ್ಷದ ಅಂತಿಮ ತ್ರೈಮಾಸಿಕ ಪ್ರವೇಶ ಮಾಡಿರುವ ಈ ಸಮಯದಲ್ಲಿ ಎಲ್ಲರ ಗಮನ ಕಂಪನಿಗಳು ಪ್ರಕಟಿಸಬಹುದಾದ ತಮ್ಮ ಹಣಕಾಸು ಸಾಧನೆಗಳತ್ತ ಕೇಂದ್ರೀಕೃತವಾಗಿದೆ.  ಪ್ರಥಮವಾಗಿ ಈ ತಿಂಗಳ 12 ರಂದು ತಾಂತ್ರಿಕ ವಲಯದ ಅಗ್ರಮಾನ್ಯ ಕಂಪನಿ ಇನ್ಫೊಸಿಸ್‌ ತನ್ನ ಫಲಿತಾಂಶ ಪ್ರಕಟಿಸಲಿದೆ. ಈಗಾಗಲೇ ಷೇರು ಮರುಖರೀದಿ ಮೂಲಕ ಷೇರುದಾರರನ್ನು ತೃಪ್ತಿ ಪಡಿಸಲೆತ್ನಿಸಿದ ಈ ಕಂಪನಿ ಲಾಭಾಂಶವನ್ನು ಪ್ರಕಟಿಸಬಹುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಫೆಬ್ರುವರಿ ಒಂದರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಅತಿ ಹೆಚ್ಚಿನ ಸುಧಾರಣೆಗಳನ್ನು ಪೇಟೆ ನಿರೀಕ್ಷಿಸುತ್ತಿದೆ.  ವಿಶೇಷವಾಗಿ ನೋಟುರದ್ದತಿ ಮತ್ತು ಜಿಎಸ್‌ಟಿಗಳ ಪ್ರಭಾವ ಮತ್ತು ಅನುಕೂಲಗಳು ಬಿಂಬಿತವಾಗುವುದರಿಂದ ಹೆಚ್ಚಿನ ಏರಿಳಿತಗಳು ಪ್ರದರ್ಶಿತವಾಗಬಹುದು. 

ಚೀನಾ  ಡೆವೆಲಪಮೆಂಟ್ ಬ್ಯಾಂಕ್ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ ಕಂಪನಿಯ ವಿರುದ್ಧ ದಿವಾಳಿ ಮೊಕದ್ದಮೆಯನ್ನು ಹಿಂದೆಪಡೆಯಲು ನಿರ್ಧರಿಸಿದ್ದು  ಈಗಾಗಲೇ ಚುರುಕಾಗಿರುವ ಕಂಪನಿಯ ಷೇರಿನ ಬೆಲೆ ಏರಿಕೆಗೆ ಮತ್ತಷ್ಟು ಪುಷ್ಟಿ ನೀಡಬಹುದು.

ಬ್ಯಾಂಕಿಂಗ್ ವಲಯದಲ್ಲಿ ಸಾಲ ವಿತರಣೆಯು ಶೇ 9.9 ರಷ್ಟು ಏರಿಕೆಯಾಗಿದೆ ಎಂಬ ಅಂಶವು ಆ ವಲಯದ ಷೇರುಗಳ ಚೇತರಿಕೆಗೆ ಉತ್ತೇಜನ ನೀಡುವಂತಾಗಿದೆ.  ಬಜೆಟ್ ನಲ್ಲಿರಬಹುದಾದ ಅನುಕೂಲಗಳು, ಬ್ಯಾಂಕ್‌ಗಳಿಗೆ ಬಂಡವಾಳ ಪೂರೈಕೆ ಗಳೊಂದಿಗೆ  ಈ ಅಂಶವು ಆ ವಲಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದಾಗಿದೆ.

ಹಿಂದಿನ ತ್ರೈಮಾಸಿಕದಲ್ಲಿ ಕಾರ್ಪೊರೇಟ್ ಫಲಗಳ ಘೋಷಣೆ ಶೂನ್ಯಮಟ್ಟವಾಗಿದ್ದು, ಈ ತ್ರೈಮಾಸಿಕದ ಫಲಿತಾಂಶದ ಸಂದರ್ಭದಲ್ಲಿ ಕಂಪನಿಗಳು ವಿಶೇಷವಾಗಿ ಸರ್ಕಾರಿ ವಲಯದ ಕಂಪನಿಗಳು ವಿಶೇಷವಾದ ಲಾಭಾಂಶ ಪ್ರಕಟಿಸಬಹುದೆಂಬ ನಿರೀಕ್ಷೆಯಿದೆ. ಈ ಅಂಶವು ಪಿ ಎಸ್ ಯು ವಲಯದ ಅಗ್ರಮಾನ್ಯ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್‌, ಐಒಸಿ, ಆರ್‌ಇಸಿ, ಆಯಿಲ್ ಇಂಡಿಯಾ, ಮುಂತಾದ ಕಂಪನಿಗಳ ಚಟುವಟಿಕೆ ಉತ್ಸಾಹದಿಂದ ಕೂಡಿರುವ ಸಾಧ್ಯತೆ ಇದೆ. ಬಜೆಟ್ ಮುನ್ನಾ ದಿನಗಳಲ್ಲಿ ಕೆಲವು ಸೂಕ್ಷ್ಮ ವಲಯದ ಕಂಪನಿಗಳು ಹೆಚ್ಚು ಏರುಪೇರು ತೋರುತ್ತವೆ. ಅಂತಹ ಕಂಪನಿಗಳಲ್ಲಿ ‘ಐಟಿಸಿ’ ಯು ಒಂದು.  ಕಳೆದ ಕೆಲವು ತಿಂಗಳುಗಳಿಂದ ನಿರಾಶದಾಯಕವಾಗಿರುವ ಈ ಷೇರಿನ ಬೆಲೆಯು ಆಕರ್ಷಣೀಯ ಏರಿಕೆ ಪ್ರದರ್ಶಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಒಟ್ಟಿನಲ್ಲಿ ಸಂದರ್ಭವನ್ನರಿತು ಚಟುವಟಿಕೆ ನಡೆಸುವುದು ಉತ್ತಮ.ಅನುಸರಿಸುವುದು ಸರಿಯಲ್ಲ.

(ಮೊ: 9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.