ADVERTISEMENT

ಲಾಭದಾಯಕ ಹೂಡಿಕೆಗೆ ಹೆಚ್ಚಿನ ಮಹತ್ವ

ಕೆ.ಜಿ ಕೃಪಾಲ್
Published 26 ಫೆಬ್ರುವರಿ 2017, 19:30 IST
Last Updated 26 ಫೆಬ್ರುವರಿ 2017, 19:30 IST
ಷೇರುಪೇಟೆಯಲ್ಲಿ   ಅವಕಾಶಗಳು  ಶರವೇಗದಲ್ಲಿ  ಸೃಷ್ಟಿಯಾಗಿ  ಅಷ್ಟೇ    ವೇಗವಾಗಿ  ಮಾಯವಾಗುತ್ತಿವೆ.   ಯಾವ ಸಂದರ್ಭದಲ್ಲಿ ಪೇಟೆ ಯಾವ ವಿಚಾರಕ್ಕೆ ಮನ್ನಣೆ ನೀಡುತ್ತದೆ  ಎಂಬುದು ಕಲ್ಪನಾತೀತ.  ಹಿಂದಿನ ಘಟನೆ, ಬೆಳವಣಿಗೆ ಆಧಾರವಾಗಿರಿಸಿಕೊಂಡು ನಿರ್ಧರಿಸಿದಲ್ಲಿ ಅಪಾಯದ ಸಾಧ್ಯತೆ ಹೆಚ್ಚು. 
 
ವಿನಾ  ಕಾರಣ ಅಥವಾ ಸಣ್ಣ ಪುಟ್ಟ ಕಾರಣಗಳಿಗೂ ಷೇರಿನ ಬೆಲೆ ಸ್ಪಂದಿಸಬೇಕಾದರೆ ಆ ಷೇರಿನ ಬೆಲೆಯು ಇತ್ತೀಚಿಗೆ ಗರಿಷ್ಠ ಮಟ್ಟ ತಲುಪಿರಬೇಕು ಇಲ್ಲವೇ ಕನಿಷ್ಠ ಮಟ್ಟಕ್ಕೆ ಕುಸಿದಿರಬೇಕು.  ಈ ನಡೆಯು  ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕಾಣಸಿಗುತ್ತದೆ.  
ಈ ಹಿಂದಿನ ಘಟನೆಗಳನ್ನು ಆಧರಿಸಿ ಚಟುವಟಿಕೆ ನಡೆಸುವುದು ಸರಿಯಲ್ಲ ಎಂಬುದನ್ನು ಈ ವಾರದ ಫಾರ್ಮಾ ವಲಯದ ಕಂಪೆನಿ  ಅರವಿಂದೋ ಫಾರ್ಮಾ ಷೇರಿನ ಏರಿಳಿತದಲ್ಲಿ ಕಾಣಬಹುದು.  
 
ಈ ಹಿಂದೆ ಅಮೆರಿಕದ ಎಫ್‌ಡಿಎಯಿಂದ ಅನುಮೋದನೆ ದೊರೆತಿದೆ  ಎಂಬ ಕಾರಣಕ್ಕಾಗಿ ಕ್ಯಾಡಿಲ್ಲಾ ಹೆಲ್ತ್ ಕೇರ್ ಷೇರಿನ ಬೆಲೆ ಒಂದೆರಡು ದಿನದಲ್ಲಿ ₹100 ಹೆಚ್ಚಿನ ಏರಿಕೆ ಪ್ರದರ್ಶಿಸಿತು. ಇದೇ ಕಾರಣಕ್ಕಾಗಿ ಮಾರ್ಕ್ಸನ್ ಫಾರ್ಮಾ ಸಹ ಏರಿಕೆ ಕಂಡಿತು.  ಅದೇ ಕಾರಣವು ಅರವಿಂದೊ ಫಾರ್ಮಾ ಷೇರಿನ ಮೇಲೆ ಯಾವ ರೀತಿಯ ಪರಿಣಾಮ ಬೀರದಾಯಿತು. 
 
ಹಿಂದಿನ ವಾರ ಎಚ್‌ಡಿಎಫ್‌ಸಿ ಬ್ಯಾಂಕ್ , ಕ್ಯಾಂಡಿಲ್ಲ ಹೆಲ್ತ್ ಕೇರ್ ಕಂಪೆನಿ ಸಂವೇದಿ ಸೂಚ್ಯಂಕ  ಏರಿಳಿತ ಕಂಡಿದ್ದು,  ಇವುಗಳಲ್ಲಿ  ಎಚ್‌ಡಿಎಫ್‌ಸಿ  ಬ್ಯಾಂಕ್ ಹೆಚ್ಚಿನ ಕುಸಿತವಿಲ್ಲದೆ ಏರಿಕೆ ಕಂಡುಕೊಂಡ ಕಾರಣ ಏರಿಕೆಯಲ್ಲಿ ಸ್ಥಿರತೆ ಕಂಡುಬರಲಿಲ್ಲ. ಆದರೆ,  ಕ್ಯಾಂಡಿಲ್ಲ ಹೆಲ್ತ್ ಕೇರ್   ಷೇರಿನ ಬೆಲೆಯಲ್ಲಿ ಕುಸಿತವಿದ್ದ ಕಾರಣ ಷೇರಿನ ಬೆಲೆಯು ಪುಟಿದೆದ್ದು ಸ್ವಲ್ಪ ಮಟ್ಟಿನ ಸ್ಥಿರತೆ ಕಂಡುಕೊಂಡಿದೆ.  ಅಂದರೆ, ಕ್ಯಾಂಡಿಲ್ಲ ಹೆಲ್ತ್‌ಕೇರ್ ಕಂಪೆನಿಯ ಷೇರಿನ ಬೆಲೆ ಕುಸಿತದಲ್ಲಿದ್ದಾಗ 'ವ್ಯಾಲ್ಯೂಪಿಕ್' ಆಗಿತ್ತು ಎನ್ನಬಹುದು.  
 
ಈಗಿನ ಸ್ಪರ್ಧೆಗಳು ಎಷ್ಟರಮಟ್ಟಿಗಿವೆ ಎಂದರೆ ಇತ್ತೀಚಿಗೆ ಟೆಲಿಕಮ್ಯುನಿಕೇಷನ್ ಕಂಪೆನಿ  ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ವಿಲೀನದ ಸುದ್ದಿ ಷೇರಿನ ಮೇಲೆ ಹೆಚ್ಚು ಪ್ರಭಾವ ಬೀರಿತು.  ಐಡಿಯಾ ಸೆಲ್ಯುಲರ್ ಷೇರಿನ ಬೆಲೆ ಒಂದೇ ತಿಂಗಳಲ್ಲಿ ₹70ರ ಸಮೀಪದಿಂದ ₹122ರವರೆಗೂ ಏರಿಕೆ ಕಂಡಿತು.  ಇದರೊಂದಿಗೆ   ರಿಲಯನ್ಸ್ ಇಂಡಸ್ಟ್ರೀಸ್ ಮುಂದಿನ ಏಪ್ರಿಲ್‌ನಿಂದ ಜಿಯೊ ಮೊಬೈಲ್‌ ಸೇವೆಗೆ ಶುಲ್ಕ ವಿಧಿಸುವುದಾಗಿ   ತಿಳಿಸಿದ ಕಾರಣ ಷೇರಿನ ಬೆಲೆ 8ವರ್ಷದ ನಂತರ  ₹1,201 ರ ಗಡಿ ದಾಟಿತು.  ಒಂದೇ ದಿನ ₹120 ರಷ್ಟರ ಏರಿಕೆ ಪ್ರದರ್ಶಿಸಿತು.
 
ಹೀಗೆ ಪ್ರತಿಯೊಂದು ದೂರಸಂಪರ್ಕ ಸೇವಾ ಸಂಸ್ಥೆಗಳು  ತಮ್ಮ ಅಸ್ತಿತ್ವ ಮತ್ತು ಪಾರಮ್ಯ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ,  ಭಾರ್ತಿ ಏರ್‌ಟೆಲ್‌, ನಾರ್ವೆಯ ಟೆಲೆನಾರ್ ಟೆಲಿ ಕಮ್ಯುನಿಕೇಶನ್ ಕಂಪೆನಿಯ ಭಾರತೀಯ ವಹಿವಾಟು ಸ್ವಾಧೀನ ಪಡಿಸಿಕೊಳ್ಳುವ ಸುದ್ದಿ ಆ ಷೇರಿನ ಬೆಲೆಯಲ್ಲಿ ಸಂಚಲನ ಮೂಡಿಸಿತು.
 
ಗುರುವಾರ ₹371ರ ಸಮೀಪ ಆರಂಭವಾದ ಷೇರಿನ ಬೆಲೆ ಕೆಲವೇ  ಕ್ಷಣಗಳಲ್ಲಿ ₹400ರ ಗಡಿ ತಲುಪುವಂತೆ ಮಾಡಿತು. ಈ ಬೆಲೆ ವಾರ್ಷಿಕ ಗರಿಷ್ಠ ಎಂಬ ದಾಖಲೆ ಬರೆಯಿತು. ಈ ವೇಗ ಎಷ್ಟಿತ್ತು ಎಂದರೆ ಈ ರೀತಿಯ ಏರಿಕೆಯಲ್ಲಿ ಸ್ಥಿರತೆ ಕಂಡುಕೊಳ್ಳುವುದು ಅಸಾಧ್ಯವಾಗಿತ್ತು. ನಂತರ ಷೇರಿನ ಬೆಲೆ ದಿನವಿಡೀ ಇಳಿಕೆ ಕಂಡು ₹363ರ ಸಮೀಪಕ್ಕೆ ಕುಸಿದು ₹366ರಲ್ಲಿ ಕೊನೆಗೊಂಡಿತು. ಒಂದೇ ದಿನ ಸುಮಾರು ಶೇ10ರಷ್ಟು ಏರಿ ನಂತರ ಶೇ10 ರಷ್ಟು ಕುಸಿತ ಕಾಣುವ ಈ ವಿಧಾನ ಹೂಡಿಕೆದಾರರಲ್ಲಿ ದೀರ್ಘಕಾಲೀನ  ವಿಶ್ವಾಸ ನಶಿಸುವಂತೆ ಮಾಡಲಿದೆ.
 
ಷೇರು ಮರು ಖರೀದಿ: ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ತನ್ನ ಷೇರುದಾರರಿಂದ ಷೇರು ಮರು ಖರೀದಿಸುವ  ಪ್ರಸ್ತಾವ ಈ ವಾರದ ಮತ್ತೊಂದು ಪ್ರಮುಖ ಬೆಳವಣಿ.  ಈ ಕಂಪೆನಿಯು ಪ್ರತಿ ಷೇರಿಗೆ ₹2,850ರಂತೆ ಮರು ಖರೀದಿಸಲು ನಿರ್ಧರಿಸಿದ್ದು ಇದಕ್ಕಾಗಿ ₹16,000 ಕೋಟಿ ವಿನಿಯೋಗಿಸಲಿದೆ.  ಈ ಸುದ್ದಿಯಿಂದ ಷೇರಿನ ಬೆಲೆ ₹2,410ರ ಸಮೀಪದಿಂದ ₹2,555ರವರೆಗೂ ಹೆಚ್ಚಳ ಕಂಡಿತು.ನಂತರದ ದಿನ ಷೇರಿನ ಬೆಲೆಯು ₹2,410 ರವರೆಗೂ ಕುಸಿದು ₹2,480ರ ಸಮೀಪದಲ್ಲಿ ವಾರಾಂತ್ಯ ಕಂಡಿತು.  ಈ ಬೆಳವಣಿಗೆ ಕಾರಣ  ಇನ್ಫೊಸಿಸ್ ಷೇರಿನ ಬೆಲೆ ₹988ರ ಸಮೀಪದಿಂದ ಮತ್ತೊಮ್ಮೆ ₹1,119ರವರೆಗೂ ಏರಿಕೆ ಕಂಡಿತು. 
 
ಖಾಸಗಿ ವಲಯದ ಆ್ಯಕ್ಸಿಸ್ ಬ್ಯಾಂಕ್‌ನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಸುದ್ದಿ  ಕೋಟಕ್ ಮಹಿಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ಗಳ ಷೇರುಗಳಲ್ಲಿ ಚೇತರಿಕೆ ಮೂಡಿಸುವುದರೊಂದಿಗೆ ಆ್ಯಕ್ಸಿಸ್ ಬ್ಯಾಂಕ್ ಷೇರು ಮೌಲ್ಯ ₹478 ರಿಂದ ₹529 ರವರೆಗೂ ಜಿಗಿಯಿತು. 
ಈಗಿನ ಈ ಬದಲಾವಣೆಗಳೆಲ್ಲವೂ ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಸಮಯದಲ್ಲಿ ನಡೆಯುತ್ತಿರುವುದು ಕಾಕತಾಳಿಯವೋ ಅಥವಾ ವಹಿವಾಟುದಾರರಿಗೆ ಆಪತ್ತಿಗೆ  ಸಿಲುಕಿಸುವ ದೃಷ್ಟಿಯಿಂದ ನಡೆದಿರುವುದೋ ಕಾದು ನೋಡಬೇಕು. 
 
 ಒಟ್ಟಾರೆ  ಸತತ ಏರಿಕೆ ಪ್ರದರ್ಶಿಸಿದ ಸಂವೇದಿ ಸೂಚ್ಯಂಕ 428ಅಂಶ  ಏರಿಕೆ ಪಡೆಯುವುದರೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕ 109 ಅಂಶ ಮತ್ತು ಕೆಳ ಮಧ್ಯಮ ಶ್ರೇಣಿಯ ಸೂಚ್ಯಂಕ 220 ಅಂಶಗಳ ಏರಿಕೆ ಪಡೆದಿವೆ.  
 
ವಿದೇಶಿ ವಿತ್ತೀಯ ಸಂಸ್ಥೆಗಳು ₹1,736 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ.  ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,836 ಕೋಟಿ ಮೌಲ್ಯದ ಷೇರು ಖರೀದಿಸಿವೆ.  ಈ ರೀತಿಯ ಮ್ಯೂಸಿಕಲ್ ಚೇರ್‌ನಂತಹ ಅದೃಷ್ಟದ ಆಟದಲ್ಲಿ ಪೇಟೆಯ ಬಂಡವಾಳ ಮೌಲ್ಯ ಮಂಗಳವಾರ ₹117.71 ಲಕ್ಷ ಕೋಟಿಗೆ ತಲುಪಿ ಸಾರ್ವಕಾಲೀನ ಗರಿಷ್ಠ ತಲುಪಿ ದಾಖಲೆ ನಿರ್ಮಿಸಿದೆ. ₹117.70 ಲಕ್ಷ ಕೋಟಿಗೆ ವಾರಾಂತ್ಯ ಕಂಡಿದೆ.
 
ಲಾಭಾಂಶ:ಅಂಬುಜಾ ಸಿಮೆಂಟ್ಸ್ ಪ್ರತಿ ಷೇರಿಗೆ ₹1.20 (ಮುಖಬೆಲೆ₹2), ಕ್ಯಾಸ್ಟ್ರಾಲ್ ₹2, ವಿಶೇಷ ಲಾಭಾಂಶ (  ₹5, ನಿಗದಿತ ದಿನ ಮಾರ್ಚ್‌ 8)  ₹4.50 ಅಂತಿಮ ಲಾಭಾಂಶ(ಮೇ27), ಎಲಂಟಾಸ್ ಬೇಕ್ ₹4.50,  ಇಐಡಿ ಪ್ಯಾರಿ ₹4(₹1), ಹುಹುತ್ಮಕಿ ಪಿಪಿ ಎಲ್ ₹3 (₹2),ಕೆಎಸ್‌ಬಿ ಪಂಪ್ಸ್ ₹5.50 (16).
 
ಬೋನಸ್ ಷೇರು:ಗೇಲ್ (ಇಂಡಿಯಾ) ಕಂಪೆನಿ ವಿತರಿಸಲಿರುವ 1:4 ರ ಅನುಪಾತದ ಬೋನಸ್ ಷೇರಿಗೆ 11ನೇ ಮಾರ್ಚ್ ನಿಗದಿತ ದಿನವಾಗಿದೆ.
ಹೊಸ ಷೇರು: ಅಹಮದಾಬಾದ್ ಮತ್ತು ವಡೋದರಾ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದ ಕ್ಲಾಸಿಕ್ ಫಿಲಾಮೆಂಟ್ಸ್ ಲಿಮಿಟೆಡ್ ಕಂಪೆನಿಯ ಷೇರುಗಳು 22ರಿಂದ ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.
 
ಷೇರುಪೇಟೆಗಳು ಉತ್ತುಂಗದಲ್ಲಿದ್ದಾಗ ಮತ್ತು ಷೇರಿನ ದರ ಗರಿಷ್ಠ ಹಂತದಲ್ಲಿರುವಾಗ ಸಣ್ಣ ಹೂಡಿಕೆದಾರರು ದೀರ್ಘಕಾಲೀನ ಹೂಡಿಕೆಯ ಬಗ್ಗೆ ಚಿಂತಿಸುವ ಜತೆಗೆ  ಆ ಷೇರು ಗರಿಷ್ಠ ಮಟ್ಟ,  ಲಾಭಾಂಶ, ಬೋನಸ್ ಷೇರು ವಿತರಣೆಯ ಬಗ್ಗೆ ಭಾವನಾತ್ಮಕವಾಗಿ ಯೋಚಿಸುವ ಕಾರಣ ಕೈಗೆ ಲಭ್ಯವಾದ ಅವಕಾಶ ಕಳೆದುಕೊಳ್ಳುವುದು ಸಾಮಾನ್ಯ.

ದಶಕಗಳ  ಹಿಂದಿನ ವಾತಾವರಣವು ಬೇರೆ ಈಗಿನ ವಾತಾವರಣವೇ ಬೇರೆ.   ಹಿಂದೆ ಕಂಪೆನಿಗಳ ಸಾಧನೆಗಳು, ಅಂತರ್ಗತವಾಗಿ ಅಡಕವಾಗಿರುವ ಮೂಲಭೂತ ಅಂಶಗಳನ್ನು ಪರಿಗಣಿಸಿ ಹೂಡಿಕೆ ಮಾಡಲಾಗುತ್ತಿತ್ತು.  ಈ ಅಂಶಗಳಲ್ಲಿ ಏನಾದರೂ ಬದಲಾವಣೆ, ಏರುಪೇರು ಕಾಣಬೇಕಾದರೆ ವರ್ಷದ ಕೊನೆವರೆಗೂ ಕಾಯಬೇಕಾಗುತ್ತಿತ್ತು.  ಆಗ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವ ಪದ್ಧತಿ ಇರಲಿಲ್ಲ.  ಮಾಹಿತಿ  ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. 

ಪ್ರಾದೇಶಿಕ ಷೇರು ವಿನಿಮಯ ಕೇಂದ್ರಗಳಲ್ಲಿ ಚಟುವಟಿಕೆ ನಡೆಸುವಾಗ  ಪತ್ರಿಕೆಗಳಲ್ಲಿ ಬರುತ್ತಿದ್ದ ಷೇರಿನ ದರಗಳನ್ನು ಆಧರಿಸಿ ಚಟುವಟಿಕೆ ನಿರ್ವಹಿಸಲಾಗುತ್ತಿತ್ತು. ಅಂದರೆ ಹಿಂದಿನ ದಿನಗಳ ದರವು ಇಂದಿನ ದಿನದ ಚಟುವಟಿಕೆಗೆ ಪೂರಕವಾಗಿರುತ್ತಿತ್ತು.  ಆದರೆ ಈಗ ಮಾಹಿತಿಯ ಮಹಾಪೂರವೇ ಹರಿದುಬಂದು ಸೂಕ್ತವಾದ ಆಯ್ಕೆ ದುಸ್ತರವಾಗಿದೆ.  ಅಲ್ಲದೆ ಈಗಿನ ದಿನಗಳಲ್ಲಿ ಬಾಹ್ಯ ಕಾರಣಗಳ ಪ್ರಭಾವವೇ ಹೆಚ್ಚಾಗಿರುತ್ತದೆ.  ಖಾಸಗಿ  ಬ್ಯಾಂಕಿಂಗ್ ವಲಯದಲ್ಲಿ ವಿಲೀನದ ವಿಚಾರ,  ಷೇರುಗಳ ಮರು ಖರೀದಿ, ಅಮೆರಿಕದ ಎಫ್‌ಡಿಎ ಕ್ರಮದ ಕಾರಣ ಫಾರ್ಮಾ ವಲಯದಲ್ಲಾಗುವ ಏರಿಳಿತ ಇದಕ್ಕೆ ಸೂಕ್ತ ಉದಾಹರಣೆ.

ಇದರೊಂದಿಗೆ  ಕಚ್ಚಾ ತೈಲ ಬೆಲೆ, ಅಂತರ ರಾಷ್ಟ್ರೀಯ ಕರೆನ್ಸಿಗಳಲ್ಲಿ ಆಗುವ ಏರಿಳಿತ, ಟೆಲಿ ಕಮ್ಯುನಿಕೇಶನ್ ವಲಯದ ಕಂಪೆನಿಗಳ ವಿಲೀನ, ಸ್ವಾಧೀನ ಪ್ರಕ್ರಿಯೆ, ಕಂಪೆನಿಗಳ ಆರ್ಡರ್ ಬುಕ್ ಪರಿಸ್ಥಿತಿ, ಕಾರ್ಪೊರೇಟ್ ಫಲಗಳ ಪ್ರಭಾವ,  ವಿದೇಶಿ ಮತ್ತು ಸ್ವದೇಶಿ  ವಿತ್ತೀಯ ಸಂಸ್ಥೆಗಳ ಆಸಕ್ತಿ ಮುಂತಾದವು ಇನ್ನಿತರ ಬಾಹ್ಯ ಕಾರಣಗಳಾಗಿವೆ.

ಒಟ್ಟಾರೆ ಪೇಟೆಯೊಳಗೆ ಹರಿದುಬರುತ್ತಿರುವ ಹಣದ ಗಾತ್ರ, ಮೂಲಾಧಾರಿತ ಪೇಟೆಯಲ್ಲಿ  ವಹಿವಾಟುದಾರರ ಆಸಕ್ತಿ, ಸ್ಥಿತಿ,  ಹೀಗೆ ಅನೇಕ ಬಾಹ್ಯ ಕಾರಣಗಳು ತಮ್ಮ ಪ್ರಭಾವದಿಂದ ಷೇರಿನ ದರಗಳಲ್ಲಿ ರಭಸದ ಏರಿಳಿತ ಪ್ರದರ್ಶಿಸುವ ಕಾರಣ ಈಗಿನ ಪೇಟೆಯಲ್ಲಿ ದೀರ್ಘಕಾಲಿನ ಎಂಬುದಕ್ಕಿಂತ ಲಾಭದಾಯಕ ಹೂಡಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.  ದೀರ್ಘಕಾಲಿನ ಹೂಡಿಕೆಯು ನೀಡಬಹುದಾದ ಲಾಭಕ್ಕಿಂತ ಹೆಚ್ಚಿನ ಲಾಭವನ್ನು ಅಲ್ಪಸಮಯದಲ್ಲೇ ಪಡೆಯಲು ಅವಕಾಶವಿದ್ದಾಗ ಅದನ್ನು ಉಪಯೋಗಿಸಿಕೊಳ್ಳುವುದು ಸೂಕ್ತ.

ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕೊನೆಯ ವಾರವಾಗಿದ್ದರಿಂದ ವಹಿವಾಟಿನ ಗಾತ್ರದಲ್ಲಿ ಉಂಟಾದ ಬದಲಾವಣೆ ಗಮನಿಸಿದಲ್ಲಿ ಪೇಟೆಯ ಪರಿಸ್ಥಿತಿಯು ತಿಳಿಯುತ್ತದೆ.  ಸೋಮವಾರ ₹ 4.18 ಲಕ್ಷ ಕೋಟಿಗಳ ವಹಿವಾಟಾದರೆ,  ಮಂಗಳವಾರ ಇದು ₹5.48 ಲಕ್ಷ ಕೋಟಿಗೆ ಏರಿಕೆ ಕಂಡಿತು.  ಬುಧವಾರ ₹7.11 ಲಕ್ಷ ಕೋಟಿಗೆ ಏರಿಕೆ ಕಂಡಿತು.  ಕೊನೆ ದಿನ ವಾದ ಗುರುವಾರ ವಹಿವಾಟಿನ ಗಾತ್ರ ₹9.94 ಲಕ್ಷ ಕೋಟಿಗೆ ದಾಖಲೆಯ ಜಿಗಿತ ಕಂಡಿದೆ. ಈ ವಾತಾವರಣದಲ್ಲಿ ದೀರ್ಘಕಾಲೀನ ಚಿಂತನೆ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.