ADVERTISEMENT

ಲಾಭ ಗಳಿಕೆಯ ಆಸೆ ಬಿತ್ತುವ ಪೇಟೆ

ಕೆ.ಜಿ ಕೃಪಾಲ್
Published 10 ಸೆಪ್ಟೆಂಬರ್ 2017, 20:26 IST
Last Updated 10 ಸೆಪ್ಟೆಂಬರ್ 2017, 20:26 IST

ಷೇರುಪೇಟೆಗಳು ಗರಿಷ್ಠ ಮಟ್ಟದಲ್ಲಿ ಇರುವಾಗ ಕಾರ್ಪೊರೇಟ್ ವಲಯದಲ್ಲಿ ಸಂಪನ್ಮೂಲ ಸಂಗ್ರಹಣೆ ಕಾರ್ಯ ಭರದಿಂದ ನಡೆಯುತ್ತಿರುತ್ತದೆ. ಈ ದಿಸೆಯಲ್ಲಿ ಪೇಟೆಯ ನಿಯಂತ್ರಕ ‘ಸೆಬಿ‘ ಹೆಚ್ಚಿನ ನಿಗಾ ವಹಿಸುತ್ತಿರುವುದಕ್ಕೆ ಅದು ಪೇಟೆಯಲ್ಲಿ ತೇಲಿಬಿಡುತ್ತಿರುವ ಮಸಾಲಾ ಬಾಂಡ್‌ಗಳು, ಲಿಸ್ಟಿಂಗ್ ಆಗದೆ ಇರುವ ಕಂಪೆನಿಗಳು ತಮ್ಮ ಷೇರುಗಳನ್ನು ಡಿ ಮ್ಯಾಟ್ ಮಾಡುವ ಬಗ್ಗೆ ನಿಯಮಗಳನ್ನು ಜಾರಿಗೊಳಿಸುತ್ತಿರುವುದು ಸ್ವಾಗತಾರ್ಹ.

ಈ ಸಂದರ್ಭದಲ್ಲಿ ಬರುತ್ತಿರುವ ಆರಂಭಕ ಷೇರು ವಿತರಣೆಗಳ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕುವುದು ಅವಶ್ಯಕವಾಗಿದೆ. ವಿತರಣೆ ಬೆಲೆಯೊಂದಿಗೆ ಆ ಷೇರಿನ ಮುಖಬೆಲೆಯನ್ನು ಸಹ ಗಮನಿಸಬೇಕು.

ಕೇವಲ ಅಲಾಟ್‌ಮೆಂಟ್ ಬಗ್ಗೆ ಮಾತ್ರ ಚಿಂತಿಸದೆ, ಅಲಾಟ್ ಆದ ಮೇಲೆ ಆ ಷೇರು ಗಳಿಸಬಹುದಾದ ಬೆಲೆಯತ್ತಲೂ ಚಿಂತಿಸಬೇಕು. ಹೂಡಿಕೆ ಮಾಡುವುದು ಲಾಭ ಗಳಿಕೆಗೆ ಎಂಬುದನ್ನು ಮರೆಯಬಾರದು. ಈ ಪ್ರಯತ್ನದಲ್ಲಿ ಬಂಡವಾಳ ಸುರಕ್ಷತೆಗೆ ಆದ್ಯತೆ ಇರಬೇಕು, ಆಗಲೇ ಉತ್ತಮ ಫಲಿತಾಂಶ ಸಾಧ್ಯ.

ADVERTISEMENT

ಷೇರುಪೇಟೆಯಲ್ಲಿ ಇತ್ತೀಚಿಗೆ ಭಾರಿ ಪ್ರಮಾಣದ ಏರಿಳಿತ ಕಾಣಲು ಮತ್ತೊಂದು ಕಾರಣವೆಂದರೆ ಕಂಪೆನಿಗಳು ಪ್ರಕಟಿಸಿದ ಕಾರ್ಪೊರೇಟ್ ಫಲಿತಾಂಶಗಳು.  ಆದರೆ ರಭಸದ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಸ್ಥಿರತೆ ಕಾಣುವುದಿಲ್ಲ. ಉದಾಹರಣೆಗೆ ಶುಕ್ರವಾರ ಟಾಟಾ ಎಲೆಕ್ಸಿ ಕಂಪೆನಿಯ ಷೇರಿನ ಬೆಲೆಯು ₹1,817 ರವರೆಗೂ ಏರಿಕೆ ಕಂಡು ನಂತರ ₹1,770 ರಲ್ಲಿ ಕೊನೆಗೊಂಡಿದೆ. ಈ ಏರಿಳಿತಕ್ಕೆ ಕಾರಣ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ  ಈ ತಿಂಗಳ 19 ನಿಗದಿತ ದಿನವಾಗಿರುವುದಾಗಿದೆ.

ಪೇಟೆಯಲ್ಲಿ ಆತಂಕಕಾರಿ ವಾತಾವರಣವಿದ್ದರೂ ಕೆಲವು ಕಂಪೆನಿಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಿ ಸಾಮಾನ್ಯರ ಚಿಂತನೆಯ ದಿಕ್ಕನ್ನೇ ಬದಲಿಸುವಂತಿದೆ. ಇದು ಪೇಟೆಯಲ್ಲಿ ವಹಿವಾಟು ನಡೆಸುವಾಗ ಕೇವಲ ವಾಸ್ತವ ವಿಚಾರಗಳನ್ನು ಪರಿಗಣಿಸಬೇಕೇ ಹೊರತು ಪೂರ್ವ ನಿರ್ಧಾರಿತ ನಡೆಯಲ್ಲ. ಇದಕ್ಕೆ ಕೆಲವು ಉದಾಹರಣೆ ಕೆಳಗಿನಂತಿವೆ.

ಷೇರಿನ ಬೆಲೆಗಳಲ್ಲಿ ಏರಿಳಿತ ಉಂಟಾಗಲು  ಬಾಹ್ಯ ಕಾರಣಗಳು ಎಷ್ಟರ ಮಟ್ಟಿಗೆ ಪ್ರಭಾವಿ ಎಂಬುದಕ್ಕೆ  ಬುಧವಾರ ಬಜಾಜ್ ಫೈನಾನ್ಸ್ ಲಿಮಿಟೆಡ್ ಕಂಪೆನಿಯ ಕ್ವಾಲಿಫೈಡ್ ಇನ್‌ಸ್ಟಿಟ್ಯೂಷನ್‌ ಪ್ಲೇಸ್‌ಮೆಂಟ್‌ ಮೂಲಕ  ₹4,500 ಕೋಟಿ ಸಂಗ್ರಹಣೆ ಯೋಜನೆಯೇ ಸಾಕ್ಷಿ. ವಿದೇಶಿ ವಿತ್ತೀಯ ಸಂಸ್ಥೆಗಳ ಬೆಂಬಲದಿಂದ ಅಂದೇ ಮೂರು ಪಟ್ಟು ಹೆಚ್ಚು ಸಂಗ್ರಹವಾದ ಸುದ್ದಿಯಿಂದ ಪ್ರೇರಿತವಾಗಿ ಷೇರಿನ ಬೆಲೆ ₹1,780 ರಿಂದ ₹1,879 ರವರೆಗೂ ಏರಿಕೆ ಕಂಡಿತು. ಶುಕ್ರವಾರ ₹1,989 ನ್ನು ತಲುಪಿ ಅಂದೇ ₹1,893 ರ ಸಮೀಪ ಕೊನೆಗೊಂಡಿದೆ.

ಬುಧವಾರ ದಿನದ ಚಟುವಟಿಕೆ ಆರಂಭವಾದಾಗ ಭಾರತ್ ಫೈನಾನ್ಶಿಯಲ್‌ ಇನ್‌ಕ್ಲೂಷನ್‌ ಕಂಪೆನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆ ಮಿತಿ ಮುಗಿದಿರುವುದರಿಂದ ಮತ್ತೆ ಅವರು ಹೂಡಿಕೆ ಮಾಡುವಂತಿಲ್ಲ ಎಂಬ ಸುದ್ದಿಯಿಂದ ಷೇರಿನ ಬೆಲೆಯು ₹922 ರ ಸಮೀಪದಿಂದ ₹900 ಕ್ಕೆ ಕುಸಿದು ನಂತರದ ಚಟುವಟಿಕೆಯಲ್ಲಿ ₹957 ರವರೆಗೂ ಏರಿಕೆ ಕಂಡಿತು.

ಮಂಗಳವಾರ ಬಿಎಸ್‌ಇ 500 ರ ಸಮೂಹದ ಅಂಗವಾಗಿರುವ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪೆನಿಯ ತ್ರೈಮಾಸಿಕ ಫಲಿತಾಂಶವು ಉತ್ತಮ
ವಾಗಿದ್ದರೂ ಷೇರಿನ ಬೆಲೆಯು ₹189 ರ ಸಮೀಪದಿಂದ ₹183 ರವರೆಗೂ ಕುಸಿಯಿತು. ಆದರೆ, ಇದೆ ಷೇರಿನ ಬೆಲೆಯು ಬುಧವಾರ ₹206 ರವರೆಗೂ ಜಿಗಿತ ಕಂಡಿತು. ಇದು ಒಂದು ರೀತಿ ಫಲಿತಾಂಶದ ನಂತರದಲ್ಲಿ ದೃಢವಾದ ನಿರ್ಧಾರ ತೆಗೆದುಕೊಳ್ಳುವ ಚಿಂತನೆಯನ್ನು ದಾರಿತಪ್ಪಿಸುವಂತಿದೆ.

ಕ್ವಾಲಿಟಿ ಲಿಮಿಟೆಡ್ ಕಂಪೆನಿಯ ಕಳೆದ ತ್ರೈಮಾಸಿಕ ಫಲಿತಾಂಶವು ತೃಪ್ತಿದಾಯಕವಲ್ಲದ ಕಾರಣ ಷೇರಿನ ಬೆಲೆಯು ಸೋಮವಾರ ₹143ರ ಸಮೀಪದಿಂದ ₹114 ರವರೆಗೂ ಕುಸಿದು ಕೊಳ್ಳುವವರಿಲ್ಲದ ಕೆಳ ಅವರಣ ಮಿತಿಯಲ್ಲಿತ್ತು. ಇದೇ ರೀತಿ ಮಂಗಳವಾರ ಸಹ ಆರಂಭದಲ್ಲಿ ₹95 ರ ಸಮೀಪಕ್ಕೆ ಬಂದು ನಂತರ ಷೇರಿನ ಬೆಲೆಯು ₹121 ರ ಸಮೀಪ ಕೊನೆಗೊಂಡಿತು.

ಒಟ್ಟಾರೆ ಈ ವಾರ ಸಂವೇದಿ ಸೂಚ್ಯಂಕ 208 ಅಂಶಗಳ ಇಳಿಕೆ ಕಂಡರೆ, ಮಧ್ಯಮ ಶ್ರೇಣಿ ಸೂಚ್ಯಂಕ 68 ಅಂಶಗಳ ಏರಿಕೆ ಮತ್ತು ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 195 ಅಂಶಗಳ ಏರಿಕೆ ಕಂಡು, ಪೇಟೆಯಲ್ಲಿ ಈ ವಲಯಗಳ ಬಗ್ಗೆ ಉಳಿದುಕೊಂಡಿರುವ ವಹಿವಾಟುದಾರರ ಆಸಕ್ತಿ ಬಿಂಬಿಸುತ್ತದೆ. ವಿದೇಶಿ ವಿತ್ತೀಯ ಸಂಸ್ಥೆಗಳು ₹3,425 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರೆ ಸ್ವದೇಶಿ ಸಂಸ್ಥೆಗಳು ₹1,210 ಕೋಟಿ ಹೂಡಿಕೆ ಮಾಡಿವೆ.  ಪೇಟೆಯ ಬಂಡವಾಳ ಮೌಲ್ಯ ₹133.59 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಹೊಸ ಷೇರು: ಮ್ಯಾಟ್ರಿಮನಿ ಡಾಟ್‌ ಕಾಂ ‌ಲಿಮಿಟೆಡ್ ಕಂಪೆನಿಯು ₹5 ರ ಮುಖಬೆಲೆಯ  ಪ್ರತಿ ಷೇರಿಗೆ ₹983 ರಿಂದ ₹985 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಸೆಪ್ಟೆಂಬರ್ 11 ರಿಂದ 13 ರವರೆಗೂ ಮಾಡಲಿದೆ. ಅರ್ಜಿಯನ್ನು 15 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಕೆಪ್ಯಾಸಿಟೆ ಇನ್ಫ್ರಾ ಪ್ರಾಜೆಕ್ಟ್ಸ್‌ ಲಿಮಿಟೆಡ್ ಕಂಪೆನಿಯು ₹10 ರ ಮುಖಬೆಲೆಯ  ಪ್ರತಿ ಷೇರಿಗೆ ₹245 ರಿಂದ ₹250 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆಯನ್ನು ಸೆಪ್ಟೆಂಬರ್ 13 ರಿಂದ 15 ರವರೆಗೂ ಮಾಡಲಿದೆ. ಅರ್ಜಿಯನ್ನು 60 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಲಾಭಾಂಶ ವಿಚಾರ: ಆಂಧ್ರ ಷುಗರ್ಸ್ ಪ್ರತಿ ಷೇರಿಗೆ ₹10 (ನಿ  ದಿ : ಸೆ. 14)

ಬೋನಸ್ ಷೇರು: ಟಾಟಾ ಎಲೆಕ್ಸಿ ಕಂಪೆನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 19 ನಿಗದಿತ ದಿನ.
ಬಿಎಚ್‌ಇಎಲ್ ಲಿಮಿಟೆಡ್ ಕಂಪೆನಿ ವಿತರಿಸಲಿರುವ 1:2 ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 30 ನಿಗದಿತ ದಿನ.

ಮುಖಬೆಲೆ ಸೀಳಿಕೆ: ಸಫಾರಿ ಇಂಡಸ್ಟ್ರೀಸ್ (ಇಂಡಿಯಾ) ಲಿಮಿಟೆಡ್ ಕಂಪೆನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 25 ನಿಗದಿತ ದಿನ.

**

ವಾರದ ವಿಶೇಷ

ನಮ್ಮ ಷೇರುಪೇಟೆಗಳು ಉತ್ತುಂಗದಲ್ಲಿ ತೇಲಾಡುತ್ತಿದ್ದು, ವಿವಿಧ ಕಂಪೆನಿಗಳು, ಅಗ್ರಮಾನ್ಯ ಕಂಪೆನಿಗಳು ಸೇರಿ, ವೈವಿಧ್ಯಮಯ ಕಾರಣದಿಂದಾಗಿ ವೇಗದ ಏರಿಳಿತಗಳನ್ನು ಪ್ರದರ್ಶಿಸುತ್ತಿವೆ. ಪೇಟೆಯ ಹೊರಗಿನವರನ್ನು ತನ್ನತ್ತ ಆಕರ್ಷಿಸುತ್ತಿದೆ. ಲಾಭ ಗಳಿಕೆಯ ಆಸೆಯನ್ನು ಬಿತ್ತುತ್ತಿದೆ.

ಇಂದಿನ ಪೇಟೆಗಳು ಉತ್ತುಂಗದಲ್ಲಿರಲು ಕಂಪೆನಿಗಳ ಆಂತರಿಕ ಸಾಧನೆಗಿಂತ ಹೊರಗಿನ ಕಾರಣಗಳು ಹೆಚ್ಚು ವೇಗೋತ್ಕರ್ಷ ಉಂಟುಮಾಡುತ್ತಿರುವುದನ್ನು ಕಂಡಿದ್ದೇವೆ. ಇದಕ್ಕೆ ಮೂಲ ಕಾರಣ, ಪೇಟೆಯ ಒಳಗೆ ಹರಿದುಬರುತ್ತಿರುವ ಹಣದ ಹೊಳೆಯಾಗಿದೆ. ವಿಶೇಷವಾಗಿ ಸ್ಥಳೀಯ ಹೂಡಿಕೆದಾರರ ಹಣವು ಹೆಚ್ಚಾಗಿದೆ.  ಈ ವಿಚಾರವನ್ನು ಅಂತರ  ರಾಷ್ಟ್ರೀಯ ವಿತ್ತೀಯ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ ಸಹ ಬೆಂಬಲಿಸಿದೆ.

ಹೆಚ್ಚು ಹಣ ಉತ್ತಮ ಷೇರುಗಳ ಬೆನ್ನು ಹತ್ತುವ ಕಾರಣ ಅಗ್ರಮಾನ್ಯ ಕಂಪೆನಿಗಳ ಷೇರಿನ ಬೆಲೆ ಕುಸಿತ ಕಂಡಾಗ ತಕ್ಷಣ ತಮ್ಮ ಬುಟ್ಟಿಗೆ ಸೇರಿಸುವ ಕಾರಣ ಮತ್ತೆ ಬೆಲೆ ಏರಿಕೆ ಉಂಟಾಗುವುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಲಾರ್ಸನ್ ಅಂಡ್ ಟೊಬ್ರೊ ಕಂಪೆನಿ ಷೇರಿನ ಬೆಲೆ ಪ್ರದರ್ಶಿಸಿದ ಬದಲಾವಣೆ.  ಈ ಕಂಪೆನಿಯ ಷೇರಿನ ಬೆಲೆಯು ₹1,116 ರವರೆಗೂ ಕುಸಿತ ಕಂಡು ಕೇವಲ ಎರಡೇ ದಿನಗಳಲ್ಲಿ ಜಿಗಿತಕ್ಕೊಳಗಾಗಿ ₹1,182 ನ್ನು ತಲುಪಿ ₹1,172 ರಲ್ಲಿ ವಾರಾಂತ್ಯ ಕಂಡಿದೆ.

ಅದೇ ರೀತಿ ಕೆಲವರಲ್ಲಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಬಗ್ಗೆ ಆಕರ್ಷಣೆ ಹೆಚ್ಚಿರುತ್ತದೆ. ಈ ವ್ಯಾಮೋಹದಲ್ಲಿ, ಒಂದು ಕಂಪೆನಿಯ ಷೇರಿನ ಬಗ್ಗೆ ಹೆಚ್ಚು  ಪ್ರಚಾರ ಬಂದಾಗ  ತಕ್ಷಣ  ಕಾರ್ಯೋನ್ಮುಖರಾಗಿ  ಖರೀದಿಸುವ ಹವ್ಯಾಸವಿದೆ. ಇದು ಸಲ್ಲದು.  ಈ ಕಂಪೆನಿಯ ಷೇರಿನ ಬೆಲೆಯ ಹಿಂದಿನ ದಿನಗಳ ಏರಿಳಿತಗಳನ್ನು ಸಹ ಗಮನಿಸಿರಬೇಕು. ಆಗಲೇ ಸುರಕ್ಷತೆಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.

ಇತ್ತೀಚಿಗೆ ರಿಟೇಲ್ ವಿಭಾಗದ ಷೇರುಗಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಪ್ರಚಾರ ನಡೆಯುತ್ತಿದೆ. ಭಾರಿ ಪ್ರಮಾಣದ ಏರಿಳಿತ ಪ್ರದರ್ಶಿಸುವ ಕಂಪೆನಿಗಳ ಷೇರುಗಳಲ್ಲಿ ಚಟುವಟಿಕೆ ನಡೆಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಆ ಸಂದರ್ಭದಲ್ಲಿ ನಡೆಸಬೇಕೆಂದಿದ್ದಲ್ಲಿ, ಕಡಿಮೆ ಪ್ರಮಾಣದ ಷೇರುಗಳಲ್ಲಿ ವಹಿವಾಟು ನಡೆಸಿದಲ್ಲಿ, ಅಪಾಯ ಕಡಿಮೆ.  ಹೆಚ್ಚಿನ ಬೆಲೆಯಲ್ಲಿ ಖರೀದಿಸಿದಾಗ ಹೂಡಿಕೆ ಅವಧಿಯು ಅಲ್ಪಕಾಲೀನವಾಗಿರುವುದು ಉತ್ತಮ. ಇಂದಿನ ಪೇಟೆಗಳಲ್ಲಿ ಬೇಡಿಕೆ ಹೆಚ್ಚಲು ಪ್ರಮುಖ ಕಾರಣ - ಪೇಟೆಯ ವಿಶಿಷ್ಟ ಗುಣ – ‘ದಿಢೀರ್ ನಗದೀಕರಣ’ ಗುಣವಾಗಿದೆ.

(ಮೊ: 9886313380. ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.