ADVERTISEMENT

ಸ್ಥಿರತೆ ಕಾಣದಂತಾದ ವಹಿವಾಟು

ಕೆ.ಜಿ ಕೃಪಾಲ್
Published 5 ಜನವರಿ 2014, 19:30 IST
Last Updated 5 ಜನವರಿ 2014, 19:30 IST

ಷೇರುಪೇಟೆಯ ಸಂವೇದಿ ಸೂಚ್ಯಂಕವು ಗುರುವಾರ 21,331 ಅಂಶಗಳನ್ನು ದಿನದ ಮಧ್ಯಂತರದಲ್ಲಿ ತಲುಪಿತು. ಜನವರಿ 3ರಂದು ಮುಹೂರ್ತದ ವಹಿವಾಟಿನ ಮಟ್ಟ ದಾಟಿತಾದರೂ ಸ್ಥಿರತೆ ಕಾಣದಾಯಿತು. ಅಂದು ದಿನದ ಉತ್ತರಾರ್ಧದಲ್ಲಿ ಭಾರಿ ಕುಸಿತ ಕಂಡಿತು.

ಸಂವೇದಿ ಸೂಚ್ಯಂಕ 252 ಅಂಶಗಳಷ್ಟು ಕುಸಿದರೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳ ಕುಸಿತವಂತೂ ಅಧಿಕ ಪ್ರಮಾಣ ದಲ್ಲಿತ್ತು. 2013ರ ವರ್ಷಾಂತ್ಯದಲ್ಲಿ ಹೆಚ್ಚಿನ ಏರಿಕೆ ಕಂಡಿದ್ದ ಷೇರುಗಳಾದ ಟಾಟಾ ಎಲಾಕ್ಸಿ, ಬಯೋಕಾನ್‌, ಬ್ಯಾಂಕ್‌ ಆಫ್‌ ಇಂಡಿಯಾ, ಕರ್ಣಾಟಕ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮೊದಲಾ ದವು ಹೆಚ್ಚಿನ ಒತ್ತಡದಿಂದ ಕುಸಿದವಾದರೂ ಶುಕ್ರವಾರ ಮಧ್ಯಾಹ್ನ ಮತ್ತೆ ಪುಟಿದೆದ್ದವು.
ಬಯೋಕಾನ್‌ ಷೇರು ಗುರುವಾರ ರೂ460 ರಲ್ಲಿದ್ದುದು, ಶುಕ್ರವಾರ ರೂ487ರವರೆಗೂ ಏರಿಕೆ ಕಂಡಿತು. ಟಾಟಾ ಎಲಾಕ್ಸಿ ಸಹ ಗುರುವಾರದ ರೂ389ರ ಮಟ್ಟದಿಂದ ಶುಕ್ರವಾರ ರೂ415ರವ ರೆಗೂ ಏರಿಕೆ ಕಂಡಿತು.

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ ವೈಶ್‌ ಅವರನ್ನು ಎಂಸಿಎಕ್ಸ್ ನ  ಎಂ.ಡಿ ಆಗಿ ಆಯ್ಕೆ ಮಾಡಿರುವ ಸುದ್ದಿಯು ಕಂಪೆನಿಯ ಷೇರಿನ ಬೆಲೆಯನ್ನು ರೂ485ರಿಂದ ರೂ581ರವ ರೆಗೂ ಏರಿಳಿತ ಪ್ರದರ್ಶಿಸುವಂತೆ ಮಾಡಿತು. ಅದರ ಮಾತೃ ಸಂಸ್ಥೆಯಾದ ಫೈನಾನ್ಷಿಯಲ್‌ ಟೆಕ್ನಾಲಜೀಸ್‌ ರೂ185 ರಿಂದ ರೂ223ರವರೆಗೂ ಏರಿಕೆ ಕಂಡು ಮಾರಾಟ ಮಾಡುವವರಿಲ್ಲದಂತಹ ಹಂತದಲ್ಲಿತ್ತು.

ಡಿಸೆಂಬರ್‌ ತಿಂಗಳಲ್ಲಿನ ವಾಹನ ಮಾರಾಟ ಅಂಕಿ ಅಂಶಗಳು ನಿರಾಶಾದಾಯಕವಾಗಿವೆ ಎಂಬ ಕಾರಣ ಟಾಟಾ ಮೋಟಾರ್‌್ಸ ಮತ್ತು ಮಹೀಂದ್ರಾ ಅಂಡ್‌ ಮಹೀಂದ್ರಾ ಕಂಪೆನಿಯ ಷೇರುಗಳು ಮಾರಾಟದ ಒತ್ತಡದಿಂದ ಕುಸಿದವು. ಟಿ.ವಿ.ಎಸ್‌ ಮೋಟಾರ್‌ನ ದ್ವಿಚಕ್ರ ವಾಹನಗಳು ಶೇ 38ರಷ್ಟು ಹೆಚ್ಚಿನ ಮಾರಾಟವಾಗಿರುವುದು ಮತ್ತು ಶೇ 27ರಷ್ಟು ಹೆಚ್ಚಿನ ರಫ್ತು ಮಾಡಿರುವುದರ ಕಾರಣ ಕಂಪೆನಿಯ ಷೇರುಗಳು ಈ ವಾರ ರೂ69ರ ಹಂತ ದಿಂದ ರೂ82ರವರೆಗೂ ಜಿಗಿಯಿತು. ಅಶೋಕ್‌ ಲೇಲ್ಯಾಂಡ್‌ ವಾಹನ ಮಾರಾಟದ ಅಂಕಿ ಅಂಶಗಳು ನಿರಾಶಾದಾ ಯಕವಾಗಿದ್ದರೂ ರೂ16.50ಯಿಂದ ರೂ19.05ರವರೆಗೂ ಜಿಗಿದಿರು ವುದು ಆಶ್ಚರ್ಯಕರ.

ಒಟ್ಟಾರೆ 342 ಅಂಶಗಳ ಇಳಿಕೆ ಕಂಡ ಸಂವೇದಿ ಸೂಚ್ಯಂಕಕ್ಕೆ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕಗಳು ಜೊತೆ ನೀಡಲಿಲ್ಲ. ಕೆಳಮಧ್ಯಮ ಶ್ರೇಣಿ ಸೂಚ್ಯಂಕ 36 ಅಂಶಗಳ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ರೂ1,091 ಕೋಟಿಗಳಷ್ಟು ಹೂಡಿಕೆ ಮಾಡಿವೆ. ಆದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿದ್ದು ರೂ1,179 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ70.33 ಲಕ್ಷ ಕೋಟಿಯಿಂದ ರೂ69.61 ಲಕ್ಷ ಕೋಟಿಗೆ ಇಳಿದಿದೆ.

ಹೊಸ ಷೇರಿನ ವಿಚಾರ
ತೆಂತಿವಾಲ್‌ ವೈರ್‌ ಪ್ರಾಡಕ್ಟ್ಸ್ ಲಿ. ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ ರೂ13ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು, ಈ ಷೇರುಗಳು ಡಿ. 31ರಿಂದ ‘ಎಂಟಿ’ ಗುಂಪಿನಲ್ಲಿ ಹತ್ತು ಸಾವಿರ ಷೇರುಗಳ ವಹಿವಾಟು ಗುಚ್ಛದೊಂದಿಗೆ ಚಟುವಟಿಕೆಗೆ ಬಿಡುಗಡೆಯಾಗಿವೆ.

ಲಾಭಾಂಶ ವಿಚಾರ
ಡಿಸೆಂಬರ್‌ ಅಂತ್ಯದ ಮೂರನೇ ತ್ರೈಮಾಸಿಕ ಕೊನೆಗೊಂಡಿದ್ದು, ಕಂಪೆನಿಗಳು ತಮ್ಮ ಫಲಿತಾಂಶ ದೊಂದಿಗೆ ಮಧ್ಯಂತರ ಲಾಭಾಂಶ ವಿತರಣೆಗೆ ಸಜ್ಜಾಗಿವೆ. ತಾಂತ್ರಿಕ ವಲಯದ ಮೈಂಡ್‌ ಟ್ರೀ ಲಿ., ಜನವರಿ 16ರಂದು ಪ್ರಕಟಿಸಲಿರುವ ಲಾಭಾಂಶ ವಿತರಣೆಗೆ ಜನವರಿ 22 ನಿಗದಿತ ದಿನವಾಗಿದೆ. ಹಾಗೆಯೇ ಜ. 27ರಂದು ಪ್ರಕಟಿಸಲಿರುವ ಲಾಭಾಂಶಕ್ಕೆ ಶ್ರೀ ಸಿಮೆಂಟ್‌ ಕಂಪೆನಿಯು ಫೆಬ್ರುವರಿ 3 ನಿಗದಿತ ದಿನ ಎಂದು ಪ್ರಕಟಿಸಿದೆ.

ಹಕ್ಕಿನ ಷೇರಿನ ವಿಚಾರ
ಪಿರಿಯಾಡಿಕ್‌ ಕಾಲ್‌ ಆಕ್ಷನ್‌ ಪದ್ಧತಿಯಡಿ ವಹಿವಾಟು ನಡೆಸುತ್ತಿರುವ ಕೋರಮಂಡಲ್‌ ಎಂಜಿನಿಯರಿಂಗ್‌ ಕಂಪೆನಿಯು ಪ್ರತಿ 10 ಷೇರು ಗಳಿಗೆ 91 ಷೇರುಗಳನ್ನು ರೂ20ರಂತೆ ಹಕ್ಕಿನ ರೂಪದಲ್ಲಿ ವಿತರಿಸಲು ಜನವರಿ 15 ನಿಗದಿತ ದಿನವಾಗಿಸಿದೆ.

* ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ನ ಆಡಳಿತ ಮಂಡಳಿ ರೂ650 ಕೋಟಿ ಗರಿಷ್ಠ ಮಿತಿಯ ಮೌಲ್ಯದ ಹಕ್ಕಿನ ಷೇರು ವಿತರಿಸಲಿದೆ. ಇತರೆ ನಿಯಮಗಳಿಗೆ ಅನು ಸಾರವಾಗಿ ಸಮಿತಿಯು ನಿರ್ಧರಿಸುವ ಬೆಲೆ ಮತ್ತು ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಲಿದೆ.

ಮುಖಬೆಲೆ ಸೀಳಿಕೆ ವಿಚಾರ
* ಮಾ ಜಗದಂಬ ಟ್ರೇಡ್‌ ಲಿಂಕ್ಸ್ ಲಿ. (ಈ ಹಿಂದೆ ಪರಶುರಾಂ ಪುರಿಯಾ ಕ್ರೆಡಿಟ್‌ ಅಂಡ್‌ ಇನ್ವೆಸ್ಟ್ ಮೆಂಟ್  ಲಿ. ಎಂದಿತ್ತು) ಷೇರಿನ ಮುಖಬೆಲೆಯನ್ನು ರೂ10ರಿಂದ ರೂ1ಕ್ಕೆ ಸೀಳಲು ಜನವರಿ 10 ನಿಗದಿತ ದಿನವಾಗಿದೆ.

* ಕ್ರೆಸೆಂಡಾ ಸಲ್ಯೂಷನ್ಸ್ ಲಿ., ಕಂಪೆನಿಯು ತನ್ನ ಷೇರಿನ ಮುಖಬೆಲೆಯನ್ನು ರೂ10ರಿಂದ ರೂ1ಕ್ಕೆ ಸೀಳಲು ಜನವರಿ 15 ನಿಗದಿತ ದಿನವಾಗಿದೆ.

* ಮಿಶ್ಕಾ ಫೈನಾನ್ಸ್ ಅಂಡ್‌ ಟ್ರೇಡಿಂಗ್‌ ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ10 ರಿಂದ ರೂ1ಕ್ಕೆ ಸೀಳಲು ಜನವರಿ 17 ನಿಗದಿತ ದಿನವಾಗಿಸಿದೆ.

ವಹಿವಾಟಿನಿಂದ ಹಿಂದಕ್ಕೆ
ಕೇಬಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಜ. 9ರಿಂದ ವಹಿವಾಟು ಸ್ಥಗಿತಗೊಳ್ಳಲಿದೆ. ಆದರೂ ಮುಂದಿನ ಒಂದು ವರ್ಷದವರೆಗೂ ಕಂಪೆನಿಯು ತಲಾ ರೂ19ರ ದರದಲ್ಲಿ ಷೇರು ಗಳನ್ನು ವಾಪಸ್‌ ಖರೀದಿ ಮಾಡಲಿದೆ.

ಬಿಎಸ್‌ಇ ಸೇವಾ ಕೇಂದ್ರ
ಮುಂಬೈ ಷೇರು ವಿನಿಮಯ ಕೇಂದ್ರ ಡಿ. 31 ರಂದು ಪುಣೆ, ಜಯಪುರ ಹಾಗೂ ಬೆಂಗಳೂರಿ ನಲ್ಲಿ ಹೂಡಿಕೆದಾರರ ಸೇವಾ ಕೇಂದ್ರಗಳನ್ನು ಆರಂಭಿಸಿದೆ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಆವರಣದಲ್ಲಿ ಆರಂಭಿಸಿರುವ ಈ ಸೇವಾ ಕೇಂದ್ರಗಳು ಹೂಡಿಕೆದಾರರ ತೊಂದರೆಗಳ ನಿವಾರಣಾ ಕಾರ್ಯ ಮತ್ತು ಪಂಚಾಯ್ತಿ ಚಟು ವಟಿಕೆಗಳನ್ನು ನಿರ್ವಹಿಸಲಿವೆ. ‘ಬಿಎಸ್‌ಇ’ ಈಗಾ ಗಲೇ ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾ, ಅಹ್ಮ ದಾಬಾದ್‌, ಹೈದರಾಬಾದ್‌, ಖಾನ್‌ಪುರ, ಇಂದೋರ್‌ಗಳಲ್ಲಿ ಸೇವಾ ಕೇಂದ್ರಗಳನ್ನು ಹೊಂದಿದೆ.

ಹೀಗೂ ಉಂಟೆ!
‘ಬಿ.ಎಸ್‌.ಇ’ಯಲ್ಲಿ ‘ಟಿ’ ಗುಂಪಿನಲ್ಲಿ ವಹಿವಾಟಾಗುತ್ತಿರುವ ‘ನಿವ್ಯಾ ಇನ್‌ಫ್ರಾಸ್ಟ್ರಕ್ಚರ್‌ ಅಂಡ್‌ ಟೆಲಿಕಾಂ ಸರ್ವಿಸಸ್‌ ಲಿ.’ ಕಂಪೆನಿಯ ರೂ10ರ ಮುಖಬೆಲೆಯ ಷೇರು ರೂ1ರಲ್ಲಿ ವಹಿವಾಟಾಗುತ್ತಿದೆ. ಈ ಕಾರಣದಿಂದ ಕಂಪೆನಿಯು ತನ್ನ ಷೇರಿನ ಮುಖಬೆಲೆಯನ್ನು ರೂ10ರಿಂದ ರೂ100ಕ್ಕೆ ಕ್ರೋಡೀಕರಿಸಲಿದೆ. ಈ ಪ್ರಕ್ರಿಯೆಗೆ ಜನವರಿ 9 ನಿಗದಿತ ದಿನವಾಗಿದೆ.

ಈ ಕಂಪೆನಿಯ ವಾರ್ಷಿಕ ಗರಿಷ್ಠ ರೂ10.25 ಕನಿಷ್ಠ ರೂ0.89 ಇದ್ದು ಈಗಿನ ಕ್ರಮದಿಂದ ಷೇರು ಪೇಟೆಯಲ್ಲಿ ಹರಿದಾಡುವ ಷೇರುಗಳ ಸಂಖ್ಯೆ ಕಡಿಮೆಯಾಗಲಿದೆ.

ಗುರುವಾರದ ಜಾರುವ ಬಂಡಿ
ಗುರುವಾರ ಪೇಟೆ ಆರಂಭವಾದಾಗ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ 21,179 ಅಂಶಗಳಲ್ಲಿ ಆರಂಭವಾಗಿ 21,331 ಅಂಶಗಳವರೆಗೂ ಏರಿಕೆ ಕಂಡಿತು. ಕೊನೆಗೆ 20,846 ಅಂಶಗಳವರೆಗೂ ಕುಸಿದು 20,888 ಅಂಶಗಳಲ್ಲಿ ದಿನದಂತ್ಯ ಕಂಡಿತು.
ಆರಂಭದ ಅರ್ಧ ಗಂಟೆಯ ನಂತರದಿಂದ ಮಧ್ಯಾಹ್ನ 1.40ರವರೆಗೂ 21,240 ಅಂಶಗಳಿಂದ 21,330 ಅಂಶಗಳ ಮಟ್ಟದಲ್ಲಿದ್ದ ಸಂವೇದಿ ಸೂಚ್ಯಂಕವು ನಂತರ ಕುಸಿಯಲಾರಂಭಿಸಿ ಕೇವಲ ಹತ್ತೇ ನಿಮಿಷದಲ್ಲಿ ಸುಮಾರು 200 ಅಂಶಗಳಷ್ಟು ದಿಢೀರ್‌ ಕುಸಿತ ಕಂಡಿತು.

ಈ ಸಂದರ್ಭದಲ್ಲಿ ಹೆಚ್ಚಿನ ಕಂಪೆನಿಗಳು ಭಾರಿ ಹಾನಿಗೊಳಗಾದವು. ಒಂದೇ ದಿನದಲ್ಲಿ ಸುಮಾರು ರೂ48ರಷ್ಟು ಏರಿಳಿತವನ್ನು ಟಾಟಾ ಎಲಾಕ್ಸಿ ಪ್ರದರ್ಶಿಸಿದರೆ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸುಮಾರು ರೂ48, ಕೆನರಾ ಬ್ಯಾಂಕ್‌ ಷೇರು ರೂ27ರಷ್ಟು ಏರಿಳಿತ ತೋರಿದವು.

ಅಬ್ಬಾನ್‌ ಆಫ್‌ಷೋರ್‌ ಷೇರು ಸಹ ರೂ32ರಷ್ಟು ಏರಿಳಿತ ಪ್ರದರ್ಶಿಸಿ, ಪ್ರತಿ ಏರಿಕೆಯನ್ನು ಲಾಭದ ನಗದೀಕರಣಕ್ಕೇ ಉಪಯೋಗಿಸಿಕೊಳ್ಳು ವುದರ ಅವಶ್ಯಕತೆಯನ್ನು ಸಾರಿ ಹೇಳುತ್ತಿದೆ.

ಇಂದಿನ ಈ ಕುಸಿತವು ವಿನಾಕಾರಣ ಪ್ರದರ್ಶಿತವಾಗಿದ್ದು ಆಶ್ಚರ್ಯ ಮೂಡಿಸುವಂತ ಹುದಾಗಿದೆ.

ಆದರೂ, ಹೆಚ್ಚಿನ ಕಂಪೆನಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಏರಿಕೆ ಕಂಡಿದ್ದುದು ನೆನಪಿನಲ್ಲಿರಿಸಬೇಕಾದ ಅಂಶ.

ಹಣವೇನೋ ಇದೆ, ಹೂಡಿಕೆಗೆ ಯೋಜನೆಗಳದ್ದೇ ಕೊರತೆ
ವಾರದ ವಿಶೇಷ

ಅಂತರರಾಷ್ಟ್ರೀಯ ಇನ್ವೆಸ್ಟ್ಮೆಂಟ್‌ ಬ್ಯಾಂಕರ್ಸ್ ‘ಮೋರ್ಗನ್‌ ಸ್ಟ್ಯಾನ್ಲಿ’ ಸಮೂಹದ ಮೋರ್ಗನ್‌ ಸ್ಟ್ಯಾನ್ಲಿ ಇಂಡಿಯಾ ಫೈನಾನ್ಷಿಯಲ್‌  ಸರ್ವಿಸಸ್‌ ಪ್ರೈ. ಲಿ. ಕಂಪೆನಿಯು ಭಾರತದಲ್ಲಿನ ಚಿಲ್ಲರೆ ಷೇರು ವಹಿವಾಟು ನಡೆಸುತ್ತಿದೆ. ಈಗಿನ ಪೇಟೆಯ ವಾತಾವರಣವು ಲಾಭದಾಯಕವಾಗಿರದ ಕಾರಣ ತಾನು ಹೊಂದಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸದಸ್ಯತ್ವವನ್ನು ವಾಪಸ್‌ ಮಾಡಿದೆ.

ಈಗಾಗಲೇ ಇಂಡಿಯಾ ಇನ್‌ಫೊಲೈನ್‌, ‘ಎಚ್‌ಎಸ್‌ಬಿಸಿ’ ಸೆಕ್ಯುರಿಟೀಸ್‌ಗಳು ರಿಟೇಲ್‌ ಷೇರು ವ್ಯವಹಾರದಿಂದ ಹಿಂದೆ ಸರಿಯುವ ಇಂಗಿತ ವ್ಯಕ್ತಪಡಿಸಿವೆ. ಇಂತಹ ಬೃಹತ್‌ ಸಂಸ್ಥೆಗಳು ತಮ್ಮ ವ್ಯವಹಾರವನ್ನೇ ನಿಲ್ಲಿಸುವಷ್ಟು ಕ್ರೂರವಾಗಿವೆಯೇ ಇಂದಿನ ಷೇರುಪೇಟೆಗಳು? ಖಂಡಿತ ಇಲ್ಲ.

ಹೆಚ್ಚಿನ ಬ್ರೋಕರೇಜ್‌ ಸಂಸ್ಥೆಗಳು, ಪ್ರಾಂಚೈಸಿಗಳು ಆರೋಗ್ಯಕರ ವಹಿವಾಟಿಗಿಂತ, ತಮ್ಮ ವಹಿವಾಟಿನ ಗಾತ್ರ ಹೆಚ್ಚಿಸಿಕೊಳ್ಳುವತ್ತ ಚಿತ್ತವಿರಿಸಿದ್ದು, ಆ ನಿಟ್ಟಿನಲ್ಲಿಯೇ ಕಾರ್ಯ ಪ್ರವೃತ್ತವಾಗಿವೆ. ಆದಕಾರಣ ವಹಿವಾಟಿನ ಗಾತ್ರ ಹೆಚ್ಚಿ ಹೂಡಿಕೆದಾರರು ತಮ್ಮ ಬಂಡವಾಳ ನಶಿಸುವುದರ ಅನುಭವದಿಂದ ದೂರ ಸರಿಯಲು ಕಾರಣವಾಗಿದೆ.

ಸಾರ್ವಜನಿಕರಲ್ಲಿ ಸಾಕಷ್ಟು ಹೂಡಿಕೆ ಮಾಡಲು ಹಣವೇನೋ ಇದೆ. ಆದರೆ ಹೂಡಿಕೆಗೆ ಸುಭದ್ರ ಯೋಜನೆ, ನಿಖರವಾದ ಇಳುವರಿ ನೀಡುವ ಯೋಜನೆಗಳ ಕೊರತೆ ಇರುವುದು ಎದ್ದುತೋರುತ್ತಿದೆ.

ಇತ್ತೀಚೆಗೆ ತೆರಿಗೆ ರಿಯಾಯ್ತಿ ಇರುವ ಬಾಂಡ್‌ಗಳನ್ನು ಸಾರ್ವಜನಿಕ ವಲಯದ ಕಂಪೆನಿಗಳು ಬಿಡುಗಡೆ ಮಾಡಿ ಯಶಸ್ವಿಯಾಗಿ ಭಾರಿ ಪ್ರಮಾಣದಲ್ಲಿ ಹಣ ಸಂಗ್ರಹಣೆ ಮಾಡಿವೆ. ಸಾರ್ವಜನಿಕ ವಲಯದ ಆರ್‌.ಇ.ಸಿ, ಎನ್‌.ಟಿ.ಪಿ.ಸಿ, ಹುಡ್ಕೊ, ಭಾರತೀಯ ರೈಲ್ವೆ ಫೈನಾನ್ಸ್, ಐಐಎಫ್‌ಸಿಎಲ್‌ ಮೊದಲಾದವು ವಿವಿಧ ಬಡ್ಡಿ ದರಗಳಲ್ಲಿ ವೈವಿಧ್ಯಮಯ ಅವಧಿಯ ಬಾಂಡ್‌ಗಳನ್ನು ವಿತರಿಸುವಲ್ಲಿ ಯಶಸ್ವಿಯಾಗಿವೆ.

ಅದೇ ರೀತಿ ಡಿಸೆಂಬರ್‌ 30ರಂದು ನ್ಯಾಷನಲ್‌ ಹೌಸಿಂಗ್‌ ಬ್ಯಾಂಕ್‌, ತೆರಿಗೆ ಮುಕ್ತ ಬಾಂಡ್‌ಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ. ಮೊದಲ ದಿನವೇ ಎಲ್ಲಾ ಗುಂಪಿನ ಅಂದರೆ ಅರ್ಹ ವಿತ್ತೀಯ ಸಂಸ್ಥೆಗಳ ಭಾಗ, ಕಾರ್ಪೊರೇಟ್‌ಗಳಿಗೆ ಮೀಸಲಾದ ಭಾಗ, ವೈಯಕ್ತಿಕವಾಗಿ ಧನವಂತರಿಗೆ ಹಾಗೂ ಸಣ್ಣ ಹೂಡಿಕೆದಾರರಿಗೆ ಮೀಸಲಾದ ಭಾಗವೂ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಗ್ರಹಣೆ ನೀಡಿದವು. ಇದು ಉತ್ತಮ  ಕಂಪೆನಿಗಳಲ್ಲಿ ಹೂಡಿಕೆಗೆ, ನಿಗದಿತ ಬಡ್ಡಿಯ ಯೋಜನೆಗಳಲ್ಲಿ, ಸಾರ್ವಜನಿಕರಲ್ಲಿರುವ ದಾಹಕ್ಕೆ ಸಾಕ್ಷಿಯಾಗಿದೆ.

ಈಗಿನ ಷೇರುಪೇಟೆಯು ಸುರಕ್ಷಿತ ಹೂಡಿಕೆಯ ದೃಷ್ಟಿಯಲ್ಲಿ ಅಲ್ಪ ಸಮಯದಲ್ಲೇ ಹೆಚ್ಚಿನ ಲಾಭ ಒದಗಿಸುವ ಅವಕಾಶಗಳ ಆಗರವಾಗಿದೆ. ಹೂಡಿಕೆಗೆ ಸುಭದ್ರ ಬೃಹತ್‌ ಕಂಪೆನಿಗಳ ಬೆಲೆ ಕುಸಿದಾಗ ಆಯ್ಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಮಾರ್ಗದರ್ಶನವನ್ನು ತಮ್ಮ ಬ್ರೋಕರ್‌ಗಳಿಂದ ಕೇಳಿ ಪಡೆಯಬೇಕು. ಬ್ರೋಕರೇಜ್‌ ಉಳಿಸುವುದಕ್ಕಿಂತ ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡಿದಲ್ಲಿ ಮಾತ್ರ ಲಾಭದಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT